ವಚನಗಳ ಭಾಷಾಂತರಿಸಲು 5 ಕೋಟಿ ರೂಪಾಯಿ ನೆರವು: ಎಂ.ಬಿ. ಪಾಟೀಲ

ವಿಜಯಪುರ

ವಚನಗಳು ಮತ್ತು ಬಸವತತ್ವಗಳನ್ನು ಜಗತ್ತಿನ ಪ್ರಮುಖ ಐದಾರು ಭಾಷೆಗಳಿಗೆ ಭಾಷಾಂತರಿಸಲು 5 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬಸವಣ್ಣನವರ ವಚನಗಳ ಇಂಗ್ಲೀಷ್ ತಾತ್ಪರ್ಯಸಹಿತಾನುವಾದ ‘ನನ್ನೊಳಗಿನ ನಾನು ನೀನೇ’ ಗ್ರಂಥ ರಚಿಸಿದ ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರಿಗೆ ಸನ್ಮಾನ ಸಮಾರಂಭವ ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರು ಜಗತ್ತಿನಲ್ಲಿ ಮೊದಲ ಸಂಸತನ್ನು ಸ್ಥಾಪಿಸಿ ಎಲ್ಲ ಕಾಯಕ ವರ್ಗದವರಿಗೆ ಪ್ರಾತಿನಿಧ್ಯ ನೀಡಿ ಸಮ ಮತ್ತು ಸುಂದರ ಸಮಾಜ ನಿರ್ಮಿಸುವ ಕನಸು ಕಂಡಿದ್ದರು.

ಲಿಂಗಾಯಿತ ಜಾತಿಯಲ್ಲ. ಅದು ಜಾತಿರಹಿತ ಧರ್ಮ. ಅಂದು ಕಲ್ಯಾಣ ಕ್ರಾಂತಿ ನಡೆಯದಿದ್ದರೆ ಇಂದು ಇಡೀ ದೇಶವೇ ಬಸವ ಧರ್ಮವಾಗುತ್ತಿತ್ತು ಎಂದರು.

ಪೊಲೀಸ್ ಇಲಾಖೆಯಂಥ ಸದಾ ವ್ಯಸ್ಥವಾಗಿರುವ ಇಲಾಖೆಯಲ್ಲಿ ಕೆಲಸದಲ್ಲಿದ್ದುಕೊಂಡು ಬಸವರಾಜ ಯಲಿಗಾರ ಅವರು ವಚನಗಳನ್ನು ಆಂಗ್ಲಭಾಷೆಗೆ ಅನುವಾದಿಸಿ ಜಗತ್ತಿಗೆ ತಲಪುವಂತೆ ಮಾಡಿರುವುದು ಶ್ಲಾಘನೀಯ ಎಂದರು.

ವಚನಗಳು ನಮ್ಮ ಸಂಸ್ಕೃತಿ ಮತ್ತು ಸಂಪತ್ತು ಆಗಿವೆ. ಹಳಕಟ್ಟಿಯವರು ಅಂದು ತನು, ಮನ, ಧನದಿಂದ ವಚನಗಳನ್ನು ಸಂಶೋಧಿಸಿದ ಪರಿಣಾಮ ಇಂದು ನಮಗೆ 200 ಜನ ಬಸವಾದಿ ಶರಣರ ಪರಿಚಯವಾಗಿದೆ. ಮುಗ್ಧ ಬಸವಾನುಯಾಯಿಗಳಿಂದ 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯನ್ನು ಇತಿಹಾಸದಿಂದ ಅಳಿಸಿ ಹಾಕಲು ಬಸವಣ್ಣನವರನ್ನು ಎತ್ತುಗಳಿಗೆ ಹೋಲಿಸುವ ವ್ಯವಸ್ಥಿತ ಕೆಲಸ ನಡೆದಿದೆ. ಕೆಲವರು ಈಗಲೂ ಸುಳ್ಳು ವಚನಗಳನ್ನು ಸೇರಿಸುವ ಕೆಲಸ ಮಾಡುತ್ತಿದ್ದಾರೆ, ನಾವು ಯಾರ ವಿರುದ್ಧವೂ ಇಲ್ಲ. ಆದರೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ನಾವು ರಕ್ಷಿಸುತ್ತೇವೆ ಎಂದು ಅವರು ಇದೇ ವೇಳೆ ಭರವಸೆ ನೀಡಿದರು.

ಬೀದರ ಜಿಲ್ಲೆಯ ಬಸವ ಕಲ್ಯಾಣ ಬಸವ ಮಹಾಮನೆ ಸಂಸ್ಥೆಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ಮಾತನಾಡಿ, ಬಸವಣ್ಣನವರು ಯಾವುದೇ ಒಂದು ಸಮುದಾಯ, ಪ್ರದೇಶದ ಸ್ವತ್ತಲ್ಲ. ಬಸವಣ್ಣನವರ ನಿಜವಾದ ತತ್ವಗಳು ಇನ್ನೂ ಜಗತ್ತಿಗೆ ತಲುಪಿಲ್ಲ. ಅನೇಕ ಮಠಗಳಿಗೂ ಮುಟ್ಟಿಲ್ಲ. ಬಹುತೇಕರಿಗೆ ಲಿಂಗಪೂಜೆಯ ಪದ್ಧತಿಯೂ ತಿಳಿದಿಲ್ಲ. ಬಸವತತ್ವದಲ್ಲಿ ರಾಜ ಮಹಾರಾಜರಿಗೆ ದೇವರ ಸ್ಥಾನ ನೀಡುವುದು, ಆಕೃತಿಗೆ ಆಸ್ಪದವಿಲ್ಲ. ಬಸವ ತತ್ವದಂತೆ ಆಯತ, ಲಿಂಗಾಯತ, ಸ್ವಾಯತ್ತ ಸಾಧಿಸಬೇಕು. ಮನುಕುಲದ ತತ್ವಗಳ ಸಾರವನ್ನು ತಿಳಿದುಕೊಂಡು ದೇವರಾಗುವುದೇ ಲಿಂಗಾಯತ ಎಂಬುದಾಗಿದೆ ಎಂದರು.

ವಿಜಯಪುರ ತಬ್ಲಿಕ್ ಜಮಾತ್ ಮುಖ್ಯಸ್ಥ ಮೌಲಾನಾ ಅಬೂಬಕರ ಮಾತನಾಡಿ, ನಾವು ಬಾಲ್ಯದಿಂದಲೂ ನಮ್ಮ ಹಿರಿಯರಿಂದ ವಚನಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಜಾತಿ ವ್ಯವಸ್ಥೆ ಹೋಗಲಾಡಿಸಿ ನ್ಯಾಯಕ್ಕಾಗಿ ಬಸವಣ್ಣನವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ, ಪ್ರೋತ್ಸಾಹಕ್ಕೆ ಕೊರತೆಯಿದೆ. ನಾವು ಬಸವಣ್ಣನವರ ವಚನಗಳನ್ನು ಹಿಂದಿ ಮತ್ತು ಉರ್ದು ಭಾಷೆಗಳಿಗೆ ಅನುವಾದ ಮಾಡಿಸುವ ಕೆಲಸ ಮಾಡಲಾಗುವುದು ಎಂದರು.

ಬಸವಣ್ಣ ಪ್ರತಿಯೊಬ್ಬರ ಹಿರೋ ಆಗಿದ್ದಾರೆ. ಅವರ ವಚಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿರುವ ಬಸವರಾಜ ಯಲಿಗಾರ ಕೆಲಸ ಅಪೂರ್ವವಾಗಿದೆ ಎಂದು ಹೇಳಿದರು.

ಶರಣು ಚಿಂತಕ ದೇವನೂರ ಶಂಕರ ಮಾತನಾಡಿ, ಬಸವಾದಿ ಶರಣರ ವಚನಗಳು ಶರಣ ಸಂಸ್ಕೃತಿಯ ಅರಿವು ಮತ್ತು ಜ್ಞಾನದ ಜ್ಯೋತಿಯ ಪ್ರತೀಕ, ಬದುಕು ಹೂವಿನಂತಿರಬೇಕಾದರೆ ಜಾತಿ, ಧರ್ಮ ಬಿಟ್ಟು ನಾವೆಲ್ಲರೂ ಒಂದೇ ಎಂದು ಜೀವನ ಸಾಗಿಸಬೇಕಿದೆ ಎಂದರು.

‘ಇಸ್ರೆಲ್ ನನ್ನ ಜನ್ಮಭೂಮಿಯಾಗಿದ್ದು, ಬಸವಣ್ಣನವರ ವಚನ ಸಾಹಿತ್ಯದಿಂದ ಪ್ರೇರಿತನಾಗಿದ್ದೇನೆ. ನನ್ನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಈ ಸಾಹಿತ್ಯವನ್ನು ಹೇಳುತ್ತೇನೆ. ಬಸವರಾಜ ಯಲಿಗಾರ ಅವರು ರಚಿಸಿರುವ ಗ್ರಂಥ ಕರ್ನಾಟಕ, ಭಾರತವಷ್ಟೇ ಅಲ್ಲ, ಜಗತ್ತಿಗೂ ಮಹತ್ವದ ಕೊಡುಗೆಯಾಗಿದೆ ಎಂದು
ಅಮೇರಿಕದ ಫ್ಲೋರಿಡಾದ ಪ್ರಾಧ್ಯಾಪಕ ಗಿಲ್ ಬೆನ್ ಹೆರೂತ್ ಹೇಳಿದರು.

ವಿಧಾನ ಪರಿಷತ್ ಮಾಜಿ ಶಾಸಕ ಅರುಣ ಶಹಾಪುರ ಮಾತನಾಡಿ, ವಚನ ಸಾಹಿತ್ಯವನ್ನು ಪಠ್ಯಕ್ರಮಗಳಲ್ಲಿ ಅಳವಡಿಸಬೇಕಿದೆ ಎಂಬ ಸಲಹೆ ನೀಡಿದರು.

ಬೆಂಗಳೂರು ಅಕ್ಕನಮನೆ ಪ್ರತಿಷ್ಠಾನದ ಲೇಖಕಿ ಸಿ. ಸಿ. ಹೇಮಲತಾ, ಗ್ರಂಥಕರ್ತ ಬಸವರಾಜ ಯಲಿಗಾರ, ಹಿರಿಯ ಸಾಹಿತಿ ಬಿ. ಆರ್. ಬನಸೋಡೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸಾಹಿತಿ ರಾಜಶೇಖರ ಮಠಪತಿ, ಅಶೋಕ ಹಂಚಲಿ, ಮಹ್ಮದಗೌಸ್ ಹವಾಲ್ದಾರ, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಪೊಲೀಸ್ ಅಧಿಕಾರಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ರಮೇಶ ಮೂಲಿಮನಿ ಉಪಸ್ಥಿತರಿದ್ದರು.

ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಕುಮಾರಿ ದಿಕ್ಷಾ ಮತ್ತು ದಿವ್ಯ ಭಿಸೆ ಭರತ ನಾಟ್ಯ ಪ್ರದರ್ಶಿಸಿದರು. ಸಾಕ್ಷಿ ಹಿರೇಮಠ ವಚನ ಗಾಯನ ಹೇಳಿದರು. ಸಾನಿಯಾ ಜಿದ್ದಿ ನಿರೂಪಿಸಿದರು. ಶರಣು ಸಬರದ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
1 Comment

Leave a Reply

Your email address will not be published. Required fields are marked *