ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ
ಬಸವಕಲ್ಯಾಣ
ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠ ಹಾಗೂ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರದ ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿಯನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಶುಕ್ರವಾರ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು:
ಇತ್ತೀಚೆಗೆ ಪ್ರಕಟಗೊಂಡ ‘ವಚನ ದರ್ಶನ’ ಸಂಪಾದನಾ ಕೃತಿಯಲ್ಲಿ ವಚನಗಳ ಮರು ವಿಶ್ಲೇಷಣೆ ನೆಪದಲ್ಲಿ ಬಸವಣ್ಣನವರನ್ನು ಭಕ್ತಿಯ ಭಾವುಕರನ್ನಾಗಿ ಚಿತ್ರಿಸಿ ಸನಾತನ ಪರಂಪರೆಯಿಂದ ಪ್ರೇರಣೆ ಪಡೆದರೆಂದು ಉಲ್ಲೇಖಿಸಿ ಅಪಚಾರ ಎಸಗಲಾಗಿದೆ.
ವಚನಗಳಿಗೆ ಅಪಚಾರ ಮಾಡುವಂಥ ಕೆಲಸ ಬುದ್ಧಿವಂತರೆಂದು ಹೇಳಿಕೊಳ್ಳುವವರಿಂದಲೇ ಆಗ್ತಾ ಇದೆ. 12ನೆಯ ಶತಮಾನದಲ್ಲಿ ಏನು ನಡೆದಿತ್ತೋ ಅದಕ್ಕೆ ಬೇರೆ ರೂಪ ಕೊಡುವಂಥ ಪ್ರಯತ್ನ ಇವತ್ತು ನಡೀತಾ ಇದೆ. ಆ ಕೃತಿಗಳಲ್ಲಿ ಬಸವಣ್ಣನವರನ್ನು ಭಕ್ತಿಯ ಭಾವುಕರನ್ನಾಗಿ ನೋಡುವಂಥದ್ದು, ಅವರು ಹಿಂದಿನ ಸನಾತನ ಪರಂಪರೆಯಿಂದ ಈ ಪ್ರೇರಣೆ ಪಡೆದುಕೊಂಡಿದ್ದಾರೆಂದು ಹೇಳಿ ಬಸವಣ್ಣನವರಿಗೆ ಅಪಚಾರವೆಸಗುವ ಕಾರ್ಯ ನಡೆಯುತ್ತಿದೆ. ತಮಗೆ ಬೇಕಾದ ಹಾಗೆ ಸತ್ಯವನ್ನು ವ್ಯವಸ್ಥಿತವಾಗಿ ಬದಲಾಯಿಸುವ ಸಂಚು ನಡೆಯುತ್ತಿರುವುದು ಇಡೀ ಶರಣ ಪರಂಪರೆಗೆ ಮಾಡಿದ ದ್ರೋಹವಾಗಿದೆ.
ನಾವು ಬಯಸುವಂಥದ್ದು ಶರಣರ ವಿಚಾರಗಳಲ್ಲಿ ಅಪಚಾರ ಮಾಡದ ಹಾಗೆ ದೃಶ್ಯಮಾಧ್ಯಗಳಲ್ಲೂ ಕಟ್ಟಿಕೊಡಬೇಕು, ಮುದ್ರಣ ಮಾಧ್ಯಮದಲ್ಲೂ ಕಟ್ಟಿಕೊಡಬೇಕು. ನಮ್ಮ ಏನೇನೋ ವಿಚಾರಗಳನ್ನು ಅದರಲ್ಲಿ ತುರಕಲಿಕ್ಕೆ ಹೋಗಬಾರದು. ತುರಿಕಿದರೆ ಶರಣರ ಅವಕೃಪೆಗೆ ಪಾತ್ರರಾಗುತ್ತೇವೆ. ನಾವು ಶಾಪ ಹಾಗೂ ವರವನ್ನು ನಂಬುವುದಿಲ್ಲ. ನಮಗೆ ಶಾಪಕೊಡುವ ಶಕ್ತಿ ಇಲ್ಲ, ವರ ಕೊಡುವ ಶಕ್ತಿ ಇಲ್ಲ. ನಾವು ಮಲಗಿಕೊಳ್ಳುವಾಗ ಸೊಳ್ಳೆ ಪರದೆ ಹಾಕಿಕೊಂಡೇ ಮಲಗುತ್ತೇವೆ. ಒಂದು ಸೊಳ್ಳೆಯನ್ನು ಹೆದರಿಸುವ ಶಕ್ತಿ ನಮಗಿಲ್ಲ ಎಂದ ಮೇಲೆ ಶಾಪ ಕೊಡುವ ಶಕ್ತಿ ನಮಗೆಲ್ಲಿಂದ ಬರಬೇಕು? ವರ, ಶಾಪ ಎನ್ನುವುದು ನಮ್ಮ ಬದುಕಿನ ವಿಧಾನವನ್ನು ಅವಲಂಬಿಸಿದೆ. ಶರಣರು ಮೆಚ್ಚುವ ಹಾಗೆ ನಡೆದುಕೊಂಡರೆ ಅದೇ ವರವಾಗುವುದು. ಶರಣರ ಅವಕೃಪೆಗೆ ಒಳಗಾದರೆ ಅದೇ ಶಾಪವಾಗುವುದು. ನಮ್ಮ ನಡಾವಳಿಕೆಯೇ ನಮಗೆ ಶಾಪವಾಗಬಲ್ಲದು, ವರವೂ ಆಗಬಲ್ಲದು.
ಶರಣರು ಕರುಣಿಸಿದ್ದು ನಡೆ, ನುಡಿ ಸಿದ್ಧಾಂತವನ್ನು. ನಡೆ ನುಡಿಯಲ್ಲಿ ಅಂತರವಿಲ್ಲದ ಹಾಗೆ ಬದುಕನ್ನು ಸಾಗಿಸಬೇಕೆಂದು ಹೇಳಿದರು. ಕೈಯಲ್ಲಿ ಇಷ್ಟಲಿಂಗ ಹಿಡಿದುಕೊಂಡು 24 ಗಂಟೆಗಳ ಕಾಲ ಓಂ ನಮಃ ಶಿವಾಯ ಎಂದು ಹೇಳಿದರೆ ಭಗವಂತ ಒಲಿಯುವುದಿಲ್ಲ. ಸದಾಚಾರ, ಸನ್ನಡತೆ, ಸದ್ವಿಚಾರವನ್ನಿಟ್ಟುಕೊಂಡು ಪೂಜೆ ಮಾಡಿದರೆ ಭಗವಂತ ಒಲಿಯುವನು. ಈ ಎಚ್ಚರ ಸಾಮಾನ್ಯರಿಗಿಂತ ದೊಡ್ಡ ದೊಡ್ಡ ಸ್ಥಾನದಲ್ಲಿ ಕೂತಂಥವರಿಗೆ ಇರಬೇಕಾಗುತ್ತದೆ.
ಶರಣರಿಗೆ ಪ್ರಾಣ ಮುಖ್ಯವಾಗಿರಲಿಲ್ಲ. ತತ್ವ ಮತ್ತು ಸಿದ್ಧಾಂತ ಮುಖ್ಯವಾಗಿತ್ತು. ತತ್ವ, ಸಿದ್ಧಾಂತಕ್ಕೆ ಬದ್ಧನಾದ ವ್ಯಕ್ತಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗಲು ಸಾಧ್ಯವಿಲ್ಲ. ಮನುಷ್ಯ ಒಂದು ಹಂತದವರಿಗೂ ಹಣ, ಸಂಪತ್ತು, ಭೋಗ ಇವುಗಳಿಗೆ ಅಂಟಿಕೊಳ್ಳಬಹುದು. ಆದರೆ ಸ್ವಲ್ಪ ಜಾಗೃತನಾದ ಮೇಲೆ ಹಣದಿಂದ ಆರೋಗ್ಯ, ಸಂತೋಷ ಅನುಭವಿಸಲಿಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಎಚ್ಚರ ಪ್ರತಿಯೊಬ್ಬರಿಗೂ ಇರಬೇಕು. ಪ್ರೀತಿಗಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ದಯೆ, ಪ್ರೀತಿ, ಕರುಣೆ ಬೆಳೆಸಿಕೊಳ್ಳಬೇಕು. ಆಗ ನಿಜವಾದ ಶಕ್ತಿಯನ್ನು ಪಡೆದುಕೊಳ್ಳಲಿಕ್ಕೆ ಸಾಧ್ಯ. ಶರಣರು ಮನೆ ಕಟ್ಟಲಿಲ್ಲ, ಸಂಪತ್ತನ್ನು ಕೂಡಿಡಲಿಲ್ಲ, ದೊಡ್ಡ ಮಹಾಮನೆ ಕಟ್ಟಲಿಲ್ಲ, ನೀತಿ, ಪ್ರೀತಿ, ತತ್ವ, ಸಿದ್ಧಾಂತಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯ ಮಾಡಿದರು.
ಬಸವ ಕಲ್ಯಾಣದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪದ ಕಟ್ಟಡದ ಕಾರ್ಯ ಭರದಿಂದ ಸಾಗುತ್ತಿದೆ. ಕೇವಲ ಕಟ್ಟಡದಿಂದಲೇ ಅನುಭವಮಂಟಪವಾಗದೇ ಅಲ್ಲಿ ಶರಣ ತತ್ವ, ಸಿದ್ಧಾಂತಗಳ ಅನುಸಂಧಾನ ನಡೆಯಬೇಕು. ಅನುಭವ ಮಂಟಪ ಕೇವಲ ಪ್ರೇಕ್ಷಣೀಯ ಸ್ಥಳವಾಗದೇ ನಮ್ಮ ಅಂತರಂಗದ ಅರಿವನ್ನು ಹೆಚ್ಚಿಸುವ ಮಂಟಪವಾಗಬೇಕು ಎಂದರು.
ಪ್ರಶಸ್ತಿಯ ಬಗ್ಗೆ ಮಾತನಾಡುತ್ತ:
ನಾವು ಪ್ರಶಸ್ತಿಗೆ ಹೆಚ್ಚು ಮಾನ್ಯತೆ ಕೊಟ್ಟವರಲ್ಲ. ಸ್ವಾಮಿಗಳಿಗೆ “ಸ್ವಾಮಿಗಳು” ಎನ್ನುವುದೇ ದೊಡ್ಡ ಪ್ರಶಸ್ತಿ. ಇವತ್ತಿನ ದಿನಮಾನಗಳಲ್ಲಿ ಪ್ರಶಸ್ತಿಯ ಸ್ಥಿತಿ ಏನಾಗಿದೆ ಎಂದು ಹೇಳಬೇಕಾಗಿಲ್ಲ. ಅರ್ಜಿಹಾಕಿ ಅನೇಕರಿಂದ ಶಿಫಾರಸ್ಸು ಮಾಡಿಸಿ ಪ್ರಶಸ್ತಿ ಪಡೆದುಕೊಳ್ಳುವ ಹಂತಕ್ಕೆ ಬಂದಿದೆ. ಬದಲಾಗಿ ಸಾಧನೆಯನ್ನು ಗಮನಿಸಿ ಪ್ರಶಸ್ತಿ ಕೊಟ್ಟಾಗ ಪ್ರಶಸ್ತಿಯ ಮೌಲ್ಯ ಹೆಚ್ಚುವುದು.
ಬಸವಣ್ಣನವರಿಗೆ ಪದವಿ, ಪ್ರಶಸ್ತಿಯ ಹಂಗು ಇರಲಿಲ್ಲ. ಅವರು ಬಯಸಿದ್ದು ಶರಣರು ಮೆಟ್ಟುವ ಚೆಮ್ಮಾವುಗೆಯ ಮಾಡಯ್ಯ ಎಂದು. ನಾನೊಬ್ಬ ಕಿಂಕರ ಎನ್ನುವ ಭಾವನೆಯನ್ನು ಬೆಳೆಸಿಕೊಂಡ ಕಾರಣದಿಂದ ೧೨ನೆಯ ಶತಮಾನದಲ್ಲಿ ಕಲ್ಯಾಣದಲ್ಲಿ ಅದ್ಭುತ ಪರಿವರ್ತನೆ ತರಲಿಕ್ಕೆ ಸಾಧ್ಯ ಆಯಿತು. ಪರಿವರ್ತನೆ ತಂದಿದ್ದು ತಳಸಮುದಾಯದ ಜನರ ಮೂಲಕ. ಶಿಕ್ಷಣದಿಂದ ವಂಚಿತರಾದವರನ್ನು, ಜಾತಿಯಿಂದ ಅವಮಾನ ಅನುಭವಿಸಿದವರನ್ನು, ಬಡತನದ ಬೇಗೆಯಲ್ಲಿ ಬೆಂದವರನ್ನು ಸಾರ್ವಜನಿಕರಿಂದ ದೂರ ಇದ್ದವರನ್ನು ಅಪ್ಪಿ, ತಬ್ಬಿಕೊಂಡು ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ ಎಂದು ಕರುಳಿನ ಸಂಬಂಧವನ್ನು ಸೃಷ್ಟಿ ಮಾಡಿದರು.
ಆ ಕಾರಣದಿಂದ ತಳಸಮುದಾಯದ ಜನರು ಬಸವಣ್ಣನ ಹತ್ತಿರ ಬಂದು ಶಿಕ್ಷಣ ಪಡೆದು, ಅಕ್ಷರದ ಅರಿವನ್ನು ಮೂಡಿಸಿಕೊಂಡು ತಮ್ಮ ಅನುಭವ ಮತ್ತು ಅನುಭಾವವನ್ನು ವಚನಗಳ ಮೂಲಕ ವ್ಯಕ್ತಪಡಿಸಿದರು.
ಶರಣರು ಸಾಹಿತ್ಯ ಸೃಷ್ಟಿ ಮಾಡಬೇಕೆಂದು ವಚನಗಳನ್ನು ರಚನೆ ಮಾಡಲಿಲ್ಲ. ಅವರ ಬದುಕೇ ಬರಹವಾಯಿತು. ಅವರ ಅರಿವೇ ಆಚರಣೆಯಲ್ಲಿ ಬಂತು. ಆಚರಣೆಯೇ ವಚನವಾಗಿ ನಮ್ಮ ಕಣ್ಮುಂದೆ ಇವತ್ತಿಗೂ ಇವೆ. ಬಸವಣ್ಣನವರು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದರೂ ಶ್ರೇಷ್ಠತೆಯ ವ್ಯಸನ ಎಂದೂ ಅವರನ್ನು ಕಾಡಲಿಲ್ಲ. ಮೇಲಾಗುವಂಥದ್ದು ಶ್ರೇಷ್ಠತೆಯಲ್ಲಿಲ್ಲ. ಎಲ್ಲರೊಳಗೆ ನಾನೂ ಒಬ್ಬ ಎಂದು ಹೇಳಿ ಸಮಾನತೆ ಸಾರಿದರು.
12ನೆಯ ಶತಮಾನದಲ್ಲಿ ಸಮಾಜದ ಪರಿವರ್ತನೆಯಾಗಿ ಎಲ್ಲ ರೀತಿಯ ಮೌಢ್ಯಗಳನ್ನು ನಿರಾಕರಿಸಿದರು. ಸತ್ಪರಂಪರೆಯನ್ನು ಉಳಿಸಿಕೊಂಡು ಕೆಟ್ಟಪರಂಪರೆಯನ್ನು ದೂರತಳ್ಳಿದರು.
ವೇದಿಕೆಯ ಮೇಲೆ ಬಾಲ್ಕಿ ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹರಳಯ್ಯ ಗವಿಯ ಅಕ್ಕ ಗಂಗಾಂಬಿಕೆ ತಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವ ಕಲ್ಯಾಣದ ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ಅಮರನಾಥ್ ಸೊಲ್ಪುರಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ದಯಾನಂದ ಅಗಸರ, ಸುಭಾಶ್ಚಂದ್ರ ನಾಗರಾಳೆ, ಬಸವರಾಜ ಧನ್ನೂರ ಮತ್ತಿತರರಿದ್ದರು. ಬಸವರಾಜ ಬಾಲಿಕಿಲೆ ಸ್ವಾಗತಿಸಿದರೆ, ಜ್ಯೋತಿ ತೂಗಾಂವೆ ನಿರೂಪಿಸಿ ವಂದಿಸಿದರು.