ವಚನ ನವರಾತ್ರಿ: ನೇರ, ದಿಟ್ಟ ನಿಲುವಿನ ಶರಣೆ ಅಮುಗೆ ರಾಯಮ್ಮ

ಗುರುಲಿಂಗಜಂಗಮದ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಗುರುತಿಸಲು ರಾಯಮ್ಮನವರ ವಚನಗಳು ನಮಗೆ ದಾರಿದೀಪವಾಗಿವೆ

ಬೆಂಗಳೂರು:

ವಚನಕಾರ್ತಿಯರ ನೆನೆಯುವ ಕಲ್ಯಾಣ ಬಡಾವಣೆಯ, ಬಸವ ಬೆಳಕು ಸ್ಥಳದಲ್ಲಿ ಶನಿವಾರ ಸಂಜೆ ನಡೆದ ವಚನಜ್ಯೋತಿ ಬಳಗದ ವಿಶಿಷ್ಟ ಕಾರ್ಯಕ್ರಮ “ವಚನ ನವರಾತ್ರಿ”ಯ ಮೂರನೇ ದಿನ ವಿಡಂಬನಗಾರ್ತಿ ಅಮುಗೆ ರಾಯಮ್ಮನವರು ಕಂಗೊಳಿಸಿದರು. ನೇರ, ದಿಟ್ಟ ನಿಲುವಿನ ರಾಯಮ್ಮನವರ ಪರಿಚಯ ಹಾಗೂ ಅವರ ವಚನಗಳ ನಿರ್ವಚನ ಅರ್ಥಪೂರ್ಣ ನಡೆಯಿತು.

ಅಮುಗೆ ರಾಯಮ್ಮನವರ ಪರಿಚಯವನ್ನು ಮಾಡಿಕೊಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕಿ ಶ್ರೀಮತಿ ಲೀಲಾ ದೇಸಾಯಿ – ವಚನ ಚಳವಳಿಯಲ್ಲಿ ಇಬ್ಬರು ರಾಯಮ್ಮನವರು ನಮಗೆ ಕಾಣುತ್ತಾರೆ, ಅಮುಗೆ ದೇವಯ್ಯಗಳ ಪುಣ್ಯಸ್ತಿ ಅಮುಗೆ ರಾಯಮ್ಮ ಮತ್ತು ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ ಈ ಇಬ್ಬರು ರಾಯಮ್ಮಂದಿರಾಗಿದ್ದು ಇಬ್ಬರ ಅಂಕಿತವೂ ಅಮುಗೇಶ್ವರಲಿಂಗವೇ ಆಗಿದ್ದು, ಅಮುಗೆ ರಾಯಮ್ಮ ಯಾರು? ಎಂಬ ಸಂದಿಗ್ಧ ಉಂಟಾದರೂ, ವಿದ್ವಾಂಸರು ಈಗಾಗಲೇ ಈ ಸಂದಿಗ್ಧವನ್ನು ಬಿಡಿಸಿ 114 ಅನುಭಾವಗಳು ಲಭ್ಯವಿರುವ ಅಮುಗೆ ರಾಯಮ್ಮನವರನ್ನು ನಮಗೆ ಗುರುತಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಅಮುಗೆ ರಾಯಮ್ಮನವರು ಅಮುಗೆ ದೇವಯ್ಯನವರ ಧರ್ಮಪತ್ನಿಯಾಗಿದ್ದು, ಇವರ ಮೂಲಸ್ಥಲ ಸೊನ್ನಲಿಗೆಯಾಗಿದ್ದು ನೇಯ್ಗೆಯ ಕಾಯಕವನ್ನು ಮಾಡುತ್ತಾ ಸತ್ಯ ಶುದ್ಧ ಕಾಯಕವನ್ನು ನಡೆಸುತ್ತ ದಾಸೋಹ ಜೀವಿಗಳಾಗಿದ್ದ ಈ ದಂಪತಿಗಳು ಇಷ್ಟಲಿಂಗ ಪೂಜಾ ನಿರತರಾಗಿದ್ದ ಪರಮ ಶಿವಭಕ್ತರು ಎಂದು ವಿವರಿಸಿದರು.

ಸೊನ್ನಲಾಪುರದಲ್ಲಿ ತನ್ನ ಲೋಕೋಪಯೋಗಿ ಕಾರ‍್ಯಗಳಿಂದ ಪ್ರಖ್ಯಾತರಾಗಿದ್ದ ಸಿದ್ದರಾಮರು ಕಪಿಲಸಿದ್ಧ ಮಲ್ಲಿನಾಥನ ಪರ್ವಕ್ಕೆಂದು ಒಂದು ದಿನ ಊರಿನ ಎಲ್ಲ ಜನರಿಗೆ ಭತ್ತ ಕುಟ್ಟಲು ಕೊಟ್ಟಣವನ್ನು ಹಾಕಿಸಿದಾಗ, ಇಷ್ಟಲಿಂಗೋಪಾಸಕರಾದ ಅಮುಗೆ ದೇವಯ್ಯ ದಂಪತಿಗಳು ‘’ಲಿಂಗವಿಲ್ಲದ ಭವಿಯ ಸೇವೆ ಮಾಡಲಾರೆವು” ಎಂದು ಹೇಳಿ ಕೊಟ್ಟಣ ಕುಟ್ಟಲು ಹೋಗದೆ ತಮ್ಮಲ್ಲಿದ್ದ ವಸ್ತುಗಳನ್ನೆಲ್ಲ ಮೂರು ಗಂಟಿನಲ್ಲಿ ಕಟ್ಟಿ, ಎರಡನ್ನು ತಾವು ಹೊತ್ತುಕೊಂಡು, ಉಳಿದ ಒಂದನ್ನು ಮಲ್ಲಿನಾಥನಿಂದ ಹೊರಿಸಿಕೊಂಡು ಹೋಗುವ ಪ್ರಸಂಗವನ್ನು ಸಭೆಗೆ ತಿಳಿಸಿದ ಲೀಲಾದೇಸಾಯಿ ಅವರು ಸಿದ್ಧರಾಮರು ಪಶ್ಚಾತಾಪದಿಂದ ಈ ಶರಣ ದಂಪತಿಗಳನ್ನು ಮರಳಿ ಕರೆತರಲು ಹೋದರು, ಆದರೆ ಅವರು ಅದಕ್ಕೊಪ್ಪದೆ ಕಲ್ಯಾಣದತ್ತ ಸಾಗಿ ಅಲ್ಲಿಯೇ ತಮ್ಮ ಕಾಯಕವನ್ನು ಮುಂದುವರೆಸುತ್ತಾ ಅನುಭವ ಮಂಟಪದ ಸದಸ್ಯರಾಗಿ ಅನುಭಾವಗೋಷ್ಠಿಯಲ್ಲಿ ಪಾಲ್ಗೊಂಡು ಅನುಭಾವಾಮೃತವನ್ನು ಹಂಚಿಕೊಂಡು ಕೊನೆಗೆ ಕಲ್ಯಾಣ ಕ್ರಾಂತಿಯ ನಂತರ ಪುಳಜೆ ಎಂಬ ಊರಿನಲ್ಲಿ ನೆಲೆನಿಂತು ಅಲ್ಲಿಯೇ ಐಕ್ಯವಾಗಿದ್ದನ್ನು ವಿವರಿಸಿದರು.

ಕರ್ನಾಟಕ ಸರ್ಕಾರ ಪ್ರಕಟಿಸಿರುವ ಶಿವಶರಣೆಯರ ವಚನ ಸಂಪುಟದಲ್ಲಿ ಅಮುಗೆ ರಾಯಮ್ಮನವರ ೧೧೬ ವಚನಗಳು ಬಿತ್ತರಗೊಂಡಿರುವುದನ್ನು ತಿಳಿಸಿದ ಲೀಲಾ ದೇಸಾಯಿಯವರು ಆಚಾರ ಪ್ರಧಾನವಾದರೂ, ಸಮಾಜ ವಿಮರ್ಶೆಯನ್ನು ರಾಯಮ್ಮನವರ ವಚನಗಳಲ್ಲಿ ನಾವು ಕಾಣಬಹುದಾಗಿದ್ದು ಹೆಚ್ಚು ತೀಕ್ಷ್ಣವಾಗಿ ಮತ್ತು ಅಷ್ಟೇ ಕಟುವಾಗಿ ಸಮಾಜದ ವಿಮರ್ಶೆಯನ್ನು ತಮ್ಮ ವಚನಗಳಲ್ಲಿ ಅಮುಗೆ ರಾಯಮ್ಮನವರು ಮಾಡಿದ್ದಾರೆ. “ಹೆದರದಿರು ಮನವೆ, ಹಿಮ್ಮೆಟ್ಟದಿರು ಮನವೆ, ಹಿಡಿದ ಛಲವ ಬಿಡದಿರು ಮನವೆ” ಎಂದು ತನು-ಮನ-ಭಾವಗಳನ್ನು ಶುದ್ಧಗೊಳಿಸಿಕೊಂಡು ಛಲದಿಂದ ಮುನ್ನಡೆದ ಸಾಧಕಿಯಾಗಿದ್ದಾರೆ ಎಂದು ಬಣ್ಣಿಸಿದರು.

ಅಮುಗೆ ರಾಯಮ್ಮನವರ ವಚನಗಳ ನಿರ್ವಚನ ನಡೆಸಿಕೊಟ್ಟ ಮುಖ್ಯೋಪಾಧ್ಯಾಯರಾದ ಶ್ರೀ ಮಹೇಶ ಸುಂಕದಕಟ್ಟೆ ಅವರು ರಾಯಮ್ಮನವರ ವಚನಗಳು ಅದೆಷ್ಟು ವಾಸ್ತವದಿಂದ ಕೂಡಿದೆ ಎಂದರೆ, ಇಂದಿಗೂ ಅವು ಬಹು ಮುಖ್ಯವೆಂದು ನಾವು ಪರಿಗಣಿಸಬೇಕಾಗುತ್ತದೆ. ಇಂದು ನಾವು ಕಾಣುತ್ತಿರುವ ವಿರಕ್ತರ – ಕಾವಿಧಾರಿಗಳ ಅದ್ಭುತ ಆಟೋಟಗಳನ್ನು ರಾಯಮ್ಮ ೮೫೦ ವರ್ಷಗಳ ಹಿಂದೆಯೇ ಕಟುವಾಗಿ ಟೀಕಿಸಿ, “ದೇಶ ದೇಶವ ತಿರುಗಿ ಮಾತುಗಳ ಕಲಿತು ಗ್ರಾಸಕ್ಕೆ ತಿರುವ ದಾಸಿವೇಸಿಯ ಮಕ್ಕಳ ವಿರಕ್ತರೆಂಬೆನೆ? ನಿಜನವರಿದ ವಿರಕ್ತನು ನಿಜಾನುಭಾವಿ ಎಂದು ನುಡಿವನೇ” ಎಂದು ಪ್ರಶ್ನಿಸಿ ಅರಣ್ಯದ ಮಧ್ಯದಲ್ಲಿ, ರೆಸಾರ್ಟ್ಗಳಲ್ಲಿ ಧ್ಯಾನದ ಕ್ಯಾಂಪುಗಳನ್ನು ಮಾಡುತ್ತಾ, ದೊಡ್ಡ ದೊಡ್ಡ ಸೌಂಡ್ ಹಾಕುತ್ತಾ, ಎಗ್ಗಿಲ್ಲದೆ ನರ್ತಿಸಿ ಕುಣಿದು ಕುಪ್ಪಳಿಸಿ ಅಪ್ಪಿ ಚಪ್ಪರಿಸುವ ಇಂದಿನ ಧ್ಯಾನ ಶಿಬಿರಗಳನ್ನು ಕಂಡಾಗ ಅಮುಗೆ ರಾಯಮ್ಮನವರು ಹೇಳಿರುವ ಮಾತುಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ರಾಯಮ್ಮನವರ ವಚನ ಆಸೆಯುಳ್ಳವಂಗೆ ಮಾಟಕೂಟವಲ್ಲದೆ, ನಿರಾಸೆಯುಳ್ಳವಂಗೆ ಮಾಟಕೂಟವೇಕೆ ? ಮನ ಪರಿಣಾಮಿಗೆ ಮತ್ಸರವೇಕೆ? ಸುತ್ತಿದ ಮಾಯಾಪ್ರಪಂಚವ ಜರಿದವಂಗೆ ಅಂಗನೆಯರ ಹಿಂದು ಮುಂದೆ ತಿರುಗಲೇಕೆ? ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ ? ಉದಾಹರಿಸಿದ ಸುಂಕದಕಟ್ಟೆ ಮಹೇಶ್ ಇಂದಿನ ಬಹುತೇಕ ಗುರುಗಳು – ಯೋಗಿಗಳು ಅಂಗನೆಯರ ಹಿಂದೆ ಮುಂದೆ ತಿರುಗುತ್ತಿರುವುದು, ಮಾಟಕೂಟವನ್ನು ಮಾಡುತ್ತಿರುವುದು, ಷೋಡಶೋಚಾರದ ಹಂಗಿನಲ್ಲಿರುವುದನ್ನು ನಾವು ಕಾಣುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು.

ಅಮಗೆ ರಾಯಮ್ಮನವರ ಸಮರ್ಪಣಾಭಾವ ಕುರಿತು ವಿಶ್ಲೇಷಿಸಿದ ಅವರು ಎನ್ನ ದೇಹವ ದಗ್ಧವ ಮಾಡಯ್ಯಾ ಎನ್ನ ಕಾಯದಲ್ಲಿಪ್ಪ ಕರ್ಮವ ತೊಡೆಯಯ್ಯಾ. ಎನ್ನ ಭಾವದಲ್ಲಿಪ್ಪ ಭ್ರಮೆಯ ಜರಿಯಯ್ಯಾ, ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ ಅಮುಗೇಶ್ವರಲಿಂಗವೆ ಎಂದು ತನ್ನೊಳಗಿನ ಪರಿಮಿತಿಗಳನ್ನು ಮೊದಲು ಕಳೆದುಕೊಂಡು ಹಿಡಿದ ಕಾರ್ಯವ ಬಿಡದೆ ಸಾಧಿಸಲು ಬೇಕಾದ ಛಲವನ್ನು ನಡೆಸಿಕೊಡು ಎಂದು ತನ್ನನ್ನು ಸಮರ್ಪಿಸಿಕೊಳ್ಳುವ ಅಮುಗೆ ರಾಯಮ್ಮನವರನ್ನು ಕಟ್ಟಿಕೊಟ್ಟರು.

ರಾಯಮ್ಮನವರು ಹೇಳುವ ಅನುಭಾವದ ನುಡಿಮುತ್ತುಗಳು ತಮ್ಮನ್ನು ಬಹು ಆಶ್ಚರ್ಯಕ್ಕೀಡು ಮಾಡುತ್ತವೆ ಎಂದು ಹೇಳಿದ ಅವರು ಗುರುಲಿಂಗಜಂಗಮದ ಹೆಸರಿನಲ್ಲಿ ಇಂದಿಗೂ ನಡೆಯುತ್ತಿರುವ ಅವ್ಯವಹಾರಗಳನ್ನು ಗುರುತಿಸಲು, ಕಂಡುಕೊಳ್ಳಲು ರಾಯಮ್ಮನವರ ವಚನಗಳು ನಮಗೆ ದಾರಿದೀಪವಾಗಿವೆ ಎಂದು ತಿಳಿಸಿದರು.

ಗುರುವೆಂಬೆನೆ, ಗುರುವು ನರನು ಲಿಂಗವೆಂಬೆನೆ, ಲಿಂಗವು ಕಲ್ಲು ವಚನವನ್ನು ವಾಚಿಸಿದ ಮಹೇಶ್ ಸುಂಕದಕಟ್ಟೆ
ಹೊನ್ನು, ಹೆಣ್ಣು, ಮಣ್ಣು ಈ ತ್ರಿವಿಧವ ಹಿಡಿದ ಕಾರಣ ಗುರುವೆಂಬುವನು ನರನಾಗಿದ್ದಾನೆ. ಅಷ್ಟವಿಧಾರ್ಚನೆ, ಷೋಡಶೋಪಚಾರಕ್ಕೆ ಒಳಗಾಗಿರುವ ಕಾರಣ ಲಿಂಗವೆಂಬುದು ಕಲ್ಲಾಗಿದೆ; ಆಶಾಪಾಶಕ್ಕೆ ಒಳಗಾದ ಕಾರಣ ಲಿಂಗವೆಂಬುದು ಕಲ್ಲಾಗಿದೆ, ಆಶಾಪಾಶಕ್ಕೆ ಒಳಗಾದ ಕಾರಣ ಜಂಗಮವೆಂಬುದು ಆತ್ಮವಾಗಿದೆ. ಗುರುಲಿಂಗ ಜಂಗಮ ಎಂಬುದನ್ನು ಕೇವಲ ಕಾಂಚನದ ಆಸೆಗಾಗಿ ಲಾಂಛನವಾಗಿರಿಸಿಕೊಂಡವರನ್ನು ರಾಯಮ್ಮ ಬಹುಚೆನ್ನಾಗಿ ಗುರುತಿಸಿದ್ದು ಅವುಗಳನ್ನು ನಿರಾಕರಿಸಿದ್ದಾರೆ .ಇದು ನಮಗೆಲ್ಲರಿಗೂ ಇಂದಿಗೂ ಮಾರ್ಗದರ್ಶನೀಯವಾಗಿದ್ದು ನಾವೂ ಸಹ ರಾಯಮ್ಮನವರಂತೆ ಈ ಕಾಂಚನದ ಗುರುಗಳನ್ನು ನಿರಾಕರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

೧೧೬ ವಚನಗಳಲ್ಲಿ ರಾಯಮ್ಮನವರು ಬಳಸಿರುವ ಭಾಷೆ ಅತ್ಯಂತ ಚಂದವಿದ್ದು ಸುಂದರ ಸೂತ್ರಬದ್ಧ ವಾಕ್ಯಗಳು, ಗಾದೆ, ನುಡಿಗಟ್ಟುಗಳು ಅವರ ವಚನಗಳಿಗೆ ಧ್ವನಿಪೂರ್ಣತೆಯನ್ನು, ವಿಶೇಷ ಸತ್ವವನ್ನು ತಂದುಕೊಟ್ಟಿವೆ ಎಂದು ತಿಳಿಸಿದ ಅವರು “ಕಾದ ಹಾಲ ನೊಣ ಮುಟ್ಟಬಹುದೆ”, ‘ಉತ್ತಮ ತೇಜಿಗೆ ಚಬುಕಿನಲ್ಲಿ ತೆಗೆವರುಂಟೆ?, ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ? ಅಡಿನ ಮರಿ ಆನೆಯಾಗಬಲ್ಲುದೆ? ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ?” ಆಕಾಶಕ್ಕೆ ಹಾರುವಂಗೆ ದೋಟಿಯ ಕೋಲ ಹಂಗೇತಕ್ಕಯ್ಯಾ! ಮೊದಲಾದ ರಾಯಮ್ಮನವರ ನಾಣ್ಣುಡಿಗಳನ್ನು ವಿವರಿಸಿದರು.

ಆಧುನಿಕ ಮಹಿಳಾ ಚಳವಳಿಯಲ್ಲಿಯೂ ಕಾಣಸಿಗದ ವ್ಯಕ್ತಿತ್ವವನ್ನು ನಾವು ಅಮುಗೆ ರಾಯಮ್ಮನವರ ವಚನಗಳಲ್ಲಿ ಕಾಣುತ್ತೇವೆ ಎಂದು ಹೇಳಿದ ಮಹೇಶ್ ಸುಂಕದಕಟ್ಟೆ ಅತ್ಯಂತ ನಿರ್ದಾಕ್ಷಿಣ್ಯವಾಗಿ, ನಿಷ್ಟುರವಾಗಿ, ಹರಿತವಾಗಿ ಹೇಳಬೇಕಾದ್ದನ್ನು ನೇರವಾಗಿ ಹೇಳುವ ಛಲಗಾರ್ತಿ ರಾಯಮ್ಮನವರಾಗಿದ್ದು ತಮ್ಮ ಕಾಲದಲ್ಲಿ ಇದ್ದಿರಬಹುದಾದ ಸುಳ್ಳು, ಮೋಸ, ಠಕ್ಕು, ವಂಚನೆಗಳನ್ನು ಸ್ತ್ರೀ ಸಹಜವಾದ ಕೋಮಲತೆಯನ್ನು ಬಿಟ್ಟು ವಿಡಂಬಿಸಿ ಛೇಡಿಸುವ ರಾಯಮ್ಮ ಇಂದಿಗೂ ನಮಗೆ ಮಾದರಿ ಎಂದು ಬಣ್ಣಿಸಿದರು.

ಇಂತಹ ಅದ್ಭುತ ವಿಡಂಬನಗಾರ್ತಿಯಾದ ಅಮುಗೆ ರಾಯಮ್ಮನವರ ವಚನಗಳನ್ನು ಮೆಲುಕು ಹಾಕುವ ಭಾಗ್ಯ ತಮಗೆ ಸಿಕ್ಕಿದ್ದು ಬಹಳ ಸಂತೋಷವನ್ನು ತಂದುಕೊಟ್ಟಿದ್ದು ಅವಕಾಶವನ್ನು ಕಲ್ಪಿಸಿದ ವಚನಜ್ಯೋತಿ ಬಳಗದ ಪಿನಾಕಪಾಣಿಯವರಿಗೂ, ಆಶ್ರಯದಾತರಾದ ಪ್ರಸನ್ನ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದ ಸ್ನೇಹಾ ಟ್ರಸ್ಟ್ ಬಸವೇಶ್ವರನಗರದ ಕಾರ್ಯದರ್ಶಿ ಶ್ರೀಮತಿ ರೇಖಾ ಪ್ರಕಾಶ್ ಮಹಾತ್ಮ ಬಸವಣ್ಣನವರ ವಿಚಾರಗಳನ್ನು ಮಕ್ಕಳಿಗೆ ತಲುಪಿಸುತ್ತಿರುವ ವಚನಜ್ಯೋತಿ ಬಳಗದ ಕಾರ್ಯವನ್ನು ಪ್ರಶಂಸಿಸಿ, ಭಾರತ ದೇಶದ ಉದ್ದಗಲಕ್ಕೂ ಆಚರಿಸುವ ನವರಾತ್ರಿಗೂ, ವಚನಜ್ಯೋತಿ ಬಳಗ ಆಚರಿಸುತ್ತಿರುವ ನವರಾತ್ರಿಗೂ ಇರುವ ವ್ಯತ್ಯಾಸ ನಿಜಕ್ಕೂ ಅರ್ಥಪೂರ್ಣವಾಗಿದ್ದು, ಪುರಾಣಗಳ ದೇವಿಯರ ಚರಿತ್ರೆಗಿಂತ ನಿಜಬದುಕಿನ ವಚನಕಾರ್ತಿಯರ ಬದುಕು ನಮಗೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ವಚನಜ್ಯೋತಿ ಬಳಗದ ಚಟುವಟಿಕೆಗಳಿಗಾಗಿ ತಾವು ಒಂದು ಸಣ್ಣ ಕಾಣಿಕೆಯನ್ನು ಕೊಡುತ್ತಿದ್ದು, ನಾವೆಲ್ಲರೂ ವಚನಜ್ಯೋತಿಯನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂದು ಕರೆನೀಡಿದ ರೇಖಾಪ್ರಕಾಶ್ ಹತ್ತು ಸಾವಿರ ರೂಪಾಯಿಗಳನ್ನು ವಚನಜ್ಯೋತಿ ಬಳಗಕ್ಕೆ ಈ ಸಂದರ್ಭದಲ್ಲಿ ನೀಡಿ ಹಾರೈಸಿದರು.

ಮತ್ತೊಬ್ಬ ಮುಖ್ಯ ಅತಿಥಿಗಳಾದ ವಾಸ್ತುಶಿಲ್ಪಿಗಳಾದ ಶ್ರೀಮತಿ ಚಂದ್ರಿಕಾ ಗುರುಪ್ರಸಾದ್ ಅವರು ಮಾತನಾಡಿ ವಚನ ನವರಾತ್ರಿಯ ನೆಪದಲ್ಲಿ ಒಂಬತ್ತು ದಿನಗಳೂ ಒಂಬತ್ತು ವಚನಕಾರ್ತಿಯರನ್ನು ನೆನೆಯುವ ವಚನಜ್ಯೋತಿ ಬಳಗದ ಕಾರ್ಯ ಎಲ್ಲ ಸಂಘ ಸಂಸ್ಥೆಗಳಿಗೂ ಮಾದರಿಯಾದದ್ದು ಎಂದು ಬಣ್ಣಿಸಿದರು.

ಶ್ರೀಮತಿ ದಿವ್ಯಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಪುಟಾಣಿಗಳಾದ ಪ್ರದ್ಯೋತ್, ಆರ್ನ ಹಾಗೂ ದಿಶಾ ವಚನ ಪ್ರಾರ್ಥನೆ ಸಲ್ಲಿಸಿದರು.

ವಚನ ಕಲಿಕಾ ತರಗತಿಯ ನೀಲಮ್ಮ ಮತ್ತು ತಂಡದವರು ವಚನ ಗಾಯನ ಸೇವೆ ಸಲ್ಲಿಸಿದರು. ಬಾಲ ಸರಸ್ವತಿ ಕು. ಪೂರ್ಣಿಕ ಆರಾಧ್ಯ ತಮ್ಮ ಮಧುರ ಗಾಯನದಿಂದ ಎಲ್ಲರ ಮನ ಗೆದ್ದರು.

ಅಮುಗೆ ರಾಯಮ್ಮನವರ, ಎಡೆಯೂರು ಸಿದ್ದಲಿಂಗೇಶ್ವರರ ಹಾಗೂ ಬಸವಣ್ಣನವರ ಸ್ತುತಿಯನ್ನು ಅತ್ಯಂತ ಸೊಗಸಾಗಿ ಹಾಡಿದ ಪೂರ್ಣಿಕ ಆರಾಧ್ಯಳಿಗೆ ಅತಿಥಿಗಳಾದ ರೇಖಾ ಪ್ರಕಾಶ್ ಒಂದು ಸಾವಿರ ರೂ.ಗಳ ಕೊಡುಗೆ ನೀಡಿ ಹಾರೈಸಿದರು.

ವಚನ ನವರಾತ್ರಿಯ ಪ್ರಧಾನ ಸಂಚಾಲಕರಾದ ಪ್ರಸನ್ನ ಪಂಚಾಕ್ಷರಯ್ಯ, ಸಂಚಾಲಕರಾದ ಮಧು ಶಿವಕುಮಾರ, ಹೆಚ್.ಬಿ. ದಿವಾಕರ, ಅಭಿಮಾನಿ ಬಂಧುಗಳಾದ ವಿಜಯ ಶಿವಕುಮಾರ, ಕುಸುಮ ಕಾಂತರಾಜು ಮೊದಲಾದವರು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಸಾದ ವಿತರಣೆಯೊಂದಿಗೆ ವಚನ ನವರಾತ್ರಿಯ ಮೂರನೇ ದಿನದ ಕರ‍್ಯಕ್ರಮ ಸಮಾಪ್ತವಾಯಿತು.

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷ, ವಚನಜ್ಯೋತಿ ಬಳಗ, ಬೆಂಗಳೂರು