ವಚನ ನಿರ್ವಚನ: ಸಂಸಾರದಿಂದ ಸಿಡಿದೆದ್ದ ವೀರವಿರಾಗಿಣಿ ಅಕ್ಕ

ಗುಳೇದಗುಡ್ಡ

ಶನಿವಾರ ಸಂಜೆ ಇಲ್ಲಿನ ಅಕ್ಕಮಹಾದೇವಿ ಮಂದಿರದಲ್ಲಿ ಪೂಜ್ಯ ಶರಣಮ್ಮ ತಾಯಿಯವರ ಸಾನಿಧ್ಯದಲ್ಲಿ ಮಹಾಮನೆ ಕಾರ್ಯಕ್ರಮ ಜರುಗಿತು. ಅಕ್ಕಮಹಾದೇವಿ ತಾಯಿಯವರ ವಚನವನ್ನು ನಿರ್ವಚನಕ್ಕಾಗಿ ಆಯ್ದುಕೊಳ್ಳಲಾಗಿತ್ತು.

ಲಿಂಗಪೂಜಕರಿಗೆ ಫಲ ಪದಂಗಳಲ್ಲದೆ ಲಿಂಗವಿಲ್ಲ
ಧರ್ಮ ತ್ಯಾಗಿಗೆ ನಕರವಲ್ಲದೆ ಲಿಂಗವಿಲ್ಲ
ವೈರಾಗ್ಯ ಸಂಪನ್ನರಗೆ ಮುಕ್ತಿಯಲ್ಲದೆ ಲಿಂಗವಿಲ್ಲ
ಜ್ಞಾನಿಗೆ ಪರಿಭ್ರಮಣವಲ್ಲದೆ ಲಿಂಗವಿಲ್ಲ
ಇಂತಪ್ಪ ಭ್ರಾಂತನತಿಗಳಿದು ತನು ತಾನಾದ ಇರವಂತೆಂದಡೆ
ದ್ವೈತವಳಿದು ಅದ್ವೈತದಿಂದ ತನ್ನ ತಾನರಿದಡೆ
ಚೆನ್ನಮಲ್ಲಿಕಾರ್ಜುನ ಲಿಂಗವು ತಾನೆ.

ಈ ವಚನದ ನಿರ್ವಚನವನ್ನು ಮೊದಲಿಗೆ ಪ್ರಾರಂಭಿಸಿದ ಪ್ರೊ. ಶ್ರೀಕಾಂತ ಗಡೇದ ಅವರು ಅಕ್ಕನ ಚರಿತ್ರೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ವಿವರಿಸಿದರು. ಕಿರಿವಯಸ್ಸಿನ ಮಹಾದೇವಿ ತಾಯಿ ಎಲ್ಲ ಹಿರಿಯ ಅನುಭಾವಿಗಳಿಗೂ ಅಕ್ಕಳಾದ ಬಗೆಯನ್ನು ವಯಸ್ಸಿನಿಂದ ಅಲ್ಲ ಅದು ಅವಳ ಅನುಭಾವದ ನೆಲೆಯಿಂದ ಎಂದು ಹೇಳುತ್ತ ಅದಕ್ಕೆ ಉತ್ತಮ ಉದಾಹರಣೆಯೆಂದರೆ ಈ ವಚನ ಎಂದರು.

ಇಂದು ನಮ್ಮ ತಾಯಂದಿರು ಅಕ್ಕನಂತೆ ಅಂತರಂಗದ ಸೌಂದರ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಮನುಜ ಕುಲವನ್ನು ಶಾಂತಿ ಸಹನೆಗಳಿಂದ ಬದುಕಿಸುವಂತಾಗಲು ನಾವೆಲ್ಲರೂ ಅಕ್ಕನ ನಿಜವಾದ ಅನುಯಾಯಿಗಳಾಗಬೇಕು. ನಮ್ಮ ನುಡಿಗೂ ನಡೆಗೂ ಸಾಮ್ಯತೆ ಇರಬೇಕು. ಇಷ್ಟಲಿಂಗ ಸಹಿತ ಬದುಕು ನಮ್ಮದಾಗಿರಬೇಕು ಎಂದರು.

ಪ್ರೊ. ಸುರೇಶ ರಾಜನಾಳ ಅವರು ಅಕ್ಕನ ಅನುಭಾವದ ನೆಲೆಯನ್ನು ವರ್ಣಿಸುತ್ತ ಅವಳೊಬ್ಬ ವೀರವಿರಾಗಿಣಿ, ಸಂಸಾರದಿಂದ ಸಿಡಿದೆದ್ದ ಜ್ಯೋತಿ ಎಂದು ಬಣ್ಣಿಸಿದರು. ಕೆಡುವ ಕಾಯವನ್ನು ಕದಳಿಯನ್ನಾಗಿಸಿಕೊಂಡವಳು ಅಕ್ಕ. ತನುವೆಂಬುದು ಕದಳಿ. ಆ ಕದಳಿಯ ದಿಂಡನ್ನು ಸುಲಿಯುತ್ತ ಹೋದಂತೆ ಹೇಗೆ ಏನೂ ಉಳಿಯುವುದಿಲ್ಲವೊ ಹಾಗೆಯೇ ಈ ಶರೀರ ಪಂಚ ಕೋಶಗಳಿಂದ, ಪಂಚ ವಿಷಯಗಳಿಂದ, ಅಷ್ಟ ಮದಗಳೆಂಬ ಸುರುಳಿಗಳಿಂದ ಸುತ್ತಿಕೊಂಡಿದೆ. ಅದನ್ನು ಬಿಡಿಸುತ್ತ ಹೋದಂತೆ ಚೆನ್ನಮಲ್ಲಿಕಾರ್ಜುನನ ದರ್ಶನವಾಗುತ್ತದೆ. ಅಂಥ ಚೆನ್ನಮಲ್ಲಿಕಾರ್ಜುನನೇ ತಾನಾದವಳು ಅಕ್ಕಮಹಾದೇವಿ. ಅದು ಇಷ್ಟಲಿಂಗದಿಂದ ಮಾತ್ರ ಸಾಧ್ಯ.

ಸ್ಥಾವರ ಲಿಂಗದಿಂದ ಭಿನ್ನತೆ ಇರುತ್ತದೆ. ಇಷ್ಟಲಿಂಗದಿಂದ ಮಾತ್ರ ಅಂಗಗುಣವಳಿದು ತಾನೇ ಲಿಂಗವಾಗುವ ಸಹಜತೆ ಇದೆ ಎಂಬುದನ್ನು ಈ ವಚನದಲ್ಲಿ ಕಾಣಬಹುದೆಂದು ಪ್ರೊ. ಸುರೇಶ ರಾಜನಾಳ ಅವರು ವಿವರಿಸಿದರು.

ಈ ವಚನವನ್ನು ಕುರಿತು ಪ್ರೊ ಸಿದ್ದಲಿಂಗಪ್ಪ ಬರಗುಂಡಿಯವರು ಮಾತನಾಡುತ್ತ, ಲಿಂಗದಲ್ಲಿ ಎರಡು ಪ್ರಕಾರ. ಒಂದು ಸ್ಥಾವರ ಲಿಂಗ. ಅದು ಆ ಪರಾತ್ಪರ ವಸ್ತುವಿನಿಂದ ನಮ್ಮನ್ನು ದೂರವಿಡುವಂತಹುದು. ಇದೇ ದ್ವೈತ ಸ್ಥಿತಿ. ಇನ್ನೊಂದು ಅಪ್ಪ ಬಸವಣ್ಣ ಕೊಟ್ಟಿದ್ದು ಇಷ್ಠಲಿಂಗ. ಇದು ನಮ್ಮಲ್ಲಿಯ ದ್ವಂದ್ವವನ್ನು ಕಳೆದು ನಮ್ಮನ್ನೇ ಲಿಂಗವನ್ನಾಗಿಸಿ ಅದ್ವೈತವನ್ನಾಗಿಸುವುದು. ಈ ಎರಡೂ ಲಿಂಗಗಳ ಪೂಜಾ ವಿಧಾನ, ಫಲಪ್ರಾಪ್ತಿ ಬೇರೆ ಬೇರೆಯಾದುದು.

ಒಂದರಲ್ಲಿ ಲೌಕಿಕ ಪ್ರಪಂಚದ ಭೋಗವೇ ಮುಖ್ಯವಾಗಿ ಆಸೆ ಆಮಿಷಗಳು ಹೆಚ್ಚುತ್ತ ಹೋಗಿ ಮನುಷ್ಯನನ್ನು ದುರ್ವರ್ತನೆಯತ್ತ ಸಾಗಿಸುತ್ತವೆ. ಕ್ಷಣಿಕ ಸುಖವನ್ನು ನೀಡಿ, ತುಪ್ಪ ಸವರಿದ ಖಡ್ಗವನ್ನು ನೆಕ್ಕುವ ನಾಯಿಯನ್ನಾಗಿಸುತ್ತವೆ. ಇಷ್ಟಲಿಂಗದ ಪೂಜೆಯಿಂದ ಅಖಂಡಿತವಾದ ಸುಖವನ್ನು ಪಡೆದು ತಾನು ಪರಮಾನಂದದಲ್ಲಿಯೇ ಲೀನವಾಗಿ ಮಹಾಲಿಂಗವೆ ಆಗುತ್ತಾನೆ. ಇಲ್ಲಿ ಪೂಜೆಯೆಂದರೆ ಲಿಂಗದ ಅನುಸಂಧಾನ ಎಂಬುದು ನೆನಪಿನಲ್ಲಿರಲಿ. ಹೀಗಾಗಿ ಈ ವಚನದ ಪ್ರಾರಂಭದಲ್ಲಿ ಬರುವ ಲಿಂಗವನ್ನು ಸ್ಥಾವರ ಲಿಂಗವೆಂದೂ, ಉಳಿದೆಡೆಯಲ್ಲಿ ಬರುವ ಲಿಂಗವೆಂಬ ಶಬ್ದವನ್ನು ಮಹಾಲಿಂಗವೆಂಬುದಾಗಿ ಅರಿತುಕೊಳ್ಳಬೇಕು.

ಅಕ್ಕಮಹಾದೇವಿ ತಾಯಿಯವರು ಸ್ಥಾವರಲಿಂಗ ಪೂಜೆ ಹಾಗೂ ಅದರ ಫಲಪ್ರಾಪ್ತಿಯನ್ನು ಸೂಕ್ಷ್ಮವಾಗಿ ತಿರಸ್ಕರಿಸಿ ಇಷ್ಟಲಿಂಗದ ಮಹತ್ವವನ್ನೇ ಎತ್ತಿ ಹೇಳಿದ್ದಾರೆ. ಎರಡರ ನಡುವಣ ವ್ಯತ್ಯಾಸವನ್ನೂ ನಮ್ಮೆದುರಿಗೆ ಇಟ್ಟು, ಕೊನೆಗೆ ಚೆನ್ನಮಲ್ಲಿಕಾರ್ಜುನನೇ ಆಗುವ ಸ್ಥಿತಿಯನ್ನೇ ಒಪ್ಪಿಕೊಂಡಿದ್ದಾರೆ. ಈ ವಚನದಲ್ಲಿ ಸ್ಥಾವರ ಲಿಂಗ ಪೂಜಕ, ಧರ್ಮತ್ಯಾಗಿ, ವೈರಾಗ್ಯ ಸಂಪನ್ನ ಹಾಗೂ ಜ್ಞಾನಿಗಳ ಕಾರ್ಯ ಹಾಗೂ ಅವರು ಪಡೆಯುವ ಫಲವನ್ನು ಪಟ್ಟಿ ಮಾಡಿದ್ದಾರೆ. ಅದೇ ಸಾಲಿನ ಕೊನೆಗೆ ಏನಾದರೇನು ಆತ ಲಿಂಗನಾಗಲಾರ, ಬಯಲ ಸ್ಥಿತಿ ಪಡೆಯಲಾರ ಎಂಬ ಫಲಿತಾಂಶವನ್ನು ಕೊಟ್ಟಿದ್ದಾರೆ.

ಸ್ಥಾವರ ಲಿಂಗ ಪೂಜೆಗೆ, ಈ ಪೂಜೆಗೆ ಈ ಫಲ ಎಂಬ ಪಟ್ಟಿ ಇರುತ್ತದೆ. ಏನೆಲ್ಲ ಕಾಮಿತ ಫಲಗಳು ದೊರೆಯಬಹುದಾದರೂ, ಆತ ದೇವನಿಂದ ಭಿನ್ನನಾಗಿಯೇ ಇರುತ್ತಾನಲ್ಲದೆ ದೇವನಾಗಲಾರ. ಈ ಧರ್ಮದ ಗೊಡವೆಯೇ ಬೇಡವೆಂದು ನಡೆಯುವ ಅಧರ್ಮಿಗೆ ನರಕವಿದೆ.

ಧರ್ಮವೆಂದರೆ ತನಗೂ ಇತರರಿಗೂ ಹಿತವನ್ನುಂಟು ಮಾಡುವ ಮಾರ್ಗವೆಂದು, ನರಕವೆಂದರೆ ನಾವು ಅನುಭವಿಸುವ ಸಂಕಷ್ಟಗಳ ಸರಮಾಲೆಯೆಂದು ಅರ್ಥ. ಇಂಥವರಿಗೂ ಲಿಂಗಾಂಗ ಸಾಮರಸ್ಯ ಅಸಾಧ್ಯ. ಹಾಗೆ ವೈರಾಗ್ಯ ಸಂಪನ್ನನಾದ ಉತ್ತಮ ನಡತೆಯುಳ್ಳವನಿಗೆ ದೇವರ ಸಾನಿಧ್ಯ ಇತ್ಯಾದಿ ಕಲ್ಪಿತ ಮುಕ್ತಿ ದೊರೆಯಬಹುದೇ ವಿನಃ ಲಿಂದೊಡನೆ ಸಮರಸವಿಲ್ಲ. ಅಂತೆಯೆ ತತ್ವ ಜ್ಞಾನವನ್ನು ಅರಗಿಸಿಕೊಂಡು ಕುಡಿದ ಜ್ಞಾನಿ ಎಂಬಾತನಿಗೆ ಭವ ಭವಗಳಲ್ಲಿ ಸುತ್ತಾಟವಿದೆಯೇ ವಿನಃ ಐಕ್ಯ ಸ್ಥಿತಿಯಿಲ್ಲ. ಏಕೆಂದರೆ ಆತನಲ್ಲಿ ಅರಿವಿದೆ ಆಚಾರವಿಲ್ಲ.

ಇಂತಹ ಎಲ್ಲ ಭ್ರಾಂತಿಗಳನ್ನು ನೀಗಿ, ಲಿಂಗಾನುಭಾವದಲ್ಲಿಯೇ ಮುಳುಗಬೇಕು. ನಾನು ದೇವರಿಂದ ಭಿನ್ನ ಎನ್ನುವ ದ್ವೈತವಾಗಲಿ, ನಾನು ದೇವರೇ ಇದ್ದೇನೆ ಎನ್ನುವಲ್ಲಿನ ನಾನು ದೇವರು ಎಂಬಲ್ಲಿ ಸೂಕ್ಷ್ಮ ಭಿನ್ನತೆಯುಳ್ಳ ಅದ್ವೈತವನ್ನಾಗಲಿ ತೊರೆದು, ನದಿಗೆ ನದಿ ಬೆರಸಿದಂತೆ ತನು ಮನ ಭಾವಗಳಲ್ಲಿ ಇಷ್ಠ, ಪ್ರಾಣ, ಭಾವಲಿಂಗಗಳನ್ನು ಸಮರಸಗೊಳಿಸಿದರೆ ಅದು ಲಿಂಗಸ್ಥಿತಿಯಾಗುತ್ತದೆ. ಅದನ್ನೇ ಅಕ್ಕ ಚೆನ್ನಮಲ್ಲಿಕಾರ್ಜುನನೆಂದು ಕರೆದಿದ್ದಾಳೆ. ಒಟ್ಟಿನಲ್ಲಿ ಸ್ಥಾವರ ಲಿಂಗಪೂಜೆಯಿಂದ ಖಂಡಿತ, ಕ್ಷಣಿಕ ಸುಖ ದೊರೆಯಬಹುದೇ ವಿನಃ ಅಖಂಡಿತ ಪರಮ ಸುಖ ದೊರೆಯಲಾರದು. ಅದು ದೊರೆಯಬೇಕಾಗಿದ್ದರೆ ಇಷ್ಟಲಿಂಗವನ್ನು ಅನುಸಂಧಾನಗೈಯುತ್ತ ತಾನೇ ಮಹಾಲಿಂಗವಾಗಬೇಕೆಂದು ಅಕ್ಕ ಮಹಾದೇವಿ ತಾಯಿ ಇಲ್ಲಿ ಹೇಳಿದ್ದಾಳೆ ಎಂದು ವಚನ ನಿರ್ವಚನದ ಸಮಾರೋಪವನ್ನು ಸಿದ್ಧಲಿಂಗಪ್ಪ ಬರಗುಂಡಿಯವರು ಮಾಡಿದರು.

ಕಾರ್ಯಕ್ರಮದಲ್ಲಿ ಶರಣೆ ಶಕುಂತಲಾ ಜಿರ್ಲಿ ಮತ್ತು ಕುಮಾರಿ ಮೆಂತೇದ ಅವರು ಸುಶ್ರಾವ್ಯವಾಗಿ ವಚನಗಾಯನ ಮಾಡಿದರು. ಪ್ರಾರಂಭದಲ್ಲಿ ಶರಣೆ ಜಯಶ್ರೀ ಬ. ಬರಗುಂಡಿ, ದಾನಮ್ಮ ಕುಂದರಗಿ, ಶ್ರೀದೇವಿ ಶೇಖಾ ಅವರು ಸಾಮೂಹಿಕ ಪ್ರಾರ್ಥನೆಯನ್ನು ಮಾಡಿಸಿದರು. ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು. ಈ ಮಹಾಮನೆಯಲ್ಲಿ ಶರಣಮ್ಮ ತಾಯಿಯವರು ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಸದಸ್ಯರಲ್ಲದೆ, ಜಾ.ಲಿಂ.ಮ. ಅಧ್ಯಕ್ಷ ರಾಚಣ್ಣ ಕೆರೂರ, ಬಸವರಾಜ ಇಲಾಳಸೆಟ್ಟರ, ಸುಭಾಸ ಜಿರ್ಲಿಗೌಡರ, ಪಾಂಡಪ್ಪ ಕಳಸಾ, ಚಂದ್ರಶೇಖರ ತೆಗ್ಗಿ, ಪುತ್ರಪ್ಪ ಬೀಳಗಿ, ಸುಹಾಸಿನಿ ಬೀಳಗಿ, ಕಸ್ತೂರಿಬಾಯಿ ನಾಯನೇಗಲಿ, ನಾಗರತ್ನ ಬಂಕಾಪುರ, ಕವಿತಾ ಬಂಕಾಪುರ, ಮೆಂತೇದ, ಸರೋಜಕ್ಕ ಅಂಗಡಿ, ಮಹಿಳಾ ಸಂಘದ ಅಧ್ಯಕ್ಷ ಜಯಶ್ರೀ ಬರಗುಂಡಿ ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *