ಸಾಣೇಹಳ್ಳಿಯಲ್ಲಿ ಅಂತರರಾಷ್ಟ್ರೀಯ ‘ವಚನ ಸಂಸ್ಕೃತಿ ಯಾತ್ರೆ’ಯ ಕೃತಜ್ಞತಾ ಸಮಾರಂಭ

ಸಾಣೇಹಳ್ಳಿ

ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ನಡೆದ ಇಂಡೋನೇಷಿಯಾ, ಮಲೇಷಿಯಾ ಹಾಗೂ ಥೈಲ್ಯಾಂಡ್ ದೇಶಗಳ `ವಚನ ಸಂಸ್ಕೃತಿ ಯಾತ್ರೆ ಕಳೆದ ನವೆಂಬರ್ ೧೭ ರಿಂದ ೨೮ರವರೆಗೆ ಯಶಸ್ವಿಯಾಗಿ ನಡೆಯಿತು. ಇದರ ನಿಮಿತ್ತವಾಗಿ ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ಕೃತಜ್ಞತಾ ಸಮಾರಂಭ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು; ಪ್ರವಾಸ ಬದುಕಿಗೆ ಹೊಸ ಆಯಾಮವನ್ನು ಕೊಡುವಂಥದ್ದು. ನಮ್ಮ ವ್ಯಕ್ತಿತ್ವವನ್ನು ಪ್ರವಾಸದಲ್ಲಿ ಹೇಗೆ ಕಟ್ಟಿಕೊಳ್ಳಬಹುದು, ಹೇಗೆ ಶರಣರ ವಿಚಾರಗಳನ್ನು ವಿಶ್ವವ್ಯಾಪಿ ಮಾಡಬಹುದು ಎನ್ನುವುದಕ್ಕೆ ಈಗ ನಡೆದ ಇಂಡೋನೇಷಿಯಾ, ಮಲೇಷಿಯಾ ಹಾಗೂ ಥೈಲ್ಯಾಂಡ್ ಪ್ರವಾಸವೇ ಸಾಕ್ಷಿ ಎಂದು ಭಾವಿಸುತ್ತೇವೆ. ಆ ನೆಲೆಯಲ್ಲಿ ಸುರೇಶ್, ರಾಕೇಶ್ ಮತ್ತು ಅವರ ತಂಡದವರು ಈ ಪ್ರವಾಸದ ವ್ಯವಸ್ಥೆಯನ್ನು ಮಾಡಿ ಅಲ್ಲಿ ಚೆನ್ನಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಇಲ್ಲಿ ಸೇರಿಕೊಂಡಿರುವ ಉದ್ದೇಶ ಮನುಷ್ಯನಿಗೆ ಸಂತೋಷ ಎನ್ನುವುದು ಬಹಳ ಮುಖ್ಯ. ಇಂತಹ ಕೂಟದಲ್ಲಿ ಸೇರಿಕೊಂಡಾಗ ಹೊಸ ಹೊಸ ಆಲೋಚನೆಯನ್ನು ಮಾಡಲಿಕ್ಕೆ, ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಿಕ್ಕೆ ಇದು ಪ್ರೇರಣೆಯನ್ನು ನೀಡಲಿ ಎನ್ನುವುದು ನಮ್ಮ ಆಶಯ. ಈ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಬಂದಿದ್ದಕ್ಕೆ ನಿಮ್ಮೆಲ್ಲರಿಗೂ ಶ್ರೀಮಠದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಸಾಣೇಹಳ್ಳಿ ಕರ್ನಾಟಕದಲ್ಲೇ ಅತ್ಯಂತ ಚಿಕ್ಕ ಹಳ್ಳಿ. ೧೯೭೭ರಲ್ಲಿ ನಾವು ಈ ಮಠದ ಸ್ವಾಮಿಗಳಾಗಿ ಬಂದದ್ದು. ಆಗ ಸಾಣೇಹಳ್ಳಿ ಹೊಸದುರ್ಗ ತಾಲ್ಲೂಕಿನಲ್ಲಿ ಅಪರಿಚಿತ ಹಳ್ಳಿಯಾಗಿತ್ತು. ಆದರೆ ೪೫ ವರ್ಷಗಳ ಅವಧಿಯಲ್ಲಿ ಏನೆಲ್ಲಾ ಸಾಧನೆ ಆಗಿದೆ ಎಂದರೆ ಅದರ ಹಿಂದೆ ಇರುವಂಥ ಮಹಾನ್ ಚೇತನ ವಿಶ್ವಗುರು ಬಸವಣ್ಣನವರು ಹಾಗೂ ನಮಗೆ ದೀಕ್ಷೆ ನೀಡಿ ನಮ್ಮ ಬದುಕನ್ನು ಕಟ್ಟಿಕೊಟ್ಟ ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಹಾಗೂ ನಮ್ಮ ಭಕ್ತರು. ಈ ಮೂರು ಜನರನ್ನು ನಾವು ಎಂದೂ ಮರೆಯಲಿಕ್ಕೆ ಸಾಧ್ಯವಿಲ್ಲ. ಅವರೆಲ್ಲರ ಕೃಪೆಯಿಂದ ಏನೆಲ್ಲಾ ಸಾಧನೆ ಸಾಣೇಹಳ್ಳಿಯಲ್ಲಿ ಆಗಿದೆ ಅಂತ ನಾವು ಭಾವಿಸಿಕೊಂಡಿದ್ದೇವೆ.

ಇವತ್ತು ಸಾಣೇಹಳ್ಳಿ ಅಂದರೆ ರಂಗಭೂಮಿಯ ನೆಲೆಯಲ್ಲಿ, ಸಾಹಿತ್ಯದ ನೆಲೆಯಲ್ಲಿ, ಧರ್ಮದ ನೆಲೆಯಲ್ಲಿ ಎಲ್ಲರೂ ತಿರುಗಿ ನೋಡುವ ಹಾಗೆ ಆಗಿದೆ. ಒಂದು ಕಾಲದಲ್ಲಿ ಮಠಗಳು, ಮಠಾಧೀಶರು ಅಂದರೆ ಮೂಗು ಮುರಿಯುತ್ತಿದ್ದ ಅನೇಕ ವೈಚಾರಿಕರು, ಬಂಡಾಯದವರು, ದಲಿತ ಪ್ರಜ್ಞೆ ಇರುವಂಥವರು ಈಗ ತುಂಬ ಹತ್ತಿರ ಆಗ್ತಾ ಇದ್ದಾರೆ. ನಮ್ಮ ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನು ನೋಡಿದವರು, ಅವರ ನಡುವೆ ಒಡನಾಟ ಇಟ್ಟುಕೊಂಡವರು, ಅವರ ಆಶೀರ್ವಾದ ಪಡೆದವರು ಇವತ್ತಿಗೂ ಅವರನ್ನು ಮರೀತಾ ಇಲ್ಲ. ಅವರು ೧೯೯೨ ರಲ್ಲಿ ದೈಹಿಕವಾಗಿ ಈ ಲೋಕದಿಂದ ದೂರವಾಗಿದ್ದರೂ ಮಾನಸಿಕವಾಗಿ ನಮ್ಮ ಜೊತೆಯೇ ಇದ್ದಾರೆ. ಅಂತಹ ಗುರುಗಳ ಶಕ್ತಿಯನ್ನು ನಮ್ಮ ಶಿಷ್ಯರೂ ಪಡೆದುಕೊಂಡಿದ್ದಾರೆ. ನಾವೂ ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಿದ್ದೇವೆ.

ನಮ್ಮ ಗುರುಗಳಿಗೆ ಜಾತಿ, ಮತ, ಪಕ್ಷ, ಪಂಗಡಗಳ ಅಂತರ ಇರಲಿಲ್ಲ. ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ… ಎಂದು ಎಲ್ಲರನ್ನು ಅಪ್ಪಿಕೊಳ್ಳುವ ಹೃದಯ ಶ್ರೀಮಂತಿಕೆ ಪೂಜ್ಯರಲ್ಲಿತ್ತು. ಅದೇ ನಮ್ಮ ಬದುಕಿನ ಬಂಡವಾಳ ಅಂತ ಹೇಳಿಕೊಳ್ಳೋದಕ್ಕೆ ಇಷ್ಟಪಡ್ತೀವಿ.

ಬೆಟ್ಟಹಳ್ಳಿ ಪೂಜ್ಯರು ಎರಡು ಸಾರಿ ನಮ್ಮ ಜೊತೆ ವಿದೇಶಕ್ಕೆ ಬಂದಿದ್ದಾರೆ. ಈ ಹಿಂದೆ ಶ್ರೀಲಂಕಾಕ್ಕೆ ಹೋದಾಗ ಬಂದಿದ್ದರು. ಎರಡು ದೇಶಗಳಲ್ಲಿ ನಮ್ಮ ಕಲಾವಿದರು ಎರಡು ನಾಟಕಗಳನ್ನು ಅಭಿನಯಿಸಿದ್ದರು. ಶ್ರೀಲಂಕಾದಲ್ಲಿ ಮರಣವೇ ಮಹಾನವಮಿ' ಎನ್ನುವಂಥ ನಾಟಕ. ಹಾಗೆಯೇ ಬಾಲಿಯಲ್ಲಿಉರಿಲಿಂಗಪೆದ್ದಿ’ ನಾಟಕ. ಹಾಗಾದರೆ ಇಷ್ಟೇನಾ ಅಂತ ಕೇಳಿದರೆ ಇಲ್ಲ. ಹಿಂದೆ ಆಸ್ತ್ಟ್ರೇಲಿಯಾಕ್ಕೂ ಇಂತಹ ಒಂದು ಪ್ರವಾಸವನ್ನು ಸುರೇಶ್ ಏರ್ಪಡಿಸಿದ್ದರು. ಅಲ್ಲಿ ಕೂಡ ನಮ್ಮ ಕಲಾವಿದರು ಶರಣರ ನಾಟಕವನ್ನು ಅಭಿನಯಿಸಿದರು. ಆಗ ತುಂಬಾ ಪರಿಣಾಮಕಾರಿಯಾಗಿತ್ತು ಎಂದರು.

ಶ್ರೀ ಶಿವರುದ್ರ ಸ್ವಾಮಿಗಳು ಮಾತನಾಡಿ; ಸಾಣೇಹಳ್ಳಿ ಮಠದಲ್ಲಿ ನಾವೆಲ್ಲಾ ಆಗಮಿಸಿ ಇಲ್ಲಿನ ವಾತಾವರಣವನ್ನು ಕಣ್ತುಂಬಿಕೊಂಡಿದ್ದೇವೆ. ಪೂಜ್ಯರು ಇಲ್ಲಿ ಶರಣ ಸಂಸ್ಕೃತಿಯನ್ನು ಬೆಳೆಸ್ತಾ ಇದಾರೆ. ಅದನ್ನೆಲ್ಲಾ ನೋಡಿಕೊಂಡು ಬಂದ್ವಿ. ಇಲ್ಲಿ ಕೂತ ತಕ್ಷಣ ಶರಣರ ವಚನಗಳನ್ನು ಕಿವಿಯಾರೆ ಕೇಳಿದ್ವಿ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವೆಲ್ಲರೂ ಪೂಜ್ಯ ಭಾವನೆಯಿಂದ ನೋಡಿದ್ವಿ. ಅರ್ಥಪೂರ್ಣವಾಗಿ ಪ್ರವಾಸದಲ್ಲಿ ನಾವೆಲ್ಲ ಪಾಲ್ಗೊಂಡಿದ್ದು ತುಂಬಾ ಸಂತೋಷ ತಂದಿದೆ ಎಂದರು.

ಬೆಟ್ಟಹಳ್ಳಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಾನು ಬಹಳಷ್ಟು ವಿದೇಶ ಪ್ರವಾಸ ಮಾಡಿದ್ದೇನೆ. ಆದರೆ ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿಯವರ ಜೊತೆಗೆ ಪ್ರವಾಸ ಮಾಡಿದ್ದು ಬಹಳ ವಿಶಿಷ್ಟವಾದ ಪ್ರವಾಸ. ಯಾಕೆಂದರೆ ಪೂಜ್ಯರು ವಯೋವೃದ್ಧರು, ಜ್ಞಾನವೃದ್ಧರು. ಅನೇಕ ಸಂನ್ಯಾಸಿಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಜಗತ್ತಿನಲ್ಲಿ ನಾಲ್ಕು ವರ್ಗದ ಸಂನ್ಯಾಸಿಗಳಿರ್ತಾರಂತೆ ನಮ್ಮಲ್ಲಿ ಎಕ್ಸ್ ಪಿರಿಡೇಟ್ ಸ್ವಾಮೀಜಿಯವರಿದ್ದಾರೆ. ಅವರು ಹೇಗಿರುತ್ತಾರೆ ಅಂದರೆ ನಮ್ಮ ಕಾಲ ಇತ್ತು ಬಹಳ ಚೆಂದ ಇತ್ತು. ಐದು ರೂಪಾಯಿ ತೆಗೆದುಕೊಂಡು ಹೋದರೆ ಮನೆತುಂಬ ರೇಷನ್ ಬರ್ತಾ ಇತ್ತು. ಮಠ ನಡೆಸ್ತಾ ಇದ್ವಿ. ಕಾಲ ಕೆಟ್ಟು ಹೋಗಿದೆ ಅಂತ ಹೇಳ್ತಿರ್ತಾರೆ. ಆಗ ನಾನು ಹೇಳ್ತಾ ರ್ತೀ ನಿ ಕಾಲೇ ಕೊಳಕಾಗಿರುವ ಸ್ವಾಮಿಗಳು ಇದ್ದರೆಷ್ಟು ಸತ್ತರೆಷ್ಟು ಅವರೆಲ್ಲಾ ಬದುಕಿನಲ್ಲಿ ಎಕ್ಸ್ಪೈರ್ ಆಗಿರುವ ಸ್ವಾಮಿಗಳು. ಯಾಕೆಂದರೆ ಮನುಷ್ಯ ವಾಸ್ತವ ಪ್ರಜ್ಞೆಯಲ್ಲಿ ಬದುಕುವವನು ನಿಜವಾದ ಮನುಷ್ಯ ಧರ್ಮ ಎಂದರು.

ಶರಣ ಚಿಂತಕ ಸಿದ್ಧು ಯಾಪಲಪರವಿ ಮಾತನಾಡಿ; ಸಾಣೇಹಳ್ಳಿಯನ್ನು ಯಾವಾಗಲೂ ನಾನು ಸ್ಟ್ಯಾಂಡ್‌ಫೋರ್ಡ್ ಅಪಾನ್ ಆಫ್ ಕರ್ನಾಟಕ ಅಂತ ಕರೆಯುತ್ತೇನೆ. ಶೇಕ್ಸ್ ಪಿಯರ್‌ನ ಹುಟ್ಟೂರಿನ ಒಂದು ಸ್ಪರ್ಶ ಇಂಗ್ಲೇಂಡಿನಲ್ಲಿ ಹೇಗಿದೆಯೋ ಹಾಗೆ ಕರ್ನಾಟಕದ ಸಾಣೇಹಳ್ಳಿಯಲ್ಲಿ ಅಂತಹ ಒಂದು ಸಾಂಸ್ಕೃತಿಕ ಮಹತ್ವದ ಸ್ಪರ್ಶ ಇದೆ.

ಪ್ರವಾಸ ತುಂಬ ಮಹತ್ವದ್ದು. ಯಾಕೆಂದರೆ ನಮ್ಮ ಆರೋಗ್ಯ ಕೆಡಬಾರದು, ಊರಲ್ಲಿ ನಮ್ಮನ್ನು ನಂಬಿಕೊಂಡೋರು ಯಾರಿರುತ್ತಾರೋ ಅವರ ಆರೋಗ್ಯನೂ ಕೆಡಬಾರದು. ಕೆಟ್ಟರೆ ಮನಸ್ಥಿತಿ ಕೆಡುತ್ತೆ. ಹಾಗಾಗಬಾರದು ಅಂದರೆ ನಮ್ಮ ಆಚಾರ, ವಿಚಾರ, ಆಹಾರ, ವಿಹಾರ ಸರಿಯಾಗಿರಬೇಕು. ಸರಿಯಾಗಬೇಕೆಂದರೆ ಅಷ್ಟದಿಗ್ಬಂಧನ ಹಾಕಿಕೊಳ್ಳಬೇಕು. ಅಂತಹ ಅಷ್ಟದಿಗ್ಬಂಧನದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಇದ್ದರು ಅಂತ ಈ ಪ್ರವಾಸದಲ್ಲಿ ಸತ್ಯ ಸಾಬೀತಾಗಿದೆ. ಮನುಷ್ಯ ತನ್ನಷ್ಟಕ್ಕೆ ತಾನೇ ಅಷ್ಟದಿಗ್ಬಂಧನವನ್ನು, ಅಷ್ಟಾವರಣವನ್ನು ಹಾಕಿಕೊಂಡರೆ ಧರ್ಮ ಬೆಳೆಯುತ್ತದೆ.

ಈ ಪ್ರವಾಸಕ್ಕೆ ಬರಲಿಕ್ಕೆ ಕಾರಣ ನಾನು ಅತ್ಯಂತ ಗೌರವಿಸುವ, ಅತ್ಯಂತ ಆರಾಧಿಸುವ ಗುರುಗಳು ಪಂಡಿತಾರಾಧ್ಯರು ಬರ್ತಾರೆ ಅಂತ ಹೇಳಿದ ಕೂಡಲೇ ನನಗೆ ಪುಳಕಾಯಿತು. ಯಾಕೆಂದರೆ ಅವರ ಟೈಮ್ ಸೆನ್ಸ್, ಅವರ ಬದ್ಧತೆ, ಅವರ ಬಸವತತ್ವ ನಿಷ್ಠೆ ತುಂಬಾ ಇದೆ. ಆದರೆ ನಮಗೆಲ್ಲಾ ಬಸವತತ್ವ ನಿಷ್ಠೆ ಕಡಿಮೆ ಆಗಿತ್ತು. ನಾನು ಬಾಲಿಯಲ್ಲಿ ಸ್ವಲ್ಪ ಕಾರವಾಗಿ ಮಾತನಾಡಿದೆ. ಕ್ಷಮೆಯನ್ನು ಕೇಳ್ತೀನಿ. ಯಾಕೆಂದರೆ ಬಸವತತ್ವ ನಂಬಿದವರೆಲ್ಲಾ ವೈದಿಕರಾಗಿ ದಿಕ್ಕಪಾಲಾದ್ರಲ್ಲ ಎನ್ನುವ ನೋವಿದೆ. ಆದರೆ ಈ ಪ್ರವಾಸ ಮೂಲಕ ಹೊಸ ಹೊಸ ಪಾಠದ ಮೂಲಕ ಕಲಿಯೋಣ ಎಂದರು.

ಸಾಹಿತಿ ಬಿ ಆರ್ ಪೋಲಿಸ್ ಪಾಟೀಲ್ ಮಾತನಾಡಿ ಪ್ರವಾಸ ಪ್ರಯಾಸ ಆಗ್ಲಿಲ್ಲ ಅಂದರೆ ಅದೊಂದು ದೊಡ್ಡ ಯಶಸ್ಸು. ಹಾಗಾಗಿ ನಮ್ಮ ಪ್ರವಾಸ ಬಹಳ ಅತ್ಯುತ್ತಮವಾಗಿತ್ತು. ನಾನು ಇದರ ಆಚೆಗೆ ಹೋಗಿ ಸಣ್ಣ ಅನುಭವ ಹೇಳ್ತೀನಿ. ಒಂದು ಕಾಲೇಜಿನಲ್ಲಿ ಮಾತನಾಡುವಾಗ ನಾನು ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿದ್ದೆ ಹಾಲು ಎಲ್ಲಿಂದ ಬರುತ್ತದೆ ಅಂತ. ಒಬ್ಬ ಹುಡುಗ ಹಾಲು ಡೈರಿಯಿಂದ ಬರುತ್ತದೆ ಅಂತ ಹೇಳಿದ. ಇನ್ನೊಬ್ಬ ಹುಡುಗ ಕೈಯೆತ್ತಿ ಹಾಲು ಬಾಟ್ಲಿಯಿಂದ ಬರುತ್ತದೆ ಅಂತ ಹೇಳಿದ. ಮತ್ತೊಬ್ಬ ಹುಡುಗ ಕೈಯೆತ್ತಿ ಹಾಲು ಸಸ್ತನಿಗಳಿಂದ ಬರುತ್ತದೆ ಅಂತ ಹೇಳಿದ. ಇದನ್ನೆಲ್ಲಾ ಕೇಳಿದ ಮೇಲೆ ನನಗೂ ಏನಾದರೂ ಹೇಳ್ಬೇಕು ಅಂತ ಅನಿಸ್ತು. ಆ ಸಂದರ್ಭದಲ್ಲಿ ನನಗೊಂದು ವಚನ ಹೊಳೆಯಿತು.

ಹಾಲು ಡೈರಿಯಿಂದ ಬರುತ್ತದೆ ಎನ್ನುವುದು ವಿಕೃತಿ
ಹಾಲು ಬಾಟ್ಲಿಯಿಂದ ಬರುತ್ತದೆ ಎನ್ನುವುದು ಆಕೃತಿ
ಹಾಲು ಸಸ್ತನಿಗಳಿಂದ ಬರುತ್ತದೆ ಎನ್ನುವುದು ಪ್ರಕೃತಿ
ಹುಲ್ಲು ಹಾಲಾಗುತ್ತದೆ ಎಂದು ಅರಿವುದೇ ಸಂಸ್ಕೃತಿ ಸದ್ಗುರು ಬಸವಲಿಂಗ .
ಯಾಕೆ ಈ ಮಾತನ್ನು ಹೇಳಿದೆ ಅಂದರೆ ನಾವು ಹಾಲು ಕೊಡುವಂಥ ಪ್ರಾಣಿಗಳಿಗೆ ಹುಲ್ಲು ಬೆಳೆಯಲಿಕ್ಕೆ ಬಿಡ್ತೇ ಇಲ್ಲ. ಪ್ರಕೃತಿಯನ್ನು ನಾವು ಅಷ್ಟೊಂದು ನಾಶ ಪಡಿಸಿರುವುದಕ್ಕೆ ಇವತ್ತು ನಮಗೆ ಈ ಪರಿಸ್ಥಿತಿ ಬಂದಿದೆ. ವಿದೇಶ ಪ್ರವಾಸದಲ್ಲಿ ನಾನು ಕಂಡುಕೊಂಡಿದ್ದು ಅವರು ಪ್ರಕೃತಿಯನ್ನು ಪ್ರಕೃತಿಯಾಗೇ ನೋಡಿಕೊಂಡಿದ್ದಾರೆ ಎಂದರು.

ಶರಣ ಸಾಹಿತ್ಯ ಚಿಂತಕ ರಂಜಾನ್ ದರ್ಗಾ ಮಾತನಾಡಿ; ನನಗೆ ಈ ಪ್ರವಾಸದಲ್ಲಿ ಬಹಳ ಮುಖ್ಯ ಅನಿಸಿದ್ದು ಗುರುಶಿಷ್ಯರ ಸಂಬಂಧ. ನಮಗೆ ಮರೆಯಲಾಗದೇ ಇರುವಂಥ ಅನುಭವ ಅನಿಸ್ತದೆ. ಸ್ವಾಮೀಜಿಯವರ ಹಾಗೂ ಭಕ್ತರ ಅನ್ಯೋನ್ಯ ಸಂಬಂಧ ನೋಡಿ ನನಗೆ ಬಹಳ ಖುಷಿಯಾಯಿತು. ಸಾಣೇಹಳ್ಳಿ ಶ್ರೀಗಳು ಒಂದು ಮಾತು ಹೇಳಿದರೆ ಎಲ್ಲರೂ ಪಾಲಿಸ್ತಾ ಇದ್ದರು. ಇದನ್ನು ನೋಡಿದಾಗ ಶ್ರೀಗಳೇ ಬಹಳ ಸುದೈವಿಗಳು ಅಂತ ಅನಿಸ್ತಾ ಇದೆ. ಅಂತಹ ಶಿಷ್ಯರನ್ನು ಪೂಜ್ಯರು ಪಡೆದುಕೊಂಡಿದ್ದಾರೆ. ಅವರನ್ನು ಆ ಮಟ್ಟಕ್ಕೆ ತರಬೇಕಾದರೆ ಎಷ್ಟು ಶ್ರಮಪಟ್ಟಿದ್ದಾರೆ ಎಂದು ನನಗಂತೂ ಗೊತ್ತಿಲ್ಲ.

ಸಾಣೇಹಳ್ಳಿ ಬೇರೆ ಬೇರೆ ಅರ್ಥ ಕೊಡುತ್ತದೆ. ಸಾಣೇಹಳ್ಳಿ ಶ್ರೀಗಳು ನಮ್ಮ ಅಜ್ಞಾನಕ್ಕೆ ಸಾಣೇ ಹಿಡಿಯುತ್ತಾರೆ. ನಮ್ಮ ಕಡೆ ಸಾಣೇ ಹಿಡಿಯೋದು ಅಂದ್ರೆ ಶಾರ್ಪ್ ಮಾಡೋದು. ನಿಜಕ್ಕೂ ಪೂಜ್ಯರು ಅಂದರೆ ಶಿಸ್ತಿನ ಪ್ರತೀಕ. ಆ ಶಿಸ್ತನ್ನು ಅವರ ಎಲ್ಲ ಅನುಯಾಯಿಗಳು ಪಾಲಿಸುತ್ತಿದ್ದಾರೆ ಎಂದರು.

ಪ್ರಾರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರುಪಾದೇಶ್ವರ ಪ್ರೌಢಶಾಲಾ ಮಕ್ಕಳು ವಚನ ನೃತ್ಯ ಹಾಗೂ ಜಾನಪದ ನೃತ್ಯ ಪ್ರದರ್ಶಿಸಿದರು. ಕೆಲವು ಪ್ರವಾಸಿಗರು ತಮ್ಮ ಪ್ರವಾಸದ ಅನುಭವವನು ಹಂಚಿಕೊಂಡರು. ಇರುವೆ ಪುರಾಣ ನಾಟಕ ಪ್ರದರ್ಶನ ನಡೆಯಿತು. ಸಾ ನಿ ರವಿಕುಮಾರ ಸ್ವಾಗತಿಸಿದರೆ ರಾಜು ನಿರೂಪಿಸಿ ವಂದಿಸಿದರು. ರಾಷ್ಟ್ರೀಯ ಬಸವ ಪ್ರತಿಷ್ಠಾನದ ಪದಾಧಿಕಾರಿಗಳನ್ನು ಶ್ರೀಮಠದಿಂದ ಅಭಿನಂದಿಸಲಾಯಿತು. ಪ್ರವಾಸಿಗರಿಗೆಲ್ಲ ಪಂಡಿತಾರಾಧ್ಯ ಶ್ರೀಗಳ ವಚನ ಸಂದೇಶ ಭಾಗ – ೩ ಕೃತಿಯನ್ನು ಕೊಡಲಾಯಿತು. ಕೊನೆಗೆ ರೊಟ್ಟಿ, ಪಲ್ಯ, ಪುಡಿಚಟ್ನಿ, ಶ್ರೀಮಠದ ತೋಟದಲ್ಲಿ ಬೆಳೆದ ಕುಂಬಳಕಾಯಿ, ಬೆಲ್ಲದ ಹಾಲು, ಕಾಯಿರಸ, ಅನ್ನ ಸಾರು ಮಜ್ಜಿಗೆ, ಮೊಸರು ಪ್ರಸಾದ ಸ್ವೀಕರಿಸಿ ತಮ್ಮ ತಮ್ಮ ಊರುಗಳಿಗೆ ತೆರಳಿದರು.

Share This Article
Leave a comment

Leave a Reply

Your email address will not be published. Required fields are marked *