ಕೂಡಲಸಂಗಮ
ವಚನ ಸಾಹಿತ್ಯದ ಮೇಲೆ ದೊಡ್ಡಮಟ್ಟದ ದಬ್ಬಾಳಿಕೆ ನಡೆಯುತ್ತಿದೆ. ಈ ಸಾಹಿತ್ಯ ಸನಾತನ ಧರ್ಮದವರದ್ದಲ್ಲ, ದುಡಿಯುವ, ಕೂಲಿ ಕಾರ್ಮಿಕರ ಸಾಹಿತ್ಯವಾಗಿದೆ. ವಚನ ಸಾಹಿತ್ಯ ಮಠಗಳಿಗೆ, ಜಾತಿ ಲಿಂಗಾಯತರಿಗೆ ಸಂಬಂಧ ಇಲ್ಲ. ಅಂದು ಲಿಂಗವನ್ನು ಎಲ್ಲರೂ ಕಟ್ಟಿಕೊಳ್ಳಬಹುದಾಗಿತ್ತು ಎಂದು ಡಾ. ಮೀನಾಕ್ಷಿ ಬಾಳಿ ಹೇಳಿದರು.
ಮಂಗಳವಾರ ಕೂಡಲಸಂಗಮ ಸಭಾ ಭವನದ ಬಸವ ವೇದಿಕೆಯಲ್ಲಿ ಬಸವ ಜಯಂತಿ ನಿಮಿತ್ಯ ನಡೆದ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮದ ಮೊದಲ ದಿನದ ನಾಲ್ಕನೇ ಚಿಂತನಾ ಗೋಷ್ಠಿಯಲ್ಲಿ ವಿಶ್ವಶಾಂತಿ ಹಾಗೂ ಸಾಮರಸ್ಯ ವಿಷಯ ಮಂಡನೆ ಮಾಡಿ ಅವರು ಮಾತನಾಡಿ, ಲಿಂಗ ಜಾತಿಜಂಗಮರ ಕೈಯಲ್ಲಿ ಸಿಕ್ಕು ನಲಗುತ್ತಿದೆ. ವಚನ ಸಾಹಿತ್ಯವನ್ನು ಜನಪದರು ಉಳಿಸಿ ಬೆಳೆಸಿದರು.
ವಿಶ್ವಶಾಂತಿ ಇಂದು ಅಗತ್ಯ ಇದ್ದು ಜಾತಿ ಧರ್ಮದ ಹೆಸರಿನಲ್ಲಿ ಜಗಳ ಹಚ್ಚುವ ಕಾರ್ಯ ನಡೆಯುತ್ತಿದೆ. ಯುದ್ದದಲ್ಲಿ ಸಾಯುವವರು ಬಡವರ ಮಕ್ಕಳು. ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುವ, ಕಾಣುವ, ಜಾತಿಯ ಹೆಸರಿನಲ್ಲಿ ಭೇದಭಾವ ಮಾಡುವುದನ್ನು ಶರಣರು ಖಂಡಿಸಿದರು.

ವಚನ ಸಾಹಿತ್ಯವನ್ನು ಎಲ್ಲಯವರೆಗೂ ವೈದಿಕ ಮಠಾಧೀಶರಿಂದ, ಸನ್ಯಾಸಿಗಳಿಂದ, ಕಾವಿಧಾರಿಗಳಿಂದ ಬಿಡಿಸುವುದಿಲ್ಲವೋ ಅಲ್ಲಿಯವರೆಗೂ ಅಜ್ಞಾನ ಹೋಗುವುದಿಲ್ಲ. ದುಡಿಯುವ ವರ್ಗದ ಪ್ರತಿನಿಧಿ ಬಸವಣ್ಣ ಎಂದರು.
ಡಾ. ಡೊಮಿನಿಕ್ ಮಾತನಾಡಿ ಪ್ರಜೆಯಾಗಿ ಬದುಕಲು ಶಾಂತಿ ಸಾಮರಸ್ಯ ಅವಶ್ಯ ಎಂದರು. ಡಾ. ಮೈಸೂರು ಉಮೇಶ ಮಾತನಾಡಿ ವಿಶ್ವಶಾಂತಿ, ಸಾಮರಸ್ಯ ವರ್ತಮಾನಕ್ಕೆ ಅಗತ್ಯ. ಎಲ್ಲವೂ ರಕ್ತ ಚರಿತ್ರೆಗಳಾಗಿವೆ. ವಚನ ಸಾಹಿತ್ಯ ಮಾತ್ರ ಮಾನವೀಯ ನೆಲೆಯ ಚರಿತ್ರೆ ಆಗಿದೆ ಎಂದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಕಾಳೇಗೌಡ ನಾಗವಾರ ವಹಿಸಿ ಮಾತನಾಡಿ, ಇಂದು ವಿಶ್ವಶಾಂತಿ ಸಾಮರಸ್ಯ ಅಗತ್ಯ ಇದ್ದು, ವಚನ ಸಾಹಿತ್ಯದ ಮೂಲಕ ಅದನ್ನು ಪಡೆಯಬಹುದು ಎಂದರು.
ವಚನ ಸಾಹಿತ್ಯ ಮತ್ತು ಮಹಿಳೆ ವಿಷಯದ ಮೂರನೇ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಸವಿತಾ ನಾಗಭೂಷಣ ವಹಿಸಿದ್ದರು. ಡಾ. ಬಸವರಾಜ ಸಾದರ, ಡಾ. ಸಬಿತಾ ಬನ್ನಾಡಿ, ಡಾ. ಪ್ರಜ್ಞಾ ಮತ್ತಿಹಳ್ಳಿ ವಿಷಯ ಮಂಡಿಸಿದರು.