ವಚನಗಳಲ್ಲಿ ಕಾಣುವ ಆರೋಗ್ಯ ಸೂತ್ರ

ಸುಧಾ ಪಾಟೀಲ್
ಸುಧಾ ಪಾಟೀಲ್

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಪ್ರೊ. ಶಾರದಮ್ಮ ಪಾಟೀಲ ಬದಾಮಿ ಇವರ ಶ್ರಾವಣ ಮಾಸದ ದತ್ತಿ ಉಪನ್ಯಾಸದ ಐದನೆಯ ದಿನದ ವರದಿ.

ವಿವಿಧ ಆಯಾಮಗಳಲ್ಲಿ ನಮ್ಮ ಆರೋಗ್ಯವನ್ನು ಹೇಗೆ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎನ್ನುವ ತತ್ವವನ್ನು 800 ವರ್ಷಗಳ ಹಿಂದೆಯೇ ಶರಣರು ತಮ್ಮ ವಚನಗಳ ಮೂಲಕ ನಮಗೆಲ್ಲ ತಿಳಿಸಿಹೇಳಿದ್ದರು ಎಂದು ಡಾ.ಸಂಗಮೇಶ ಕಲಹಾಳ ಅವರು ನಮ್ಮ ವಚನ ಅಧ್ಯಯನ ವೇದಿಕೆಯಗೂಗಲ್ ಮೀಟ್ ನಲ್ಲಿ ನಮ್ಮೊಂದಿಗೆ ಆಗಸ್ಟ್ ೮ ಹಂಚಿಕೊಂಡರು.

ಇಂದಿನ ವೈದ್ಯರು ಹೇಳುವುದನ್ನು ಆಗಿನ ಕಾಲದಲ್ಲೇ ನಮ್ಮ ಶರಣರು ವಚನಗಳ ಮೂಲಕ ಪರಿಪೂರ್ಣವಾದ ಅರೋಗ್ಯದ ಕಡೆಗೆ ಗಮನಹರಿಸಿ ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕಿವಿಮಾತು ಹೇಳಿದ್ದರು ಎನ್ನುವುದನ್ನು ಸ್ಪಷ್ಟಪಡಿಸಿದರು.

ಅಕ್ಕಮಹಾದೇವಿ, ಆದಯ್ಯನ, ಬಸವಣ್ಣ, ಚೆನ್ನಬಸವಣ್ಣ, ಹಾವಿನಾಳ ಕಲ್ಲಯ್ಯ, ಕಡಕೋಳ ಮಡಿವಾಳಪ್ಪ,ವೈದ್ಯ ಸಂಗಣ್ಣ, ಮನಸಂದ ಮಾರಿತಂದೆ, ಬಾಲಸಂಗಯ್ಯ, ಅಲ್ಲಮಪ್ರಭು ದೇವರು, ಮಡಿವಾಳ ಮಾಚಿದೇವರು ಮುಂತಾದ ಶರಣರ ವಚನಗಳಲ್ಲಿ ಇರುವ ಅರೋಗ್ಯದ ತತ್ವಗಳನ್ನು ಅರ್ಥದೊಂದಿಗೆ ನಮಗೆಲ್ಲ ಸ್ಪಷ್ಟಪಡಿಸಿದರು.

ಅರೋಗ್ಯದ ಕಾಳಜಿಯಲ್ಲಿ ನಾಲ್ಕು ವಿಭಾಗಗಳನ್ನು ಮಾಡಿ ಒಂದೊಂದಾಗಿ ನಮಗೆ ತಿಳಿಯಪಡಿಸಿದರು. ದೈಹಿಕ ಅರೋಗ್ಯ, ಮಾನಸಿಕ ಅರೋಗ್ಯ, ಆಧ್ಯಾತ್ಮಿಕ ಅರೋಗ್ಯ ಮತ್ತು ಸಾಮಾಜಿಕ ಅರೋಗ್ಯ.

ಸತ್ಯಶುದ್ಧವಾದ ಕಾಯಕ ಮಾಡಿ, ಜಂಗಮ ದಾಸೋಹಮಾಡಿ, ಬಸವಣ್ಣನವರು ಹೇಳಿದ ಹಾಗೆ ನಮ್ಮ ಈ ಪ್ರಸಾದಕಾಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದನ್ನು ಹೇಳುತ್ತಾ, ಇಪ್ಪತ್ತನಾಲ್ಕು ತಾಸು ನಮ್ಮ ದಿನಚರ್ಯ ಹೇಗಿರಬೇಕು, ಪ್ರಕೃತಿಗೆ ಅನುಗುಣವಾಗಿ ನಮ್ಮ ಆಹಾರ ಇರಬೇಕು, ವಾತ, ಪಿತ್ತ, ಕಫದ ಲಕ್ಷಣಗಳ ಕಡೆಗೆ ಗಮನ ಕೊಡಬೇಕು, ಋತುಚರ್ಯ ಪಾಲಿಸಬೇಕು, ವೇಗಾರೋಧವನ್ನು ನಿಯಂತ್ರಿಸಬಾರದು, ಅದು ನೈಸರ್ಗಿಕವಾದ ಕ್ರಿಯೆ, ತಡೆಹಿಡಿದರೆ ವಿರುದ್ದಗತಿಯಲ್ಲಿ ಸಾಗಿ ದೇಹ ಹೇಗೆ ಬಳಲುತ್ತದೆ ಎನ್ನುವ ಗುಟ್ಟನ್ನು ಹೇಳಿದರು.

ಮಾನಸಿಕ ಅರೋಗ್ಯಕ್ಕೆ ಬಹು ದೇವೋಪಾಸನೆ ಮತ್ತು ಮೂಢ ನಂಬಿಕೆಗಳನ್ನು ಜಡಸಮೇತ ಕಿತ್ತೊಗೆದು, ಇಷ್ಟಲಿಂಗ ಪೂಜಿಸಿ, ನಿಜಾಚರಣೆಗಳನ್ನು ಅನುಸರಿಸಬೇಕು ಎನ್ನುವದನ್ನು ಗಟ್ಟಿಧ್ವನಿಯಿಂದ ತಿಳಿಯಪಡಿಸಿದರು.

ಆಧ್ಯಾತ್ಮಿಕ ಅರೋಗ್ಯದಲ್ಲಿ ಶಿವಯೋಗ ಜ್ಞಾನದ ಬಗೆಗೆ ಹೆಚ್ಚು ಒತ್ತುಕೊಟ್ಟರು. ಅದರಿಂದ ಜ್ಞಾನೇoದ್ರಿಯ ಮತ್ತು ಕರ್ಮೇoದ್ರಿಯಗಳ ಕ್ರಿಯಾಶಕ್ತಿ ಹೆಚ್ಚುತ್ತದೆ, ಎಂದು ಹೇಳುತ್ತಾ ಸಿದ್ದರಾಮೇಶ್ವರರ ವಚನವನ್ನು ನೆನಪಿಸುತ್ತ ಯೋಗದಲ್ಲಿನ ಚಕ್ರಗಳ ಮಹತ್ವವನ್ನು ಸಹ ತಿಳಿಯಪಡಿಸಿದರು. ಇದರಿಂದ ಆತ್ಮಬಲ, ಆತ್ಮವಿಶ್ವಾಸ, ನಂಬಿಕೆ, ಗ್ರಹಿಕೆ, ನಡವಳಿಕೆ, ಮನವರಿಕೆ ಹೇಗೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ ಎನ್ನುವ ಪರಿಕಲ್ಪನೆ ಮಾಡಿಕೊಟ್ಟರು.

ಕಡೆಯದಾಗಿ ಸಾಮಾಜಿಕ ಅರೋಗ್ಯದಲ್ಲಿ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಕರ್ತವ್ಯಗಳನ್ನು ನೆನಪು ಮಾಡಿಕೊಂಡರು. ಸ್ವಾತಂತ್ರದ ಸದ್ಭಳಕೆ, ಐಕ್ಯತೆ ಮತ್ತು ಅಖಂಡತೆ, ಸ್ತ್ರೀಯರಿಗೆ ಗೌರವ, ನಿಸರ್ಗದ ಸಂರಕ್ಷಣೆ, ದೇಶಾಭಿಮಾನ, ಅಭಿವೃದ್ಧಿ ಪಥದತ್ತ ಕೆಲಸಗಳನ್ನು ಹೇಳುತ್ತಾ ಪ್ರತಿದಿನ ನೆನಪಿಡುವ ಸೂತ್ರಗಳನ್ನು ಸರ್ವಜ್ಞನ ವಚನಗಳ ಉದಾಹರಣೆಯೊಂದಿಗೆ ಹೇಳುತ್ತಾ ತಮ್ಮ ಅಮೂಲ್ಯವಾದ ಮಾತುಗಳನ್ನು ನಮಗೆಲ್ಲ ಕಟ್ಟಿಕೊಟ್ಟು ನಮ್ಮನ್ನೆಲ್ಲ ಸಾರ್ಥಕತೆಯ ದಾರಿಗೆ ಕೊಂಡೊಯ್ದರು.

ನಂತರ ಶರಣೆ ಗೌರಮ್ಮ ನಾಶಿ ಅವರು ಅರ್ಥಪೂರ್ಣವಾದ ನುಡಿಗಳಿಂದ ಮಾರ್ಗದರ್ಶನವನ್ನು ಮಾಡಿದರು. ಡಾ. ಶಶಿಕಾಂತಪಟ್ಟಣ ಸರ್ ಅವರು ಇಂದು ಲಿಂ. ನಿಜಲಿಂಗಪ್ಪನವರ ಇಪ್ಪತ್ತನಾಲ್ಕನೆಯ ಪುಣ್ಯತಿಥಿ ಎಂದು ನೆನಪಿಸುತ್ತಾ , ಅವರು ವಿದ್ವಾoಸರು, ಜ್ಞಾನಿಗಳು, ವಾಗ್ಮಿಗಳು ಆಗಿದ್ದರು ಎಂದು ಅಭಿಮಾನದಿಂದ ಸ್ಮರಿಸಿದರು. ಸಂವಾದದಲ್ಲಿ ಬಹಳಷ್ಟು ಶರಣ-ಶರಣೆಯರು ಪಾಲ್ಗೊಂಡು ಉಪನ್ಯಾಸದ ಬಗೆಗೆ ಹರುಷ ವ್ಯಕ್ತಪಡಿಸಿದರು.

ಶರಣೆ ಶಾರದಮ್ಮ ಅವರ ವಚನ ಪ್ರಾರ್ಥನೆ,ಶರಣೆ ರೇಣುಕಾ ನಾಗರಾಜ ಅವರ ಸ್ವಾಗತ, ಪ್ರಾಸ್ತಾವಿಕ ಮತ್ತು ಪರಿಚಯದ ನುಡಿಗಳು, ಶರಣೆ ಅಕ್ಕಮಹಾದೇವಿ ತೆಗ್ಗಿ ಅವರ ಶರಣು ಸಮರ್ಪಣೆ, ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳ ಮತ್ತು ಡಾ.ಸಾವಿತ್ರಿ ಕಮಲಾಪುರ ಅವರ ಕಾರ್ಯಕ್ರಮ ನಿರ್ವಹಣೆ ಯಿಂದ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಡಾ.ಸಂಗಮೇಶ ಕಲಹಾಳ
ಜಂಗಮ ವಾಣಿ
94821 51960

Share This Article
Leave a comment

Leave a Reply

Your email address will not be published. Required fields are marked *