ಇಳಕಲ್
‘ಲಿಂಗಾಂಗ ಸಾಮರಸ್ಯ ಹೊಂದಲು ಅಗತ್ಯ ಮಾಹಿತಿಯುಳ್ಳ ವಚನಗಳ ಸಮುಚ್ಛಯವೇ ಕರಣ ಹಸಿಗೆ. ಇದು ಶಿವಯೋಗದ ಮನೋವೈಜ್ಞಾನಿಕ ವಿಶ್ಲೇಷಣೆಯೂ ಆಗಿದೆ’ ಎಂದು ಹೊಸಪೇಟೆಯ ಅರಿವು-ಆಚಾರ ಅನುಭವ ಟ್ರಸ್ಟ್ ಮತ್ತು ಇಷ್ಟಲಿಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ಅಜಯಕುಮಾರ ತಾಂಡೂರ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ್ವರ ಸಂಸ್ಥಾನಮಠದಲ್ಲಿ ಬುಧವಾರ ನಡೆದ ಬಸವ ಜಯಂತಿ, 639ನೇ ಮಾಸಿಕ ಶಿವಾನುಭವ ಹಾಗೂ ‘ಚನ್ನಬಸವಣ್ಣನವರ ಕರಣಹಸಿಗೆಯ ವೈಜ್ಞಾನಿಕ ವಿಶ್ಲೇಷಣೆ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಲಿಂಗಾಯತರು ಏಕ ದೇವೋಪಾಸಕರು. ಲಿಂಗಾಯತ ಧರ್ಮದಲ್ಲಿ ಗುಡಿಗುಂಡಾರಗಳಿಗೆ ಅವಕಾಶವಿಲ್ಲ. ಇಲ್ಲಿ ದಯವೇ ಧರ್ಮ. ಈ ಎಲ್ಲ ಧಾರ್ಮಿಕ, ಆಧ್ಯಾತ್ಮಿಕ ಅಂಶಗಳ ಹಿನ್ನಲೆಯಲ್ಲಿ ಮನೋದೈಹಿಕ ಸ್ವಾಸ್ಥ್ಯ ಕಾಪಾಡಲು ಚನ್ನಬಸವಣ್ಣನವರು 40 ವಚನಗಳುಳ್ಳ ಕರಣ ಹಸಿಗೆ ರಚಿಸಿದರು ಎಂದರು.
‘ಬಸವಾದಿ ಶರಣರು ಗುರು, ಲಿಂಗ, ಜಂಗಮ ತತ್ವಗಳನ್ನು ಮನೋವೈಜ್ಞಾನಿಕ ಹಿನ್ನಲೆಯಲ್ಲಿ ರೂಪಿಸಿದರು. ಗುರು ವ್ಯಕ್ತಿಯಲ್ಲ ಅರಿವು, ಇದು ಮನಸ್ಸಿನ ಆರೋಗ್ಯದ ಪ್ರತೀಕ. ಲಿಂಗ ವಸ್ತುವಲ್ಲ ದೇಹ, ಇದು ದೈಹಿಕ ಆರೋಗ್ಯದ ಪ್ರತೀಕ. ಜಂಗಮ ವ್ಯಕ್ತಿಯಲ್ಲ ಸಮಾಜ. ಇದು ಸಾಮಾಜಿಕ ಆರೋಗ್ಯದ ಪ್ರತೀಕ. ಮನಸ್ಸು, ದೇಹ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಮಹತ್ವವನ್ನು ಕರಣ ಹಸಿಗೆ ತಿಳಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ದೇಹ ಮತ್ತು ಮನಸ್ಸು ಸ್ವಾಸ್ಥ್ಯವಾಗಿದ್ದರೇ ನಮ್ಮ ಎದೆ ಬಡಿತ ಸರಿಯಾಗಿರುತ್ತದೆ. ವ್ಯಕ್ತಿಯ ಬಗ್ಗೆ ಗಮನ ಕೊಡದೇ ಶಕ್ತಿಯ ಕಡೆ ಗಮನ ಕೊಟ್ಟು ವಸ್ತುವಿನಿಂದ ಶಕ್ತಿಯ ಕಡೆ, ಸ್ಥೂಲದಿಂದ ಸೂಕ್ಷ್ಮದ ಕಡೆಗೆ, ಕೊನೆಗೆ ಶಕ್ತಿಯಿಂದ ಬಯಲಿನ ಕಡೆಗೆ ಸಾಗಬೇಕು. ಬಯಲು ಶರಣರ ಗುರಿಯಾಗಿತ್ತು’ ಎಂದರು.
ನಿವೃತ್ತ ಪ್ರಾಧ್ಯಾಪಕ ಬ್ಯಾಲಹುಣಸಿಯ ಡಾ ಎಸ್. ಶಿವಾನಂದ ಮಾತನಾಡಿದರು.

ಪೂಜ್ಯ ಗುರುಮಹಾಂತ ಶ್ರೀಗಳು, ಮಹಾಂತತೀರ್ಥದ ಬಸವಲಿಂಗ ಶ್ರೀ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ, ಬಸವ ಕೇಂದ್ರ ಅಧ್ಯಕ್ಷ ಮಹಾಂತೇಶ ವಾಲಿ, ಬಸವರಾಜ ಹೂಗಾರ ಉಪಸ್ಥಿತರಿದ್ದರು.
ಪ್ರವೀಣ ಮುದಗಲ್ಲ ಸ್ವಾಗತಿಸಿದರು. ಸಂಗಣ್ಣ ಗದ್ದಿ ನಿರೂಪಿಸಿ, ವಂದಿಸಿದರು.