ಸುಮಾರು ಮೂರು ದಶಕಗಳಿಂದ ನಿಜಾಚರಣೆ ಕಾರ್ಯಗಳನ್ನು ಗದಗಿನ ವಚನಮೂರ್ತಿ ಗೌರಕ್ಕ ನಾ. ಬಡಿಗಣ್ಣವರ ಮಾಡಿಕೊಂಡು ಬಂದಿದ್ದಾರೆ. ತಮ್ಮ ಸುದೀರ್ಘ ಅನುಭವವನ್ನು ರವೀಂದ್ರ ಹೊನವಾಡ ಅವರ ಜೊತೆ ಹಂಚಿಕೊಂಡಿದ್ದಾರೆ.
೧) ನೀವು ನಿಜಾಚರಣೆ ಕಾರ್ಯಕ್ರಮಗಳನ್ನು ಎಷ್ಟು ವರ್ಷದಿಂದ ನಡೆಸಿಕೊಡುತ್ತಿದ್ದೀರಿ? ನಿಮ್ಮ ಪ್ರೇರಣೆಯೇನು? ಈ ಕಾರ್ಯವನ್ನು ಶುರು ಮಾಡಿದ್ದು ಹೇಗೆ?
ಉತ್ತರ: ನಾವು ಕಳೆದ ೨೮ ವರ್ಷಗಳಿಂದ ಲಿಂಗಾಯತ ಧರ್ಮದ ಆಚರಣೆಗಳನ್ನು ನಮ್ಮ ಕುಟುಂಬದಲ್ಲಿ ಅಳವಡಿಸಿಕೊಳ್ಳುತ್ತಾ ಬಂದಿರುವೆವು. ಇದಕ್ಕೆ ಪ್ರೇರಣೆಯಾಗಿದ್ದು ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ. ಬಸವದಳದ ಸದಸ್ಯರು ನಮ್ಮ ಮನೆಯಲ್ಲಿ ವಚನ ಚಿಂತನದ ಜೊತೆಗೆ ನಮ್ಮಲ್ಲಿ ಜಾಗೃತಿಯನ್ನುಂಟು ಮಾಡಿದ್ದು ಮುಖ್ಯಘಟ್ಟವಾಯಿತು.
ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣಿನ ಎತ್ತು ಪೂಜೆ ಮಾಡುವುದು, ಪಂಚಮಿಗೆ ಕಲ್ಲಿನ ನಾಗರಗೆ ಹಾಲೆರೆಯವುದು, ಗಣಪತಿ ಹಬ್ಬ, ಮಹಾನವಮಿ ನಿಮಿತ್ಯ ಬನ್ನಿಮರದ ಪೂಜೆ, ದೀಪಾವಳಿಯಲ್ಲಿ ಲಕ್ಷ್ಮೀಪೂಜೆ, ಹೀಗೆ ವರ್ಷಪೂರ್ತಿ ಬರುವ ಈ ಹಬ್ಬಗಳ ಆಚರಣೆ ಬಗ್ಗೆ ಆಲೋಚಿಸುತ್ತ, ವೈಚಾರಿಕವಾಗಿ ಇವನ್ನೆಲ್ಲ ಹೇಗೆ ಆಚರಿಸಬೇಕೆಂದು ತಿಳಿದುಕೊಳ್ಳುತ್ತಾ, ಮೂಢನಂಬಿಕೆಯಿಂದ ಹೊರಗೆ ಬಂದೆವು.
೨) ನಿಮ್ಮ ವೃತ್ತಿ, ಶಿಕ್ಷಣದ ಹಿನ್ನೆಲೆಯೇನು? ನಿಜಾಚರಣೆಯ ಕಾರ್ಯಕ್ರಮಗಳನ್ನು ನಡೆಸಲು ನೀವು ಪಡೆದಿರುವ ತರಬೇತಿ, ಮಾಡಿರುವ ಅಧ್ಯಯನವೇನು?
ಉತ್ತರ: ನನ್ನ ವೃತ್ತಿ ಶಿಕ್ಷಣ. ಬಟ್ಟೆ ಹೊಲಿಗೆ ತರಬೇತಿ ಪಡೆದ ನಂತರ, ಬಸವಾದಿ ಶರಣರ ತತ್ವದ ಪ್ರಕಾರ ಹೊಲಿಗೆ ತರಬೇತಿಯನ್ನು ನೀಡುವ ಕಾಯಕ ಮಾಡುತ್ತ ಬಂದಿರುವೆನು.
ನಮ್ಮಲ್ಲಿಯ ಹಿರಿಯ ಶರಣರೆಲ್ಲರೂ ಕೂಡಿ ಮಾಡುತ್ತಿದ್ದ ಕಾರ್ಯಕ್ರಮಗಳು ನೋಡಿ ನಾನು ಲಿಂಗಾಯತ ನಿಜಾಚರಣೆಗಳನ್ನು ನಡೆಸಲು ಕಲಿತಿರುವೆ. ಗದುಗಿನ ತೋಂಟದಾರ್ಯ ಮಠದ ಶಿವಾನುಭವ ಕಾರ್ಯಕ್ರಮದಲ್ಲಿ ಶರಣರ ಚಿಂತನೆಗಳು, ಕರಣ ಹಸಿಗೆ, ಮಿಶ್ರಾರ್ಪಣ, ಶೂನ್ಯ ಸಂಪಾದನೆ ಇನ್ನೂ ಹಲವಾರು ಬಗೆಯ ಚಿಂತನೆಗಳನ್ನು ಶರಣ ಅಶೋಕ ಬರಗುಂಡಿಯವರು, ಶರಣ ಎಂ.ಎ.ಹಂಚಿನಾಳರು, ಗುರುಗಳಾದ ಪಂಚಾಕ್ಷರಯ್ಯ ಹಿರೇಮಠ ಅಪ್ಪನವರು ಇನ್ನೂ ಹಲವಾರು ಶರಣರು ಚರ್ಚೆಗಳನ್ನು ನಡೆಸುತ್ತಿದ್ದರು, ಹಾಗಾಗಿ ನಮಗೆ ಲಿಂಗಾಯತ ತತ್ವದ ಕುರಿತಾಗಿ ಇನ್ನೂ ತಿಳಿದುಕೊಳ್ಳಲು ಸಾಧ್ಯವಾಯಿತು.
೩) ನಿಜಾಚರಣೆ ಕಾರ್ಯಕ್ರಮಗಳನ್ನು ಯಾವ ಯಾವ ಊರುಗಳಲ್ಲಿ ನಡೆಸಿಕೊಡುತ್ತೀರಿ?
ಉತ್ತರ: ಬಸವದಳ, ಬಸವ ಕೇಂದ್ರ ಮತ್ತು ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸದಸ್ಯರಾದ ನಾವೆಲ್ಲರು ಸೇರಿ ಗದಗ ಜಿಲ್ಲೆಯ ಊರುಗಳಲ್ಲಿ ಅಂದರೆ ಗಜೇಂದ್ರಗಡ, ಬೆಳದಡಿ, ಜಕ್ಕಲಿ, ಗದಗ, ಬೆಟಗೇರಿ ಹಾಗೆ ಧಾರವಾಡ, ಬಾಗಲಕೋಟೆ, ಕೊಪ್ಪಳ ಮುಂತಾದ ಕಡೆಗಳಲ್ಲಿ ನಡೆಸಿಕೊಟ್ಟಿದ್ದೇವೆ.
೪) ಯಾವ ರೀತಿಯ ನಿಜಾಚರಣೆ ಕಾರ್ಯಕ್ರಮಗಳನ್ನು ಹೆಚ್ಚಿಗೆ ನಡೆಸಿಕೊಡುತ್ತೀರಿ?
ಉತ್ತರ: ಗರ್ಭಕ್ಕೆ ಲಿಂಗಸಂಸ್ಕಾರ, ಕಲ್ಯಾಣ ಮಹೋತ್ಸವ, ಸೀಮಂತ ಕಾರ್ಯ, ಗುರು ಪ್ರವೇಶ, ನಾಮಕರಣ ಕಾರ್ಯ, ಅಂತ್ಯ ಸಂಸ್ಕಾರ ಮುಂತಾದ ಕಾರ್ಯಗಳನ್ನು ನಡೆಸಿಕೊಡುತ್ತೇವೆ.
೫) ನಿಜಾಚರಣೆಗಳು ವೈದಿಕ ಆಚರಣೆಗಳಿಗಿಂತ ಹೇಗೆ ಭಿನ್ನ?
ಉತ್ತರ: ನಿಜಾಚರಣೆಗಳಲ್ಲಿ ಮೂಢನಂಬಿಕೆಗಳಿಗೆ ಅವಕಾಶಗಳಿಲ್ಲ. ಈ ರೀತಿಯಾಗಿ ಪ್ರಜ್ಞಾಪೂರ್ವಕವಾಗಿ ಇಲ್ಲಿ ಕುಟುಂಬದ ಎಲ್ಲರನ್ನು ಒಳಗೊಳಿಸುವ ಮೂಲಕ ಆಚರಣೆಗಳನ್ನು ನೆರವೇರಿಸುತ್ತೇವೆ. ಹೀಗಾಗಿ ವೈದಿಕ ಆಚರಣೆಗಳಿಗಿಂತ ಇವು ಭಿನ್ನವಾಗಿವೆ.
೬) ನಿಜಾಚರಣೆಗಳನ್ನು ಪಾಲಿಸುವುದರಿಂದ ಆಗುವ ಅನುಕೂಲಗಳೇನು? ಲಿಂಗಾಯತರು ವೈದಿಕ ಆಚರಣೆಗಳನ್ನು ನಿಲ್ಲಿಸಿ ನಿಜಾಚರಣೆಗಳನ್ನು ಮಾತ್ರ ಏಕೆ ಅನುಸರಿಸಬೇಕು?
ಉತ್ತರ: ಲಿಂಗಾಯತರು ಸ್ವತಂತ್ರ ವಿಚಾರವಂತರು. ಹಾಗಾಗಿ ಇಲ್ಲಿ ವಾರ, ತಿಥಿ, ಮುಹೂರ್ತಗಳನ್ನು ನೋಡದೆ, ಕುಟುಂಬದ ಬಂಧು ಬಳಗಕ್ಕೆ ಬಂದು ಹೋಗಲು ಅನುಕೂಲಕರವಾದ ದಿನಗಳನ್ನು ನೋಡಿ ನಿಶ್ಚಯಿಸಲು ಸಾಧ್ಯವಾಗಿರುತ್ತೆ. ಇಲ್ಲಿ ಸಮಯ, ಹಣ ದುಂದುಗಾರಿಕೆ ಮಾಡಲಾರದೆ, ಶಾಂತ ಮನಸ್ಥಿತಿಯ ಸಂತೋಷವನ್ನು ಅನುಭವಿಸಲು ಸಾಧ್ಯವಾಗುತ್ತೆ. ವೈದಿಕತೆಯ ಆಚರಣೆಯಲ್ಲಿ ಧಾನ್ಯದ ವ್ಯರ್ಥ ಬಳಕೆ ಇದೆ. ಹಾಗೆ ಹೂವು, ಹಣ್ಣುಗಳನ್ನು ಸಹ. ಹೀಗಾಗಿ ನಿಜಾಚರಣೆ ಅನುಸರಿಸಬೇಕು.
೭) ಶರಣ ಸಮಾಜದಲ್ಲಿ ನಿಜಾಚರಣೆ ಕಾರ್ಯಕ್ರಮಗಳಿಗಿಂತ ವೈದಿಕ ಆಚರಣೆಗಳೇ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು?
ಉತ್ತರ: ಸಮಾಜದಲ್ಲಿ ಹಾಸುಹೊಕ್ಕಿರುವ ಮೂಢನಂಬಿಕೆಗಳು, ಜನರೊಳಗಿನ ಭಯ ಭ್ರಾಂತಿ ಕಾರಣಗಳಿಂದ ವೈದಿಕಾಚರಣೆ ಮಾಡುತ್ತಾರೆ.
೮) ನಿಜಾಚರಣೆ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸುವಲ್ಲಿ ಕಾಣುವ ಸಮಸ್ಯೆ ಅಥವಾ ಅಡಚಣೆಯೇನು? ಅವುಗಳಿಗೆ ಪರಿಹಾರವೇನು?
ಉತ್ತರ: ನಿಜಾಚರಣೆ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸಲು ಶರಣರ ಆಶಯಗಳ ಕುರಿತಾಗಿ ಅನುಭಾವ ಗೋಷ್ಠಿಗಳನ್ನು ಏರ್ಪಡಿಸಬೇಕು, ವಚನಗಳ ಅಧ್ಯಯನವನ್ನು ಮನೆಮನೆಗಳಲ್ಲಿ ನಡೆಸಬೇಕು. ಶರಣ ಸಂಸ್ಕೃತಿಯ ನಮ್ಮ ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಮ್ಮ ಸುತ್ತಮುತ್ತಲ ಕುಟುಂಬದ ಜನರನ್ನು ಒಳಗೊಳಿಸಬೇಕು.
ನಾವು ಯಾರ ಮನೆಯ ನಿಜಾಚರಣೆ ಕಾರ್ಯಕ್ರಮಕ್ಕೆ ಹೋಗುತ್ತೇವೆಯೋ, ಆ ಮನೆಯವರ ಕೈಯಿಂದಲೇ ನಿಜ ಆಚರಣೆಗಳನ್ನು ಮಾಡಿಸುವುದು. ಇದು ಪರಿಣಾಮಕಾರಿಯಾಗಿ ಬದಲಾವಣೆ ತರಲು ಸಾಧ್ಯವಾಗುತ್ತದೆ.
೯) ನೀವು ನೋಡಿರುವ ಹಾಗೆ ಕಳೆದ ೧೦ ವರ್ಷಗಳಲ್ಲಿ ನಿಜಾಚರಣೆ ಕಾರ್ಯಕ್ರಮಗಳು ಹೆಚ್ಚುತಿವೆಯೇ ಅಥವಾ ಕಡಿಮೆಯಾಗುತ್ತಿವೆಯೇ? ಕಾರಣವೇನು?
ಉತ್ತರ: ಈಗ ಹತ್ತು ವರ್ಷಗಳಲ್ಲಿ ನಿಜಾಚರಣೆ ಕಾರ್ಯಕ್ರಮಗಳು ಹೆಚ್ಚು ನಡೆದಿವೆ. ಇದಕ್ಕೆಲ್ಲ ಕಾರಣ ಲಿಂಗೈಕ್ಯ ಇಳಕಲ್ಲ ಮಹಾಂತಪ್ಪಗಳು ಹಾಗೂ ಈಗಿರುವ ಪೂಜ್ಯ ಗುರುಮಹಾಂತ ಸ್ವಾಮೀಜಿಯವರು. ಇನ್ನು ಹಲವಾರು ಪೂಜ್ಯರು ಅನುಭಾವಿಗಳು ಇದಕ್ಕೆ ಕಾರಣೀಕರ್ತರಾಗಿದ್ದಾರೆ.
೧೦) ನಿಜಾಚರಣೆ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು ಹೇಗೆ? ಜನರನ್ನು ವೈದಿಕ ಮಾರ್ಗದಿಂದ ನಿಜಾಚರಣೆಗಳ ಮಾರ್ಗಕ್ಕೆ ತರುವುದು ಹೇಗೆ?
ಉತ್ತರ: ಮನೆ ಮನೆಗಳಲ್ಲಿ ‘ಮಹಾಮನೆ’ ಕಾರ್ಯಕ್ರಮಗಳನ್ನು ವಾರದ ಒಂದು ದಿನ ಅಥವಾ ಎರಡು ದಿನಗಳು ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದು.
೧೧) ನಿಜಾಚರಣೆ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸುವಲ್ಲಿ ತಕ್ಷಣವೇ ಮಾಡಬೇಕಾಗಿರುವ ಕೆಲಸಗಳೇನು?
ಉತ್ತರ: ನಿಜಾಚರಣೆಗಳ ಕಾರ್ಯಾಗಾರಗಳನ್ನು ಏರ್ಪಡಿಸುವುದು. ಜನರಿಗೆ ಅವುಗಳಲ್ಲಿ ತರಬೇತಿ ಕೊಡುವ ಮೂಲಕ.
೧೨) ನಿಜಾಚರಣೆ ಕಾರ್ಯಕ್ರಮಗಳನ್ನು ನಡೆಸಿಕೊಡುವಾಗ ಯಾವುದಾದರು ವಿಶಿಷ್ಟವಾದ ಅನುಭವವಾಗಿದ್ದರೆ ಹಂಚಿಕೊಳ್ಳುತ್ತೀರಾ?
ಉತ್ತರ: ನಿಜಾಚರಣೆಗಳನ್ನು ನಡೆಸುವಾಗ ವೈದಿಕ ಮನಸ್ಸುಗಳು ಅಡ್ಡಿಪಡಿಸುತ್ತಿರುತ್ತವೆ. ಆದರೆ ಈ ಬಗ್ಗೆ ನಾವು ನಿಜಾಚರಣೆಯ ಅವಶ್ಯಕತೆ, ಮಹತ್ವದ ಬಗ್ಗೆ ಕುಟುಂಬದ ಜನರಿಗೆ ತಿಳವಳಿಕೆ ಮೊದಲೇ ಹೇಳಿ ಗಟ್ಟಿಗೊಳಿಸಿರಬೇಕು.
೧೩) ಮಹಿಳಾ ವಚನಮೂರ್ತಿಯಾಗಿ ತಮ್ಮ ಅನುಭವ ಹಂಚಿಕೊಳ್ತೀರಾ? ತಾವು ಏನಾದರೂ ವಿಶೇಷ ಸಮಸ್ಯೆಗಳನ್ನು ಎದುರಿಸಿದ್ದೀರಾ?
ವಾಸ್ತವ ಅರಿತುಕೊಂಡು ನಾವು ಆಚರಣೆ ಮಾಡುವುದರಿಂದ ನೇರವಾಗಿ ನಮಗೇನು ಸಮಸ್ಯೆ ಆಗಿಲ್ಲ. ಬೇರೆಯವರ ಮುಂದೆ ಕೆಲವರು ಆಡಿಕೊಳ್ಳುವುದನ್ನು ನಾವು ಕೇಳಿದ್ದೇವೆ ಹೊರತು, ಎದಿರಾಗಿ ಯಾವುದೇ ಅನುಭವ ಆಗಿಲ್ಲ. ನಾವು ಒಂದು ತಂಡವಾಗಿ ನಿಜಾಚರಣೆ ಮಾಡುವುದರಿಂದ ಏನೇ ತೊಡಕು ಬಂದರೂ ಎದುರಿಸುತ್ತೇವೆ. ಕೇಳಿದವರಿಗೆ ಉತ್ತರ ಕೊಡುತ್ತೇವೆ.
ಸದ್ಯಕ್ಕೆ ಸಮಾಜ ಸಾಕಷ್ಟು ಬದಲಾವಣೆ ಕಂಡಿದೆ. ನಾವು ಪುರೋಹಿತಶಾಹಿಗಳಂತೆ ಮನಸ್ಥಿತಿ ಹೊಂದಿರುವುದಿಲ್ಲ. ನಾವು ಕುಟುಂಬದ ಜನರಿಗೆ ಕುಟುಂಬದವರಾಗಿ ತತ್ವದ ದಾರಿ ತೋರಿಸುವವರಾಗಿರುತ್ತೇವೆ. ಹಾಗಾಗಿ ಜನ ಮಹಿಳಾ ವಚನಮೂರ್ತಿಯನ್ನು ಒಪ್ಪಿಕೊಳ್ಳುತ್ತಾರೆ.
ಸಮಾಜದಲ್ಲಿ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯದ ವಾತಾವರಣವಿಲ್ಲ. ನಮಗಿಂತ ನಮ್ಮ ಮುಂದಿನ ಪೀಳಿಗೆಗೆ ಹೆಚ್ಚು ಸ್ವಾತಂತ್ರ್ಯ, ಬೇರೆಲ್ಲಾ ಅವಕಾಶಗಳು ಸಿಗುವ ಹಾಗೆ ವಾತಾವರಣ ಬದಲಾಗುತ್ತಿರುವುದನ್ನು ನಾವೀಗ ಕಾಣ್ತಾ ಇದ್ದೇವೆ. ಆದರೂ ಪುರೋಹಿತಶಾಹಿ, ಸಾಂಪ್ರದಾಯಿಕ ಮನಸ್ಸುಗಳು ಇಲ್ಲದ ಅಪವಾದಗಳನ್ನು ಈಗಲೂ ಮಹಿಳೆಯರ ಮೇಲೆ ಹೊರೆಸುವ ಪ್ರಯತ್ನ ಮಾಡುತ್ತ ಇರ್ತಾವು. ಇವನ್ನೆಲ್ಲ ಎದುರಿಸುತ್ತಾ ಸಾಗಬೇಕಾಗುತ್ತೆ.
ಅನುಭಾವಿಗಳಿಂದ ನಿಜಾಚರಣೆ ಕಾರ್ಯಗಾರಗಳನ್ನು ಏರ್ಪಡಿಸಬೇಕು. ಅದರಲ್ಲಿ ನಮ್ಮ ನಮ್ಮ ಮನೆಯ ಮಹಿಳೆಯರನ್ನು ಭಾಗವಹಿಸುವಂತೆ ಮಾಡಬೇಕು. ನಂತರದಲ್ಲಿ ನಮ್ಮ ನಮ್ಮ ಮನೆಯ ಕಾರ್ಯಕ್ರಮಗಳನ್ನು ನಾವೇ ನಡೆಸುವಂತಾಗಬೇಕು. ಬೇಕಾದರೆ ಗೌರವಪೂರ್ವಕವಾಗಿ ನಾವು ಬೇರೆಯವರನ್ನು ಆಮಂತ್ರಿಸಬಹುದಷ್ಟೆ. ನಮ್ಮ ನಮ್ಮ ಕಾರ್ಯಕ್ರಮಗಳನ್ನು ನಾವು ಮನೆಯವರು ಮಾಡುತ್ತ ಸಾಗಿದಾಗ ಈ ಪುರೋಹಿತಶಾಹಿ ವರ್ಗವು ಕೆಲಸವಿಲ್ಲದಂತಾಗುವುದು. ಯಾವುದೇ ಕಾರ್ಯಕ್ಕೆ ನಾವು ಇನ್ನೊಬ್ಬರನ್ನು ಅವಲಂಬಿಸುವಂತಾಗಬಾರದು. ಮನೆಯ ಮಹಿಳೆಯರೆ ಕಾರ್ಯಕ್ರಮ ನಡೆಸುವಂತಾಗಿ, ಮನೆಯ ಮಹಿಳೆಯರು ವಚನಮೂರ್ತಿಗಳಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಂತಾಗಬೇಕು.
ವಿಳಾಸ:
ಗೌರಕ್ಕ ನಾಗಭೂಷಣ ಬಡಿಗಣ್ಣವರ
ಕಳಸಾಪುರ ರಸ್ತೆ, ಒಳಕ್ರೀಡಾಂಗಣ ಹತ್ತಿರ, ನಂದೀಶ್ವರ ನಗರ, ಗದಗ
ಮೊ. ೯೮೮೦೩೮೩೮೧೬
ಅಕ್ಕಾರ ಬಸವಣ್ಣನವರ ಖಂಡಿಸಿದ ವೈದಿಕ ಆಚರಣೆಗಳನ್ನು, ಅವುಗಳ ಮೌಡ್ಯತೆಯನ್ನು ಜನರಿಗೆ ತಿಳಿಸುವ ಮೂಲಕ ನಿಜಾಚರಣೆ ಕಾಯ೯ಕ್ರಮಗಳನ್ನು ಮಾಡುತ್ತಿರುವ ನಿಮಗೆ ಅನಂತ ಶರಣು ಶರಣಾಥಿ೯ಗಳು 🙏🙏ಸಂದಶ೯ನ ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರಿ ಶರಣು ಶರಣಾಥಿ೯ಗಳು ಸರ್ 🙏🙏