ವಿರಕ್ತರಾಗಿಯೂ ವೈದಿಕತೆಯತ್ತ ತಿರುಗಿದ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು

(ಹಾನಗಲ್ಲ ಶ್ರೀಗಳ ಮೇಲೆ ಕೆಲವು ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ. ಅಭಿಪ್ರಾಯಗಳೆಲ್ಲಾ ಆಯಾ ಲೇಖಕರದು. ವಿಷಯದ ಮೇಲೆ ಹೊಸ ಲೇಖನ, ಪ್ರತಿಕ್ರಿಯೆ ಆಹ್ವಾನಿಸುತ್ತೇವೆ.)

ಮೊನ್ನೆ 25-02-2024 ರ ಭಾನುವಾರ ಹಾವೇರಿ ಜಿಲ್ಲೆಯ ಹಾನಗಲ್ಲ ವಿರಕ್ತ ಮಠಕ್ಕೆ ಭೇಟಿ ನೀಡಿದ್ದೆನು. ಇದು ಕರ್ನಾಟಕದ ಪ್ರಭಾವಿ ಮಠಗಳಲ್ಲೊಂದು. ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು (1867-1930) ಈ ವಿರಕ್ತ ಮಠದ ಪೀಠಾಧಿಕಾರಿಯಾಗಿ ನೇಮಕವಾದ ಬಳಿಕ ಶ್ರೀ ಮಠವನ್ನು ಕರ್ನಾಟಕದಲ್ಲಿ ಬ್ರಾಹ್ಮಣರ ಮಠಗಳಿಗೆ ಸಮನಾಗಿ ಗುರುತಿಸುವಂತೆ ಕಟ್ಟಿ ಬೆಳೆಸಿದರು.

ಮೂಲದಲ್ಲಿ ಪಂಚಾಚಾರ್ಯರ ವೀರಶೈವ ಪರಂಪರೆಗೆ ಸೇರದಿರುವ ಶ್ರೀ ಕುಮಾರ ಶಿವಯೋಗಿಗಳು, ಲಿಂಗಿಬ್ರಾಹ್ಮಣ- ವೀರಶೈವ ಸಿದ್ಧಾಂತಕ್ಕನುಗುಣವಾಗಿಯೇ ಶ್ರೀಮಠದಲ್ಲಿ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸುವ ಮೂಲಕ ವೇದಾಗಮ ಶಾಸ್ತ್ರಗಳನ್ನು ಬೋಧಿಸಲು ಒತ್ತು ನೀಡಿದರು. 1904 ರಲ್ಲಿ ‘ವೀರಶೈವ ಮಹಾಸಭಾ’‌ ಮತ್ತು 1909 ರಲ್ಲಿ ಶ್ರೀಮದ್ ವೀರಶೈವ ಶಿವಯೋಗ ಮಂದಿರ ಸ್ಥಾಪಿಸುವ ಮೂಲಕ ಸಂಸ್ಕೃತ ಕಲಿಕೆಯೊಂದಿಗೆ ಆಯುರ್ವೇದ ವಿಜ್ಞಾನ ಮತ್ತು ಯೋಗ ಶಿಕ್ಷಣ ನೀಡಲು ಹೆಚ್ಚು ಆಸಕ್ತಿ ತೋರಿಸಿದರು. ಇದರಿಂದಾಗಿ ವೀರಶೈವ ಸಿದ್ಧಾಂತ ಹೆಚ್ಚು ಪ್ರಚಾರ ಮತ್ತು ಜನಪ್ರಿಯತೆ ಗಳಿಸಿಕೊಂಡಿತು.

ಹಾನಗಲ್ ವಿರಕ್ತ ಮಠದಂತೆಯೇ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸಂಸ್ಕೃತ ಕಲಿಸಲು ಮುತುವರ್ಜಿ ತೋರಿಸಿದ ವಿಷಯ ನನಗೀಗ ನೆನಪಾಯಿತು. ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರು ಮೂಲತಃ ಒಕ್ಕಲಿಗ ಸಮುದಾಯದವರೆಂದು ಶಿವಕುಮಾರ ಸ್ವಾಮೀಜಿಯರು ಹುಟ್ಟಿದ ಮಾಗಡಿ ಸೀಮೆಯ ಜನ ಹೇಳುವುದನ್ನು ನಾನು ಕೇಳಿದ್ದೇನೆ. ಅವರ ಗುರುಗಳಾದ ಶ್ರೀ ಉದ್ದಾನ ಶಿವಯೋಗಿಗಳು 1917 ರ ಹೊತ್ತಿಗಾಗಲೇ ಸಿದ್ಧಗಂಗಾ ಮಠದಲ್ಲಿ ಸಂಸ್ಕೃತ ಶಾಲೆಯನ್ನು ಪ್ರಾರಂಭಿಸಿ ಬ್ರಾಹ್ಮಣ ಮಠಗಳ ಮಾದರಿಯಲ್ಲಿ ವೇದಾದ್ಯಯನ, ಸಂಸ್ಕೃತ ವ್ಯಾಕರಣವನ್ನು ಕಲಿಸುವ ಕೈಂಕರ್ಯಕ್ಕೆ ಮುನ್ನುಡಿ ಬರೆದಿದ್ದರು.

1930 ರಲ್ಲಿ ಮಠದ ಪಟ್ಟಾಧಿಕಾರ ವಹಿಸಿಕೊಂಡ ಶ್ರೀ ಶಿವಕುಮಾರ ಸ್ವಾಮಿಗಳು ಸಂಸ್ಕೃತ ಕಲಿಸುವ ಉಪ ಶಾಖೆಗಳನ್ನು ಕೂಡಾ ಶಾಖಾ ಮಠಗಳಲ್ಲಿ ಪ್ರಾರಂಭಿಸಿ ವೈದಿಕಾರ್ಯರ ಸಂಸ್ಕೃತಿಯನ್ನು ಪೋಷಿಸಲು ನೆರವಾದರು. ಲಿಂಗಾಯತ ಧರ್ಮದ ಮೌಲ್ಯಗಳನ್ನು ಬಿತ್ತಿ ಬೆಳೆಯಬೇಕಾಗಿದ್ದ ಮಠಗಳು ಲಿಂಗಿಬ್ರಾಹ್ಮಣ- ವೀರಶೈವ ಮೌಲ್ಯಗಳ ಪ್ರಚಾರಕ್ಕೆ ನಿಂತವು. ಸಂಸ್ಕೃತ ಕಲಿಸುವುದರೊಂದಿಗೆ ಇವರು ತಮ್ಮ ಮಠಗಳ ಅಭಿವೃದ್ಧಿ ಮತ್ತು ಪ್ರಚಾರಕ್ಕೆ ಮೂಲಾಧಾರವಾಗಿ ಬಳಸಿಕೊಂಡದ್ದು ಮಾತ್ರ ಲಿಂಗಾಯತ ಧರ್ಮವನ್ನು ಬೆಳಗಿದ ಬಸವಾದಿ ಪ್ರಮಥ ಶರಣರ ವಚನಗಳನ್ನು.

ಎಡೆಯೂರು ಸಿದ್ಧಲಿಂಗಯತಿಗಳ ನಂತರದಲ್ಲಿ, ಹನ್ನೆರಡನೇ ಶತಮಾನದ ವಚನಕಾರರ ವಚನಗಳನ್ನು ಸಂಶೋಧಿಸಿಕೊಟ್ಟವರಲ್ಲಿ ಫ.ಗು.ಹಳಕಟ್ಟಿ ಪ್ರಮುಖರಾಗಿದ್ದಾರೆ. ವಚನ ಸಂಪಾದನೆಯ ಕಾರ್ಯದಲ್ಲಿ ಫ.ಗು.ಹಳಕಟ್ಟಿಯವರ ಕೊಡುಗೆ ತುಂಬಾ ದೊಡ್ಡದು. ವಚನಗಳನ್ನು ಸಂಗೀತಕ್ಕೆ ಅಳವಡಿಸಿ, ರಾಗಸಂಯೋಜನೆ ಮಾಡಿ ಹಾಡುವುದರಿಂದ ವಚನಗಳು ಜನಮಾನಸಕ್ಕೆ ಹೆಚ್ಚು ತಲುತ್ತವೆಂಬ ನಂಬಿಕೆಯಿಂದ ಹಳಕಟ್ಟಿಯವರು, ಸಂಗೀತ ಶಿಕ್ಷಕರಾದ ಪಿ.ವಿ.ಪಾಟೀಲರಿಂದ ವಚನಗಳನ್ನು ಹಾಡಿಸಿ ಧ್ವನಿ ಸುರುಳಿಗಳನ್ನು ಕೂಡ ಹೊರತಂದರು. ಫ.ಗು.ಹಳಕಟ್ಟಿಯವರು, ಬಾಗಲಕೋಟೆಯ ಚರಂತಿಮಠದಲ್ಲಿ ನಡೆದ “ವೀರಶೈವ ಮಹಾಸಭಾ” ದ ಎರಡನೇ ಮಹಾಮೇಳದಲ್ಲಿ ಬಸವಣ್ಣನವರ ವಚನಗಳನ್ನು ಗದಿಗಯ್ಯ ಎಂಬ ಅಂಧ ಯುವಕನಿಂದ ಹಾಡಿಸಿ, ಆ ಯುವಕನ ಗಾನ ಮಾಧುರ್ಯಕ್ಕೆ ಮನಸೋತು ಆತನನ್ನು ಸನ್ಮಾನಿಸಿ ‘ಪಂಚಾಕ್ಷರಿ ಗವಾಯಿ’ ಎಂದು ನಾಮಕರಣ ಮಾಡಿದರು. ಗದಿಗಯ್ಯ ಎಂಬ ಆ ಹುಡುಗನೇ ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿಗಳು. ಆ ಮಹಾಮೇಳದ ಮುಖ್ಯ ರೂವಾರಿಯಾಗಿದ್ದವರು ಇದೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು.

ಕಾಡಶೆಟ್ಟಿಹಳ್ಳಿಯ ದಂಪತಿಗಳಾದ ಗುರುಪಾದಯ್ಯ ಮತ್ತು ನೀಲಮ್ಮನವರ ಮಗನಾದ ಒಂಭತ್ತು ವರ್ಷ ವಯಸ್ಸಿನ ಗದಿಗಯ್ಯನನ್ನು ತಮ್ಮ ಶಿಷ್ಯನನ್ನಾಗಿ ವಶಕ್ಕೆ ತೆಗೆದುಕೊಂಡು ಹಾನಗಲ್ ಮಠಕ್ಕೆ ಕರೆದುಕೊಂಡು ಬಂದ ಶ್ರೀ ಕುಮಾರ ಶಿವಯೋಗಿಗಳು, ತಂಜಾವೂರಿನ ಗವಾಯಿಯವರಿಂದ ಮೂಲ ಸಂಗೀತ ಪಾಠಗಳನ್ನು, ಉಸ್ತಾದ್ ಮಹಿಮಾ ಖಾನ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಹಾಗೂ ಬಳ್ಳಾರಿ ರಾಘವಾಚಾರ್ಯರಿಂದ ಪಿಟೀಲು, ಜೀಕಿನಕಟ್ಟಿ ಶಿವಯ್ಯನವರಿಂದ ತಬಲಾ ವಾದನ ನುಡಿಸುವುದನ್ನು ಹೀಗೆ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುವ ಶಿಕ್ಷಣವನ್ನು ಕೊಡಿಸಿ ಪೋಷಿಸಿ ಬೆಳೆಸುತ್ತಾರೆ. ಮುಂದಿನ ದಿನಗಳಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಶರಣರ ಅನೇಕ ವಚನಗಳನ್ನು ರಾಗ ಸಂಯೋಜನೆ ಮಾಡಿ ಹಾಡಿ ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ ವಚನಗಾಯನದ ಪ್ರಥಮ ಗಾಯಕರಾಗಿ ಗುರುತಿಸಿಕೊಳ್ಳುತ್ತಾರೆ. ಹೀಗೆ ವಚನಗಾಯನಕ್ಕೆ ನಾಂದಿ ಹಾಡಿದ್ದು ಫ.ಗು ಹಳಕಟ್ಟಿಯವರಾದರೆ ಪಂಚಾಕ್ಷರಿ ಗವಾಯಿವರನ್ನು ಗರುತಿಸಿ ಬೆಳೆಸಿದ್ದು ಮಾತ್ರ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು ಎಂಬುದನ್ನು ನಾವು ಮರೆಯುವಂತಿಲ್ಲ.

ವಚನಕಾರರ ವಚನ ಸಾಹಿತ್ಯ ಜನರನ್ನು ತಲುಪಲು ಹಾನಗಲ್ಲ ಕುಮಾರ ಸ್ವಾಮಿಯವರಿಗಿಂತಲೂ ಫ.ಗು.ಹಳಕಟ್ಟಿ ಮತ್ತು ಪ್ರೊ.ಎಂ.ಎಂ ಕಲ್ಬುರ್ಗಿಯವರು ನೀಡಿದ ಕೊಡುಗೆ ಬಲು ದೊಡ್ಡದು. ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು ಶ್ರೀಮಠದಲ್ಲಿ ಸಂಸ್ಕೃತ ಕಲಿಕೆಗೆ ಮತ್ತು ಶರಣರ ವಚನಗಳ ಹಾಡುಗಾರಿಕೆಗೆ ಒತ್ತು ನೀಡಿದ್ದರಿಂದ ವೀರಶೈವ ತತ್ವ ಪ್ರಚಾರಕ್ಕೆ ಹೆಚ್ಚು ಅನುಕೂಲವಾಯಿತು. ಲಿಂಗಾಯತದ ಜಾತ್ಯತೀತ ಮೌಲ್ಯಗಳ ಪ್ರಚಾರಕ್ಕೆ ಶ್ರೀಮಠ ಅಷ್ಟೇನೂ ನೆರವಾಗಲಿಲ್ಲ.

ವೀರಶೈವ‌ ಮತ್ತು ಲಿಂಗಾಯತ ಎರಡೂ ಒಂದೇ ಅಲ್ಲ. 1904 ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು “ವೀರಶೈವ ಮಹಾಸಭಾ” ಮತ್ತು 1909 ರಲ್ಲಿ ಶ್ರೀಮದ್ ವೀರಶೈವ ಶಿವಯೋಗ ಮಂದಿರ ಸ್ಥಾಪಿಸಿ ಕೇವಲ ಜಂಗಮರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಲಿಂಗಾಯತ ಧರ್ಮದ ತತ್ವಗಳಿಗೆ ವಿರುದ್ಧವಾದ ಸನಾತನಿಗಳ ಆಶಯಗಳಿಗೆ ಪೂರಕವಾದ ಮೌಢ್ಯಗಳನ್ನು ಪ್ರಚಾರ ಮಾಡತೊಡಗಿದರು. ಮೊದಲು ಹಾನಗಲ್ ಶ್ರೀ ಕುಮಾರಸ್ವಾಮಿಯವರಿಗೆ ಚಿತ್ರದುರ್ಗ ಮುರುಘಾಮಠದ ಮಠಾಧಿಪತಿಯಾಗುವ ಆಸೆಯಿತ್ತು. ಅವರು ಚಿತ್ರದುರ್ಗದ ಮಠಾಧೀಶರಾಗಬಾರದೆಂದು ಕೆಲವರು ಆಕ್ಷೇಪಣೆ ಮಾಡಿದ್ದರಿಂದಾಗಿ, ಆ ಮಠದ ಮಠಾಧೀಶರ ಪದವಿಯ ಆಯ್ಕೆಗೆ ಚುನಾವಣೆ ನಡೆಯಿತು. ಹಾನಗಲ್ ಕುಮಾರಸ್ವಾಮಿಗಳು ಆಯ್ಕೆಯಾಗಲಿಲ್ಲ. ಇದರಿಂದ ಕುಪಿತರಾದ ಶ್ರೀ ಕುಮಾರಸ್ವಾಮಿಗಳು ಪಂಚಪೀಠಾಧೀಶರ ಜೊತೆ ಕೈಜೋಡಿಸಿ ‘ವೀರಶೈವ ಮಹಾಸಭಾ’ ಹುಟ್ಟುಹಾಕಿದರು.‌ ಮುಂದೆ ಶ್ರೀಮದ್ ವೀರಶೈವ ಶಿವಯೋಗ ಮಂದಿರವನ್ನು ಸ್ಥಾಪಿಸಿ ಅಲ್ಲಿಯೂ ಜಂಗಮರಿಗೆ ಮಾತ್ರ ಹೆಚ್ಚಿನ ಅವಕಾಶಗಳು ಸಿಗುವಂತೆ ನೋಡಿಕೊಂಡರು.

ನಲವತ್ತರ ದಶಕದಲ್ಲಿ ಲಿಂಗಾಯತ ಪ್ರಜ್ಞಾವಂತರು ಸೇರಿ ವೀರಶೈವ ಮಹಾಸಭಾ ಎಂಬ ಹೆಸರು ತಮಗೆ ಬೇಡವೆಂತಲೂ ‘ಲಿಂಗಾಯತ ಮಹಾಸಭಾ’ ಎಂದು ಹೆಸರು ಬದಲಾವಣೆ ಮಾಡಬೇಕೆಂತಲೂ ಒತ್ತಾಯ ತಂದದ್ದು ಫಲಿಸಲಿಲ್ಲ. ಆದರೆ ಈಗ್ಗೆ ನಾಲ್ಕು ವರ್ಷಗಳ ಹಿಂದೆಯಷ್ಟೇ ‘ವೀರಶೈವ- ಲಿಂಗಾಯತ ಮಹಾಸಭಾ’ ಎಂದು ಹೆಸರು ಬದಲಾವಣೆ ಮಾಡುವುದರೊಂದಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ಗುರುತಿನ ಹೋರಾಟಕ್ಕೆ ಭಂಗ ತರುವ ಪ್ರಯತ್ನವೂ ನಡೆಯಿತು. ಬಣಜಿಗ ಲಿಂಗಾಯತರು 2-A ಮೀಸಲಾತಿ ಪಡೆಯುವ ಸಂದರ್ಭದಲ್ಲಿಯೂ ಪಂಚಮಸಾಲಿಗಳನ್ನು ಸೇರಿದಂತೆ ಲಿಂಗಾಯತದ ಇತರೆ ಯಾವುದೇ ಕವಲನ್ನು ಒಳಗೊಳ್ಳುವ ಪ್ರಯತ್ನ ಮಾಡಲಿಲ್ಲ.

ಹಾನಗಲ್ ಕುಮಾರಸ್ವಾಮಿಯವರನ್ನು ಚಿತ್ರದುರ್ಗದ ಪೀಠಕ್ಕೆ ಅಧ್ಯಕ್ಷನನ್ನಾಗಿ ನೇಮಕ ಮಾಡದಂತೆ ನೋಡಿಕೊಂಡದ್ದರ ಪರಿಣಾಮವಾಗಿ ವೀರಶೈವ ಮಹಾಸಭಾ ಹುಟ್ಟಿಕೊಂಡಿತು. ಇದರಿಂದ ಲಿಂಗಾಯತದ ಮೇಲಾದ ಅಡ್ಡ ಪರಿಣಾಮವನ್ನು ಈಗಲೂ ಲಿಂಗಾಯತರಿಂದ ನಿವಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಲಿಂಗಾಯತ ಧರ್ಮದ ಪ್ರತ್ಯೇಕ ಗುರುತಿನ ಹೋರಾಟಕ್ಕೆ ದೊಡ್ಡ ಪ್ರಹಾರ ನೀಡಿದ್ದೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳಿಂದ ಸ್ಥಾಪನೆಯಾಗಿರುವ ವೀರಶೈವ ಮಹಾಸಭಾ ಮತ್ತು ಶಿವಯೋಗ ಮಂದಿರ.

ಕೊಲ್ಹಾಪುರದ ಶಾಹು ಮಹಾರಾಜರು ಲಿಂಗಾಯತ ಧರ್ಮದ ದೀಕ್ಷೆ ಸ್ವೀಕರಿಸಲು ಒಲವು ತೋರಿಸಿದಾಗ ಲಿಂಗಾಯತ ದೀಕ್ಷೆ ನೀಡುವುದು ಬೇಡವೆಂದು ಪ್ರತಿರೋಧ ಒಡ್ಡಿದವರೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು. ಅಂದು ಶಾಹು ಮಹಾರಾಜರು ಲಿಂಗಾಯತ ಧರ್ಮದ ದೀಕ್ಷೆಯನ್ನು ಸ್ವೀಕಾರ ಮಾಡಿದ್ದಿದ್ದರೆ ಇಂದು ಮಹಾರಾಷ್ಟ್ರ ರಾಜ್ಯದಲ್ಲಿ ವೀರಶೈವ ಜಂಗಮರೆಂದು ಗುರುತಿಸಿಕೊಂಡಿರುವ ಸಿಂಹಪಾಲು ಜನ ಲಿಂಗಾಯತರಾಗಿ ಉಳಿದಿರುತ್ತಿದ್ದರು. ಅಂತಹ ಸಾಧ್ಯತೆಯನ್ನು ತಪ್ಪಿಸಿದ್ದು ಇದೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು. (ನಾನು ಓದಿ ತಿಳಿದ, ಕೇಳಿದ, ಗ್ರಹಿಸಿದ ಪ್ರಾಥಮಿಕ ಸಂಗತಿಗಳನ್ನು ಮಾತ್ರ ಇಲ್ಲಿ ಹಂಚಿಕೊಂಡಿದ್ದೇನೆ. ಮಾಹಿತಿಗಳು ತಪ್ಪಾಗಿದ್ದ ಪಕ್ಷದಲ್ಲಿ ಬಲ್ಲವರು ತಿಳಿಸಿದರೆ ಪರಿಶೀಲನೆಯೊಂದಿಗೆ ಪರಿಷ್ಕರಿಸಿ ಬರೆಯುತ್ತೇನೆ)

Share This Article
Leave a comment

Leave a Reply

Your email address will not be published. Required fields are marked *