ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷ ನುಡಿ
ಯಾದಗಿರಿ:
ಮೌಢ್ಯ, ಅಂಧನಂಬಿಕೆ ಹಾಗೂ ಕಂದಾಚಾರಗಳಿಂದ ಹೊರಬಂದು ಜನರು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗೆ ಒಲಿಯಬೇಕೆಂಬುದೇ ೫ನೇ ವೈಜ್ಞಾನಿಕ ಸಮ್ಮೇಳನದ ಮೂಲ ಆಶಯ ಎಂದು ಸಮ್ಮೇಳನದ ಸರ್ವಾಧ್ಯಕ್ಷರಾದ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮತ್ತು ಮಾನವ ಬಂಧುತ್ವ ವೇದಿಕೆ ವತಿಯಿಂದ ಸಮ್ಮೇಳನಕ್ಕೆ ಸ್ವಾಗತಿಸಿಕೊಂಡ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಆಧ್ಯಾತ್ಮ ಎಂದರೆ ವಿಚಾರವಿಲ್ಲದ ವಿಷಯ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಆದರೆ ನಿಜವಾದ ಆಧ್ಯಾತ್ಮದಲ್ಲಿ ತರ್ಕ, ವಿಚಾರ ಮತ್ತು ವಿಜ್ಞಾನ ಅಡಗಿವೆ. ಅದನ್ನು ಗ್ರಹಿಸುವ ಒಳಗಣ್ಣನ್ನು ತೆರೆಯಬೇಕಿದೆ ಎಂದು ಹೇಳಿದರು.
೧೨ನೇ ಶತಮಾನದಲ್ಲೇ ಬಸವಣ್ಣ ಹಾಗೂ ಶರಣರು ಮೌಢ್ಯ ಮತ್ತು ಕಂದಾಚಾರಗಳನ್ನು ತಿರಸ್ಕರಿಸಿ ಸಮಾಜವನ್ನು ಬೆಳಕಿನ ದಾರಿಯತ್ತ ಕರೆದೊಯ್ದಿದ್ದರು. ಆದರೆ ಇಂದಿನ ದಿನಗಳಲ್ಲಿ ಮತ್ತೆ ಅಂಧನಂಬಿಕೆಗಳು ಸಮಾಜವನ್ನು ಆವರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದರು.

ವಚನ ಸಾಹಿತ್ಯ ಬದುಕಿನ ದಿಕ್ಸೂಚಿಯಾಗಲಿ: ಜ್ಯೋತಿಷ್ಯ, ಹಸ್ತರೇಖೆ ಮುಂತಾದವುಗಳನ್ನು ವಿಜ್ಞಾನವೆಂದು ಬಿಂಬಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಶರಣರ ವಚನಗಳು ಬದುಕನ್ನು ನೇರದಾರಿಯಲ್ಲಿ ಸಾಗಿಸಲು ಮಾರ್ಗದರ್ಶಕವಾಗಿವೆ. ವಚನ ಸಾಹಿತ್ಯ ದೇವಾಲಯದ ಗೋಡೆಯಲ್ಲಿರುವ ಸಾಲುಗಳಲ್ಲ; ಅದು ಜೀವನ ನಡೆಸುವ ದಿಕ್ಕುಸೂಚಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಯುವ ಸಮೂಹಕ್ಕೆ ಎಐ ಹಾಗೂ ತಂತ್ರಜ್ಞಾನ ಸುಲಭವಾಗಿ ಲಭ್ಯವಿದ್ದರೂ ಶರಣ ಸಾಹಿತ್ಯವನ್ನು ಪುರಾತನವೆಂದು ನಿರ್ಲಕ್ಷ್ಯ ಮಾಡುತ್ತಿರುವುದು ತಪ್ಪು. ಬದುಕಿನ ಪ್ರತಿಯೊಂದು ಸಮಸ್ಯೆಗೆ ವಚನಗಳಲ್ಲಿ ಉತ್ತರಗಳಿವೆ. ಪೋಷಕರು ಮಕ್ಕಳಿಗೆ ವಚನ ಸಾಹಿತ್ಯವನ್ನು ಕಲಿಸುವ ಮೂಲಕ ವೈಚಾರಿಕ ಬೆಳವಣಿಗೆಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಮಾನವೀಯತೆಗೆ ದೊಡ್ಡ ಅಪಾಯ: ಆಧ್ಯಾತ್ಮ ಎಂದರೆ ಸಂಸಾರ ತ್ಯಜಿಸುವುದಲ್ಲ, ಸಮಾಜದಿಂದ ದೂರ ಸರಿಯುವುದಲ್ಲ. ಸಮಾಜಕ್ಕೆ ಕೊಡುಗೆ ನೀಡದ ಸಾಧನೆಗೆ ಅರ್ಥವಿಲ್ಲ ಎಂಬ ಅಲ್ಲಮಪ್ರಭುಗಳ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಪ್ರಶ್ನಿಸುವ ಧೈರ್ಯವೇ ಸಮಾಜವನ್ನು ಉಳಿಸುತ್ತದೆ ಎಂದು ಒತ್ತಿ ಹೇಳಿದ ಅವರು, ಮೌಢ್ಯ, ಭಯ ಹಾಗೂ ವಿಭಜನೆಯ ಮನೋಭಾವಗಳು ಮಾನವೀಯತೆಗೆ ದೊಡ್ಡ ಅಪಾಯವಾಗಿವೆ. ಜನರು ಭಯವಿಲ್ಲದೆ ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಕ್ಕಮಹಾದೇವಿ ತಾಯಿಯ “ಹೆದರದಿರು ಮನವೇ, ಬೆದರದಿರು ತನುವೇ, ನಿಜವ ನರಿತು ನಿಶ್ಚಿಂತನಾಗಿರು”ಎಂಬ ವಚನವನ್ನು ಉಲ್ಲೇಖಿಸಿ, ಇಂದಿನ ಸಮಾಜ ಭಯದೊಳಗೆ ಬದುಕುತ್ತಿರುವುದಕ್ಕೆ ವಿಷಾದಿಸಿದರು.
ಎಡಗಾಲು–ಬಲಗಾಲು, ಶುಭ–ಅಶುಭ, ಜಾತಿ–ಮತಗಳ ಶ್ರೇಷ್ಠತೆ ಎಂಬ ಮೂಢನಂಬಿಕೆಗಳಿಂದ ಮಾನವೀಯತೆ ಕುಸಿಯುತ್ತಿದೆ ಎಂದು ಹೇಳಿದರು.
ಇತ್ತೀಚಿಗೆ ನಡೆದಂತಹ ಹೆತ್ತ ತಂದೆಯಿಂದಲೇ ಮಗಳ ಹೊಟ್ಟೆಯಲ್ಲಿ ಹುಟ್ಟಿದ್ದ ಮಗುವನ್ನೇ ಹತ್ಯೆ ಮಾಡುವಂತ ಮೌಡ್ಯದಂತಹ ಘಟನೆಗಳು ನಡೆಯುತ್ತಿವೆ, ಇಂತಹ ಪೈಶಾಚಿಕತನಕ್ಕೆ ಸಮಾಜ ಧಿಕ್ಕಾರ ಹೇಳಲೇಬೇಕು, ಜನರು ಜಾತಿ, ಧರ್ಮ, ಸಂಘರ್ಷಗಳನ್ನು ಬದಿಗೊತ್ತಿ ಸಮಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಸಲಹೆ ನೀಡಿದರು.
ಮಾನವ ಪ್ರಜ್ಞೆ ಎಚ್ಚರಿಸುವುದೇ ಮೂಲ ಆಶಯ: ಈ ಸಮ್ಮೇಳನದ ಮೂಲ ಆಶಯ ಮಾನವ ಪ್ರಜ್ಞೆಯನ್ನು ಎಚ್ಚರಿಸುವುದೇ ಆಗಿದ್ದು, ಮೌಢ್ಯತೆಯನ್ನು ಕೆಳಗೆ ತಳ್ಳಿ, ವೈಚಾರಿಕತೆಯನ್ನು ಮೇಲಕ್ಕೆ ತರುವುದೇ ನಮ್ಮ ಗುರಿ. ಪ್ರಶ್ನೆ ಮಾಡದೆ ಯಾವುದನ್ನೂ ಒಪ್ಪಿಕೊಳ್ಳಬಾರದು. ನನ್ನ ಮಾತುಗಳನ್ನೂ ಪ್ರಶ್ನಿಸುವ ಹಕ್ಕು ನಿಮಗಿದೆ ಎಂದು ಹೇಳಿದರು.

ವಚನ ಸಾಹಿತ್ಯವು ಕೇವಲ ಆಧ್ಯಾತ್ಮಿಕವಲ್ಲ; ಅದು ವೈಚಾರಿಕ, ಸಮಾನತಾವಾದಿ ಹಾಗೂ ಬದುಕಿಗೆ ದಾರಿತೋರಿಸುವ ಅಪರೂಪದ ಸಾಹಿತ್ಯ ಎಂದು ಹೇಳಿದರು. ತಮ್ಮ ಚಿಂತನಾ ಬೆಳವಣಿಗೆಗೆ ಕುಟುಂಬದ ಓದು ಸಂಸ್ಕಾರ ಕಾರಣವಾಯಿತು ಎಂದು ಸ್ಮರಿಸಿದರು.
ಕೊಲ್ಲುವ ಭಾಷೆಯಲ್ಲ, ಗೆಲ್ಲುವ ಭಾಷೆಯನ್ನು ಆಯ್ಕೆ ಮಾಡಬೇಕು. ದ್ವೇಷವಲ್ಲ, ವಿವೇಕವೇ ಸಮಾಜದ ದಾರಿ. ಅದೇ ಈ ವೈಜ್ಞಾನಿಕ ಸಮ್ಮೇಳನದ ಸಂದೇಶ ಎಂದು ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ
ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಹಾಗೂ ವೈಚಾರಿಕ ದಿನಾಚರಣೆ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳವರೆಗೆ ಆಯೋಜಿಸಿರುವ ರಾಜ್ಯಮಟ್ಟದ 5 ನೇ ವೈಜ್ಞಾನಿಕ ಸಮ್ಮೇಳನದ ಆರಂಭದ ದಿನವಾದ ಭಾನುವಾರ ಮೈಲಾಪುರ ಅಗಸಿಯಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಸಮ್ಮೇಳನಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೆರವಣಿಗೆ ನಡೆಯಿತು.ಅಧ್ಯಕ್ಷರ ಜತೆಗೆ ಅವರ ಪತ್ನಿ ಶರಾವತಿ ಸತ್ಯಂಪೇಟೆ ಇದ್ದರು.
ಗುರುಮಠಕಲ್ ಖಾಸಾಮಠದ ಮತ್ತು ಚಿಗರಳ್ಳಿಯ ಶಂಕರಪೀಠದ ಸ್ವಾಮಿಗಳ ಸಾನಿಧ್ಯದಲ್ಲಿ ಮತ್ತು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಸಮುಖ್ಮದಲ್ಲಿ ಚಾಲನೆ ನೀಡಲಾಯಿತು. ಇದೇ ವೇಳೆ ಪರಿಷತ್ತಿನ ಧ್ವಜ ಹಸ್ಥಾಂತರ ಮಾಡಲಾಯಿತು.
ಪರಿಷತ್ತು, ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು, ಭಾರತ ಸೇವಾದಳ ಮತ್ತು ಸ್ವೌಟ್ ಮತ್ತು ಗೈಡ್ಸ್ ನ ಶಿಕ್ಷಕ, ಮಕ್ಕಳವೃಂದ, ಶಾಲಾಮಕ್ಕಳು, ಆಳಂದ ತಾಲೂಕಿನ ತೀರ್ಥ ತಾಂಡಾದ ಮಹಿಳೆಯರು ಕುಂಭ ಕಳಸದೊಂದಿಗೆ ನೃತ್ಯದೊಂದಿಗೆ ಗಮನ ಸೆಳೆದರು.

ಬಾಜಾ ಭಜಂತ್ರಿ, ಡೊಳ್ಳುಗಳ ನಿನಾದ ನೋಡುಗರ ಗಮನ ಸೆಳೆಯಿತು. ಗಣ್ಯರು, ಆಯೋಜಕರು, ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳು ಭಾಗವಹಿಸಿದ್ದವು.
ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಡಾ. ಭೀಮಣ್ಣಾ ಮೇಟಿ, ಎ.ಸಿ. ಕಾಡ್ಲಾರ್, ಹನುಮೇಗೌಡ ಬಿರನಕಲ್, ಮರೆಪ್ಪ ಚಟ್ಟರಕಿ, ಎಸ್.ಎಸ್. ನಾಯಕ, ಗುಂಡಪ್ಪ ಕಲಬುರಗಿ, ರವೀಂದ್ರ ಶಾಬಾದಿ, ಡಾ. ಶಿವರಂಜನ್ ಸತ್ಯಂಪೇಟೆ, ಡಾ. ಅಶೋಕ ದೊಡ್ಡಮನಿ, ಚನ್ನಪ್ಪಗೌಡ ಮೊಸಂಟಿ, ಸುಧಾ ಹುಚ್ಚಣ್ಣವರ, ವಿಶ್ವನಾಥ ಸಿರವಾಳ, ಸೋಮಶೇಖರ ಮಣೂರ್, ಡಾ. ಭೀಮರಾಯ ಲಿಂಗೇರಿ, ಶರಣು ನಾಟೆಕರ್, ಹುಸನಪ್ಪ, ಜೇವರ್ಗಿ ತಾಲೂಕು ಪರಿಷತ್ತಿನ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.
