ಉತ್ತಮ ಸಂಕಲ್ಪದಿಂದ ಆರೋಗ್ಯ, ನೆಮ್ಮದಿ ಸಾಧ್ಯ: ಜಿಲ್ಲಾಧಿಕಾರಿ ಅನುರಾಧ ಜಿ.

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ವಿಜಯನಗರ

ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಿದ್ದು, ಇದನ್ನರಿತು ವಿದ್ಯಾರ್ಥಿ ಯುವಜನರು ಸೇರಿದಂತೆ ಪ್ರತಿಯೊಬ್ಬರು ವ್ಯಸನಮುಕ್ತರಾಗಿ ಬದುಕಬೇಕೆಂದು ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ. ಅವರು ಹೇಳಿದರು.

ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ವಿಜಯನಗರ ಜಿಲ್ಲೆ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಉಪನ್ಯಾಸಕರಾಗಿ ಹಿಟ್ನಾಳ್‌ನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಬಸವರಾಜ ಟಿ.ಹೆಚ್. ಮಾತನಾಡಿ, ದೇಶದ ಶ್ರೇಯೋಭಿವೃದ್ಧಿ ಎಂದರೆ ಅದು ಪ್ರಜೆಗಳ ಆರೋಗ್ಯ ಆಗಿರುತ್ತದೆ. ಅನ್ನ, ಆಶ್ರಯ, ಶಿಕ್ಷಣ ಮತ್ತು ಆರೋಗ್ಯ ಕೊಡುವುದು ಸಹ ಸರ್ಕಾರದ ಆದ್ಯತೆಯ ಕಾರ್ಯವಾಗಿರುವುದರ ಹಿಂದಿನ ಸಮಾಜಹಿತದ ಉದ್ದೇಶವನ್ನು ಅರಿಯಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಿದ್ಯಾವಂತರೇ ಆರೋಗ್ಯದ ಕಡೆ ಗಮನ ಹರಿಸದೇ ಸಮಸ್ಯೆಗಳನ್ನು ಸೃಷ್ಟಿಸುವುದು ನೋವಿನ ಸಂಗತಿಯಾಗಿದೆ. ನುಡಿದಂತೆ ನಡೆದ ಡಾ.ಮಹಾಂತ ಶಿವಯೋಗಿಗಳನ್ನು ನೆನೆಯುವದರ ಜೊತೆಗೆ ಅರಿವಿನ ಜ್ಞಾನವನ್ನು ಜಗತ್ತಿಗೆ ಬಿತ್ತಿದ ಬಸವಣ್ಣನವರು, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮೌಲ್ಯಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ನಡೆಯೋಣ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಆಂದೋಲನದ ಹರಿಕಾರರಾಗಿದ್ದಾರೆ. ಶ್ರೀಗಳ ಜನ್ಮದಿನದ ನಿಮಿತ್ತ ರಾಜ್ಯ ಸರ್ಕಾರವು ಪ್ರತಿ ವರ್ಷ ಆಗಸ್ಟ್ 1ನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿದೆ. ವಿದ್ಯಾರ್ಥಿ ಯುವಜನರು ದುಶ್ಚಟಗಳಿಂದ ದೂರವಾಗಿ ಆರೋಗ್ಯಕರ ಜೀವನ ನಡೆಸುವ ಸಂಕಲ್ಪ ಮಾಡಿ, ಶ್ರೀಗಳು ಹೇಳಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.

ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಮಂಜುನಾಥ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಪೂಜ್ಯ ಡಾ.ಮಹಾಂತ ಶಿವಯೋಗಿಗಳ ಸ್ವಾಮೀಜಿಗಳ ಜನ್ಮದಿನದ ಈ ಶುಭದಿನದಂದು ನಾನು ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳನ್ನು ತ್ಯಜಿಸುತ್ತೇನೆ. ಹಾಗೂ ಇನ್ನೆಂದಿಗೂ ಮುಟ್ಟುವುದಿಲ್ಲ ಹಾಗೂ ನನ್ನ ನೆರೆ ಹೊರೆಯವರಿಗೆ ಬಂಧು-ಬಾಂಧವರಿಗೆ, ಸ್ನೇಹಿತರಿಗೆ ಈ ಬಗ್ಗೆ ತಿಳಿವಳಿಕೆ ನೀಡುತ್ತೇನೆ’ ಎಂದು ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸಮಾರಂಭದಲ್ಲಿ ಸಹಾಯಕ ಆಯುಕ್ತರಾದ ವಿವೇಕಾನಂದ ಪಿ,ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಂ ಪಾಶಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರಪ್ಪ ಕೆ.ಬಿ,ವಿಕಲಚೇತನರ ಕಲ್ಯಾಣ ಇಲಾಖೆಯ ಅವಿನಾಶ ಗೋಟಖಿಂಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಮುತ್ತು ದೊಡ್ಡಮನಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಶಿಕ್ಷಕರಾದ ಕೆ.ಎಂ.ತಾಯಪ್ಪ, ಡಿ.ಎಸ್.ರತೀಶ್, ಅಬ್ದುಲ್ ಕಲಾಂ, ಶಶಿರೇಖಾ, ಲತಾ ಕುಮಾರಿ ಹಾಗೂ ಟಿ.ಬಿ.ಡ್ಯಾಮ್ ಸರ್ಕಾರಿ ಪ್ರೌಢಶಾಲೆ, ವಾಲ್ಮೀಕಿ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಮತ್ತು ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿ ಪದ್ಮಜಾ ಹಾಗೂ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.

Share This Article
Leave a comment

Leave a Reply

Your email address will not be published. Required fields are marked *