ಅಭಿಯಾನದಿಂದ ಬಿಡುವು ಮಾಡಿಕೊಂಡು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಗಾಯತ ಮಠಾಧೀಶರು
ಬೆಂಗಳೂರು
ಜಾತಿಗಣತಿಯಲ್ಲಿ ಧರ್ಮದ ‘ಇತರೆ’ ಕಾಲಂನಲ್ಲಿ ‘ಲಿಂಗಾಯತ’ ಹಾಗೂ ‘ಜಾತಿ’ ಕಾಲಂನಲ್ಲಿ ಪಂಗಡಗಳ ಹೆಸರನ್ನು ಬರೆಸಲು ಲಿಂಗಾಯತ ಮಠಾಧೀಶರ ಒಕ್ಕೂಟ ಒಕ್ಕೊರಲ ಕರೆ ನೀಡಿದೆ.
ಎರಡು ವಾರಗಳಿಂದ ರಾಜ್ಯದಲ್ಲಿ ಸಂಚರಿಸುತ್ತಿರುವ ಮಠಾಧಿಪತಿಗಳು ಬಸವ ಸಂಸ್ಕೃತಿ ಅಭಿಯಾನದಿಂದ ಬಿಡುವು ಮಾಡಿಕೊಂಡು ಬೆಂಗಳೂರಿಗೆ ಬಂದು ನಗರದ ಪ್ರೆಸ್ ಕ್ಲಬ್ಬಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದರು.
“ಹಿಂದೂ ಅಂತ ಬರೆಸಿ ಎಂದು ಕೆಲವರು ಹೇಳುತ್ತಿದ್ದಾರೆ. ಆ ರೀತಿ ಬರೆಸಿದರೆ ಹಾನಿಯಾಗುತ್ತದೆ, ನಮ್ಮ ಸಮುದಾಯದ ಸಂಖ್ಯೆ ಗೊತ್ತಾಗುವುದಿಲ್ಲ,” ಎಂದು ಗದಗಿನ ತೋಂಟದಾರ್ಯ ಸಿದ್ದರಾಮ ಶ್ರೀಗಳು ಹೇಳಿದರು.
“ನಲವತ್ತು-ಐವತ್ತು ವರ್ಷದ ಹಿಂದಿನ ಜನಗಣತಿ ತೆಗೆದು ನೋಡಿದರೆ 70-80 ಲಕ್ಷ ಇರೋರು ಈಗ 60 ಲಕ್ಷಕ್ಕೆ ಇಳಿದಿದ್ದೀವಿ. ಇದನ್ನ ನೋಡಿದರೆ ಏನೋ ಗಡಿಬಿಡಿ ಆಗಿದೆ ಎಂದು ಅರ್ಥವಾಗುತ್ತದೆ,” ಎಂದು ಆತಂಕ ವ್ಯಕ್ತಪಡಿಸಿದರು.
“ವೀರಶೈವ ಲಿಂಗಾಯತ ಅಂತಾನೂ ಬರೆಸಬಾರದು. ಯಾಕಂದ್ರೆ ವೀರಶೈವ ಲಿಂಗಾಯತ ಅನ್ನೋ ಯಾವುದೇ ಧರ್ಮ ಇಲ್ಲ. ವೀರಶೈವರು ಲಿಂಗಾಯತದ ಒಂದು ಪಂಗಡ. ಅವರು ಧರ್ಮ ‘ಲಿಂಗಾಯತ’ ಹಾಗೂ ಜಾತಿ ಅಂಕಣದಲ್ಲಿ ತಮ್ಮ ಒಳ ಪಂಗಡದ ಕೋಡ್ ಬರೆಸಲಿ.
1871ವರಗೆ ಎಲ್ಲಾ ದಾಖಲೆಗಳಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ರೀತಿಯಲ್ಲೇ ದಾಖಲಾಗಿತ್ತು. 1891ರ ಜನಗಣತಿಯಲ್ಲಿ ‘ಹಿಂದೂ’ ಅಂತ ಸೇರಿಸಿದರೂ ಅಲ್ಲಿ ‘ಲಿಂಗಾಯತ’ ಪದ ಇದೆ, ‘ವೀರಶೈವ’ ಪದ ಇಲ್ಲ.
ಸರಕಾರದ ದಾಖಲೆಗಳಲ್ಲಿಯೂ ಲಿಂಗಾಯತ ಅಂತ ಇದೆ. ಒಳ ಪಂಗಡಗಳ ಹೆಸರಲ್ಲೂ ಲಿಂಗಾಯತ ಇದೆ.
ಮೀಸಲಾತಿಗೂ ಜನಗಣತಿಗೂ ಸಂಬಂಧವಿಲ್ಲ, ಯಾವುದೇ ಸೌಲಭ್ಯ ತಪ್ಪುವುದಿಲ್ಲ, ಧೈರ್ಯದಿಂದ ಲಿಂಗಾಯತ ಅಂತ ಬರೆಸಿ,” ಎಂದು ಶ್ರೀಗಳು ಕರೆ ನೀಡಿದರು.
ನಂತರ ಮಾತನಾಡಿದ ಇಳಕಲ್ಲ ಗುರುಮಹಾಂತಪ್ಪ ಶ್ರೀಗಳು, ನಾವು ಹಿಂದೂ ಧರ್ಮವನ್ನು ಗೌರವಿಸ್ತೀವಿ, ಆದರೆ ಲಿಂಗಾಯತರು ಹಿಂದೂಗಳಲ್ಲ ಎಂದು ಹೇಳಿದರು.
“ಹಿಂದೂ ಧರ್ಮದಲ್ಲಿ ನಾಲ್ಕು ವರ್ಣಗಳಿವೆ. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ಹಿಂದೂ ಧರ್ಮಕ್ಕೆ ಸೇರಿದರೆ ನಾವು ಶೂದ್ರರಾಗಿ ಬದುಕಬೇಕಾಗುತ್ತದೆ.
12ನೇ ಶತಮಾನದಲ್ಲಿ ಶಿಕ್ಷಣ, ಆಸ್ತಿ ಹಕ್ಕಿಲ್ಲದೆ ಶೂದ್ರರು ಪಶುಗಳಂತೆ ಬದುಕುತ್ತಿದ್ದರು. ಶೂದ್ರರನ್ನು ರಕ್ಷಿಸಲು ಬಸವಣ್ಣವರು ಎಲ್ಲರನ್ನೂ ಕರೆದುಕೊಂಡು ಒಂದು ಸ್ವತಂತ್ರ ಧರ್ಮ ಸ್ಥಾಪಿಸಿದ್ರು. ಈಗ ನಾವು ಹಿಂದೂ ಅಂತ ಬರೆಸಿದ್ರೆ ನಾವು ಶೂದ್ರರಾಗಿ ಹೋಗ್ತೀವಿ.
ಸಂವಿಧಾನದಿಂದ ಮಾನ್ಯತೆ ದೊರೆಯದ ಹಲವಾರು ಧರ್ಮಗಳು ದೇಶದಲ್ಲಿವೆ. ಅವುಗಳ ಅಸ್ತಿತ್ವ ಗುರುತಿಸಲು ‘ಇತರೆ’ ಕಾಲಂ ಸೃಷ್ಟಿ ಮಾಡಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮವಾದರೂ ಸಂವಿಧಾನದಿಂದ ಮಾನ್ಯತೆ ದೊರೆತಿಲ್ಲ. ಅದಕ್ಕೆ ಜಾತಿ ಗಣತಿಯ ಇತರೆ ಕಾಲಂನಲ್ಲಿ ಲಿಂಗಾಯತರು ಧರ್ಮ ಗುರುತಿಸಬೇಕು ಎಂದು ಹೇಳಿದರು.
ಲಿಂಗಾಯತ ಹೋರಾಟ ಮುಂದುವರೆಯುತ್ತಿದೆ, ಆದರೆ ಯಾವಾಗ ಮಾನ್ಯತೆ ಸಿಗುವುದೋ ಗೊತ್ತಿಲ್ಲ. ಅಲ್ಲಿಯವರೆಗೆ ‘ಲಿಂಗಾಯತ’ ಪದ ಉಳಿಸಲು ‘ಲಿಂಗಾಯತ’ ಧರ್ಮ ಬರೆಸಬೇಕು.
ಲಿಂಗಾಯತರು ಕೃಷಿ ಭೂಮಿ, ವ್ಯಾಪಾರ ಕಳೆದುಕೊಂಡಿದ್ದಾರೆ ಕಳೆದುಕೊಡಿದ್ದಾರೆ. ಈಗ ಉಳಿದಿರುವುದು ಶಿಕ್ಷಣವೊಂದೇ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಅದರ ಜೊತೆ ಬರುವ ಸವಲತ್ತುಗಳಿಂದ ಮುಂದಿನ ಪೀಳಿಗೆ ಸುಖವಾಗಿ ಬದುಕಬಹುದು,” ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.
ಬೇಲಿ ಮಠದ ಶ್ರೀಗಳು, “ಹಿಂದೂ ಒಂದು ಜೀವನ ಕ್ರಮ. ಸಿಂಧೂ ನದಿಯ ಕೆಳಗೆ ವಾಸಿಸುತ್ತಿರುವವರಿಗೆ ಹಿಂದೂ ಎಂದು ಕರೆಯುತ್ತಿದ್ದರು. ಅನುಭವ ಮಂಟಪದಲ್ಲಿ ಎಲ್ಲ ಶರಣರು ಸೇರಿ ಬಸವಣ್ಣನವರನ್ನು ಧರ್ಮ ಗುರು ಎಂದು ಒಪ್ಪಿಕೊಂಡು ಸ್ಥಾಪಿಸಿದ ಧರ್ಮ ಲಿಂಗಾಯತ ಧರ್ಮ. ವೀರಶೈವ ಲಿಂಗಾಯತರ ಒಂದು ಒಳ ಪಂಗಡ,” ಎಂದು ಹೇಳಿದರು.

ಲಿಂಗಾಯತ ಮಠಾಧಿಪತಿಗಳ ಅಧ್ಯಕ್ಷರಾಗಿ ಇಲ್ಲಿರುವ ಶ್ರೀಗಳ ಮಾತನ್ನು ಬೆಂಬಲಿಸುತ್ತಿರುವುದಾಗಿ ಭಾಲ್ಕಿ ಶ್ರೀಗಳು ಹೇಳಿದರು. ನಾವು ಎಷ್ಟೇ ಪ್ರಚಾರ ಮಾಡಿದರೂ, ಮಾಧ್ಯಮಗಳ ಮೂಲಕ ಬಂದರೇ ವ್ಯಾಪಕ ಪ್ರಚಾರವಾಗತ್ತೆ ಎಂದು ಗಂಗಾ ಮಾತಾಜಿ ಹೇಳಿದರು.
ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಗದಗ ತೋಂಟದ ಸಿದ್ದರಾಮ ಸ್ವಾಮೀಜಿ, ಕೂಡಲಸಂಗಮದ ಡಾ. ಗಂಗಾ ಮಾತಾಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಇಳಕಲ್ಲ ಗುರುಮಹಾಂತಪ್ಪ ಶ್ರೀಗಳು, ಬೇಲಿಮಠದ ಶಿವರುದ್ರ ಸ್ವಾಮೀಜಿ, ನೆಲಮಂಗಲ ಪವಾಡಶ್ರೀ ದೇವರಮಠ ಶ್ರೀಗಳು, ಬೆಂಗಳೂರು ಗುರುವಣ್ಣಮಠ ಶ್ರೀಗಳು, ಬೆಳಗಾವಿ ಅಲ್ಲಮ ಪ್ರಭು ಸ್ವಾಮೀಜಿ, ಬೆಂಗಳೂರು ಬಸವಯೋಗಿ ಸ್ವಾಮೀಜಿ, ಮೋಟಗಿ ಪ್ರಭುಚನ್ನಬಸವ ಸ್ವಾಮೀಜಿ, ಭಾಲ್ಕಿ ಗುರುಬಸವ ಪಟ್ಟದ್ದೇವರು, ವಿರತೀಶಾನಂದ ಸ್ವಾಮೀಜಿ, ಶಿರೂರು ಬಸವಲಿಂಗ ಶ್ರೀ ಮತ್ತಿತರ ಪೂಜ್ಯರು, ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.