ವೈದಿಕರ ತೆಕ್ಕೆಯಲ್ಲಿರುವ ಲಿಂಗಾಯತರನ್ನು ಎಚ್ಚರಿಸುವ ‘ವಚನ ನಿಜ ದರ್ಶನ’

ಬೀದರ್

ಇತಿಹಾಸದ ಮಹಾನ್ ದೀಡ್ ಪಂಡಿತರಿಂದ ‘ವಚನ ದರ್ಶನ’ ಎನ್ನುವ ಪುಸ್ತಕ ಹೊರಬರದಿದ್ದರೆ ನನಗೆ ಮೀನಾಕ್ಷಿ ಬಾಳಿ ಅವರು ಬರೆದಿರುವ ‘ವಚನ ನಿಜ ದರ್ಶನ’ ಎನ್ನುವುದರ ದರ್ಶನವಾಗುತ್ತಿರಲಿಲ್ಲ. ಈ ಪುಸ್ತಕ ವಚನ ದರ್ಶನಕ್ಕೆ ಪ್ರತಿರೋಧ ಒಡ್ಡಿ ಆ ಸುಳ್ಳು ಗೊಡ್ಡುಪುರಾಣ ನಿಲ್ಲಿಸುವ ಮೂಲಕ ಶರಣರ ಬಗ್ಗೆ ತಪ್ಪಾಗಿ ತಿಳಿದುಕೊಂಡಿರುವ ಎಲ್ಲರನ್ನು ಎಚ್ಚರಿಸುತ್ತದೆ. ಹಾಗಾಗಿ ಆ ಮಹಾನ್ ದೀಡ್ ಪಂಡಿತರಿಗೆ ನನ್ನ ಧನ್ಯವಾದಗಳು.

ವೈದಿಕರಿಗೆ ಸುಳ್ಳು ಹೇಳುವುದು, ಇತಿಹಾಸ ತಿರುಚುವುದು, ದೊಂಬರಾಟ ಮಾಡುವುದು ಬಿಟ್ಟರೆ ಇನ್ನೇನು ಬರಲು ಸಾಧ್ಯ? ಸೆಗಣಿ ತುಂಬಿದ ತಲೆಯಿಂದ ಹೊಸದೊಂದು ಸೃಷ್ಟಿಸಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಅವರು ಬುದ್ಧನನ್ನು ಪುರಾಣದ ಮಹಾಪುರುಷನೊಬ್ಬನ ಅವತಾರ ಪುರುಷ ಎಂದು ಹೇಳುವ ಮೂಲಕ ಬುದ್ಧನನ್ನು ತನ್ನ ಬುಟ್ಟಿಯಲ್ಲಿ ಹಾಕಿಕೊಳ್ಳಲು ಪ್ರಯತ್ನಿಸಿದರು. ಆದರೆ ಆವಾಗಲೇ ಬುದ್ಧ ಜಗತ್ತಿನಾದ್ಯಂತ ಪಸರಿಸಿ ಬಿಟ್ಟಿದ್ದ. ಹಾಗಾಗಿ ಅವರ ಅವತಾರ ಪುರುಷತ್ವ ಠುಸ್ ಆಯ್ತು. ತದನಂತರ ಅವರು ಸದ್ದಿಲ್ಲದೇ ವಿವೇಕಾನಂದ, ಶಿವಾಜಿ ಹಾಗೂ ಮತ್ತಿತರರನ್ನು ತನ್ನ ಬುಟ್ಟಿಯಲ್ಲಿ ಹಾಕಿಕೊಂಡರು. ಅದಕ್ಕೆ ಪ್ರತಿರೋಧ ಒಡ್ಡದೇ ಅದೇ ಸಮುದಾಯದವರು ಕೂಡ ಅದನ್ನೇ ಜೈ ಎಂದರು ಹಾಗಾಗಿ ಅವರು ಸಲೀಸಾಗಿ ಗೆದ್ದು ಬಿಟ್ಟರು.

ಮನುವಾದಿಗಳ ಕುತಂತ್ರ

ಅದೇ ರೀತಿ ಶರಣರು, ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರನ್ನು ತನ್ನ ಬುಟ್ಟಿಯಲ್ಲಿ ಹಾಕಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ. ಆ ಮಹಾನ್ ವಿಚಾರವಾದಿಗಳ ವಿಚಾರಗಳು ಈ ನೆಲದಲ್ಲಿ ಅದೆಷ್ಟು ಆಳವಾಗಿ ಬೇರು ಬಿಟ್ಟಿದ್ದಾವೆ ಎಂದರೆ ಆ ಬೇರುಗಳು ಕೀಳಲು ವೈದಿಕರಿಗೆ ಅಷ್ಟೊಂದು ಸುಲಭವಾಗುತ್ತಿಲ್ಲ. ಆದರೂ ಅವರು ಪ್ರಯತ್ನ ಮಾತ್ರ ಬಿಡಲಿಲ್ಲ. ಅವರ ಪ್ರಯತ್ನ ಇನ್ನು ಜಾರಿಯಲ್ಲಿದೆ ಎಂದು ತಿಳಿಸುವುದಕ್ಕೆ ‘ವಚನ ದರ್ಶನ’ ಎನ್ನುವ ಇತ್ತೀಚಿನ ಪುಸ್ತಕ ಹೇಳುತ್ತಿದೆ. ‘ವಚನ ನಿಜ ದರ್ಶನ’ ದಂತಹ ಪುಸ್ತಕ ಬಂದು ಅವರ ಕುತಂತ್ರಕ್ಕೆ ತಡೆಯೊಡ್ಡದಿದ್ದರೆ ಒಂದಿಲ್ಲ ಒಂದು ದಿನ ಶರಣರನ್ನು ಅವರು ಸಂಪೂರ್ಣವಾಗಿ ವಶಕ್ಕೆ ಪಡೆದು, ಶರಣರನ್ನು ವೈದಿಕರನ್ನಾಗಿ ಮಾಡಲು ಅವರಿಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ.

ವೈದಿಕರು ವೈದಿಕತೆಯ ವಿರುದ್ಧವಾಗಿ ಸಮಾನತೆಯ ಕ್ರಾಂತಿ ಸಾರಿದ ಮಹಾನ್ ವಿಚಾರವಾದಿಗಳನ್ನು ನಾಲ್ಕು ರೀತಿಯಲ್ಲಿ ಸರ್ವನಾಶ ಮಾಡಲು ಹವಣಿಸುತ್ತಾರೆ…

1) ಮಹಾನ್ ವ್ಯಕ್ತಿಗಳು ವೈದಿಕತೆಯಿಂದಲೇ ಪ್ರಭಾವಿತಾರಾಗಿದ್ದಾರೆ. ಹಾಗಾಗಿ ನಮ್ಮ ವಿಚಾರದಲ್ಲೂ ಅವರ ವಿಚಾರದಲ್ಲೂ ಸಾಮ್ಯತೆವಿದೆ. ಅವರು ವೈದಿಕತೆಯ ವಿರೋಧಿಗಳಲ್ಲ ಹಾಗಾಗಿ ಅವರು ನಮ್ಮವರು ಎಂದು ಬೊಗಳೆ ಬಿಡುತ್ತಾ, ಬೆಣ್ಣೆಯ ಮಾತಿನಿಂದ ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಾರೆ.

2) ಅವರ ಬೆಣ್ಣೆಯ ಮಾತುಗಳಿಗೆ ಮಣಿಯದ ಮಹಾನ್ ಪುರುಷ/ಮಹಿಳೆಯರ ವಿರುದ್ಧ ಸುಳ್ಳುಗಳನ್ನು ಹಬ್ಬಿಸಿ ಜನರಲ್ಲಿ ಅವರ ವಿರುದ್ಧವಾದ ಭಾವನೆಗಳನ್ನು ಹುಟ್ಟು ಹಾಕಿ ಅವರ ವಿಚಾರಗಳು ಸಂಪೂರ್ಣವಾಗಿ ತಮ್ಮ ವಿರುದ್ಧವಾಗಿದ್ದಾವೆ ಎಂದು ಬಿಂಬಿಸಿ ಅವರನ್ನು ಸರ್ವನಾಶದತ್ತ ಕೊಂಡೋಯ್ಯುತ್ತಾರೆ.

3) ಅವರ ಸುಳ್ಳುಗಳಿಗೂ ಕೂಡ ಮಹಾನ್ ವ್ಯಕ್ತಿಗಳ ವಿಚಾರಗಳು ಅಲುಗಾಡದಿದ್ದರೆ, ಅವರ ವಿಚಾರಗಳು ತಿರುಚುವುದಕ್ಕೆ ಪ್ರಾರಂಭಿಸುತ್ತಾರೆ. ಮಹಾನ್ ವ್ಯಕ್ತಿಗಳ ವಿಚಾರಗಳು ತಿರುಚಿ, ತಿರುಚಿದ ಇವರ ಗೊಡ್ಡು ಪುರಾಣಗಳೇ ಸತ್ಯವೆಂದು ಬೊಬ್ಬೆ ಹಾಕುತ್ತಾ, ಜನರನ್ನು ನಂಬಿಸಿ ನಿಧಾನಕ್ಕೆ ಅವರ ವಿಚಾರಗಳು ವೈದಿಕತೆಯತ್ತ ತಿರುಗಿಸುತ್ತಾರೆ. (ವಚನ ಸಾಹಿತ್ಯದಲ್ಲಿ ಈ ಪ್ರಯತ್ನವೇ ಹೆಚ್ಚಾಗಿ ನಡೆದದ್ದು..)

4) ಕೊನೆಯದಾಗಿ ಅದ್ಯಾವುದಕ್ಕೂ ಮಣಿಯದಿದ್ದರೆ ಚಾರ್ವಾಕ, ಲೋಕಾಯತ ಮತ್ತು ಬೌದ್ಧರ ಹತ್ಯಾಕಾಂಡದಂತೆ ಹತ್ಯಾಕಾಂಡ ಮಾಡಲು ಇವರು ಹೇಸುವುದಿಲ್ಲ. ಹಾಗೆಯೇ ಶರಣರ ಹತ್ಯಾಕಾಂಡ ಕೂಡ ಇದರಲ್ಲಿ ಸೇರಿಸಬಹುದು.

‘ವಚನ ನಿಜ ದರ್ಶನ’ ಪುಸ್ತಕದ ವಿಷಯಕ್ಕೆ ಬರುವುದಾದರೆ ಶರಣರ ನಿಜ ತತ್ವಗಳು ಸಾರುವ ಜೊತೆಗೆ ಇದರಲ್ಲಿನ ಒಂದೊಂದು ಪದಗಳು ಕೂಡ ಮನುವಾದಿಗಳ ಎದೆಯನ್ನು ನಾಟುತ್ತವೆ. ಇದರಲ್ಲಿರುವ ಒಂದೊಂದು ವಚನಗಳು ಮತ್ತು ಅದರ ವಿವರ ಮನುವಾದಿಗಳ, ವಚನ ದರ್ಶನ ಬರೆದ ದೀಡ್ ಪಂಡಿತರ ಎದೆಯಲ್ಲಿ ನಾಟಿ ಘಾಸಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ರಾಹು ಬರೆದ ಪ್ರವೇಶಿಕೆ ಮತ್ತು ಕೆ. ನೀಲಾ ಬರೆದ ಮುನ್ನುಡಿಯೇ ಅತ್ಯದ್ಭುತವಾಗಿದೆ. ರಾಹು ಅವರು ಹೇಳಿದ ಹಾಗೆ ಈ ಕಿರು ಪುಸ್ತಕ 1762 ರಲ್ಲಿ ಪ್ರಕಟವಾದ ರೂಸೋನ ‘ಸಾಮಾಜಿಕ ಒಪ್ಪಂದ’, 1848ರಲ್ಲಿ ಪ್ರಕಟವಾದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಹಾಗೂ ಬಾಬಾಸಾಹೇಬರ ‘ಜಾತಿ ವಿನಾಶ’ ಎಂಬ ಪುಸ್ತಕಗಳ ಸಾಲಿಗೆ ಈ ಪುಸ್ತಕ ಸೇರುವಂತಹದ್ದು. ಮನುವಾದಿಗಳ 20 ಲೇಖನಗಳಿಗಷ್ಟೇ ಅಲ್ಲ ಇಂತಹ ಸಾವಿರಾರು ಲೇಖನಗಳ ಸಂಗ್ರಹ ಬಂದರೂ ಆ ಎಲ್ಲ ಲೇಖನಗಳಿಗೆ ಮಣಿಸುವ ಶಕ್ತಿ ಈ ಚಿಕ್ಕ ಪುಸ್ತಕಕ್ಕೆ ಇದೆ.

ಇತಿಹಾಸ ತಿರುಚುವ ಹಳೇ ಚಾಳಿ

ವಚನ ದರ್ಶನದ ದೀಡ್ ಪಂಡಿತರು ಇದನ್ನು ಓದಿ ಅದೆಂಗೆ ನಿದ್ದೆ ಮಾಡುತ್ತಾರೆ ಎಂದು ನನಗೆ ಅನಿಸಿತು. ಅವರ ತಲೆಯಲ್ಲಿನ ಮೆಮೊರಿ ಸಂಪೂರ್ಣವಾಗಿ ವೈದಿಕತೆಯ ನೀಚತನದಿಂದ ತುಂಬಿದೆ. ಆ ನೀಚತನವನ್ನು ಸಂಪೂರ್ಣವಾಗಿ ನಾಶ (ಡಿಲೀಟ್) ಮಾಡಿದರೆ ಮಾತ್ರ ಅವರ ತಲೆಯ ಮೆಮೊರಿಯಲ್ಲಿ ಹೊಸದನ್ನು, ಒಳ್ಳೇದನ್ನು ತುಂಬುವುದಕ್ಕೆ ಸಾಧ್ಯ. ಇಲ್ಲವಾದರೆ ಅವರ ಇತಿಹಾಸ ತಿರುಚುವ ಹಳೇ ಚಾಳಿ ಬಿಡಲು ಸಾಧ್ಯವಿಲ್ಲ. ಅವರು ತಮ್ಮ ಮೆಮೊರಿ ಡಿಲೀಟ್ ಮಾಡಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಏಕೆಂದರೆ ಇವಾಗ ಅವರ ಮೆಮೊರಿ ಸಂಪೂರ್ಣವಾಗಿ ಹದಗೆಟ್ಟಿದೆ. ಹದಗೆಟ್ಟು, ಕೊಳೆತು ಜಿಡ್ಡುಗಟ್ಟಿದ ಮೊಬೈಲ್ ಮೆಮೊರಿಯಲ್ಲಿನ ವೈರಸ್ ಅಂಟಿದ ಡಾಟಾ ಅದೆಂಗೆ ಡಿಲೀಟ್ ಮಾಡಿ ಹೊಸದನ್ನು ಸೇರಿಸಲು ಸಾಧ್ಯವಿಲ್ಲವೋ, ಹಾಗೆಯೇ ಈ ದೀಡ್ ಪಂಡಿತರ ಹದಗೆಟ್ಟ, ಕೊಳೆತು ಜಿಡ್ಡುಗಟ್ಟಿದ ಮೆದುಳಲ್ಲಿನ ನೀಚತನ ತುಂಬಿದ್ದ ವಿಚಾರಗಳು ಹೋಗಲಾಡಿಸಿ ಹೊಸದನ್ನು ಸೇರಿಸಲು ಸಾಧ್ಯವಿಲ್ಲ. ಹಾಗಾಗಿ ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ’ ಎನ್ನುವ ಶರಣರ ವಾಣಿ ಅವರ ತಲೆಯಲ್ಲಿ ಸೇರುವುದಕ್ಕೆ ಎಂದೆಂದಿಗೂ ಸಾಧ್ಯವಿಲ್ಲ.

ವೇದ ಪುರಾಣಗಳನ್ನು ಶರಣರು ಸಮರ್ಥಿಸುತಿದ್ದರು ಎಂದು ಹೇಳುವ ಈ ಪಂಡಿತರು ಈ ಪುಸ್ತಕ ಓದಿದರೆ ಅವರ ಎದೆ ಝಲ್ ಎನ್ನದೇ ಇರದು. ಈ ದೀಡ್ ಪಂಡಿತರು ಪೂರ್ವನಿಯೋಜಿತವಾಗಿ, ನಿಜ ಇತಿಹಾಸ ಬದಲಿಸಲೆಂದೇ ಇಂತಹ ನೀಚ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರ ಎದೆ ಝಲ್ ಎನ್ನುವುದಕ್ಕೆ ಸಾಧ್ಯವಿಲ್ಲ. ಇದನ್ನು ಓದಿ ಮತ್ತೊಂದು ಕುತಂತ್ರ ರೂಪಿಸುವುದಕ್ಕೆ ತಯಾರಾಗುತ್ತಾರೆ ಅಷ್ಟೇ!

ಆದಿ ಪುರಾಣ ಅಸುರರಿಗೆ ಮಾರಿ
ವೇದ ಪುರಾಣ ಹೋತಿಂಗೆ ಮಾರಿ
ರಾಮ ಪುರಾಣ ರಕ್ಕಸರಿಗೆ ಮಾರಿ
ಭಾರತ ಪುರಾಣ ಗೋತ್ರಕ್ಕೆ ಮಾರಿ
ಎಲ್ಲ ಪುರಾಣ ಕರ್ಮಕ್ಕೆ ಮೊದಲು
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ

ಮನುವ್ಯಾದಿಗಳ ವೇದ, ಪುರಾಣಗಳನ್ನು ಸುಟ್ಟು ಭಸ್ಮ ಮಾಡಿದ ಶರಣರ ಇಂತಹ ವಚನಗಳು ಹೇಳುವುದಕ್ಕೆ ಈ ದೀಡ್ ಪಂಡಿತರಿಗೆ ಮಾರಿ ಇಲ್ಲ ಅಲ್ವಾ?

ಒಂದು ಸತ್ಯ ಮಾತನ್ನು ಹೇಳುವುದಕ್ಕೆ ಬಯಸುತ್ತೇನೆ. ಅದೇನೆಂದರೆ, ಆ ಮನುವ್ಯಾದಿಗಳಂತೂ ಬದಲಾಗುವುದಕ್ಕೆ ಸಾಧ್ಯವಿಲ್ಲ. ಆದರೆ ನನ್ನ ಲಿಂಗಾಯತ ಮತ್ತು ಸಮಾನತೆ ಬಯಸುವ ಬಂಧುಗಳು ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಇತ್ತೀಚಿಗೆ ಕರ್ನಾಟಕದಲ್ಲಿ ಮನುವಾದವನ್ನು ಅತೀ ಹೆಚ್ಚಾಗಿ ಪೊಷಿಸಿಕೊಂಡು ಬರುತ್ತಿರುವುದರಲ್ಲಿ ಲಿಂಗಾಯತರ ಪಾತ್ರ ತುಂಬಾ ದೊಡ್ಡದಿದೆ. ಅವರು ಸಂಪೂರ್ಣವಾಗಿ ವೈದಿಕತೆಯತ್ತ ಮುಖ ಮಾಡಿದ್ದಾರೆ ಎಂದೆನಿಸುತ್ತಿದೆ.

ವೈದಿಕರ ತೆಕ್ಕೆಯಲ್ಲಿ ಲಿಂಗಾಯತರು

ಶಿವಾಜಿಯನ್ನು ಧರ್ಮ ರಕ್ಷಕರೆಂದ ಕೂಡಲೇ ಮರಾಠಾ ಸಮುದಾಯ ಸಂಪೂರ್ಣವಾಗಿ ವೈದಿಕರನ್ನೇ ಬೆಂಬಲಿಸಿದ ಹಾಗೆ ಲಿಂಗಾಯತರು ಕೂಡ ಬಸವಣ್ಣನ ನಿಜ ತತ್ವಗಳು ಅರಿಯದೇ ವೈದಿಕರ ತೆಕ್ಕೆಯಲ್ಲಿ ಸೇರುತಿದ್ದಾರೇನೋ ಎನ್ನುವ ಆತಂಕ ಕಾಡುತ್ತಿದೆ. ಇಂದಿನ ಲಿಂಗಾಯತ ಮಠಾಧೀಶರೆ ಬಸವಣ್ಣನ “ಚೆನ್ನಯ್ಯನ ಮನೆಯ ದಾಸಿಯ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರೆ ಅವರಿಬ್ಬರಿಗೆ ಹುಟ್ಟಿದ ಮಗ ನಾನಯ್ಯ” ಎನ್ನುವ ವಚನ ನುಡಿಯುವುದಕ್ಕೆ ಹಿಂಜರಿಯುತ್ತಾರೆ.

‘ವಚನ ನಿಜ ದರ್ಶನ’ ದಲ್ಲಿನ ಬಹುತೇಕ ವಚನಗಳು ಇಂದಿನ ಮಾಠಾಧೀಶರೆ ಹೇಳುವುದಕ್ಕೆ ಹಿಂಜರಿಯುತ್ತಾರೆ. ಈ ಹಿಂಜರಿಕೆ ಏಕೆ? ಇಂಥದ್ದೆಲ್ಲ ನೋಡಿದರೆ ಶರಣರನ್ನು ಇವರೇ ಅರ್ಧ ಕೊಲೆ ಮಾಡುತ್ತಿದ್ದಾರೆ ಅನಿಸುತ್ತದೆ. ಅಂಥದರಲ್ಲಿ ಶರಣರ ಬಗ್ಗೆ ಇಂತಹ ಅದ್ಭುತ ಪುಸ್ತಕ ಬರೆದು ಡಾ. ಮೀನಾಕ್ಷಿ ಬಾಳಿ ಅವರಂತ ಜ್ಞಾನಿಗಳು ಒಂಚೂರು ನೆಮ್ಮದಿಯ ಭರವಸೆ ನೀಡುತ್ತಾರೆ. ಮಠಾಧೀಶರಕ್ಕಿಂತ ಇಂತಹ ಬುದ್ಧಿಜೀವಿ ಲೇಖಕರಿಂದಲೇ ಶರಣರು ಜೀವಂತ ಉಳಿಯುತ್ತಿದ್ದಾರೆ ಎನ್ನುವುದು ಸತ್ಯ.

ಮೀನಾಕ್ಷಿ ಬಾಳಿ ಅವರಂತಹ ವಿಚಾರವಂತರು ಹೆಚ್ಚು ಹೆಚ್ಚು ಜನರನ್ನು ಸಂಪರ್ಕಿಸಬೇಕು. ಮಠಾಧೀಶರಿಗೆ ಇಂತಹ ಬುದ್ದಿಜೀವಿಗಳು ಪ್ರವಚನ ನೀಡಬೇಕು. ಮಠಾಧೀಶರು ಇಂತಹ ಪುಸ್ತಕಗಳನ್ನು ಓದಿ ಜನರಿಗೆ ಸತ್ಯವನ್ನು ಪ್ರಚಾರ, ಪ್ರವಚನ ಮಾಡಬೇಕು. ಆವಾಗ ಮಾತ್ರ ಮಾಠಾಧೀಷರ ಜೊತೆಗೆ ನಮ್ಮ ಜನ ನೈಜತೆ ಅರಿತು ಇಂತಹ ವೈದಿಕರನ್ನು ಎದುರಿಸುವುದಕ್ಕೆ ಸಾಧ್ಯ.

ಇದು ಸತ್ಯ ಬಿಚ್ಚಿಡುವ ಅದ್ಭುತವಾದ ಪುಸ್ತಕ. ಜನಪರ, ನೈಜತೆ ಪರವಾಗಿರುವ ಎಲ್ಲರೂ ಓದಿ.

Share This Article
Leave a comment

Leave a Reply

Your email address will not be published. Required fields are marked *