15ರಂದು 12 ಜನ ಸಾಧಕರಿಗೆ ಅವ್ವ ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅವ್ವ ಸೇವಾ ಟ್ರಸ್ಟ್ ನೀಡುವ
ಪ್ರಸ್ತುತ ವರ್ಷದ ‘ಅವ್ವ ಪ್ರಶಸ್ತಿ’ಗೆ ರಾಜಕಾರಣಿ ಎಸ್.ಅರ್. ಪಾಟೀಲ, ಪತ್ರಕರ್ತ ಚಂದ್ರಕಾಂತ
ವಡ್ಡು, ಸಿತಾರ ವಾದಕ ಛೋಟೆ ರಹಮತ್‌ಖಾನ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೨ ಮಂದಿಯನ್ನು ಆಯ್ಕೆ ಮಾಡಲಾಗಿದೆ.

‘ಹುಬ್ಬಳ್ಳಿಯ ಗುಜರಾತ ಭವನದಲ್ಲಿ ಡಿಸೆಂಬರ್ ೧೫ರಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿರುವ ಗುರವ್ವ
ಶಿವಲಿಂಗಪ್ಪ ಹೊರಟ್ಟಿ ಅವರ ೧೪ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ‘ಅವ್ವ ಪ್ರಶಸ್ತಿ’
ಪ್ರದಾನ ಮಾಡಲಾಗುತ್ತದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವ್ವ ಸೇವಾ ಟ್ರಸ್ಟ್ ಅಧ್ಯಕ್ಷ
ಬಸವರಾಜ ಹೊರಟ್ಟಿ ತಿಳಿಸಿದರು.

‘ಸಾಹಿತಿ ಸಂಗಮನಾಥ ಲೋಕಾಪುರ, ಗಾಯಕಿ ರೇಖಾ ಹೆಗಡೆ, ಭಾಗವತ ಕೇಶವ ಹೆಗಡೆ ಕೊಳಗಿ,
ಉದ್ಯಮಿ ಮಹೇಂದ್ರ ಸಿಂಘಿ, ಬಸವ ತತ್ವ ಪ್ರಚಾರಕ ಎಸ್. ಮಹದೇವಯ್ಯ, ಸಮಾಜ ಸೇವಕಿ
ರಾಜೇಶ್ವರಿ ಪಾಟೀಲ, ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಸ್ಕೇಟ್ ಕ್ರೀಡಾಪಟು ತ್ರಿಶಾ
ಜಡಲಾ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಅಂಕಗಳಿಸಿದ ಬಾಗಲಕೋಟೆಯ
ಅಂಕಿತಾ ಕೊಣ್ಣೂರ ಅವರು ಅವ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸ್ಮರಣಿಕೆ ಜೊತೆಗೆ ₹೨೫ ಸಾವಿರ
ನಗದು ಇರಲಿದೆ’ ಎಂದು ಮಾಹಿತಿ ನೀಡಿದರು.

‘ಚಿತ್ತರಗಿಯ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯದಲ್ಲಿ,
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ
ಜೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪನ್ಯಾಸಕಿ ಅಕ್ಷಯಾ ಗೋಖಲೆ ಅತಿಥಿಯಾಗಿ
ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಪತ್ರಿಕೆಯ ವರದಿ, ಮಾಹಿತಿ ಹಾಗೂ ಸಮಾಜದಲ್ಲಿ ಅತ್ಯುತ್ತಮ ಸೇವೆ ಮಾಡಿದವರನ್ನು ಗುರುತಿಸಿ
ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಇದಕ್ಕೊಂದು ಪ್ರತ್ಯೇಕ ಸಮಿತಿ ರಚಿಸಿದ್ದೇವೆ. ಈವರೆಗೆ ೬೮ ಮಂದಿಗೆ
‘ಅವ್ವ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ’ ಎಂದು ಹೊರಟ್ಟಿ ಹೇಳಿದರು. ಈ ಸಂದರ್ಭದಲ್ಲಿ
ಕಾರ್ಯದರ್ಶಿ ಶಶಿ ಸಾಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *