ಬೀದರ
ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಇಲ್ಲಿಯ ಬಸವಗಿರಿಯಲ್ಲಿ 21 ದಿನಗಳ ಮೌನ ಶಿವಯೋಗ ಅನುಷ್ಠಾನ ಸೋಮವಾರ ಆರಂಭಿಸಿದರು.
ಗುರುಪೂಜೆ, ಸಾಮೂಹಿಕ ಪ್ರಾರ್ಥನೆ, ಇಷ್ಟಲಿಂಗ ಯೋಗ, ವಚನ ಪಠಣ ಹಾಗೂ ಷಟ್‍ಸ್ಥಲ ಧ್ವಜಾರೋಹಣದೊಂದಿಗೆ ಅನುಷ್ಠಾನಕ್ಕೆ ಚಾಲನೆ ನೀಡಲಾಯಿತು.
ಅಂತರಂಗದ ವಿಕಾಸಕ್ಕೆ ಶಿವಯೋಗ ಅನುಷ್ಠಾನ ಅವಶ್ಯಕ. ಪ್ರಭುದೇವ ಸ್ವಾಮೀಜಿ ಅವರು ಈ ಹಿಂದೆ ಮೂರು ಸಲ ಅನುಷ್ಠಾನ ಕೈಗೊಂಡಿದ್ದರು. ಅಕ್ಕ ಅನ್ನಪೂರ್ಣತಾಯಿ ಅವರ ಆಶಯದಂತೆ ಇದೀಗ ನಾಲ್ಕನೇ ಬಾರಿಗೆ 24 ದಿನಗಳ ಅನುಷ್ಠಾನ ಕೈಗೊಳ್ಳುತ್ತಿದ್ದಾರೆ ಎಂದು ಸಾಹಿತಿ ರಮೇಶ ಮಠಪತಿ ಹೇಳಿದರು.
ಅನುಷ್ಠಾನ ಅವಧಿಯಲ್ಲಿ ಸ್ವಾಮೀಜಿ ಅವರು ಮೌನವಾಗಿ ಇರಲಿದ್ದಾರೆ. ನೀರು, ಹಣ್ಣು ಹಂಪಲು ಮಾತ್ರ ಸೇವಿಸಲಿದ್ದಾರೆ. ಪ್ರತಿದಿನ ನಸುಕಿನ ಜಾವ ಮತ್ತು ರಾತ್ರಿ ಶಿವಯೋಗ ಸಾಧನೆ, ವಚನಗಳ ಅಧ್ಯಯನ ಮಾಡಲಿದ್ದಾರೆ ಎಂದು ತಿಳಿಸಿದರು.
ಶ್ರಾವಣ ಪ್ರವಚನದ ಪೂರ್ವದಲ್ಲಿ ತಮ್ಮೊಳಗಿನ ಆಧ್ಯಾತ್ಮಿಕತೆಯನ್ನು ವಿಕಾಸಗೊಳಿಸಿಕೊಳ್ಳುವುದು ಶ್ರೀಗಳ ಅನುಷ್ಠಾನದ ಉದ್ದೇಶ. ಅನುಷ್ಠಾನದ ವೇಳೆ ಬಹಿರಂಗದ ಯಾವುದೇ ಚಟುವಟಿಕೆಗೆ ಆಸ್ಪದ ನೀಡದೆ ಸಂಪೂರ್ಣ ಆಧ್ಯಾತ್ಮ ಸಾಧನೆಯತ್ತಲೇ ಗಮನ ಹರಿಸಲಿದ್ದಾರೆ ಎಂದು ಹೇಳಿದರು.
ಪ್ರಭುದೇವ ಸ್ವಾಮೀಜಿ ಮಾತನಾಡಿ, ಜಗತ್ತನ್ನು ನೋಡುವ ಕಣ್ಣುಗಳು ತನ್ನನ್ನು ತಾನು ನೋಡಲಾರವು. ಏನು ನೋಡಿದರೂ ತನ್ನನ್ನು ತಾನು ನೋಡಿಕೊಳ್ಳದಿರುವುದು ಶರಣರ ದೃಷ್ಟಿಯಲ್ಲಿ ಕುರುಡುತನ. ಹೊರಗಿನ ಎಲ್ಲವನ್ನು ಕೇಳುವ ನಾವು ಎಂದಾದರೂ ನಮ್ಮ ಹೃದಯ ಬಡಿತ, ಉಸಿರಾಟದ ಶಬ್ದ ಕೇಳಲು ಪ್ರಯತ್ನಿಸಿದ್ದೇವೆಯೇ? ಇಲ್ಲ ಎಂದು ಹೇಳಿದರು.
ಒಂದು ಮರ ಎತ್ತರವಾಗಿ ಬೆಳೆಯಬೇಕೆಂದರೆ ಬೇರುಗಳು ಸಹ ಅಷ್ಟೇ ಆಳಕ್ಕಿಳಿಯಬೇಕಾಗುತ್ತದೆ. ಬಹಿರಂಗದಲ್ಲಿ ವಿಸ್ತಾರವಾಗಬೇಕಾದರೆ ಅಂತರಂಗದ ವಿಕಾಸವೂ ಬಹಳ ಮುಖ್ಯ. ಅದಕ್ಕಾಗಿಯೇ ಮೌನ, ಶಿವಯೋಗ ಸಾಧನಗಳು ಮುಖ್ಯವಾಗುತ್ತವೆ ಎಂದು ತಿಳಿಸಿದರು.

ನಮ್ಮ ಗುರುಗಳು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಪ್ರವಚನದೊಂದಿಗೆ ಮೌನ ಅನುಷ್ಠಾನ ಕೈಗೊಳ್ಳುತ್ತಿದ್ದರು. ಗುರುಗಳ ಅನುಷ್ಠಾನದ ಮಾದರಿ ಅನುಸರಿಸಿ ಇಪ್ಪತ್ತೊಂದು ದಿನ ಬಸವಗಿರಿಯ ಸುಂದರ ಪರಿಸರದಲ್ಲಿ ನಿರ್ಮಿಸಲಾದ ಗುಡಿಸಲಿನಲ್ಲಿ ಅನುಷ್ಠಾನ ಕೈಗೊಳ್ಳುತ್ತಿರುವೆ ಎಂದು ಹೇಳಿದರು.
ಗುರುವಚನ ಪರುಷಕಟ್ಟೆ, ಅಕ್ಕನ ಐಕ್ಯ ಮಂಟಪದಲ್ಲಿ ಸಾಮೂಹಿಕ ವಚನ ಪಠಣಗೈದು ಮೌನಕ್ಕೆ ಜಾರಿ ಅನುಷ್ಠಾನದ ಗುಡಿಸಲು ಪ್ರವೇಶಿಸಿದರು.
ಪರುಷಕಟ್ಟೆಯ ಚನ್ನಬಸವಣ್ಣ ಪ್ರಾರ್ಥನೆ ಮಾಡಿದರು. ನೀಲಮ್ಮನ ಬಳಗದ ಸಹೋದರಿಯರು ಗುರು ಪೂಜೆ ಮಾಡಿದರು. ಶಿವಕುಮಾರ ಪಾಟೀಲ ದಂಪತಿ ಶ್ರೀಗಳನ್ನು ಗೌರವಿಸಿದರು. ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು. ಸಿ.ಎಸ್. ಗಣಾಚಾರಿ ನಿರೂಪಿಸಿದರು. ನೆರೆದಿದ್ದ ಶರಣ-ಶರಣೆಯರು ಬಸವ ಜಯ ಘೋಷಗಳೊಂದಿಗೆ ಶ್ರೀಗಳನ್ನು ಅನುಷ್ಠಾನಕ್ಕೆ ಬೀಳ್ಕೊಟ್ಟರು.