ಬೊಮ್ಮಾಯಿ ಸರ್ಕಾರದ ನಿರ್ಣಯಕ್ಕೆ ಸುಪ್ರೀಂ ಕೋರ್ಟಿನಿಂದ ತಡೆಬರುವುದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಮೃತ್ಯುಂಜಯ ಸ್ವಾಮೀಜಿ ಆಪಾದಿಸಿದರು.
ಬೆಳಗಾವಿ
ಇತ್ತೀಚೆಗೆ ಪಂಚಮಸಾಲಿಗಳಿಗೆ 2A ಮೀಸಲಾತಿ ಕೇಳಿಯೇ ಇಲ್ಲ ಎಂದು ಹೇಳಿದ್ದ ಬಿಜೆಪಿ ಶಾಸಕ ಗೌಡ ಯತ್ನಾಳವರ ಹೇಳಿಕೆಯನ್ನು ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಅನುಮೋದಿಸಿದ್ದಾರೆ.
ನಗರದಲ್ಲಿ ಮಾಧ್ಯಮವೊಂದರ ಜೊತೆ ಮಾತನಾಡುತ್ತ 2A ಕೊಡಲು ಸಾಧ್ಯವಾಗದಿದ್ದರೆ ಹಿಂದೆ ಬೊಮ್ಮಾಯಿ ಸರಕಾರ ರೂಪಿಸಿದ್ದ 2D ಮೀಸಲಾತಿಯನ್ನಾದರೂ ನೀಡಲಿ. ಇದು ನಾವು ಸೂಚಿಸಿರುವ ಪರ್ಯಾಯ ಎಂದು ಹೇಳಿದರು.
ಬೊಮ್ಮಾಯಿ ಸರಕಾರ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ಕೊಟ್ಟಿರುವ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ 2D ಅಡಿಯಲ್ಲಿ ಲಿಂಗಾಯತರಿಗೆ ಮತ್ತು 2C ಅಡಿಯಲ್ಲಿ ಒಕ್ಕಲಿಗರಿಗೆ ಹಂಚಿದ್ದರು.
ಮುಸ್ಲಿಂ ಗುಂಪೊಂದು ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ, ಸುಪ್ರೀಂ ಕೋರ್ಟ್ ಯಥಾಸ್ಥಿತಿಗೆ ಆದೇಶಿಸಿತು. ಅದರಂತೆಯೇ ಆಗಿನ ಸರ್ಕಾರವು ಅಫಿಡವಿಟ್ ಸಲ್ಲಿಸಿತ್ತು.
ಬೊಮ್ಮಾಯಿ ಸರ್ಕಾರದ ನಿರ್ಣಯಕ್ಕೆ ಸುಪ್ರೀಂ ಕೋರ್ಟಿನಿಂದ ತಡೆಬರುವುದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಮೃತ್ಯುಂಜಯ ಸ್ವಾಮೀಜಿ ಆಪಾದಿಸಿದರು.
“ನಮ್ಮ ಇಂದಿನ ಮುಖ್ಯಮಂತ್ರಿ ಬೊಮ್ಮಾಯಿ ಸರಕಾರದ ನಿರ್ಣಯವನ್ನು ಕೆಲವರ ಮುಖಾಂತರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಆದರೂ ಅವರ ಮೇಲೆ ವಿಶ್ವಾಸವಿಟ್ಟಿದ್ದೇವೆ,” ಎಂದು ಹೇಳಿದರು.
ಆದರೆ ಈ ವಿಶ್ವಾಸಕ್ಕೆ ಧಕ್ಕೆಯಾದರೆ ಮುಂದಿನ ಚುನಾವಣೆಯಲ್ಲಿ 1.30 ಕೋಟಿ ಪಂಚಮಸಾಲಿಗಳು ತಮಗೆ ಮೀಸಲಾತಿ ಕೊಡುವವರನ್ನೇ ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದರು.
ಹೋರಾಟ ಮುಂದುವರೆಯುವುದು
ಮೀಸಲಾತಿ ನಿಲುವು ಬದಲಾದರೂ ಹೋರಾಟ ಮುಂದುವರೆಯುವುದೆಂದು ಮೃತ್ಯುಂಜಯ ಶ್ರೀ ಸ್ಪಷ್ಟ ಪಡಿಸಿದರು. ಯತ್ನಾಳ್, ಬೆಲ್ಲದ್ ಅಧಿವೇಶನದಲ್ಲಿ ಇರೋದ್ರಿಂದ ಸದ್ಯದಲ್ಲೇ ಸಭೆ ನಡೆಸಿ ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡ್ತಿವಿ. ಮೀಸಲಾತಿ ಕೊಡಲು ಆಗಲ್ಲ ಅಂತಾ ಸಿಎಂ ಹೇಳಿದ್ದಾರೆ. ಮೀಸಲಾತಿ ಪಡೆಯಲು ಏನ್ ಮಾಡಬೇಕು ಎಂದು ಚರ್ಚೆ ಮಾಡ್ತಿವಿ ಎಂದರು.