ಅಕ್ರಮ ಆಸ್ತಿ ಮಾರಾಟ: ಮೂರುಸಾವಿರ ಮಠದ ಶ್ರೀ ವಿರುದ್ಧ ಗಂಭೀರ ಆರೋಪ

ಬಸವ ಮೀಡಿಯಾ
ಬಸವ ಮೀಡಿಯಾ

ಅಪರಾಧ ಸಾಬೀತಾದರೆ 5 ವರ್ಷ ಜೈಲು

ಹುಬ್ಬಳ್ಳಿ

ಕುಮಾರೇಶ್ವರ ಮಠದ ಆಸ್ತಿಯನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದಾರೆಂದು ಆರೋಪಿಸಿ ಹುಬ್ಬಳ್ಳಿ ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, 66, ಅವರ ವಿರುದ್ಧ ಹಾನಗಲ್ ನಗರದ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 2 ದೂರು ದಾಖಲಾಗಿದೆ.

ಈ ವಿಷಯದಲ್ಲಿ ಹಾನಗಲ್ ತಾಲೂಕಿನ ರವೀಂದ್ರ ಚಿಕ್ಕೇರಿ (50) ಎನ್ನುವವರು 2025 ಫೆಬ್ರವರಿ 11ರಂದು ಹಾನಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ರವೀಂದ್ರ ಚಿಕ್ಕೇರಿ

ದೂರನ್ನು ನೋಂದಾಯಿಸಲು ಪೊಲೀಸರು ನಿರಾಕರಿಸಿದಾಗ ದೂರಿನ ಒಂದು ಪ್ರತಿಯನ್ನು ಹಾವೇರಿಯ ಪೊಲೀಸ್ ಅಧೀಕ್ಷಕರಿಗೆ ನೀಡಿದ್ದರು. ಆಗಲೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲು ವಿಫಲರಾದಾಗ, ರವೀಂದ್ರ ಚಿಕ್ಕೇರಿ ಪಟ್ಟಣದ ನ್ಯಾಯಾಲಯಕ್ಕೆ (JMFC ಕೋರ್ಟ್) ನೇರವಾಗಿ ದೂರು ನೀಡಿದರು.

ಈ ವರ್ಷದ ಜನವರಿ 24ರಂದು ಆದೇಶ ನೀಡಿದ ನ್ಯಾಯಾಧೀಶರು ಸ್ವಾಮೀಜಿಯ ವಿರುದ್ಧ ತನಿಖೆ ನಡೆಸಲು ಸಾಕಷ್ಟು ಆಧಾರ ಇರುವುದರಿಂದ ಹಾನಗಲ್ ಪೊಲೀಸ್ ಠಾಣಾಧಿಕಾರಿಗೆ ದೂರು ದಾಖಲಿಸಲು ನಿರ್ದೇಶಿಸಿದರು.

“ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಠದ 1,60,30,000 ಮೌಲ್ಯದ ಆಸ್ತಿ ಮತ್ತು ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ರವೀಂದ್ರ ಚಿಕ್ಕೇರಿ ಅವರು ನೀಡಿರುವ ಮಠದ ಆಸ್ತಿಗಳ ಮಾರಾಟ ಪತ್ರ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ ಆದೇಶ ನೀಡುತ್ತಿದ್ದೇನೆ,” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಆಪಾದನೆಗಳ ಪಟ್ಟಿ

ಆರೋಪಿ (ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ) ಜನವರಿ 31, 1985, ಕುಮಾರೇಶ್ವರ ಮಠಕ್ಕೆ ಪೀಠಾಧಿಪತಿಯಾಗಿ ನೇಮಕವಾದರು. ಅವರ ಅಧಿಕಾರದ ವ್ಯಾಪ್ತಿ, ಮಿತಿಗಳನ್ನು ನೇಮಕ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿದ್ದರೂ ಅವುಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಲಾಗಿದೆ.

ಅವರ ವಿರುದ್ಧ ದಾಖಲಾಗಿರುವ ದೂರಿನಲ್ಲಿರುವ ಕೆಲವು ಅಂಶಗಳು:

  • * ನೇಮಕದ ನಿಯಮದ ಅನುಸಾರ ಆವರಿಗೆ ಆಸ್ತಿಯ ಆಡಳಿತ ವ್ಯವಸ್ಥೆ ನೋಡಿಕೊಳ್ಳುವ ಅಧಿಕಾರ ಮಾತ್ರವಿದ್ದು, ವಾರಸುದಾರಿಕೆ ಹೊಂದಿರುವುದಿಲ್ಲ. ಹಾಗಿದ್ದೂ ಆಸ್ತಿಯನ್ನು ಪರಿವರ್ತನೆ ಮಾಡಿಕೊಂಡು ಆರೋಪಿ ಮಾಲೀಕರ ಅಂಕಣದಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
  • * ಆಸ್ತಿಯನ್ನು ಮಾರಾಟ ಮಾಡಬೇಕಾದ ಸಂದರ್ಭ ಬಂದಲ್ಲಿ ಸರಕಾರದಿಂದ ನೇಮಕವಾಗಿರುವ ಧರ್ಮದತ್ತಿ ಅಧಿಕಾರಿಗಳ ಅಪ್ಪಣೆಯನ್ನು ಬರವಣಿಗೆಯಲ್ಲಿ ಪಡೆಯಬೇಕು ಎಂದು ನೇಮಕ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಈ ನಿಯಮವನ್ನು ಆರೋಪಿ ಅನುಸರಿಸಿಲ್ಲ.
  • * ಆಸ್ತಿ ಮಾರಾಟದಿಂದ ಬಂದ ಹಣವನ್ನು ಮಠದ ಬ್ಯಾಂಕ್ ಖಾತೆಗೆ ಜಮಾ ಮಾಡದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ.
  • * ಮಠದ ಆದಾಯವನ್ನು ತೋರಿಸಲು ಯಾವುದೇ ಲೆಕ್ಕಪತ್ರವಿಟ್ಟಿಲ್ಲ.
  • * ಭಕ್ತರಿಂದ ಬಂದ ಕಾಣಿಕೆ, ದೇಣಿಗೆ ರೂಪದಲ್ಲಿ ಬಂದ ಬೆಲೆ ಬಾಳುವ ವಸ್ತುಗಳನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ.
  • * ಮಠದ ಆಸ್ತಿಯನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಮಾಡಿ ಅದನ್ನು ಮಠದ ಖಾತೆಗೆ ಜಮಾ ಮಾಡಿರುವುದಿಲ್ಲ ಹಾಗೂ ಅದನ್ನು ಮಠದ ಅಭಿವೃದ್ಧಿಗೂ ಬಳಸಿಕೊಂಡಿರುವುದಿಲ್ಲ
  • * ವಿರಕ್ತ ಮಠದ ಧಾರ್ಮಿಕ ಆಚರಣೆ, ರೂಢಿ ಸಂಪ್ರದಾಯಗಳನ್ನು ಕಡೆಗಣಿಸಿದ್ದಾರೆ.

ನೂರಾರು ಆಸ್ತಿಗಳ ಮಾರಾಟ?

ಸ್ವಾಮೀಜಿ ಅಕ್ರಮವಾಗಿ ಮಠದ ಆಸ್ತಿ ಮಾರಾಟ ಮಾಡಿದ್ದಾರೆ ಎಂಬ ಆಪಾದನೆಯ ಬಗ್ಗೆ ಮೂರು ದಾಖಲೆಗಳಿವೆ.

1) ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹಾನಗಲ್ಲ ಪುರಸಭೆ ವ್ಯಾಪ್ತಿ, ಹಳೇ ಕೋಟೆ, ಹಾಗೂ ಬೆಳಗಾಲಪೇಟೆ ಗ್ರಾಪಂ ವ್ಯಾಪ್ತಿಯಲ್ಲಿ ಮಠದ ಅಸ್ತಿ ಮಾರಾಟವಾಗಿದೆ ಎಂದು ರವೀಂದ್ರ ಚಿಕ್ಕೇರಿ ಆಪಾದಿಸಿದ್ದಾರೆ.

ಫೆಬ್ರವರಿ 2 ದಾಖಲಾಗಿರುವ ಪೊಲೀಸ್ FIRನಲ್ಲಿರುವ ಎರಡು ಮಾರಾಟದ ವಿವರಗಳು:

  • * ಬೆಳಗಾಲಪೇಟೆ ಗ್ರಾಮದಲ್ಲಿರುವ 2.38 ಎಕರೆ ಜಮೀನನ್ನು ಗಂಗಾಧರ ಹುಗ್ಗಿಶೆಟ್ಟರ್‌ಎಂಬವರಿಗೆ 4 ಲಕ್ಷಗಳಿಗೆ ಆರೋಪಿ ಮಾರಾಟ ಮಾಡಿದ್ದಾರೆ.
  • * ಹಾನಗಲ್ಲ ಪುರಸಭೆ ವ್ಯಾಪ್ತಿಯ ಸರ್ವೇ 36900 Jo. 3689/23 ಆಸ್ತಿಯನ್ನು ಕುಮಾರೇಶ್ವರ ಪತ್ತಿನ ಸಹಕಾರ ಸಂಘಕ್ಕೆ ‍12.08 ಲಕ್ಷಗಳಿಗೆ ಆರೋಪಿ ಮಾರಾಟ ಮಾಡಿದ್ದಾರೆ.

ಇದಲ್ಲದೆ “…ಇನ್ನೂ ಮುಂತಾದ ಆಸ್ತಿಗಳನ್ನು ಮಾರಾಟ ಮಾಡಿ, ಹಣವನ್ನು ಸ್ವಂತಕ್ಕೆ ಬಳಸಿಕೊಂಡು, ದುರುಪಯೋಗಪಡಿಸಿಕೊಳ್ಳಲಾಗಿದೆ,” ಎಂದು FIRನಲ್ಲಿ ಆಪಾದಿಸಲಾಗಿದೆ.

2) ಜನವರಿ 24 ಹಾನಗಲ್ ನ್ಯಾಯಾಧೀಶರು ಸಹಿ ಮಾಡಿರುವ ಆದೇಶದಲ್ಲಿ ಆರೋಪಿ ಇನ್ನೂ ಹಲವಾರು ಆಸ್ತಿಗಳು ಮಾರಾಟ ಮಾಡಿರುವ ಅಪಾದನೆಯಿದೆ.

ಉದಾಹರಣೆ: “ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿ ಅತ್ಯಂತ ಬೆಲೆ ಬಾಳುವ ಆಸ್ತಿಗಳನ್ನು 76 ಜನರಿಗೆ ಮಾರಾಟ ಮಾಡಿ ಬಂದ 1,30,52,500 ರೂಪಾಯಿಯನ್ನು ಸ್ವಂತಕ್ಕೆ ಬಳಸಿಕೊಂಡಿರುತ್ತಾನೆ,” ಎಂದು ಆರೋಪಿಸಲಾಗಿದೆ.

ಮಾರಾಟದಿಂದ ಬಂದ ಹಣ ಶ್ರೀ ವಿರಕ್ತ ಮಠ ಹಾನಗಲ್ ಟ್ರಸ್ಟಿನ ಬ್ಯಾಂಕ್ ಆಫ್ ಬರೋಡ ಖಾತೆ ಸಂಖ್ಯೆ 8322010000917ಕ್ಕೆ ಜಮವಾಗಿಲ್ಲ ಎಂದು ಆರೋಪಿಸಲಾಗಿದೆ.

3) ರವೀಂದ್ರ ಚಿಕ್ಕೇರಿ ಬಸವ ಮೀಡಿಯಾಗೆ ನೀಡಿರುವ ಮತ್ತೊಂದು ದಾಖಲೆಯಲ್ಲಿ ಕೇವಲ ಹುಬ್ಬಳ್ಳಿ ನಗರದಲ್ಲಿಯೇ ಅಕ್ರಮವಾಗಿ ಮಾರಾಟವಾಗಿದೆ ಎಂದು ಆಪಾದಿಸಿರುವ 134 ಆಸ್ತಿಗಳ ಪಟ್ಟಿಯಿದೆ.

ಈ ಪಟ್ಟಿಯಲ್ಲಿ ಮಾರಾಟ ಮಾಡಿದವರ, ಖರೀದಿದಾರರ ಹೆಸರು, ಸಬ್ ರಿಜಿಸ್ಟ್ರಾರ್ ಕಛೇರಿಯ ನೋಂದಣಿ ಸಂಖ್ಯೆ ಮತ್ತು ದಿನಾಂಕಗಳ ವಿವರಗಳಿವೆ.

ಮಾರಾಟವಾದ ಆಸ್ತಿಯನ್ನು ಹುಬ್ಬಳ್ಳಿ ನಗರದ CTS (City title survey) ಸಂಖ್ಯೆಯ ಮೂಲಕ ಗುರುತಿಸಲಾಗಿದೆ.

ಎಂಟು ಪುಟಗಳ ಈ ದಾಖಲೆಯಲ್ಲಿ ಗಮನಿಸಬೇಕಾದ ಕೆಲವು ಅಂಶಗಳು:

  • * ಒಟ್ಟು 134 ಆಸ್ತಿಗಳು ಮಾರಾಟವಾದ ವಿವರ ಪಟ್ಟಿಯಲ್ಲಿದೆ. ಇದರಲ್ಲಿ ಕೆಲವು ಆಸ್ತಿಗಳಿಗೆ CTS ನಂಬರ್ ಇದ್ದರೂ ಮಾರಾಟದ ವಿವರವಿಲ್ಲ.
  • * ಇದರಲ್ಲಿ ಎಷ್ಟು ಆಸ್ತಿ ಕಾನೂನುಬದ್ಧವಾಗಿ ಅಥವಾ ಕಾನೂನುಬಾಹಿರವಾಗಿ ಮಾರಾಟವಾಗಿದೆ ಎಂದು ತಿಳಿದಿಲ್ಲ.
  • * ಬಹಳಷ್ಟು ಆಸ್ತಿಗಳನ್ನು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಯೇ ನೇರವಾಗಿ ಮಾರಾಟ ಮಾಡಿದ್ದಾರೆ. ಕೆಲವನ್ನು ಜಿಪಿ ಹೋಲ್ಡರ್ ಗಳ ಮೂಲಕ ಮಾರಾಟ ಮಾಡಲಾಗಿದೆ.
  • * 1987ರಲ್ಲಿ ಶುರುವಾದ ಮಾರಾಟ 2024ರವರೆಗೆ ನಿರಂತರವಾಗಿ ಮುಂದುವರೆದಿದೆ.

ಗಂಭೀರ ಆರೋಪ

ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಯೇ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 314 ಮತ್ತು ಸೆಕ್ಷನ್ 316 (2)ಗಳ ಅನ್ವಯ ದೂರು ದಾಖಲಿಸಲಾಗಿದೆ.

ಆಸ್ತಿಯ ಅಪ್ರಾಮಾಣಿಕ ದುರುಪಯೋಗಕ್ಕೆ ಸೆಕ್ಷನ್ 314 ಅಡಿಯಲ್ಲಿ ಆರೋಪಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

ಸೆಕ್ಷನ್ 316 (2) ಅಡಿಯಲ್ಲಿ ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಸಾಭೀತಾದರೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಇದೊಂದು ಗಂಭೀರ ಅಪರಾಧವಾಗಿದ್ದು ಕೇವಲ ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಧೀಶರು ಮಾತ್ರ ಜಾಮೀನು ಮಂಜೂರು ಮಾಡಬಹುದು.

ಸ್ವಾಮೀಜಿ ಪ್ರತಿಕ್ರಿಯೆ

ಈ ವಿಷಯದಲ್ಲಿ ಬಸವ ಮೀಡಿಯಾಕ್ಕೆ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರಿಂದ ಬಂದಿರುವ ಪ್ರತಿಕ್ರಿಯೆ:

“ಮೂರುಸಾವಿರಮಠದ ಆಸ್ತಿ ವಿಚಾರವಾಗಿ ಅನೇಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು, ಶ್ರೀಮಠದ ಅಧಿಕಾರ ವಹಿಸಿಕೊಂಡ ಮೇಲೆ ಯಾವುದೇ ಆಸ್ತಿಯನ್ನು ಪರಭಾರೆ ಮಾಡಿಲ್ಲ.

ಗಬ್ಬೂರಿನಲ್ಲಿರುವ ಶ್ರೀಮಠದ ಆಸ್ತಿಯನ್ನು ಮಾರಾಟ ಮಾಡಿದ್ದಾರೆಂದು ವದಂತಿ ಹಬ್ಬಿಸಲಾಗುತ್ತಿದೆ. ಆದರೆ ಗಬ್ಬೂರಿನಲ್ಲಿರುವ ಆಸ್ತಿಯನ್ನು ನಮ್ಮ ಹಿಂದಿನ ಗುರುಗಳಾದ ಡಾ. ಮೂಜಗಂ ಅವರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಕೆಎಲ್‌ಇ ಸಂಸ್ಥೆಗೆ ದಾನರೂಪವಾಗಿ ನೀಡಿದ್ದಾರೆ.

ಅದೇ ರೀತಿ ಕೇಶ್ವಾಪುರದಲ್ಲಿರುವ ಆಸ್ತಿಯನ್ನೂ ಹಿಂದಿನ ಗುರುಗಳು ಮಾಡಿಕೊಂಡ ಒಪ್ಪಂದದಂತೆ ಮತ್ತು ನ್ಯಾಯಾಲಯದಲ್ಲಿ ಆದ ರಾಜಿ ಸಂಧಾನದ ಮೂಲಕ ಅವರಿಗೆ ಕೊಟ್ಟಿರುತ್ತದೆ. ಇದಾದ ನಂತರ ಇಲ್ಲಿಯವರೆಗೂ ಮೂರುಸಾವಿರಮಠದ ಯಾವುದೇ ಆಸ್ತಿಗಳನ್ನು ಪರಭಾರೆ ಮಾಡಿಲ್ಲ.

ನಿರಂತರ ಭೂ ಬಾಡಿಗೆ, ಇಮಾರತಿ ಬಾಡಿಗೆ, ಸೂರ್ಯ ಚಂದ್ರರಿರುವವರೆಗೂ ಬಾಡಿಗೆ ಈ ರೀತಿ ಇರತಕ್ಕಂತಹ ಆಸ್ತಿಗಳನ್ನು ನ್ಯಾಯಾಲಯಗಳ ಮುಖಾಂತರ ಮಠಕ್ಕೆ ಕಬ್ಜಾ ಪಡೆದುಕೊಂಡು ಮಠದ ಆಸ್ತಿ ಉಳಿಸುವಲ್ಲಿ, ಸಂರಕ್ಷಿಸುವಲ್ಲಿ ಕೆಲಸ ಮಾಡುತ್ತಿದ್ದೇವೆ.

ಹಾನಗಲ್ಲ ವಿರಕ್ತಮಠದ ಆಸ್ತಿಗಳಿಗೆ ಸಂಬಂಧಿಸಿದ ವಿಷಯಗಳು ಜಿಲ್ಲಾ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಹೀಗಾಗಿ ಸಾರ್ವಜನಿಕರು ಹಾಗೂ ಶ್ರೀಮಠದ ಭಕ್ತರು ಊಹಾಪೋಹಗಳಿಗೆ ಕಿವಿ ಕೊಡಬಾರದು.”

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment
  • ಉತ್ತರಾಧಿಕಾರಿ ಆಯ್ಕೆ ಭಕ್ತರನ್ನು,ನಿಷ್ಠರನ್ನು ದೂರಮಾಡಿ ಪ್ರಭಾವಿ ಮತ್ತು ರಾಜಕಾರಣಿಗಳ ಆಯ್ಕೆಗೆ ಬಿಟ್ಟರೆ ಇದೇ ಪರಿಣಾಮ.

Leave a Reply

Your email address will not be published. Required fields are marked *