ಕೂಡಲಸಂಗಮ
ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂಬ ಘೋಷಣೆ ಬಂದಿದೆ, ಆದರೆ ಘೋಷಣೆಯ ನಂತರ ಅದಕ್ಕೆ ಪೂರಕವಾದ ಯಾವುದೇ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲ ಎಂದು ಸಾಣೇಹಳ್ಳಿ ತರಳಬಾಳು ಬೃಹನ್ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠ ಆವರಣದಲ್ಲಿ ನಡೆದ 38ನೇ ಶರಣ ಮೇಳದ 2 ದಿನವಾದ ಸೋಮವಾರ ಶರಣ ಮೇಳ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ಸಾಂಸ್ಕೃತಿಕ ನಾಯಕನಾಗಿ ದಾಖಲೆಗಳಿಗೆ ಸೀಮಿತಗೊಳ್ಳಿಸಬೇಡಿ. ಅವರು ಮಾಡಿದ ಕಾರ್ಯಗಳನ್ನು ಪುನ: ಜಾರಿಗೆ ತರಬೇಕು. ಈ ವೇದಿಕೆ ಮೂಲಕ ಮೂರು ಅಂಶಗಳನ್ನು ಸರ್ಕಾರಕ್ಕೆ ಒತ್ತಾಯಿಸುತ್ತಿದೆ.
ಸರ್ಕಾರ ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ನಮ್ಮ ಪೀಳಿಗೆಯನ್ನು ವಚನಗಳ ಕಡೆ ಮುಖ ಮಾಡುವಂತೆ ಮಾಡಬೇಕು. ಇದು ತುರ್ತಾಗಿ ಆಗಬೇಕು.

ಶರಣರ ಐತಿಹಾಸಿಕ ಕ್ಷೇತ್ರಗಳು ನಾಶವಾಗುತ್ತಿವೆ. ಅವುಗಳ ಸಂರಕ್ಷಣೆ ಅಭಿವೃದ್ಧಿ ಮಾಡಲು ಶರಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ಮಾಡುವ ಮೂಲಕ ಎಲ್ಲ ಶರಣರ ಕ್ಷೇತ್ರಗಳನ್ನು ಪುನರುತ್ಥಾನ ಮಾಡಲು ಸಾಧ್ಯ.
ನಾಟಕ, ಸಂಗೀತ, ನೃತ್ಯದ ಮೂಲಕ ವಚನ ಸಾಹಿತ್ಯ ಭಿತ್ತರಿಸಲು ಸರ್ಕಾರ ಆರ್ಥಿಕ ನೆರವು ಕೊಡುವ ಯೋಜನೆ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿದ್ದರು. ಕೂಡಲಸಂಗಮದ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ.ಪಾಟೀಲ, ಮುಖಂಡರಾದ ವಿವೇಕಾನಂದ ಧನ್ನೂರ, ಸೋಮನಗೌಡ ಪಾಟೀಲ ಮುಂತಾದವರು ಇದ್ದರು.

ಕಲಬುರ್ಗಿಯ ಕ್ಯಾನ್ಸರ್ ವೈದ್ಯೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರಿಗೆ 2025ರ ಬಸವಾತ್ಮಜೆ ರಾಷ್ಟ್ರೀಯ ಪ್ರಶಸ್ತಿಯನ್ನು 50 ಸಾವಿರ ನಗದು, ಫಲಕದೊಂದಿಗೆ ನೀಡಿ ಗೌರವಿಸಲಾಯಿತು. 2025ರ ರಾಜ್ಯ ಮಟ್ಟದ ಶರಣ ಕಾಯಕ ರತ್ನ ಪ್ರಶಸ್ತಿಯನ್ನು ಮಾಜಿ ಸಚಿವ ಎಸ್.ಆರ್.ಪಾಟೀಲ ಅವರಿಗೆ, ಶರಣ ವೈದ್ಯ ರತ್ನ ಪ್ರಶಸ್ತಿಯನ್ನು ಇಳಕಲ್‌ದ ವೈದ್ಯ ಡಾ. ಮಹಾಂತೇಶ ಕಡಪಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಒಕ್ಕಲಿಗ ಮುದ್ದಣ್ಣನ ಸ್ಮರಣಾರ್ಥ ಈ ವರ್ಷದಿಂದ ಪ್ರಮುಖ ಪ್ರಜೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡುತ್ತಿದ್ದು, ಚಿತ್ರದುರ್ಗ ಜಿಲ್ಲೆ ರೈತ ಮುಖಂಡ ಬಸವ ರೆಡ್ಡಿ ಅವರಿಗೆ ಪ್ರದಾನ ಮಾಡಲಾಯಿತು.
