“ಸಿದ್ಧಲಿಂಗ ಶ್ರೀಗಳ ಆದರ್ಶಗಳನ್ನು ಇಂದಿನ ಯುವಕರು ಪಾಲಿಸಬೇಕು”

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಇಂದಿನ ಯುವಕರು ಪೂಜ್ಯ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯದ ಆದರ್ಶಗಳನ್ನು ಪಾಲಿಸುತ್ತಾ, ಮೌಲ್ಯಯುತ ಗುಣ ಮತ್ತು ಉತ್ತಮ ನಡುವಳಿಕೆಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಿ ಮತ್ತೊಬ್ಬರಿಗೆ ಪ್ರೇರಣೆಯಾಗಬೇಕೆಂದು ಗದಗ ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಕಿವಿಮಾತು ಹೇಳಿದರು.

ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೂಜ್ಯ ಲಿಂ. ಸಿದ್ಧಲಿಂಗ ಶ್ರೀಗಳ ೬ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿ, ರಾಷ್ಟ್ರೀಯ ಪ್ರಶಸ್ತಿ ಪುರಷ್ಕೃತರಾದ ಶ್ರೀ ಎಸ್. ಎನ್. ಬಳ್ಳಾರಿ ಅವರು ಮಾತನಾಡಿ, ಇತಿಹಾಸ ಮರೆತವರು ಇತಿಹಾಸ ಬರೆಯಲಾರರು ಎಂಬಂತೆ ಪೂಜ್ಯ ಲಿಂ. ಸಿದ್ಧಲಿಂಗ ಶ್ರೀಗಳ ಸಮಾನತೆಯ ಅಂತಃಕರಣವನ್ನು ಅರಿತುಕೊಳ್ಳಲು ಪ್ರತಿಯೊಬ್ಬರು ಪೂಜ್ಯರ ಜೀವನ ಸಾಧನೆಗಳ ಇತಿಹಾಸವನ್ನು ಓದಬೇಕು, ಏಕೆಂದರೆ ಪೂಜ್ಯರು ಸಮಾತೆಯ ಹರಿಕಾರರಾಗಿದ್ದರೆಂದು ಹೇಳುತ್ತಾ, ಒಂದು ಕಾಲಘಟ್ಟದಲ್ಲಿ ಕೆಳವರ್ಗದವರನ್ನು ಸಾಮಾಜಿಕ ಅನ್ಯಾಯಕ್ಕೆ ಒಳಪಡಿಸಿ ಎಲ್ಲ ಅವಕಾಶಗಳಿಂದ ವಂಚಿತರನ್ನಾಗಿಸಿದ್ದರು.

ಅಂತಹ ಸಂದರ್ಭದಲ್ಲಿ ಶೋಷಿತರ ಆಶಾಕಿರಣವಾಗಿ ಬಸವಾದಿ ಶರಣರು ಸಕಲರಿಗೂ ಲೇಸನೆ ಬಯಸಿ ಸಮಾನತೆಯ ಸಮಾಜವನ್ನು ನಿರ್ಮಿಸಿದರು. ಅದೇ ಹಾದಿಯಲ್ಲಿ ನಡೆದ ಅಂಬೇಡ್ಕರ್ ಅವರು ಸಂವಿಧಾನ ನಿರ್ಮಿಸಿ ಶೋಷಿತರ ಧ್ವನಿಯಾದರು. ಹೀಗೆ ಬಸವ, ಬುದ್ಧ, ಅಂಬೇಡ್ಕರ ಅವರ ಆದರ್ಶಗಳನ್ನು ಪಾಲಿಸಿ ಗುರು ಪರಂಪರೆಗೆ ಶ್ರೇಷ್ಠತೆ ತಂದುಕೊಟ್ಟ ಸಿದ್ಧಲಿಂಗ ಶ್ರೀಗಳು ಅಂತಹ ಮಹನೀಯರ ಸಾಲಿಗೆ ಸೇರಿದವರೆಂದು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್. ಎಸ್. ಪಟ್ಟಣಶೆಟ್ಟರ ಅವರು ಮಾತನಾಡಿ, ಬಸವಣ್ಣನವರು ಸಮಾನತೆಯಿಲ್ಲದ ಸಂಪ್ರದಾಯ ಮತ್ತು ಧರ್ಮ ಬೇಡವೆಂದು ತಿರಸ್ಕರಿಸಿ, ಸಮಾನತೆಯ ಹೊಸ ಸಮಾಜದ ನಿರ್ಮಾಣದ ಕನಸು ಕಂಡು ಸಾಕಾರಗೊಳಿಸಿದರು. ಬಸವಾದಿ ಶರಣರ ಆದರ್ಶಗಳ ಸಾಕಾರ ಮೂರ್ತಿಯಾಗಿದ್ದ ಸಿದ್ಧಲಿಂಗ ಶ್ರೀಗಳು ಸರಳ ಮತ್ತು ಸಮಾಜಮುಖಿ ಜೀವನ ನಡೆಸಿ ಸರ್ವಧರ್ಮಿಯರನ್ನು ಪ್ರೀತಿಯಿಂದ ಕಂಡು ಭಾವೈಕ್ಯತೆಯ ಹರಿಕಾರರಾಗಿದ್ದರು.

ವಿದ್ಯಾರ್ಥಿಗಳು ಪೂಜ್ಯರ ಆದರ್ಶಗಳನ್ನು ಅಳವಡಿಸಿಕೊಂಡು ಸ್ಪರ್ಧಾತ್ಮಕ ವಿಷಯಗಳಲ್ಲಿ ಭಾಗವಹಿಸಿ ಉತ್ತಮ ಫಲಿತಾಂಶ ಮತ್ತು ವ್ಯಕ್ತಿತ್ವ ಹೊಂದಬೇಕೆಂದು ಹೇಳಿದರು.

ಶೇಖಣ್ಣ ಕಳಸಾಪೂರಶೆಟ್ಟರ, ಮೋಹನ ಆಲಮೇಲಕರ ಅವರು ಸಹ ಪೂಜ್ಯರ ಸಾಧನೆ ಕುರಿತು ಮಾತನಾಡಿದರು.
ವೇದಿಕೆಯ ಮೇಲೆ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಬಲರಾಮ ಬಸವಾ ಹಾಗೂ ಸಿದ್ಧಲಿಂಗಯ್ಯ ಹಿರೇಮಠ ಅವರು ಉಪಸ್ಥಿತರಿದ್ದರು.

ಆರಂಭದಲ್ಲಿ ಲಿಂಗೈಕ್ಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಕೃಷ್ಣಗೌಡ ಪಾಟೀಲ ಹಾಗೂ ಎಸ್.ಎನ್. ಬಳ್ಳಾರಿ ಅವರನ್ನು ಆರಂಭದಲ್ಲಿ ಸನ್ಮಾನ ಮಾಡಲಾಯಿತು.

ಸಮಾರಂಭವು ಕುಮಾರಿ ರೂಪಾ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲ್ಪಟ್ಟಿತು. ಪ್ರಾಚಾರ್ಯ ಎಂ.ಎಂ. ಬುರಡಿಯವರು ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಕೆ.ವಿ. ಬಾಗಲಕೋಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *