ಮಾನವಹಕ್ಕುಗಳ ಬಗ್ಗೆ ಮಾತಾಡಿದ್ದಕ್ಕೆ ಶರಣರ ಹತ್ಯೆಯಾಯಿತು: ದರ್ಗಾ

‘ಧರ್ಮ ಮತ್ತು ಮಾನವ ಹಕ್ಕುಗಳು’ ಕುರಿತು ವಿಚಾರ ಸಂಕಿರಣ

ಸಾಣೇಹಳ್ಳಿ

ಜಗತ್ತಿನ ಎಲ್ಲ ಸಂವಿಧಾನಗಳ ತಾಯಿ ವಚನಗಳು. ಆದರೆ ಅವುಗಳನ್ನು ಜಗತ್ತಿಗೆ ನಾವು ಪ್ರತಿಪಾದಿಸುತ್ತಿಲ್ಲ. ಏಕೆಂದರೆ ವಚನಗಳನ್ನು ನಾವು ಸರಿಯಾಗಿ ಓದಿಲ್ಲ ಎಂದು ಹಿರಿಯ ಸಾಹಿತಿ, ಚಿಂತಕ ರಂಜಾನ್‌ ದರ್ಗಾ ವಿಷಾದ ವ್ಯಕ್ತಪಡಿಸಿದರು.

ರಾಷ್ಟೀಯ ನಾಟಕೋತ್ಸವ ಅಂಗವಾಗಿ ಇಲ್ಲಿನ ಎಸ್‌.ಎಸ್‌. ಒಳಾಂಗಣ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ʼಧರ್ಮ ಮತ್ತು ಮಾನವ ಹಕ್ಕುಗಳುʼ ಕುರಿತ ವಿಚಾರ ಸಂಕಿರಣದಲ್ಲಿ ಲಿಂಗಾಯತ ಧರ್ಮ ಕುರಿತು ಅವರು ಮಾತನಾಡಿದರು.

ಲಿಂಗಾಯತ ಎಂದರೇನು? ಆಯತ ಎಂದರೆ ಪ್ರಿಯವಾದುದು. ಲಿಂಗಾಯತರು ಎಂದರೆ ಲಿಂಗಕ್ಕೆ ಪ್ರಿಯರಾದವರು, ದೇವರಿಗೆ ಪ್ರಿಯರಾದವರು. ಲಿಂಗಾಯತ ಎಂದರೆ ಜೀವನ ವಿಧಾನ. ದೇವರಿಗೆ ಪ್ರಿಯವಾಗುವ ಹಾಗೆ ಬದುಕುವ ವಿಧಾನ. ಲಿಂಗಾಯತದಲ್ಲಿ ಸ್ವರ್ಗವಿಲ್ಲ, ನರಕವಿಲ್ಲ, ದೇವರಿಲ್ಲ. ದೇವರು ನಮ್ಮ ದೇಹವೆಂಬ ದೇವಾಲಯದಲ್ಲಿದ್ದಾನೆ. ಅಂತಃಸಾಕ್ಷಿಯಾಗಿ ಬದುಕುವವರು ಲಿಂಗಾಯತರು. ಲಿಂಗಾಯತ ಎಂದರೆ ದೇವರಿಗೆ ಪ್ರಿಯನಾದವನು ಎಂದು ವಿವರಿಸಿದರು.

ಮೊದಲನೇ ಮಹಾಯುದ್ಧದಲ್ಲಿ ಒಂದೂವರೆ ಕೋಟಿ, ಎರಡನೆ ಮಹಾಯುದ್ಧದಲ್ಲಿ ೫ ಕೋಟಿಗೂ ಹೆಚ್ಚು ಜನರು ಸತ್ತರು. ಇವರೆಲ್ಲ ಯುದ್ಧ ಮಾಡಿ ಸಾಯಲಿಲ್ಲ. ಅಮಾಯಕರಾಗಿದ್ದರು. ಹೀಗೆ ಆರೂವರೆ ಕೋಟಿ ಜನರನ್ನು ಕಳೆದುಕೊಂಡ ಮೇಲೆ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂತು. ನಂತರ ಮಾನವಹಕ್ಕುಗಳ ಕುರಿತು ಚರ್ಚೆ ಶುರುವಾಯಿತು. ಆದರೆ ಮಾನವಹಕ್ಕುಗಳ ಕುರಿತು ಮಾತನಾಡಿದ ಶರಣರ ಕಗ್ಗೊಲೆಯಾಯಿತು. ಇದರಿಂದ ಶರಣರು ವಚನಗಳನ್ನು ಕಳೆದುಕೊಂಡರು. ಇದನ್ನು ಕಲ್ಯಾಣಕ್ರಾಂತಿ ಎನ್ನುತ್ತೇವೆ. ಆದರೆ ನಿಜವಾಗಿಯೂ ಅಲ್ಲಿ ಶರಣರ ಹತ್ಯೆಯಾಯಿತು. ಮಾನವಹಕ್ಕುಗಳ ಕುರಿತು ಮಾತಾಡಿದ್ದಕ್ಕೆ ಅವರ ಹತ್ಯೆಯಾಯಿತು. ಯಾವುದೇ ವಚನ ಓದಿದರೂ ಮಾನವಹಕ್ಕುಗಳ ಕುರಿತ ಪ್ರಸ್ತಾಪವಿದೆ ಎಂಬುದನ್ನು ಅರಿಯಬೇಕಿದೆ ಎಂದು ವಿವರಿಸಿದರು.

ಮಹಿಳೆಯರ, ದಲಿತರ, ಶೋಷಿತರ ಕುರಿತು ವಚನಗಳಲ್ಲಿ ಕಾಣಬಹುದು. ೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಮಾನವಹಕ್ಕುಗಳ ಕುರಿತು ಮಾತನಾಡಿದರು. ಹಾಗೆಯೇ ಬಸವಣ್ಣನವರು ಸ್ತ್ರೀವಾದಿ ಚಿಂತನ ಹರಿಬಿಟ್ಟ ಪರಿಣಾಮ ನಮ್ಮ ಮಹಿಳೆಯರಿಗೆ ಸಮಾನತೆ ಸಾಧ್ಯವಾಗಿದೆ. ಇದಕ್ಕಾಗಿ ಬಸವತತ್ವವನ್ನು ಜಗತ್ತಿಗೆ ಹೇಗೆ ಮುಟ್ಟಿಸಬೇಕು ಎನ್ನುವುದನ್ನು ಚಿಂತಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ಜೈನ ಧರ್ಮದ ಕುರಿತು ಬ್ರಹ್ಮದೇವ ಹದಲಗಿ ಮಾತನಾಡಿ, ಶಾಂತಿ, ಸಹಬಾಳ್ವೆ ಎನ್ನುವುದು ಜೈನಧರ್ಮದ ಮಹಾತತ್ವ. ಕೊಲೆ, ಹೊಡೆ ಎನ್ನುವ ಶಬ್ದಗಳಿಗೆ ಜೈನ ಧರ್ಮದ ಶಬ್ದಕೋಶದಲ್ಲಿ ಜಾಗವಿಲ್ಲ ಎಂದರು.

ಬೌದ್ಧ ಧರ್ಮದ ಕುರಿತು ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಮಾತಾನಾಡಿ, ಬುದ್ಧ ಕಂಡು ಹಿಡಿದ ಧರ್ಮ ಕೇವಲ ಮನುಷ್ಯರಿಗೆ ಮತ್ತು ಧರ್ಮಕ್ಕೆ ಸಂಬಂಧಿಸಿದ್ದು. ಸ್ವರ್ಗ, ನರಕವೆಂಬ ಅಲೌಕಿಕವಾದುದನ್ನು ಬೋಧಿಸುವುದಿಲ್ಲ. ಲೌಕಿಕತೆ ಕುರಿತೇ ಬುದ್ಧ ಪ್ರತಿಪಾದಿಸುತ್ತಾನೆ ಎಂದರು.

ಇಸ್ಲಾಂ ಧರ್ಮ ಕುರಿತು ಮಹಮ್ಮದ್‌ ಕುಂಞಿ ಮಾತನಾಡಿ, ಈ ಭೂಮಿಯ ಮೇಲೆ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಎಂದು ಇಸ್ಲಾಂ ಧರ್ಮ ಸಾರುತ್ತಿದೆ. ಆದರೆ ಕೊಲೆ ಮಾಡುವುದು ಎಂದರೆ ದೈಹಿಕವಾಗಿ ಹಲ್ಲೆ ಮಾಡುವ ಮೂಲಕವಲ್ಲ. ಬರಹ, ಭಾಷಣ, ಚಟುವಟಿಕೆಗಳ ಮೂಲಕ ಕೊಲೆ ಮಾಡಬಹುದು. ಹೀಗಾಗಿ ನಮ್ಮ ಜೀವಗಳಿಗೆ ಬೆಲೆಯಿದೆ. ಘನತೆಯೊಂದಿಗೆ, ಗೌರವದೊಂದಿಗೆ, ಸ್ವಾತಂತ್ರ್ಯದೊಂದಿಗೆ ಬದುಕಬೇಕು ಎಂದು ಕುರ್‌ ಆನ್‌ ಹೇಳಿದೆ ಎಂದು ತಿಳಿಸಿದರು.

ಜಗತ್ತಿನ ಎಲ್ಲ ಅಪರಾಧಗಳ ಮೂಲ ಜನಾಂಗೀಯತೆ ಅಂದರೆ ಜಾತಿ, ಧರ್ಮಗಳ ಶ್ರೇಷ್ಠ-ಕನಿಷ್ಠ ಎನ್ನುವುದು. ಆದರೆ ಬಾಚಣಿಗೆಯ ಹಲ್ಲುಗಳ ಹಾಗೆ ಎಲ್ಲರೂ ಸಮಾನರು. ಧರ್ಮದ ಹೆಸರಲ್ಲಿ ರಕ್ತಪಾತವಾಗಬಾರದು. ಹೀಗಾಗಿ ಕುರ್‌ ಆನ್‌ ಕಲಿಸಿದ್ದು ಧಾರ್ಮಿಕ ಸ್ವಾತಂತ್ರ್ಯ, ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು ಎಂದು ಹೇಳಿದರು.

ಕ್ರೈಸ್ತ ಧರ್ಮದ ಕುರಿತು ಎಂ.ಎಸ್.ರಾಜು ಮಾತನಾಡಿ, ಏಸು ಅವರು ಧರ್ಮ ಸ್ಥಾಪಿಸಲು ಬರಲಿಲ್ಲ. ಕೆಡುಕುಗಳನ್ನು ತಡೆಯಲು ಹೋರಾಡಿದರು. ಆದರೆ ಅವರನ್ನು ಶಿಲುಬೆಗೆ ಏರಿಸಿದಾಗ ಮಾನವ ಹಕ್ಕುಗಳ ಉಲ್ಲಂಘನೆಯಾಯಿತು. ಆದರೆ ತನ್ನನ್ನು ಶಿಲುಬೆಗೆ ಏರಿಸಿದವರನ್ನೇ ರಕ್ಷಿಸು ಎಂದು ಏಸು ಹೇಳಿದರು. ಏಸು ಎಂದರೆ ವಿಮೋಚಕ ಎಂದು ಹೇಳಿದರು.

‘ಸುಡುವ ಬೆಂಕಿಯಾಗದೆ ಬೆಳಕಾಗಬೇಕು’

ಜ್ಯೋತಿಗೆ ಜಾತಿಯಿಲ್ಲ, ಧರ್ಮವಿಲ್ಲ, ಲಿಂಗಭೇದವಿಲ್ಲ. ಎಲ್ಲ ಕಡೆಯೂ ಬೆಳಕು ಬೀರುತ್ತ ಕತ್ತಲನ್ನು ಜ್ಯೋತಿಯು ಕಳೆಯುತ್ತದೆ. ಹೀಗೆಯೇ ನಾವೂ ಬೆಳಕಾಗಬೇಕು, ಆದರೆ ಎಲ್ಲ ಕಡೆ ಬೆಂಕಿಯಿಡುವ ಕೆಲಸವಾಗುತ್ತಿದೆ. ಇದಕ್ಕಾಗಿ ಸಕಲ ಜೀವಾತ್ಮರಿಗೆ ಒಳಿತಾಗುವ ಹಾಗೆ ಬದುಕಬೇಕಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ʼಧರ್ಮ ಮತ್ತು ಮಾನವ ಹಕ್ಕುಗಳುʼ ಕುರಿತು ಗುರುವಾರ ಆಯೋಜಿಸಿದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿ, ಹೇಮ, ಕಾಮಿನಿ ನಿನ್ನವಳಲ್ಲ ಎಂದು ಅಲ್ಲಮಪ್ರಭು ಹೇಳುತ್ತಾರೆ. ಈ ಜಗತ್ತಿನಲ್ಲಿರುವ ಬಹುತೇಕರು ಹೊನ್ನು, ಮಣ್ಣು, ಹೆಣ್ಣು ಎಂಬ ಭ್ರಮೆಯಲ್ಲಿರುತ್ತಾರೆ. ಜೊತೆಗೆ ಅನುಮಾನದಿಂದ, ಕ್ರೌರ್ಯದಿಂದ ನೋಡುವ ಪ್ರವೃತ್ತಿ ಹೆಚ್ಚುತ್ತಿದೆ. ನಿಜವಾದ ಸಂಪತ್ತು ಜ್ಞಾನ. ಈ ನೆಲೆಯಲ್ಲಿ ಕುವೆಂಪು ಅವರು ಭಾರತ ಸರ್ವಜನಾಂಗದ ಶಾಂತಿಯ ತೋಟದ ಹಾಗೆ ಬದುಕಬೇಕು ಎಂದು ಹೇಳಿದರು.

ಈ ದೇಶದಲ್ಲಿ ಹಲವು ಭಾಷೆ, ಹಲವು ಜಾತಿ, ಹಲವು ಪಕ್ಷ, ಧರ್ಮ, ಪಂಗಡಗಳಿವೆ. ಇವೆಲ್ಲದರ ನಡುವೆ ಭಾವೈಕ್ಯ ಸಾಧಿಸುವುದು ಮುಖ್ಯ. ೧೨ನೇ ಶತಮಾನದಲ್ಲಿ ಶರಣರು ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಕಾರ್ಯ ಮಾಡಿದರು. ತಲೆ ಎತ್ತಿ ಬದುಕದ ಸಮುದಾಯಕ್ಕೆ ತಲೆ ಎತ್ತಿ ಬದುಕುವ ಹಾಗೆ ಮಾಡಿದರು. ಆದರೆ ನಾವು
ಮಾನವೀಯ ಅಂತಃಕರಣ ಮರೆಯುತ್ತಿದ್ದೇವೆ. ಸಂಕುಚಿತತೆಯಲ್ಲಿ ಇರುತ್ತೇವೆ. ಅಲ್ಪಮಾನವತೆಯ ಮೂಲಕ ಬದುಕಿನ ಎಲ್ಲ ಸತ್ವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದಕ್ಕಾಗಿ ಇನ್ನೊಬ್ಬರ ಧರ್ಮವನ್ನು ಗೌರವಿಸಬೇಕು. ತ್ಯಾಗ, ಸೇವಾ ಮನೋಭಾವ, ಪ್ರೀತಿ, ವಿಶ್ವಾಸವೇ ಎಲ್ಲ ಧರ್ಮಗಳಲ್ಲಿದೆ. ಆದರೆ ಹಿಂಸೆ ಮಾಡಬೇಕೆಂದು ಯಾವ ಧರ್ಮವೂ ಹೇಳುವುದಿಲ್ಲ ಎಂದು ಪ್ರತಿಪಾದಿಸಿದರು.

ಎರಡು ಮಹಾಯುದ್ಧಗಳು ಈ ದೇಶದಲ್ಲಿ ನಡೆದಾಗ ಕೋಟಿಗಟ್ಟಲೆ ಜನರು ಸಾವಿಗೀಡಾದರು. ಹೀಗೆ ಯುದ್ಧಗಳು ನಡೆದಾಗ ಮನುಕುಲ ಉಳಿಯಲು ಸಾಧ್ಯವಿಲ್ಲ. ಎಲ್ಲರೂ ಒಂದಾಗಿ ಬಾಳಬೇಕು ಎನ್ನುವುದಕ್ಕಾಗಿ ವಿಶ್ವಸಂಸ್ಥೆ ಶುರುವಾಯಿತು. ಮಾನವೀಯ ಹಕ್ಕುಗಳನ್ನು ಗೌರವಿಸಬೇಕೆಂದು ತೀರ್ಮಾನಿಸಲಾಯಿತು ಎಂದರು.

೧೨ನೇ ಶತಮಾನದಲ್ಲಿಯೇ ಮಾನವ ಹಕ್ಕುಗಳನ್ನು ಶರಣರು ಪ್ರತಿಪಾದಿಸಿದರು, ಸಮಾನತೆ ಸಾರಿದರು. ಅನುಭವ ಮಂಟಪದಲ್ಲಿ ಅನುಭಾವಿಯಾದ ಅಲ್ಲಮನಿದ್ದ. ಸೂಳೆ ಸಂಕವ್ವೆಗೂ ಅಲ್ಲಿ ಸ್ಥಾನ ಇತ್ತು. ಕಸಗೂಡಿಸುವ ಸತ್ಯಕ್ಕಳಿಗೆ ಕೂಡ ಬಸವಣ್ಣನವರಷ್ಟೇ ಪ್ರಮುಖರಾಗಿದ್ದರು. ಈ ಮೂಲಕ ಎಲ್ಲರೂ ಒಂದೇ ಪ್ರತಿಪಾದಿಸಿದರು ಎಂದು ಸ್ವಾಮೀಜಿ ತಿಳಿಸಿದರು.

ಅತಿಥಿಗಳಾಗಿ ಹಿರಿಯೂರು ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಇತರರು ವೇದಿಕೆ ಮೇಲಿದ್ದರು. ನಂತರ ನಡೆದ ಸಂವಾದದಲ್ಲಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *