ಕನ್ನಡ ನಾಡಿಗೆ ಮಠಗಳ ಕೊಡುಗೆ ಅಪಾರ: ವಿಜಯೇಂದ್ರ

ಎಚ್. ಎಸ್. ದ್ಯಾಮೇಶ
ಎಚ್. ಎಸ್. ದ್ಯಾಮೇಶ

ಸಾಣೇಹಳ್ಳಿ

ಕನ್ನಡ ನಾಡು ಶಿಕ್ಷಣ, ರಾಜಕೀಯ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದ್ದು ಮಠಮಾನ್ಯಗಳಿಂದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತಾನಾಡಿದರು.

ನಮ್ಮ ನಾಡಿನಲ್ಲಿ ಮಠಗಳ ಕೊಡುಗೆ ಅನ್ನ, ಶಿಕ್ಷಣ, ಜ್ಞಾನ ದಾಸೋಹದ ಮೂಲಕ ಸರ್ಕಾರಗಳು ಮಾಡದ ಸಾಧನೆಗಳನ್ನು ಮಾಡಿವೆ. ಇದರಿಂದ ಮಠದಲ್ಲಿ ಕಲಿತವರು ಮಹಾನ್‌ ಸಾಧಕರಾಗಿದ್ದಾರೆ ಎಂದು ಶ್ಲಾಘಿಸಿದರು.

ಹೆಚ್ಚು ಕಲಿತಷ್ಟೂ ಜಾತಿವಾದಿಗಳಾಗುತ್ತಿದ್ದೇವೆ. ಯಾರೇ ಪರಿಚಯವಾದರೂ ಅವರ ಜಾತಿ ಹುಡುಕುತ್ತೇವೆ. ಸ್ಮಶಾನ ಕಾಯುವವನಿಗೆ ಶವಗಳನ್ನು ನೋಡಿದಾಗ ಶಾಂತಿ, ನೆಮ್ಮದಿ ಕಾಣುತ್ತಾನೆ. ಹಾಗೆಯೇ ಶವಗಳನ್ನು ನೋಡಿದಾಗ ಭಯವಾಗುವುದಿಲ್ಲ. ಆದರೆ ಬದುಕಿರುವವರನ್ನು ನೋಡಿದಾಗ ಭಯವಾಗುತ್ತದೆ ಎಂದು ಹೇಳಿದರು.

ಜಾತಿಗಳ ನಡುವೆ, ಸಮಾಜಗಳ ನಡುವೆ ವಿಷಬೀಜ ಬಿತ್ತುತ್ತಿದ್ದೇವೆ. ಇಂಥ ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೇವೆ ವಿನಾ ಸಂಸ್ಕೃತಿ, ಸಂಸ್ಕಾರ ಕೊಡುತ್ತಿಲ್ಲ. ಸಮಾಜವನ್ನು ಉಳಿಸುವ, ಸರಿಯಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಮಠಗಳಿಗೆ, ಸ್ವಾಮಿಗಳಿಗೆ ಸೀಮಿತವೇಂದು ತಿಳಿದಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಮನುಷ್ಯತ್ವ ಉಳಿಸಿಕೊಂಡು, ಮನುಷ್ಯರಾಗಿ ಬಾಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

ಶಿಕಾರಿಪುರದ ಶಾಸಕನಾಗಿದ್ದರೂ ರಾಜಕಾರಣದಲ್ಲಿ ಅಂಬೆಗಾಲಿಡುತ್ತಿರುವೆ. ಸೊಂಡೂರಿಗೆ ಚುನಾವಣೆಗೆ ಹೋಗಿದ್ದೆ. ಅಲ್ಲಿದ್ದವರೊಬ್ಬರು ಯಡಿಯೂರಪ್ಪ ತಾತ ಹೇಗಿದ್ದಾರೆ ಎಂದು ಕೇಳಿದರು. ಸದ್ಯ ಅವರು ಯಾವುದೇ ಹುದ್ದೆಯಲ್ಲಿರದಿದ್ದರೂ ಈ ನಾಡಿನ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಇದರಿಂದ ರಾಜಕಾರಣದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿದೆ. ನಮ್ಮ ತಂದೆ ಯಡಿಯೂರಪ್ಪ ಅವರ ರಾಜಕೀಯ ಏಳುಬೀಳುಗಳನ್ನು ಕಂಡಿದ್ದೇನೆ. ಅವರು ನನಗೆ ತಂದೆಯೂ ಹೌದು, ಗುರುಗಳೂ ಹೌದು. ಜೀವನದಲ್ಲಿ ಯಾವುದೇ ಗಂಡಾಂತರ ಬಂದರೂ ನಮ್ಮ ತಂದೆ ಹೆದರಿ ಹೋಗಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಕಾಲು ಎಳೆಯುವವರು ಹೆಚ್ಚಿದ್ದಾರೆ. ಆದರೂ ಎಲ್ಲಿಯೇ ಹೋದರೂ ಯಡಿಯೂರಪ್ಪ ಅವರ ಮಗನೆಂದು ಪ್ರೀತಿಯಿಂದ ಮಾತನಾಡಿಸುತ್ತಾರೆ. ಇದರಿಂದ ಯಾವುದೇ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜ್ವರದಿಂದ ಬಳಲಿದ ವಿಜಯೇಂದ್ರ

ವಿಜಯೇಂದ್ರ ಅವರು ಜ್ವರದಿಂದ ಬಳಲುತ್ತಿದ್ದರೂ ಅತ್ಯಂತ ಪ್ರೀತಿಯಿಂದ ಸಾಣೇಹಳ್ಳಿಗೆ ಬಂದಿದ್ದಾರೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ವಿಜಯೇಂದ್ರ ಅವರ ಮಾತುಗಳನ್ನು ಕೇಳುತ್ತಿದ್ದರೆ ಯಡಿಯೂರಪ್ಪ ಅವರೇ ಮಾತನಾಡುತ್ತಿದ್ದಾರೆ ಎನ್ನಿಸುತ್ತಿದೆ. ಯಡಿಯೂರಪ್ಪ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಇಡೀ ನಾಡಿಗೇ ಗೊತ್ತಿದೆ. ಆದರೆ ಚುನಾವಣೆ ಸಮಯದಲ್ಲಿ ಪರಸ್ಪರ ದೂರುವ ಬದಲು ಸಮಾಜ ನಮ್ಮನ್ನು ಒಪ್ಪಿಕೊಳ್ಳುತ್ತದೆ, ಅಪ್ಪಿಕೊಳ್ಳುತ್ತದೆ ಎನ್ನುವ ಅರಿವು ಇರಬೇಕು.

ಚುನಾವಣೆ ಸಂದರ್ಭದಲ್ಲೂ ವಿಜಯೇಂದ್ರ ಬಂದಿದ್ದಾರೆ. ಕಾರ್ಯಕ್ರಮ ಒಪ್ಪಿಕೊಂಡ ಮೇಲೆ ಹೆಣ ಬಿದ್ದರೂ ಬರದೆ ಇರಬಾರದು. ನಮಗೆ ಭೇದಿ ಆಗುತ್ತಿದ್ದರೂ ಮಾತ್ರೆ ತೆಗೆದುಕೊಂಡು ಒಪ್ಪಿದ ಕಾರ್ಯಕ್ರಮಗಳಿಗೆ ಹೋಗುತ್ತೇವೆ. ಇದರಿಂದ ನಿಷ್ಠುರವಾಗಿ ಹೇಳಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

Share This Article
Leave a comment

Leave a Reply

Your email address will not be published. Required fields are marked *