ತೇರದಾಳ
ಪಟ್ಟಣದಲ್ಲಿ ಶನಿವಾರ ನಡೆದ ವಚನೋತ್ಸವ ಕಾರ್ಯಕ್ರಮದಲ್ಲಿ ಭಕ್ತರು ಆರು ಸಾವಿರ ವಚನ ಗ್ರಂಥಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿದರು. ಆರಾಧ್ಯ ದೈವ ಅಲ್ಲಮಪ್ರಭು ದೇವರ ನೂತನ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಕಾರ್ಯಕ್ರಮ ನಡೆಯಿತು.
ಚಿಮ್ಮಡ ಪ್ರಭು ಶ್ರೀ, ಶೇಗುಣಸಿ ಮಹಾಂತ ಪ್ರಭು ಶ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೇರದಾಳ ಶಾಸಕ ಸಿದ್ದು ಸವದಿ ಸಮೇತರಾಗಿ ಯುವಕರು, ಮಾತೆಯರು ವಚನ ಗ್ರಂಥಗಳನ್ನು ತಲೆ ಮೇಲೆ ಹೊತ್ತು ಶ್ರೀ ಗುರು ಬಸವ ಲಿಂಗಾಯ ನಮಃ ಎಂಬ ಮಂತ್ರವನ್ನು ಉಚ್ಛರಿಸುತ್ತ ಸಾಗಿದರು. ಮೆರವಣಿಗೆಯಲ್ಲಿ ಆನೆ ಮೇಲೆ ಅಂಬಾರಿ ಅದರಲ್ಲಿ ವಚನ ಗ್ರಂಥ ಹಾಗೂ ಅಲ್ಲಮಪ್ರಭು ಭಾವಚಿತ್ರ ಇಡಲಾಗಿತ್ತು. ಕುದುರೆ ಒಂಟೆ ಹಾಗೂ ಬೊಂಬೆ ವೇಷಧಾರಿಗಳು ಭಾಗಿಯಾಗಿದ್ದವು.
ನೀಲಕಂಠೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಕೆಎಚ್ಡಿಸಿ ಕಾಲೋನಿ, ಪೊಲೀಸ್ ಠಾಣೆ, ಪದ್ಮಾ ಆಸ್ಪತ್ರೆ, ಮಹಾವೀರ ವೃತ್ತ, ಬಸ್ ನಿಲ್ದಾಣ, ಜಾಮೀಯಾ ಮಸ್ಜೀದ್, ನಾಡಕಚೇರಿ, ಚಾವಡಿ ಸರ್ಕಲ್, ಕನ್ನಡ ಶಾಲೆ, ಗಣಪತಿ ಗುಡಿ, ದ್ವಾರ ಬಾಗಿಲು, ವಿಠ್ಠಲ ಮಂದಿರ ಮೂಲಕ ಸಾಗಿ ಅಲ್ಲಮಪ್ರಭು ದೇವಸ್ಥಾನ ತಲುಪಿ, ಗ್ರಂಥಗಳನ್ನು ಸಮರ್ಪಿಸಿದರು.
ಈ ಕಾರ್ಯಕ್ರಮಕ್ಕೆ 6 ಸಾವಿರ ವಚನ ಗ್ರಂಥಗಳನ್ನು ಮುದ್ರಿಸಲು ಪಟ್ಟಣದ ಸಿದ್ದೇಶ್ವರ ವಿದ್ಯಾವರ್ಧಕ ಸಂಘದವರು 5 ಲಕ್ಷ ರೂ.ಗಳನ್ನು ದೇಣಿಗೆಯನ್ನಾಗಿ ನೀಡಿದ್ದರು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಎರಡು ಗಂಟೆಗಳ ಕಾಲ ವಾಹನಗಳ ಸಂಚಾರ ತಡೆಹಿಡಿದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮೆರವಣಿಗೆಯಲ್ಲಿ ಭಾಗಿಯಾದ ಮಾತೆಯರಿಗೆ ದಾರಿಯುದ್ದಕ್ಕೂ ನೀರು, ಪಾನಕ, ಚಾಕೋಲೆಟ್ಗಳನ್ನು ಭಕ್ತರು ನೀಡಿದರು. ನೆರೆಯ ಆಸಂಗಿಯ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಒಂದು ಟ್ಯಾಂಕರ್ ಪಾನಕ ವಿತರಣೆ ಸೇವೆ ಕೈಗೊಂಡಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಅಂಬ್ಯುಲೆನ್ಸ್ನೊಂದಿಗೆ ಮೆರವಣಿಗೆಯುದ್ದಕ್ಕೂ ಇದ್ದರು.
ತೇರದಾಳದ ಅಲ್ಲಮಪ್ರಭು ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ೬ಸಾವಿರ ವಚನ ಗ್ರಂಥಗಳನ್ನು ಮಾತೆಯರು, ಭಕ್ತರು ತಲೆ ಮೇಲೆ ಹೊತ್ತು ಸಾಗುವ ಮೂಲಕ ಭವ್ಯ ವಚನೋತ್ಸವ ಕಾರ್ಯಕ್ರಮ ನಡೆಸಿದರು.