‘ಆದಿಕವಿ ಪಂಪ ಪ್ರಾಧಿಕಾರ’ ರಚಿಸಲು ಕನ್ನಡಪರ ಸಂಘಟನೆಗಳಿಂದ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಆದಿಕವಿ ಪಂಪ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಪ್ರೊ.ಎಸ್.ಎಸ್.ಹರ್ಲಾಪೂರ ಅವರು ಸತತ ನಲ್ವತ್ತು ವರ್ಷಗಳಿಂದ ಪಂಪನ ಜನ್ಮಸ್ಥಳ ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ಆದಿಕವಿ ಪಂಪ ಪ್ರಾಧಿಕಾರವನ್ನು ರಚಿಸಲು ಆಗ್ರಹಿಸಿದ್ದಾರೆ.

ಅಣ್ಣಿಗೇರಿ

“ಮನುಷ್ಯ ಜಾತಿ ತಾನೊಂದೆ ವಲಂ” ಎಂದು ಸಾವಿರ ವರ್ಷಗಳ ಹಿಂದೆಯೇ ಸಾರಿದ ಕನ್ನಡದ ಆದಿಕವಿ ಪಂಪನ ಜನ್ಮಸ್ಥಳ ಧಾರವಾಡ ಜಿಲ್ಲೆಯ ನೂತನ ತಾಲೂಕು ಕೇಂದ್ರ ಅಣ್ಣಿಗೇರಿ.

ಡಾ. ಎಂ.ಎಂ.ಕಲಬುರ್ಗಿ ಅವರು ೧೯೯೮ ರಲ್ಲಿ ತಮಗೆ ಬಂದ ಪಂಪ ಪ್ರಶಸ್ತಿಯ ಸ್ಮರಣಿಕೆಯನ್ನು ಮಾತ್ರ ಸ್ವೀಕರಿಸಿ, ಅದರ ಗೌರವಧನವಾಗಿ ಅವರಿಗೆ ಬಂದ ಒಂದು ಲಕ್ಷ ರೂಪಾಯಿಗಳನ್ನು ಪಂಪನ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ಕವಿಯ ಕುರಿತು ಸ್ಮಾರಕವನ್ನು ನಿರ್ಮಿಸುವಂತೆ ಒತ್ತಾಯಿಸಿ ಸರಕಾರಕ್ಕೆ ಮರಳಿಸಿದರು. ಅದರ ಫಲವಾಗಿ ಇಂದು ಲೋಕೋಪಯೋಗಿ ಇಲಾಖೆ ನೀಡಿದ ಎರಡು ಎಕರೆ ಪ್ರದೇಶದಲ್ಲಿ ಇಲ್ಲಿ ‘ ಆದಿಕವಿ ಪಂಪ ಸ್ಮಾರಕ ಭವನ ‘ ನಿರ್ಮಾಣವಾಗಿದೆ.

ಆದರೆ ಒಂದು ಅತ್ಯಂತ ಖೇದಕರ ಸಂಗತಿಯೆಂದರೆ ಅದರ ಹೊರತಾಗಿ ಅಲ್ಲಿ ಪಂಪನ ಕುರಿತಾಗಿ ಒಂದು ಪುಸ್ತಕವಾಗಲಿ , ಒಂದು ಪ್ರತಿಮೆಯಾಗಲಿ ಏನೂ ಇಲ್ಲ. ಸರಿಯಾದ ಪೀಠೋಪಕರಣಗಳು ಮತ್ತು ಧ್ವನಿವರ್ಧಕಗಳ ವ್ಯವಸ್ಥೆ ಇಲ್ಲ. ಮೂಲಭೂತ ಸೌಕರ್ಯಗಳಾದ ಡಯಾಸ್ , ಕೂಲರ್ , ಜನರೇಟರ್ ಇವು ಯಾವುವೂ ಇಲ್ಲ. ಸ್ಮಾರಕ ಭವನವೂ ಪಂಪನ ಘನತೆಗೆ ತಕ್ಕಂತೆ ನಿರ್ಮಾಣವಾಗಿಲ್ಲ ಎನ್ನುವ ಅಸಮಾಧಾನವೂ ಡಾ.ಎಂ.ಎಂ. ಕಲಬುರ್ಗಿ ಅವರಿಗಿತ್ತು. ಈ ಭವನದಲ್ಲಿ ನಿಯಮಿತವಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯುವ ವ್ಯವಸ್ಥೆ ಆಗಬೇಕಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ.ಅರವಿಂದ ಮಾಲಗತ್ತಿ ಅವರು ಚೆನ್ನೈನಲ್ಲಿ ತಿರುವುಳ್ಳವರ ಅವರ ಸ್ಮಾರಕದ ಮಾದರಿಯಲ್ಲಿ ಇಲ್ಲಿ ಪಂಪನ ಕಾವ್ಯಗಳ ಶಿಲಾಲಯವನ್ನು ನಿರ್ಮಿಸುವ ಕುರಿತು ಇಲ್ಲಿ ನಡೆದ ಆದಿಕವಿ ಪಂಪ ವಿಚಾರ ಸಂಕಿರಣದಲ್ಲಿ ಆಗ್ರಹಿಸಿದ್ದಾರೆ.

ಇಲ್ಲಿಗೆ ಭೇಟಿ ನೀಡಿದ ನಾಡಿನ ಹೆಸರಾಂತ ಸಾಹಿತಿಗಳಾದ ಡಾ. ಶಾಂತಿನಾಥ ದಿಬ್ಬದ , ಡಾ.ತಮಿಳ್ ಸೆಲ್ವಿ ,ಪ್ರೊ.ಮಾಲತಿ ಪಟ್ಟಣಶೆಟ್ಟಿ, ರಂಜಾನ್ ದರ್ಗಾ, ಪ್ರೊ.ಚಂದ್ರಶೇಖರ ವಸ್ತ್ರದ, ಭೈರಮಂಗಲ ರಾಮೇಗೌಡ , ಡಾ.ಸಬೀಹಾ ಭೂಮಿಗೌಡ , ಕೆ.ಆರೀಫ್ ರಾಜಾ , ಪ್ರೊ. ಎಂ.ಡಿ.ಒಕ್ಕುಂದ , ಹೇಮಾ ಪಟ್ಟಣಶೆಟ್ಟಿ , ವಿಜಯಕಾಂತ ಪಾಟೀಲ , ಬಸೂ, ಸುನಂದಾ ಕಡಮೆ , ಬಿ.ಪೀರ್‌ಬಾಷಾ , ದೀಪ್ತಿ ಭದ್ರಾವತಿ ಮುಂತಾದವರು ಇಲ್ಲಿ ‘ ಆದಿಕವಿ ಪಂಪ ಪ್ರಾಧಿಕಾರ ‘ ವನ್ನು ಸ್ಥಾಪಿಸಿ ಇದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಆದಿಕವಿ ಪಂಪ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಪ್ರೊ.ಎಸ್.ಎಸ್.ಹರ್ಲಾಪೂರ ಅವರು ಸತತ ನಲ್ವತ್ತು ವರ್ಷಗಳಿಂದ ಪಂಪನ ಜನ್ಮಸ್ಥಳ ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ಆದಿಕವಿ ಪಂಪ ಪ್ರಾಧಿಕಾರವನ್ನು ರಚಿಸಲು ಆಗ್ರಹಿಸಿದ್ದಾರೆ. ಅಣ್ಣಿಗೇರಿಯ ಎಲ್ಲ ಸಂಘ – ಸಂಸ್ಥೆಗಳ ಮತ್ತು ಸಾರ್ವಜನಿಕರ ಒತ್ತಾಸೆಯೂ ಇದಾಗಿದೆ.

ಆದುದರಿಂದ ಸರಕಾರ ಇದೇ ಬೆಳಗಾವಿ ಅಧಿವೇಶನದಲ್ಲಿ ಸಮಸ್ತ ಕನ್ನಡಿಗರ ಆಶಯವನ್ನು ಈಡೇರಿಸಲು ಪಂಪನ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ‘ಆದಿಕವಿ ಪಂಪ ಪ್ರಾಧಿಕಾರ ‘ ವನ್ನು ರಚಿಸಿ ಕನ್ನಡದ ಆದಿಕವಿ ಪಂಪನಿಗೆ ನಿಜಗೌರವ ಸಲ್ಲಿಸಬೇಕೆಂದು ಪಂಪಕವಿ ಸಾಹಿತ್ಯ ವೇದಿಕೆ, ಅಣ್ಣಿಗೇರಿ ಹಾಗೂ ಅಣ್ಣಿಗೇರಿ ತಾಲ್ಲೂಕ ಕನ್ನಡಪರ ಸಂಘಟನೆಗಳ ಮುಖಂಡರಾದ ಅನ್ವರಬಾಷಾ ಹುಬ್ಬಳ್ಳಿ , ಶಾಂತಕುಮಾರ ಹರ್ಲಾಪುರ ವಿನಂತಿಸಿಕೊಂಡಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *