ಡಿ.ಆರ್. ಪಾಟೀಲರ ಸರಳ ನಡೆ-ನುಡಿ, ಪರಿಶುದ್ಧ ಜೀವನವನ್ನು ಕಂಡ ಜನಗಳೇ
ಸಂತ ರಾಜಕಾರಣಿ’ ಎಂಬ ಅಭಿನಾಮವನ್ನು ನೀಡಿದ್ದಾರೆ.
ಗದಗ
ಉತ್ತರ ಕರ್ನಾಟಕದ ಅದರಲ್ಲೂ ಗದಗ ನೆಲದ ಭವ್ಯ ಪರಂಪರೆ-ಸಂಸ್ಕೃತಿಯ ರಾಯಭಾರಿಯಾಗಿರುವ ಡಿ.ಆರ್. ಪಾಟೀಲರು ಹಲವು ಅಪರೂಪದ ಮೌಲ್ಯಗಳ ಸಂಗಮ. ವಿನಯತೆ, ಗಾಂಧೀವಾದ, ನೈತಿಕತೆ, ನಾಯಕತ್ವ, ಆಧ್ಯಾತ್ಮ ಹೀಗೆ ಓರ್ವ ರಾಜಕಾರಣಿಯಲ್ಲಿ ಅಪರೂಪ ಎನಿಸಬಹುದಾದ ಸದ್ಗುಣಗಳ ಸೆಲೆ ಅವರಾಗಿದ್ದು, ವಿಧಾನ ಮಂಡಲದಲ್ಲಿ ಇಂಥ ನಾಯಕರು ಉಳಿಯಬೇಕೆಂಬ ಪ್ರಜ್ಞಾವಂತಿಕೆ ಬೇಕಿದೆ, ಎಂದು ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಬುಧವಾರ ಹೇಳಿದರು.
ಇಲ್ಲಿನ ಜಗದ್ಗುರು ತೋಂಟದಾರ್ಯ ಮಠದಲ್ಲಿ ಮಾಜಿ ಶಾಸಕರಾದ ಡಿ.ಆರ್. ಪಾಟೀಲರ ಕುರಿತಾದ `ಸಂತ ರಾಜಕಾರಣಿ’ ಪುಸ್ತಕದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕಾರಣ ಸ್ವಕಾರಣವಾಗಿ ಬದಲಾಗಿರುವ ಈ ದಿನಗಳಲ್ಲಿ, ರಾಜಕಾರಣವು ಸೇವಾಕಾರಣ ಎಂದು ನಿರೂಪಿಸುವ ಕೊನೆಯ ಕೊಂಡಿಯಂತೆ ಡಿ.ಆರ್. ಪಾಟೀಲರು ಕಾಣುತ್ತಿದ್ದು, ಇತಿಹಾಸದ ಪುಟಗಳಲ್ಲಿ ಇಂಥ ನಾಯಕರ ಚರಿತ್ರೆಯನ್ನು ದಾಖಲಿಸಿರುವುದು ಅತ್ಯಂತ ಪ್ರಸ್ತುತವಾಗಿದೆ ಎಂದರು.
ಬೆಂಗಳೂರಿನ ಗಾಂಧಿ ಭವನದ ಅಧ್ಯಕ್ಷರಾದ ವೊಡೆ. ಪಿ. ಕೃಷ್ಣ ಅವರು ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಕಪ್ಪುಚುಕ್ಕೆಗಳಿಲ್ಲದೇ ಜನಾನುರಾಗಿಯಾಗಿ ಬಾಳಿದ ಡಿ.ಆರ್. ಪಾಟೀಲ ಅವರು ಜನಮಾನಸದಲ್ಲಿ ಜನನಾಯಕರಾಗಿ ನೆಲೆನಿಲ್ಲುವ ಅಪರೂಪದ ರಾಜಕಾರಣಿ ಎಂದು ಹೇಳಿದರು. ಮಹಾತ್ಮಾ’ ಎಂಬುದು ಗಾಂಧೀಜಿಯವರಿಗೆ ಜನರೇ ನೀಡಿದ ಬಿರುದಾಗಿತ್ತು, ಅದೇ ರೀತಿ ಡಿ.ಆರ್. ಪಾಟೀಲರ ಸರಳ ನಡೆ-ನುಡಿ, ಪರಿಶುದ್ಧ ಜೀವನವನ್ನು ಕಂಡ ಜನಗಳೇ
ಸಂತ ರಾಜಕಾರಣಿ’ ಎಂಬ ಅಭಿನಾಮವನ್ನು ನೀಡಿದ್ದಾರೆ.

ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ ಎಂಬ ಗಾಂಧೀಜಿಯವರ ನಡೆಯನ್ನು ಅಕ್ಷರಶಃ ಪಾಲಿಸಿದ ಡಿ.ಆರ್. ಪಾಟೀಲರದ್ದು ಸದಾ ಹಳ್ಳಿಗಳ, ಬಡವರ, ಶ್ರಮಿಕರ ಹಿತಕ್ಕಾಗಿ ಮಿಡಿಯುವ ಮನಸ್ಸು. ಸರಳ ಬದುಕನ್ನು ರೂಢಿಸಿಕೊಳ್ಳಲು ಪ್ರಬಲ ಅಂತಃಶಕ್ತಿ ಬೇಕು, ಇಂಥ ಅಂತ:ಶಕ್ತಿ ಯುಳ್ಳ ಡಿ.ಆರ್. ಪಾಟೀಲರು ಆಧ್ಯಾತ್ಮಿಕತೆಯ ಅನುಭಾವದಿಂದ ಸರಳ-ಸನ್ನಡತೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಪಾರದರ್ಶಕ ವ್ಯಕ್ತಿತ್ವದ, ತಮ್ಮ ನಡತೆಯಿಂದಲೇ ಎಂಥವರಿಗೂ ಸ್ಫೂರ್ತಿಯಾಬಲ್ಲ ಇವರ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡಿರುವುದು ನನ್ನ ಪುಣ್ಯ ಎಂದರು.
ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಮಾತನಾಡಿ, ಡಿ.ಆರ್. ಪಾಟೀಲರು ಬದ್ಧತೆ ಎಂಬ ಪದಕ್ಕೆ ವ್ಯಾಖ್ಯಾನರಾಗಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಪರಿಮಿತ ಆಸಕ್ತಿ ವಹಿಸಿ ಅದರ ಬಲವರ್ಧನೆಗೆ ಕಾರಣರಾದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ಸರ್ಕಾರದ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ ಮಾತನಾಡಿ, ಲಿಂ.ಡಾ.ತೋಂಟದ ಸಿದ್ಧಲಿಂಗ ಶ್ರೀಗಳಿಗೂ ಡಿ.ಆರ್. ಪಾಟೀಲ ಅವರಿಗೂ ಆತ್ಮೀಯ ಬಾಂಧವ್ಯ ಇದ್ದ ಕಾರಣ, ಅವರು ಡಿ.ರ್. ಪಾಟೀಲರ ಜೀವನ ವೃತ್ತಾಂತವನ್ನು ಬರೆಸಲು ಅಪೇಕ್ಷಿಸಿ ಅದರ ಜವಾಬ್ದಾರಿಯನ್ನು ಅವರ ಅತ್ಯಾಪ್ತರಾದ ಜೆ.ಕೆ. ಜಮಾದಾರ ಅವರಿಗೆ ವಹಿಸಿದ್ದರು. ಸಾರ್ವಜನಿಕ ಜೀವನದಲ್ಲಿ ಹೇಗೆ ಬದುಕಬೇಕು ಎಂಬುದಕ್ಕೆ ಡಿ.ಆರ್ ಪಾಟೀಲರು ಮಾದರಿಯಾಗಿದ್ದು, ಅವರ ಮಾರ್ಗದರ್ಶನವು ನನ್ನ ಯಶಸ್ವಿ ಕೆಲಸಗಳಿಗೆ ಪ್ರೇರಕ ಶಕ್ತಿಯಾಗಿದೆ ಎಂದರು.
ಗ್ರಂಥಕರ್ತರಾದ ಜೆ.ಕೆ ಜಮಾದಾರ ಮಾತನಾಡಿ, ಡಿ.ಆರ್. ಪಾಟೀಲ ತ್ಯಾಗಕ್ಕೆ ವ್ಯಾಖ್ಯಾನರಾಗಿದ್ದು, ಪ್ರಶಸ್ತಿ-ಪ್ರಶಂಸೆ-ಪದವಿಗಳನ್ನು ಬಯಸದ ನಿರ್ಮೋಹಿಗಳಾಗಿದ್ದಾರೆ. ನನ್ನ ಅವರ ಸುದೀರ್ಘ ಒಡನಾಟದ ಕಾರಣ ತೋಂಟದ ಸಿದ್ಧಲಿಂಗ ಶ್ರೀಗಳ ಆಣತಿಯಂತೆ ಈ ಗ್ರಂಥ ರಚಿಸಿದ್ದು, ಇದರಲ್ಲಿ ಡಿ.ಆರ್. ಪಾಟೀಲರ ವ್ಯಕ್ತಿತ್ವದ ವೈಭವೀಕರಣವಾಗಲಿ, ಉತ್ಪ್ರೆಕ್ಷೆಯಾಗಲಿ ಇಲ್ಲ ಎಂದರು.

ಕಾರ್ಯಕ್ರಮದ ಸಮ್ಮುಖ ವಹಿಸಿ ರಾಮಕೃಷ್ಣಾಶ್ರಮದ ನಿರ್ಭಯಾನಂದ ಮಹಾಸ್ವಾಮಿಗಳು ಮಾತಾಡಿದರು.
ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ, ರೋಣ ಶಾಸಕರಾದ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ, ಪ್ರಮೋದ ಹೆಗಡೆ, ಮಾಜಿ ಸಂಸದ ಐ.ಜಿ. ಸನದಿ ಮುಂತಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ.ಎಸ್.ಎಸ್. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೇಕ ಸಂಘ-ಸಂಸ್ಥೆಗಳು ಹಾಗೂ ಡಿ.ಆರ್. ಪಾಟೀಲರ ಅಭಿಮಾನಿಗಳು ವೇದಿಕೆ ಮೇಲೆ ಡಿ.ಆರ್. ಪಾಟೀಲ ಅವರನ್ನು ಸತ್ಕರಿಸಿ ಅಭಿನಂದಿಸಿದರು.
ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಮಾಜಿ ಶಾಸಕರಾದ ಬಿ.ಆರ್ ಯಾವಗಲ್, ವಾಸಣ್ಣ ಕುರಡಗಿ, ಉಮೇಶಗೌಡ ಪಾಟೀಲ, ಜಿ.ಎಸ್. ಗಡ್ಡದ್ದೇವರಮಠ, ಕೆ.ಎಚ್. ಬೇಲೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡರ ಮುಂತಾದವರು ಇದ್ದರು.