ಬಸವಣ್ಣನವರ ಕೊನೆಯ ಬಗ್ಗೆ ನಿಲ್ಲದ ಚರ್ಚೆ

ಸತ್ಯವನ್ನು ಬಗೆದು ನೋಡಬೇಕಾದರೆ ಇತಿಹಾಸವನ್ನು ಹೊಕ್ಕು ನೋಡುವ ಪರಿಶುದ್ಧ ಮನಸ್ಸು ಇರಬೇಕು.

ಶಹಾಪುರ

ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ
ಬೇರೆ ಮತ್ತೊಂದೆಡೆಯಿಲ್ಲ
ಕೂಡಲಸಂಗಮದೇವರ ಸೊಡ್ಡಳ ಬಾಚರಸರು ನಿಜಲಿಂಗದ
ಒಡಲೊಳಗೆ ಬಗಿದು ಹೊಕ್ಕಡೆ ಉಪಮಿಸಬಲ್ಲವರ ಕಾಣೆನು

ಯಾವುದೆ ವ್ಯಕ್ತಿಯ ಹುಟ್ಟು ಮತ್ತು ಸಾವುಗಳು ಆಕಸ್ಮಿಕ. ಅವು ಯಾವಾಗ ಎಲ್ಲಿ ಘಟಿಸುತ್ತವೊ ಹೇಳಲಿಕ್ಕೆ ಸಾಧ್ಯವಿಲ್ಲ. ಆದರೂ ಬಹುತೇಕರು ಹುಟ್ಟು ಮತ್ತು ಸಾವುಗಳ ಕುರಿತು ಹೆಚ್ಚು ಚರ್ಚೆ ಮಾಡುವುದನ್ನು ಕಾಣುತ್ತೇವೆ. ಒಂದೊಂದು ಸಲ ಹುಟ್ಟು ಕರ್ಮದ ಫಲವಾಗಿರದಿರಬಹುದು. ಆದರೆ ಈಗೀಗ ಸಾವು ನಮ್ಮ ಬದುಕಿನ (ಕೆಲವು ವ್ಯಕ್ತಿಗಳ ಬದುಕಿನಲ್ಲಿ ಮಾತ್ರ) ಪ್ರತಿನಿಧಿಯಾಗಿ ಕೆಲಸ ಮಾಡುತ್ತದೆ.

ನಿಲ್ಲದ ಚರ್ಚೆ

ಹನ್ನೆರಡನೆಯ ಶತಮಾನದ ಬಸವಣ್ಣನವರ ಕೊನೆಯ ದಿನಗಳ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಆದರೆ ಖಚಿತವಾಗಿ ಯಾರೂ ಇದೇ ಸತ್ಯ ಎನ್ನುವಂತೆ ಹೇಳುವ ಯಾವ ಆಕರಗಳು ಲಭ್ಯವಾಗುವುದಿಲ್ಲ. ಆದ್ದರಿಂದಲೆ ಅವರ ಕೊನೆಯ ದಿನಗಳ ಕುರಿತು ನಡೆದಿರುವ ಚರ್ಚೆ ಇನ್ನೂ ನಿಂತಿಲ್ಲ. ಬಸವಣ್ಣನವರ ಕ್ರಾಂತಿಕಾರಿ ವಿಚಾರಗಳನ್ನು ಗಮನಿಸಿದ ಹಲವರು ಅವರು ಸಹಜ ಸಾವಿನಿಂದ ಲಿಂಗೈಕ್ಯರಾಗಿಲ್ಲ, ಬದಲಾಗಿ ಪಟ್ಟಭದ್ರರು ಅವರನ್ನು ಹೀನಾಯವಾಗಿ ಕೊಲೆ ಮಾಡಿರುವ ಸಾಧ್ಯತೆ ಇರಬಹುದು ಎಂದು ಹೇಳುತ್ತಾರೆ. ಕೆಲವು ಸನಾತನವಾದಿಗಳು ಬಸವಣ್ಣ ಎಲ್ಲವನ್ನೂ ಮಾಡಿ ಕೊನೆಗೆ ನಿಭಾಯಿಸಲಾಗದೆ ಕಪ್ಪಡಿ ಸಂಗಮದ ಹೊಳೆಯಲ್ಲಿ ಹಾರಿ ಹತ್ಯೆ ಮಾಡಿಕೊಂಡರು ಎಂದು ತಿಳಿಸುತ್ತಾರೆ.

ಆದರೆ ಸತ್ಯ ಇವೆರಡೂ ಅಲ್ಲ. ಸತ್ಯವನ್ನು ಬಗೆದು ನೋಡಬೇಕಾದ ಕಣ್ಣುಗಳಿಗೆ ಹಲವು ರೀತಿಯ ಸಿದ್ಧಾಂತಗಳು ತಲೆಯಲ್ಲಿ ಈ ಮೊದಲೆ ಹೊಕ್ಕಿರುವುದರಿಂದ ಅವು ತಮ ತಮಗೆ ಯಾವುದು ಇಷ್ಟವೊ ಅದನ್ನು ಮಾತ್ರ ಪ್ರತಿಪಾದಿಸುತ್ತ ಹೊರಟಿದ್ದಾರೆ. ಸತ್ಯವನ್ನು ಬಗೆದು ನೋಡಬೇಕಾದರೆ ಇತಿಹಾಸವನ್ನು ಹೊಕ್ಕು ನೋಡುವ ಪರಿಶುದ್ಧ ಮನಸ್ಸು ಇರಬೇಕು. ಇತಿಹಾಸವೆಂದರೆ ಅಂದು ಶಾಸನಗಳು, ಬಸವಣ್ಣನವರ ನಂತರ ಪ್ರಕಟವಾಗಿರಬಹುದಾದ ಹಲವು ಗ್ರಂಥಗಳನ್ನು ಪರಿಶೀಲಿಸಿದಾಗ ಸತ್ಯ ತಂತಾನೆ ಹೊರಗೆ ಬರುತ್ತದೆ. ಬಿಜ್ಜಳರಾಯ ಬರೆದ ಧರಣಿ ಪಂಡಿತ ಎಂಬ ಕೃತಿಯಲ್ಲಿ ಬಸವಣ್ಣ ಮತ್ತು ಬಿಜ್ಜಳನನ್ನು ನಾಯಕ ಪ್ರತಿನಾಯಕನಂತೆ ಚಿತ್ರಿಸುತ್ತ ಬರಲಾಗಿದೆ. ತೆಲುಗಿನಲ್ಲಿ ಬರೆದ ಬಸವ ಪುರಾಣದಲ್ಲಿಯೂ ಖಚಿತ ಮಾಹಿತಿಗಳಿಲ್ಲ. ಹರಿಹರನ ಬಸವರಾಜ ದೇವರ ರಗಳೆ ಅಪೂರ್ಣವಾಗಿದೆ. ಶಾಸನಗಳು,ಪುಸ್ತಕಗಳು ಬಸವಣ್ಣನವರ ಕೊನೆಯ ದಿನಗಳ ಕುರಿತು ಮೌನವಾದಾಗ ಸಹಜವಾಗಿಯೆ ನಾವು ಮತ್ತೆ ಮತ್ತೆ ಶರಣರ ವಚನಗಳನ್ನು ಹೊಕ್ಕು ನೋಡಬೇಕಾಗುತ್ತದೆ.

ವಚನಗಳಲ್ಲಿ ಶರಣರು ತಮ್ಮ ವ್ಯಕ್ತಿಗತ ಸಂಗತಿಗಳನ್ನು ಹೇಳಿಲ್ಲ. ಆದರೂ ಸಹ ಅವರು ಪ್ರಜ್ಞಾಪೂರ್ವಕವಲ್ಲದ ಹಲವು ಐತಿಹಾಸಿಕ ಸಂಗತಿಗಳನ್ನು ಹೇಳಿದ್ದಾರೆ. ಅವುಗಳನ್ನು ಬೆದಕಿ ನೋಡುವ ಮನಸ್ಥಿತಿ ನಮ್ಮದಾಗಿದ್ದರೆ ಅದು ಕಾಣಸಿಗುತ್ತದೆ.

ಕ್ರಾಂತಿಕಾರಕ ನಡೆ

ನಾವು ನೀವೆಲ್ಲ ಬಲ್ಲಂತೆ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೆ ತಳ ಸಮೂದಾಯದ ಅಥವಾ ನೊಂದವರ ಪರವಾಗಿ ನಿಂತು ಮಾತನಾಡಿದ, ಅವರನ್ನು ಅಪ್ಪಿಕೊಂಡ ಧೀರ ನಾಯಕ. ತಲೆಯ ತಗ್ಗಿಸಿ ನೆಲನ ಬರೆಯುತ್ತಿದ್ದಿರದೇಕೆ? ದಂದಣ ದತ್ತಣ ಎನ್ನಿ ಎನ್ನುವ ಮೂಲಕ ಅವರೊಳಗೆ ಪ್ರತಿಭಟನೆಯ ಕಿಚ್ಚನ್ನು ಹುಟ್ಟು ಹಾಕಿದ ಮಹಾತ್ಮ. ಇಷ್ಟಲಿಂಗ ಪೂಜೆಗೆ ಎಷ್ಟು ಪ್ರಾಧಾನ್ಯತೆ ಕೊಡುತ್ತಿದ್ದರೊ ಅದಕ್ಕಿಂತ ಹೆಚ್ಚಿನ ಗಮನವನ್ನು ಅವರು ಕಾಯಕಕ್ಕೆ ನೀಡಿದ್ದರು. ಕಾಯಕದಲ್ಲಿ ನಿರತನಾದರೆ ಗುರು ದರ್ಶನವಾದರೂ ಮರೆಯಬೇಕು. ಲಿಂಗ ಮುಂದಿದ್ದರೂ ಹಂಗು ಹರಿಯಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ಆಚಾರವೇ ಸ್ವರ್ಗ ಅನಾಚಾರವೆ ನರಕ ಎನ್ನುವ ಸ್ಪಷ್ಟತೆ ಬಸವಣ್ಣನವರಿಗೆ ಇತ್ತು. ದೇಹವೆ ದೇಗುಲ ಮಾಡಿಕೊಂಡ ಬಳಿಕ ಸ್ಥಾವರ ದೇವರು ಬಿದ್ದು ಹೋಗುವಂಥವು ಎಂಬ ನಂಬುಕೆಯನ್ನು ಜನ ಮಾನಸದಲ್ಲಿ ತುಂಬಿದ್ದರು.

ಅದುವರೆಗೆ ದೇವರು, ಧರ್ಮ, ಸ್ವರ್ಗ ನರಕ ಮಂತ್ರ ಪೂಜೆ ಎಂಬ ಹೆಸರಿನ ಮೂಲಕ ಶೋಷಣೆ ನಡೆಸಿದ್ದ ಪುರೋಹಿತರ ಬುಡಕ್ಕೆ ಬಸವಣ್ಣನವರು ಕೈ ಹಾಕಿದ್ದರು. ಬಸವಣ್ಣನವರ ಕ್ರಾಂತಿಕಾರಕ ನಡೆ ಅಂದಿನ ಪುರೋಹಿತಶಾಯಿ ಜನಗಳಲ್ಲಿ ನಡುಕ ಹುಟ್ಟಿಸಿದ್ದಂತೂ ಸತ್ಯ.

ಭಾರತದ ಇತಿಹಾಸದಲ್ಲಿ ಪುರೋಹಿತರು ಮತ್ತು ರಾಜಶಾಯಿ ವ್ಯವಸ್ಥೆ ಜೊತೆ ಜೊತೆಗೂಡಿಯೆ ಹೊರಟಿದ್ದಾರೆ. ಒಬ್ಬರು ಮತ್ತೊಬ್ಬರಿಗೆ ಬೆನ್ನೆಲುಬಾಗಿದ್ದಾರೆ. ಬಸವಣ್ಣನವರು ಏಕಕಾಲಕ್ಕೆ ಈ ಎರಡೂ ಜನವಿರೋಧಿ ಗುಂಪುಗಳನ್ನು ಬಹಿರಂಗವಾಗಿಯೆ ತರಾಟೆಗೆ ತೆಗೆದುಕೊಂಡರು. ಆನೀ ಭವಿ ಬಿಜ್ಜಂಜುವೆನೆ? ಎನ್ನುತ್ತ ಇನ್ನೊಂದು ಕಡೆ ಹೊನ್ನು ಹೆಣ್ಣು ಮಣ್ಣೆಂಬ ಬಲೆಯಲ್ಲಿ ಸಿಲುಕಿ ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ ಎನ್ನುತ್ತಲೆ ಹಾರುವರ ಹುನ್ನಾರಗಳನ್ನು ಬಿಚ್ಚಿ ಬಯಲಿಗೆ ಹಾಕಿದರು. ಬಸವಣ್ಣನವರ ಆಶಯಗಳನ್ನು ಅರಿತುಕೊಂಡ ಶ್ರೀಸಾಮಾನ್ಯ ಜನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಲ್ಯಾಣದಲ್ಲಿ ಬಂದು ಸೇರಿತು. ಆಗ ‘ಕಲ್ಯಾಣ’ ಹೊರಗು ಕಲ್ಯಾಣ ಒಳಗೂ ಕಲ್ಯಾಣ.

ಗಡಿಪಾರು, ಎಳೆಹೂಟೆ

ಬಸವಣ್ಣನವರ ಈ ಕ್ಷಾತ್ರಕ್ಷಮತೆಯನ್ನು ಕಂಡು ರಾಜಶಾಯಿ ಮತ್ತು ಪುರೋಹಿತಶಾಯಿ ಸುಮ್ಮನೆ ಕೂಡಲಿಲ್ಲ. ಅವರು ಸಂದರ್ಭಕ್ಕಾಗಿ ಕಾದುಕೊಂಡಿದ್ದರು. ಯಾವತ್ತು ಹರಳಯ್ಯ ಮಧುವರಸರ ನಡುವೆ ಸಂಬಂಧ ಉಂಟಾಯಿತೊ ಅವರು ಒಂದೆ ಸಮ ನೆಲ ಮುಗಿಲು ಒಂದಾಗುವಂತೆ ಬೊಬ್ಬೆ ಹೊಡೆಯತೊಡಗಿದರು. ಪುರೋಹಿತರ ಕೈ ಮೇಲಾಗಿ ಬಿಜ್ಜಳ ಅಸಹಾಯಕನಾದ. ಮೊದಲಿನಿಂದಲೂ ಅಧಿಕಾರದ ಗದ್ದುಗೆಗೆ ಹಾತೊರೆಯುತ್ತಿದ್ದ ಬಿಜ್ಜಳನ ತಮ್ಮ ಕರ್ಣಪ ರಾಜನಾಗಿ ಅಧಿಕಾರವಹಿಸಿಕೊಂಡ. ನಾರಾಯಣಕ್ರಮಿತ, ಮುಕುಂದಿ ಭಟ್ಟ ಮುಂತಾದ ಆಸ್ಥಾನದ ಪಂಡಿತರ ಅಭಿಪ್ರಾಯದಂತೆ ಬಸವಣ್ಣನವರನ್ನು ಗಡಿಪಾರು ಮಾಡಲು ಆದೇಶವಿತ್ತರು. ಬಸವಣ್ಣನವರನ್ನು ಗಡಿಪಾರು ಮಾಡುತ್ತಲೆ ಇತ್ತ ಹರಳಯ್ಯ ಮಧುವರಸ ದಂಪತಿಗಳ ಎಳೆಯೂಟಿ ಶಿಕ್ಷೆಗೆ ಗುರಿಪಡಿಸಲಾಯಿತು. ಇದೆ ಸಂದರ್ಭದಲ್ಲಿ ಬಿಜ್ಜಳನ ಕೊಲೆಯಾಯಿತು. ಆದನ್ನು ಶರಣರ ತಲೆಗೆ ಕಟ್ಟಲಾಯಿತು. ಸಹಜವಾಗಿ ಶರಣರು ಚಿಂತಾಕ್ರಾಂತರಾದರು. ಶರಣರು ಪಟ್ಟಭದ್ರ ಶಕ್ತಿಗಳ ವಿರುದ್ಧ ಹೋರಾಡಲು ಸಿದ್ಧರಾದರು. ಹಿಂಸೆ ಹಿಂಸೆಗೆ ಮದ್ದಲ್ಲ ಎಂಬುದು ಶರಣರ ಇಂಗಿತ. ಆದ್ದರಿಂದ ಮೊಟ್ಟ ಮೊದಲು ಅವರು ವಚನಗಳನ್ನು ಸಂರಕ್ಷಿಸಲು ತಮ್ಮ ಪ್ರಾಣದ ಹಂಗು ತೊರೆದು ಪಟ್ಟಭದ್ರ ಶಕ್ತಿಗಳ ವಿರುದ್ಧ ಸಾಕಷ್ಟು ಹೋರಾಟ ನಡೆಸಿದರು. ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು ತಮ್ಮೊಂದು ವಚನದಲ್ಲಿ ಹೇಳುವಂತೆ

ಅವಧಿ ಅಳಿಯಿತ್ತು. ವ್ಯವಧಾನ ಉಳಿಯಿತ್ತು. ನಿಜವೆ ನಿಜವನೊಡಗೂಡಿತ್ತು. ಕೇಳಾ ಬಸವಣ್ಣ ಕಲಿಯುಗದಲ್ಲಿ ಮುಂದೆ ಇರಬಾರದು ನಿಜ ಶರಣಂಗೆ ನಡೆ ನೀನು ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು

ಎಂಬ ವಚನ ಬಸವಣ್ಣನವರು ತಮ್ಮ ಕೊನೆಯ ದಿನಗಳನ್ನು ಕಲ್ಯಾಣದಲ್ಲಿ ಕಳೆದರು ಎಂಬುದಕ್ಕೆ ಸಾಕ್ಷಿ ನೀಡುತ್ತದೆ.

ಆಯಷ್ಯ ತೀರಿದಲ್ಲದೆ ಮರಣವಿಲ್ಲ

ಅಂಜದಿರಂಜದಿರು, ಓಡದಿರು ಓಡದಿರು ಹೇಡಿ. ಆಳಿನಾಳು ಕೀಳಾಳು ಬಹರೆ ಹೋಗದಿರು ಎಂದು ಹೇಳಿದವರು ಬಸವಣ್ಣನವರು. ಅಂಜಿದಡೆ ಮಾಣದು ಅಳುಕಿದಡೆ ಮಾಣದು. ವಜ್ರ ಪಂಜರದೊಳಿದ್ದರೂ ಮಾಣದು ಎಂದವರು ಬಸವಣ್ಣನವರು. ಆಯಷ್ಯ ತೀರಿದಲ್ಲದೆ ಮರಣವಿಲ್ಲ ಎಂದವರವರು. ಎನಿಸೆನಿಸೆಂದೊಡೆ ಧೃತಿಗೆಡೆನಯ್ಯಾ ಎಂದವರು.ಅಟ್ಟೆ ನೆಲಕ್ಕೆ ಬಿದ್ದರೂ ನಾಲಗೆ ಕೂಡಲ ಸಂಗಾ ಶರಣೆನುತ್ತಿದ್ದಿತಯ್ಯಾ ಎಂದು ಗುಡುಗಿದವರು. ಕಾಯದ ಕಳವಳಕ್ಕಂಜಿ ಕಾಯಯ್ಯಾ ಎನ್ನೆನು. ಜೀವನೋಪಾಯಕ್ಕಂಜಿ ಈಯಯ್ಯಾ ಎನ್ನೆನು ಎಂದ ಬಸವಣ್ಣನವರು ಎಂದೂ ಹೊಳೆ ಹಾರಿ ಸಾವನ್ನು ತಂದುಕೊಳ್ಳಲು ಸಾಧ್ಯವಿಲ್ಲ.

ಏಕೆಂದರೆ ಬಸವಣ್ಣನವರ ಲಿಂಗೈಕ್ಯವಾಗುವ ಸ್ಪಲ್ಪೆ ದಿನಗಳಲ್ಲಿ ನೀಲಾಂಬಿಕೆಯನ್ನು ಕರೆ ತರುವಂತೆ ಹಡಪದ ಅಪ್ಪಣ್ಣ ಶರಣರಿಗೆ ತಿಳಿಸುತ್ತಾರೆ. ಆಗ ನೀಲಾಂಬಿಕೆ ನೋಡು ನೋಡು ನೋಡು ಲಿಂಗವೆ ಬಸವಯ್ಯನವರು ಮಾಡಿದ ಆಟವ ಎಂದು ವಚನ ರಚಿಸಿದ್ದು ಇದೆ. ಬಸವಣ್ಣನವರು ಲಿಂಗೈಕ್ಯವಾದ ತರುವಾಯವೂ ಸಹ ನೀಲಾಂಬಿಕೆ ಮತ್ತು ಇತರ ವಚನಕಾರರು ಬದುಕಿದ್ದರು. ಬಸವಣ್ಣನವರು ಪಟ್ಟಭದ್ರರಿಂದ ಕೊಲೆಗೈಯ್ಯಲ್ಪಟ್ಟಿದ್ದರೆ ಸಹಜವಾಗಿ ಅವರ ವಚನಗಳಲ್ಲಿ ಈ ಬಗ್ಗೆ ಉಲ್ಲೇಖಗಳಿರುತ್ತಿದ್ದವು. ಶಿವಯೋಗದ ಅತ್ಯುನ್ನತ ಸ್ಥಿತಿಯನ್ನು ತಲುಪಿದ್ದ ಬಸವಣ್ಣನವರು ಅಂಗೈಯೊಳಗಣ ಲಿಂಗವ ನೋಡುತ್ತ, ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೋ? ನೋಟವೆ ಪ್ರಾಣವಾಗಿ ಎಂದಿಪ್ಪೆನೋ? ಕೂಟವೆ ಪ್ರಾಣವಾಗಿ ಎಂದಿಪ್ಪೆನೋ? ಎನ್ನ ಅಂಗವಿಕಾರದ ಸಂಗವಳಿದು ಕೂಡಲ ಸಂಗಯ್ಯ ಲಿಂಗ ಲಿಂಗವೆನ್ನುತ್ತ ಎನ್ನುವ ವಚನ ಬಸವಣ್ಣನವರ ಕೊನೆಯ ಘಳಿಗೆಯನ್ನು ಚಿತ್ರಿಸುತ್ತದೆ.

ಬಿತ್ತಿತ್ತು ಬೆಳೆಯಿತ್ತು ಕೆಯ್ಯ ಕೊಯಿತ್ತು
ಗೂಡು ಮುರಿಯಿತ್ತು
ಕುತ್ತುರಿಯೊಟ್ಟಿತ್ತು, ಒಕ್ಕಿತ್ತು, ತೂರಿತ್ತು, ಅಳೆಯಿತ್ತು
ಸಲಗೆ ತುಂಬಿತ್ತು
ಕೂಡಲಸಂಗಮದೇವಯ್ಯಾ
ಮೇಟಿ ಕಿತ್ತಿತ್ತು ಕಣ ಹಾಳಾಯಿತಯ್ಯಾ
ಎಂಬ ವಚನ ಬಸವಣ್ಣನವರು ಕೊನೆಯ ದಿನಗಳಲ್ಲಿ ನೋವುಂಡು ಇಲ್ಲವಾದರು ಎಂಬುದನ್ನು ಸಾರಿ ಸಾರಿ ಹೇಳುತ್ತವೆ.

Share This Article
3 Comments
  • ಅದ್ಭುತವಾದ ಚಿಂತನೆ. ಇತಿಹಾಸಕ್ಕೆ ಹಲವು ಮುಖಗಳಿರುತ್ತವೆ. ಸಂದರ್ಭಕ್ಕೆ ಸರಿಯಾದ ಕುರುಹು ಮತ್ತು ಸಾಕ್ಷ್ಯಗಳಿಲ್ಲದಾಗ ಇತಾಸ ತುಂಬಾ ಸಂಕೀರ್ಣವಾಗುತ್ತದೆ. ಅಂತಹ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ಬಸವಣ್ಣನವರ ವೈಯುಕ್ತಿಕ ಬದುಕಿನ, ಅವರ ಧಾರ್ಮಿಕ ಮತ್ತು ಸಾಮಾಜಿಕ ಕೆಲಸಗಳ ಮತ್ತು ಅವುಗಳ ನಿಜ ಆಶಯಗಳ ಮೊರೆ ಹೋಗಬೇಕಾಗುತ್ತದೆ. ಒಂದು ಒಳ್ಳೆಯ ಬರಹಕ್ಕೆ ಧನ್ಯವಾದಗಳು.

  • ಸಂದರ್ಭೋಚಿತ ವಿಷಯ ವಿವರಣೆ ಅಣ್ಣಾ.

    ಶರಣು ಶರಣಾರ್ಥಿಗಳು🙏

Leave a Reply

Your email address will not be published. Required fields are marked *