ಯತ್ನಾಳ, ಪೇಜಾವರ ಶ್ರೀಗಳ ಹೇಳಿಕೆಗೆ ಆಳಂದ ಸೌಹಾರ್ದ ವೇದಿಕೆ ಖಂಡನೆ

ಆಳಂದ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಉಡುಪಿ ಶ್ರೀಕೃಷ್ಣ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿಕೆ ಖಂಡಿಸಿ ಜಿಲ್ಲೆಯ ಪಟ್ಟಣದಲ್ಲಿ ಸಮಾನ ಮನಸ್ಕರ ಸೌಹಾರ್ದ ವೇದಿಕೆ ವತಿಯಿಂದ ಶನಿವಾರ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಅವರ ವಿರುದ್ಧ ಕಾನೂನು ಶಿಸ್ತುಕ್ರಮ ಜರುಗಿಸಬೇಕು. ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದ ಉಡುಪಿ ಶ್ರೀಕೃಷ್ಣ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.

ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಲೋಹಾರ, ಶಾಂತಿ ವನದ ಫಾದರ್ ಸಂತೋಷ ಬಾಪು, ಭೂಸನೂರಿನ ರಾಜಶೇಖರ ಯಂಕಂಚಿ, ದಲಿತ ಮುಖಂಡ ಬಾಬುರಾವ ಅರುಣೋದಯ, ಸಮಾಜ ಸೇವಕ ಎ.ಆರ್. ಬೇಗ್, ಧರ್ಮಣ್ಣ ಧನಗರ, ರಮೇಶ ಲೋಹಾರ ಮಾತನಾಡಿ, ವಕ್ಫ ಆಸ್ತಿ ಕಬಳಿಕೆ ವಿರುದ್ಧ ಬಿಜೆಪಿ ಬೀದರ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಸವಣ್ಣನವರು ಹೊಳೆಗೆ ಹಾರಿ ಪ್ರಾಣ ಬಿಟ್ಟರು ಎಂಬ ಆಧಾರ ರಹಿತ ಸುಳ್ಳನ್ನು ತಮ್ಮ ಭಾಷಣದಲ್ಲಿ ಬಳಸಿರುವುದು ಖಂಡನಾರ್ಹವಾಗಿದ್ದು, ಬಸವಣ್ಣನವರ ಬಗ್ಗೆ ಅವರು ಬಹಳ ಹಗುರವಾಗಿ ಮಾತನಾಡಿ ಅಕ್ಷಮ್ಯ ಅಪರಾಧವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮ ಸಂಸ್ಥಾಪಕ ವಿಶ್ವಗುರು ಬಸವಣ್ಣನವರನ್ನು ಅವಮಾನ ಮಾಡಿರುವ ಯತ್ನಾಳ ಅವರಿಗೆ ಇನ್ನು ಮುಂದೆ ಪಕ್ಷ ಹಾಗೂ ಸರ್ಕಾರದ ವತಿಯಿಂದ ಲಿಂಗಾಯತ ಮೀಸಲಾತಿ ಕೋಟಾದಲ್ಲಿ ಯಾವುದೇ ಸೌಲಭ್ಯ ನೀಡಬಾರದು ಎಂದು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಬಸವಣ್ಣನವರ ಕೊನೆಯ ದಿನಗಳು ಹಾಗೂ ಅವರು ಕೂಡಲಸಂಗಮದಲ್ಲಿ ಲಿಂಗೈಕ್ಯರಾದರು ಎಂಬುದಕ್ಕೆ ಈಗಾಗಲೇ ಸಾಕಷ್ಟು ಸಾಕ್ಷಿ, ಪುರಾವೆಗಳು ಹಾಗೂ ಬಸವಣ್ಣನವರು ಮತ್ತು ಸಮಕಾಲೀನ ಶರಣರ ವಚನಗಳಿದ್ದರೂ ತಮ್ಮ ಹರಕು ನಾಲಿಗೆಯನ್ನು ಹರಿಬಿಟ್ಟಿರುವುದು ಯತ್ನಾಳ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಮಾನಸಿಕ ಅಸ್ವಸ್ಥರಂತೆ ಮಾತನಾಡುವದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಯತ್ನಾಳ ಅವರು ಬಸವಣ್ಣನವರ ಬಗ್ಗೆ ಏನೋನೋ ಹೇಳಿಕೆ ನೀಡಿರುವುದು ಸರಿಯಲ್ಲ. ನಾನು ಯಾರ ಕ್ಷಮೆ ಕೇಳುವುದಿಲ್ಲ ಎಂಬ ಅವರ ಮರು ಹೇಳಿಕೆಯು ಕೂಡ ಅವರಲ್ಲಿರುವ ಅಜ್ಞಾನವನ್ನು ಪ್ರದರ್ಶಿಸುವಂತಿದ್ದು, ಶಾಸಕ ಬಸನಗೌಡ ಯತ್ನಾಳ ಕೂಡಲೇ ಕ್ಷಮೆ ಯಾಚಿಸಬೇಕು. ಕ್ಷಮೆ ಕೇಳದಿದ್ದರೆ ಮುಂಬರುವ ದಿನಗಳಲ್ಲಿ ಅವರ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

Share This Article
Leave a comment

Leave a Reply

Your email address will not be published. Required fields are marked *