ಬೆಂಗಳೂರು
ರಾಜ್ಯ ಬಿಜೆಪಿ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಕೋರ್ ಕಮಿಟಿಯ ಮಹತ್ವದ ಸಭೆ ನಡೆಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್, ಪಕ್ಷದ ಪರಿಷ್ಠರಿಗೆ ಬಿ.ವೈ.ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದರು.
”ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ ಪ್ರಶ್ನೆ ಉದ್ಭವಿಸಿಲ್ಲ. ವಿಜಯೇಂದ್ರ ಅವರನ್ನು ಸಂಘಟನೆ ಬಲ ಪಡಿಸುವ ಉದ್ದೇಶದಿಂದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಸ್ಥಾನ ಬದಲಾವಣೆ ಮಾಡುವ ಸಾಮರ್ಥ್ಯ ಬಿಜೆಪಿಯಲ್ಲಿ ಕಾರ್ಯಕರ್ತರು ಮತ್ತು ಹೈಕಮಾಂಡ್ ಗೆ ಮಾತ್ರ ಇದೆ. ಯಾರೋ ಹೇಳಿದ ಕಾರಣಕ್ಕೆ ಬದಲಾವಣೆ ಸಾಧ್ಯ ಇಲ್ಲ” ಎಂದರು.
ಶಾಸಕ ಬಸನಗೌಡ ಯತ್ನಾಳ್ ಯತ್ನಾಳ್ ಅವರ ಬಗ್ಗೆ ಮಾತನಾಡುತ್ತಾ ಈಗಾಗಲೇ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು. ಪಕ್ಷದೊಳಗಿನ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಿಎಂ ಸದಾನಂದಗೌಡ, ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಹಾಗೂ ಶಾಸಕ ಅಶ್ವಥನಾರಾಯಣ ಭಾಗಿಯಾಗಿದ್ದರು.
ಯತ್ನಾಳ್ ಮತ್ತು ಅವರ ತಂಡದವರ ಬಹಿರಂಗ ಹೇಳಿಕೆಗಳ ಬಗ್ಗೆ ಪ್ರಸ್ತಾಪ ಮಾಡಿದ ವಿಜಯೇಂದ್ರ ಅವರು,
ಕಳೆದ ಒಂದು ವರ್ಷದಿಂದ ಯಡಿಯೂರಪ್ಪ ಅವರ ಬಗ್ಗೆ, ನನ್ನ ಬಗ್ಗೆ ಯತ್ನಾಳ್ ಹೇಳಿಕೆಗಳು ಮುಜುಗರ ತಂದಿವೆ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿವೆ. ಪಕ್ಷಕ್ಕೆ ಯಡಿಯೂರಪ್ಪ ಕೊಡುಗೆ ಏನು? ಯಡಿಯೂರಪ್ಪ ಕೊಡುಗೆ ಏನು ಅಂತ ಎಲ್ಲರಿಗೂ ಗೊತ್ತಿದೆ.
ಒಗ್ಗಟ್ಟಿನಲ್ಲಿ ಎಲ್ಲರೂ ಪಕ್ಷ ಕಟ್ಟೋಣ ಅನ್ನುವ ನನ್ನ ಪ್ರಯತ್ನಕ್ಕೆ ಅವರು ಸಹಕರಿಸ್ತಿಲ್ಲ, ಯತ್ನಾಳ್ ಅವರು ಒಂದೋ ನಮಗೆ ಸಹಕಾರ ಕೊಡಲಿ ಇಲ್ಲದಿದ್ದರೆ ಅವರ ವಿಚಾರದಲ್ಲಿ ಹೈಕಮಾಂಡ್ ಏನಾದರೊಂದು ತೀರ್ಮಾನ ತಗೋಬೇಕು. ಇಷ್ಟು ಕಾಲ ಸಹಿಸಿದ್ದೇನೆ, ಇನ್ಮುಂದೆ ಸಹಿಸಲು ಆಗೋದಿಲ್ಲ ಎಂದು ಅಗಿ ವಿಜಯೇಂದ್ರ ಹೇಳಿದ್ದಾರೆ.