ಬೆಳಗಾವಿ
ಬೆಳಗಾವಿಯಲ್ಲಿ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿಗಳ 2ಎ ಮೀಸಲಾತಿ ಬೇಡಿಕೆ ಹೋರಾಟ ಹಿಂಸಾರೂಪ ಪಡೆದುಕೊಂಡಿದೆ. ಮಂಗಳವಾರ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪರಿಣಾಮ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಇದರಿಂದ ಕೆರಳಿದ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ , ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದ ಸುತ್ತ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿದ್ದರು. ಪ್ರತಿಭಟನೆಕಾರರು ಬ್ಯಾರಿಕೇಡ್ಗಳನ್ನು ತಳ್ಳಿ ಸುವರ್ಣ ಸೌಧಕ್ಕೆ ನುಗ್ಗಲು ಯತ್ನಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಆರ್ ಹಿತೇಂದ್ರ ಅವರು ಲಾಠಿ ಚಾರ್ಜ್ಗೆ ಆದೇಶಿಸಿದರು.
ಮುಖ್ಯಮಂತ್ರಿ ಬರಲು ಆಗ್ರಹ
ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿದ್ದ ಕೊಂಡಸಕೊಪ್ಪದ ಬಳಿಯ ವೇದಿಕೆಗೆ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಸಚಿವ ಎಚ್.ಸಿ.ಮಹಾದೇವಪ್ಪ ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿಗಳೇ ಬಂದು ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನಂತರ ನಾವೇ ಸುವರ್ಣಸೌಧಕ್ಕೆ ತೆರಳಿ ಮನವಿ ನೀಡುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ತಂಡ ಸುವರ್ಣಸೌಧ ಕಡೆ ಹೊರಟಿತು. ಈ ವೇಳೆ ಕೊಂಡಸಕೊಪ್ಪ ಕ್ರಾಸ್ ಬಳಿ ಪೊಲೀಸರು ತಡೆದರು. ರೊಚ್ಚಿಗೆದ್ದ ಜನರ ಗುಂಪು ಸುವರ್ಣಸೌಧ ಮುತ್ತಿಗೆಗೆ ಮುಂದಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ಜಯ ಮೃತುಂಜಯ ಸ್ವಾಮೀಜಿ ಹೇಳಿಕೆ
ಪಂಚಮಸಾಲಿ ಮೀಸಲಾತಿ ಹೋರಾಟ ವೇಳೆ ಲಾಠಿ ಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೂಡಲ ಸಂಗಮದ ಪಂಚಮಲಸಾಲಿ ಪೀಠದ ಬಸವ ಜಯ ಮೃತುಂಜಯ ಸ್ವಾಮೀಜಿ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದದಿಸಬೇಕೆಂದು ನಾವು ಸಿಎಂ ಸಿದ್ದರಾಮಯ್ಯ ಅವರನ್ನ ಕರೆದಿದ್ದೆವು. ಆದರೆ ಸಿಎಂ ನಮಗೆ ಸ್ಪಂದನೆ ನೀಡದ ಹಿನ್ನಲೆಯಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕಲು ಮುಂದಾದೆವು. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು. ಸಿಎಂ ವೇದಿಕೆಗೆ ಬಂದು ಸ್ಪಷ್ಟ ಭರವಸೆ ನೀಡಿ ಅಂತಾ ಹೇಳಿದ್ವಿ. ಆದರೆ ಸಿಎಂ ಬರದೆ ಸರ್ಕಾರದ ಪರವಾಗಿ 3 ಸಚಿವರನ್ನ ಕಳಸಿದ್ದರು. ಸಿಎಂ ಬರುವರೆಗೂ ನಾವು ಬಿಡಲ್ಲ ಎಂದ ಹೋರಾಟಗಾರರು ಹಠ ಹಿಡಿದಿದ್ದರು. ಹೀಗಾಗಿ ಸಿಎಂ ಇದ್ದಲ್ಲಿಗೇ ಹೋಗಲು ಯತ್ನಿಸಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಹೋರಾಟದಿಂದ ಸಿಎಂ ಹತಾಶರಾಗಿದ್ದಾರೆ. ಸಿಎಂ ಹಾಗೂ ಪೋಲಿಸರು ಪ್ರೀ ಪ್ಲ್ಯಾನ್ ಮಾಡಿಸಿ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಲಿಂಗಾಯತರ ಮೇಲೆ ಯಾವ ಸರ್ಕಾರ ಕೂಡ ಹಲ್ಲೆ ಮಾಡಿಲ್ಲ. ಈ ಸರ್ಕಾರ ನಮ್ಮ ಮೇಲೆ ಹಲ್ಲೆ ಮಾಡಿದೆ. ಈ ಸರ್ಕಾರ ನಮ್ಮ ಮೇಲೆ ಗೋಲಿಬಾರ್ ಮಾಡಲು ಹೇಸುತ್ತಿರಲಿಲ್ಲ. ನಿಮ್ಮ ಸರ್ಕಾರದಿಂದ ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಹೇಳಿ, ಇಲ್ಲವಾದರೆ ನಮಗೆ ಯಾರು ನ್ಯಾಯ ಒದಗಿಸುತ್ತಾರೋ ಆ ಸರ್ಕಾರ ತರುತ್ತೇವೆ.
ಡಿಸೆಂಬರ್ 12 ರಾಜ್ಯಾದ್ಯಂತ ಪ್ರತಿಭಟನೆ
ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು ಈ ಕುರಿತು ನಡೆದ ಪೊಲೀಸ್ ಲಾಠಿ ಚಾರ್ಜ್ ಖಂಡಿಸಿ ಡಿಸೆಂಬರ್ 12ರಂದು ರಾಜ್ಯಾದ್ಯಂತ ಪ್ರತಿಭಟನೆ ಘೋಷಣೆ ಮಾಡಲಾಗಿದೆ.
ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ ‘ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನೀವು ಮಾಡಿದ ದಬ್ಬಾಳಿಕೆಯಿಂದ ಈ ಹೋರಾಟ ರಾಜ್ಯದಾದ್ಯಂತ ತೀವ್ರ ಸ್ವರೂಪ ಪಡೆಯಲಿದೆ. ತಡೆದು ತೋರಿಸಿ’ ಎಂದೂ ಸವಾಲು ಹಾಕಿದರು.
ಹಿಟ್ಲರ್ ಧೋರಣೆ
ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಸರ್ಕಾರ ತನ್ನ ಹಿಟ್ಲರ್ ಧೋರಣೆ ಮೂಲಕ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದೆ’ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿಕೆ ನೀಡಿದ್ದಾರೆ.
ತಮ್ಮ ‘ಎಕ್ಸ್’ನಲ್ಲಿ ಖಂಡಿಸಿದ ಅವರು, ‘ಸಿ.ಎಂ ಅವರೇ, ತಮ್ಮ ಹಿಟ್ಲರ್ ಆಡಳಿತದಲ್ಲಿ ರಾಜ್ಯದ ಜನತೆ ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ಮಾಡಲೂ ಅವಕಾಶವಿಲ್ಲವೇ? ಬಾಯಲ್ಲಿ ಬಸವಣ್ಣನ ವಚನ ಹೇಳಿ, ಕೈಯಲ್ಲಿ ಲಾಠಿ ಪ್ರಹಾರ ಮಾಡುವ ತಮ್ಮದು ಯಾವ ಸೀಮೆ ಸಿದ್ಧಾಂತ ಸ್ವಾಮಿ? ಪ್ರತಿಭಟನಾಕಾರರಿಗೆ ರಕ್ತ ಬರುವಂತೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರಲ್ಲ, ಪೊಲೀಸರು ಯಾರ ಅಣತಿಯಂತೆ ಈ ದುಸ್ಸಾಹಸ ಮಾಡಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.
‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಜನರ ಹಕ್ಕು. ಜನರ ಸಮಸ್ಯೆ ಆಲಿಸಿ ಅವರಿಗೆ ಸಮಾಧಾನ ಹೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ರೀತಿ ಮುತ್ಸದ್ಧಿತನ ತೋರುವುದು ಬಿಟ್ಟು, ಏಕಾಏಕಿ ಲಾಠಿ ಚಾರ್ಚ್ ಮಾಡುವ ಮೂಲಕ ಒಂದು ಸಮುದಾಯವನ್ನು ಪ್ರಚೋದನೆ ಮಾಡಿ ರೊಚ್ಚಿಗೇಳಿಸುವುದು ಯಾವ ಸೀಮೆ ಆಡಳಿತ? ಯಾವ ಸೀಮೆ ನಾಯಕತ್ವ?’ ಎಂದೂ ಕೇಳಿದ್ದಾರೆ.