“1993ನಲ್ಲಿ ದೆಹಲಿಯ ಸಂಸತ್ತಿನಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣಗೊಂಡ ಸಮಯದಲ್ಲಿ ಮೂಲ ಚಿತ್ರವನ್ನು ಪ್ರದರ್ಶಿಸಲಾಗಿತ್ತು.”
ಕಲಬುರ್ಗಿ
ನಗರದ ವಾಸ್ತುಶಿಲ್ಪಿ ಬಸವರಾಜ್ ಖಂಡೇರಾವ್ ಅವರು ಬೆಳಗಾವಿಯಲ್ಲಿ ನೂತನವಾಗಿ ಅನಾವರಣಗೊಂಡಿರುವ ಅನುಭವ ಮಂಟಪದ ತೈಲ ವರ್ಣ ಚಿತ್ರ ತಮ್ಮ ತಂದೆ ಪ್ರಸಿದ್ಧ ಕಲಾಕಾರ ನಾಡೋಜ ಡಾ. ಜೆ.ಎಸ್. ಖಂಡೇರಾವ್ ಅವರ ಕಲಾಕೃತಿಯ ನಕಲಾಗಿದೆ ಎಂದು ಆರೋಪಿಸಿದ್ದಾರೆ.
ಮೂಲ ರಚನೆಕಾರರನ್ನು ನಿರ್ಲಕ್ಷಿಸಿ ನಕಲು ಕಲಾಕೃತಿಯನ್ನು ಸುವರ್ಣ ಸೌಧದಲ್ಲಿ ಅನಾವರಣಗೊಳಿಸಿರುವುದರಿಂದ ತಮಗೆ ತೀವ್ರ ನೋವುಂಟಾಗಿದೆ ಎಂದು ಬುಧವಾರ ಸುದ್ದಿಘೋಷ್ಠಿಯಲ್ಲಿ ಹೇಳಿದರು.
ತಮ್ಮ ತಂದೆ ಅನೇಕ ಸಾಹಿತಿಗಳೊಂದಿಗೆ ಚರ್ಚಿಸಿ, ಹಲವಾರು ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮೂಲ ಚಿತ್ರವನ್ನು ರಚಿಸಿದ್ದರು. 1993ನಲ್ಲಿ ದೆಹಲಿಯ ಸಂಸತ್ತಿನಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣಗೊಂಡ ಸಮಯದಲ್ಲಿ ಅದನ್ನು ಪ್ರದರ್ಶಿಸಲಾಗಿತ್ತು. ಆಗ ಅದು ಒಂದು ಸಣ್ಣ ಚಿತ್ರವಾಗಿದ್ದರೂ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಪ್ರಧಾನಿ ವಾಜಪೇಯಿ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ನಂತರ ತಂದೆಯವರು ರಾಷ್ಟ್ರದ ಸಂಸತ್ತಿನಲ್ಲಿ ಪ್ರದರ್ಶಿಸಲು 7X10 ಅಡಿಯ ದೊಡ್ಡ ಚಿತ್ರವನ್ನು ರಚಿಸಿದ್ದರು. ಇದೆಲ್ಲಾ ಸುಮಾರು ಎರಡೂವರೆ ವರ್ಷದ ಪರಿಶ್ರಮವಾಗಿತ್ತು, ಆದರೆ ಹಲವಾರು ಕಾರಣಗಳಿಂದ ಆ ಚಿತ್ರ ಇನ್ನೂ ಸಂಸತ್ತಿನಲ್ಲಿ ಅನಾವರಣಗೊಂಡಿಲ್ಲ ಎಂದರು.
ಚಿತ್ರದ ನಕಲಿನಿಂದ ಖಂಡೇರಾವ್ ಅವರಿಗೆ ಅವಮಾನವಾಗಿದೆ. ರಾಜ್ಯ ಸರ್ಕಾರವು ಕಲಾಕೃತಿ ಅಳವಡಿಕೆಗೂ ಮುನ್ನ ಖಂಡೇರಾವ್ ಅವರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಲ್ಲಿಯೇ ಕಾರ್ಯನಿರ್ವಹಿಸಬಹುದಿತ್ತು ಎಂದು ದೂರಿದರು.

ಬಸವರಾಜ ಖಂಡೇರಾವ ಅವರ ಜೊತೆ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಚಿತ್ರಕಲಾವಿದ ಮೋಹನ್ ಎಚ್. ಸೀತನೂರ ಕಲಾಕೃತಿ ಅಳವಡಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಅಳವಡಿಸುವ ಮುನ್ನ ಮೂಲ ಕಲಾವಿದರ ಗಮನಕ್ಕೂ ತರದೆ ನಕಲಿ ಕಲಾಕೃತಿ ಅಳವಡಿಕೆ ಮಾಡಿರುವುದು ಸರಿಯಲ್ಲ. ಈಗ ಅಳವಡಿಸಿರುವ ಕಲಾಕೃತಿಯನ್ನು ತೆಗೆಯಬೇಕು. ಈ ಬಗ್ಗೆ ಕಾನೂನು ಹೋರಾಟದ ಬಗ್ಗೆಯೂ ಚಿಂತನೆ ನಡೆಯುತ್ತಿದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಬಸವರಾಜ ಎಲ್ ಜಾನೆ, ಶಿಲ್ಪಕಲಾವಿದ ಮಾನಯ್ಯ ಬಡಿಗೇರ, ಚಿತ್ರಕಲಾವಿದ ವಿ.ಬಿ. ಬಿರಾದಾರ ಉಪಸ್ಥಿತರಿದ್ದರು.
ಚಿತ್ರಕಲಾ ಪರಿಷತ್ತಿನ ಪ್ರತಿಕ್ರಿಯೆ
ನೂತನ ಚಿತ್ರ ರಚಿಸಿರುವ ತಂಡದ ಪ್ರಮುಖ ಕಲಾವಿದರಾದ ಚಿತ್ರಕಲಾ ಪರಿಷತ್ತಿನ ಸತೀಶ್ ರಾವ್ ಅವರು ಈ ಚಿತ್ರದಲ್ಲಿ ಕಲಾವಿದರು ‘labourers’ (ಕಾರ್ಮಿಕರ) ರೀತಿಯಲ್ಲಿ ಮಾತ್ರ ಕೆಲಸ ಮಾಡಿದ್ದಾರೆ ಎಂದು ಬಸವ ಮೀಡಿಯಾಗೆ ಹೇಳಿದರು. ಇಲ್ಲಿ ಒಪ್ಪಂದವಾಗಿದ್ದು ವಿಧಾನ ಸೌಧ ಮತ್ತು ಚಿತ್ರಕಲಾ ಪರಿಷತ್ತಿನ ನಡುವೆ. ಅದಕ್ಕೆ ನೀವು ಚಿತ್ರಕಲಾ ಪರಿಷತ್ತಿನವರ ಜೊತೆಯೇ ಮಾತನಾಡಿ ಎಂದು ಹೇಳಿದರು.
ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ ಎಲ್ ಶಂಕರ್ ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಸದ್ಯದಲ್ಲೇ ಹೇಳಿಕೆ ಕೊಡುತ್ತೇವೆ ಎಂದು ಬಸವ ಮೀಡಿಯಾಗೆ ಹೇಳಿದರು. ಚಿತ್ರಕಲಾ ಪರಿಷತ್ತಿನ ಹಿರಿಯ ಪದಾಧಿಕಾರಿಗಳೊಬ್ಬರು ಖಂಡೇರಾವ್ ಅವರ ಚಿತ್ರದ ಮುಂಚೆಯೇ ಈ ರೀತಿಯ ಅನುಭವ ಮಂಟಪದ ಕಲ್ಪನೆಯಿತ್ತಾ ಎಂದು ಖಚಿತ ಪಡಿಸಿಕೊಳ್ಳಬೇಕು ಎಂದರು.
ಚಿತ್ರಕಲಾ ಪರಿಷತ್ತಿನಿಂದ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ವರದಿಗೆ ಸೇರಿಸುತ್ತೇವೆ.
