ಗುಳೇದಗುಡ್ಡದಲ್ಲಿ ಪುಣ್ಯಸ್ತ್ರೀ ಕೇತಲದೇವಿ ತಾಯಿಯ ವಚನ ನಿರ್ವಚನ

ಗುಳೇದಗುಡ್ಡ

‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ಗುಳೇದಗುಡ್ಡದ ಬಸವ ಕೇಂದ್ರದ ವತಿಯಿಂದ ಕುಂಬಾರ ಓಣಿಯ ಶರಣ ಹೊನಕೇರಪ್ಪ ಮಲ್ಲಪ್ಪ ಕುಂಬಾರ ಅವರ ಮನೆಯಲ್ಲಿ ಕಳೆದ ಶನಿವಾರ ಜರುಗಿತು.

ಕುಂಬಾರ ಗುಂಡಯ್ಯನವರ ಪುಣ್ಯಸ್ತ್ರೀ ಕೇತಲದೇವಿ ತಾಯಿಯ ವಚನ –

ಹದ ಮಣ್ಣಲ್ಲದೆ ಮಡಿಕೆ ಹಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ.

ಎಂಬ ವಚನದ ಮೇಲೆ ಅನುಭಾವ ನಡೆಯಿತು.

ಪ್ರತಿ ಸಾಪ್ತಾಹಿಕ ಮಹಾಮನೆಯ ಕಾರ್ಯಕ್ರಮದಂತೆ ಪ್ರಾರಂಭದಲ್ಲಿ ಶರಣೆ ಜಯಕ್ಕ ಬರಗುಂಡಿ ಹಾಗೂ ಸಂಗಡಿಗರಿಂದ ಸಾಮೂಹಿಕ ಪ್ರಾರ್ಥನೆಯ ನಂತರ ಪ್ರೊ. ಶ್ರೀಕಾಂತ ಗಡೇದವರು ಸಂಕ್ಷಿಪ್ತವಾಗಿ ವಚನಕಾರರ ಬಗ್ಗೆ ತಿಳಿಸುತ್ತಾ, ಕಾಯಕ ಶುದ್ಧವಾಗಿರುವುದನ್ನು ಹದವಾದ ಮಣ್ಣಿಗೆ ಹೋಲಿಕೆ ನೀಡಿದರು. ಮಣ್ಣು ಸಂಸ್ಕಾರ ಹೊಂದಬೇಕು, ಸರಿಯಾಗಿ ಹದವಾಗದೇ ಇದ್ದರೆ ಅದು ಕೊನೆಯ ಸ್ಥಿತಿಯಲ್ಲಿ ಪರಿಪೂರ್ಣವಾದ ಮಡಿಕೆಯಾಗದು. ಅಷ್ಟಾವರಣ-ಪಂಚಾಚಾರ-ಷಟ್ಸಸ್ಥಲಗಳ ಮೂಲಕ ಬದುಕನ್ನು ಪರಿಪೂರ್ಣವಾದ ಮಡಿಕೆಯಾಗಲು ಹದವಾದ ಮಣ್ಣನ್ನು ಮಾಡಿಕೊಳ್ಳಬೇಕು. ಸರಿಯಾದ ಮಡಿಕೆಯಾಗಲು ಚೆನ್ನಾಗಿ ಸುಡುವಂತೆ ನಮ್ಮನ್ನು ನಾವು ಅರಿಷಡ್ವರ್ಗಗಳನ್ನು ಅನುಭಾವಿಗಳ ಸಂಗ ಮಾಡಿ ಸುಟ್ಟುಕೊಳ್ಳಬೇಕು ಎಂದು ತಿಳಿಸುತ್ತಾ ಪ್ರಸ್ತಾವಿಕವಾಗಿ ತಮ್ಮ ಅನುಭವವನ್ನು ಹಂಚಿಕೊಂಡರು.

ವಚನದ ಚಿಂತನೆಯ ಮುಂದುವರೆದು ಡಾ. ಗೀರಿಶ ನೀಲಕಂಠಮಠ ಅವರು – ಮಡಿಕೆ ಮಣ್ಣಿನೊಳಗೆ ನಿರಾಕಾರವಾಗಿರುತ್ತದೆ ಸಂಸ್ಕಾರದಿಂದ ಅದು ಸಕಾರವಾಗುವದು. ಹಾಗೆ ಅಷ್ಟತನುಗಳಿಂದಾದ ಈ ದೇಹ, ದೇಹದಲ್ಲಿರುವ ಪಂಚೇಂದ್ರಿಯಗಳಿಗೆ ಲಿಂಗ ಗುಣಗಳನ್ನು ಕಲ್ಪಿಸಿದರೆ/ಕಲಿಸಿದರೆ/ಸಂಸ್ಕಾರ ಕೊಟ್ಟರೆ ಮಡಿಕೆ ಮಾಡಲು ಮಣ್ಣು ಹದ ಮಾಡಿದಂತೆ. ಚೆನ್ನಾಗಿ ಹದವಾದ ಮಣ್ಣು ಮಡಿಕೆಯಾದರೆ ಮರಳಿ ಮಣ್ಣಾಗದು. ನಿರಾಕಾರ ಸಾಕಾರವಾಗುವಾಗ ಹೊಲಸು ಹತ್ತಿಕೊಂಡಿರುತ್ತದೆ. ಅದಕ್ಕೆ ಶರಣರ ಸಂಗದ ಸಹಾಯದಿಂದ ಆ ಹೊಲಸನ್ನು ತೊಳೆದು ಮತ್ತೆ ಸಕಾರದಿಂದ ನಿರಾಕಾರವಾಗಲು ಸಾಧ್ಯ. ಅಲಿಂಗಿಗಳ ಸಂಗ ವೃತಹೀನ. ಅವರ ಜೊತೆ ಬೆರೆಯಬಾರದು. ಬೆರೆದಡೆ ಭವಿಯಾದಂತೆ ಎಂದು ಶರಣೆ ಕೇತಲದೇವಿ ತಾಯಿಯವರು ಹೇಳಿರಬಹುದೆಂದು ವಚನದ ಅರ್ಥವನ್ನು ಮನಮುಟ್ಟುವಂತೆ ಪ್ರಚುರಪಡಿಸಿದರು.

ಹಾಗೆಯೇ ಪ್ರಿ. ಸಿದ್ಧಲಿಂಗಪ್ಪ ಬ. ಬರಗುಂಡಿ ಅವರು ವಚನವನ್ನು ಮತ್ತೊಮ್ಮೆ ವಾಚಿಸುತ್ತ ಮನುಷ್ಯನ ಬದುಕಿನಲ್ಲಿ ಯಾರ ಸಂಗವನ್ನು ಮಾಡಬೇಕು ಎಂದು ತಾಯಿ ಕೇತಲದೇವಿ ಅವರು ನಮಗೆ ತಿಳಿಸಿದ್ದಾರೆ. ಅವರು ಸಂಸ್ಕಾರಗೊಳ್ಳದ ಮಣ್ಣು ಮಡಿಕೆಯಾದರೆ ಅದರಲ್ಲಿ ಸುಜಲ ತುಂಬಿದರೆ ಅದು ಕರಗಿ ಮಣ್ಣಿನ ರೂಪಕ್ಕೆ ಮರಳುವುದು ಅಂದರೆ ಗಡಿಗೆಯನ್ನು ಘಟಕ್ಕೆ ಹೋಲಿಸುತ್ತ ದೇಹ ಸಂಸ್ಕಾರ ಹೊಂದಿರದಿದ್ದಡೆ ಅದು ವ್ರತಹೀನವಾಗಿದೆ ಅಂತ ಅರ್ಥ. ಅದನ್ನು ಸಂಸ್ಕಾರದಿಂದ ಮಂತ್ರಪಿಂಡವನ್ನಾಗಿಸಬೇಕು. ಎಲ್ಲಾ ತರಹದ ಮಣ್ಣುಗಳು ಮಡಿಕೆ ಮಾಡಲು ಯೋಗ್ಯವಾಗಿರುವದಿಲ್ಲ. ಪುಣ್ಯಸ್ತ್ರೀ ಕೇತಲದೇವಿಯವರು ಬಲ್ಲವರಾಗಿದ್ದರು ಏನೆಂದರೆ ಮಣ್ಣನ್ನು ಹೇಗೆ ಹದ ಮಾಡುವುದು. ಅದು ಶರಣರ ಸಂಗದಿಂದ ಮಾತ್ರ ಸಾಧ್ಯ ಎನ್ನುವದು. ವ್ರತಹೀನ ಜೊತೆಯ ಸಂಗವನ್ನು ನಿರಾಕರಿಸುತ್ತಾಳೆ. ಮಾಡಿದರೆ ತಾನು ದುಃಖವನ್ನು ಅನುಭವಿಸಬೇಕಾಗುತ್ತದೆ ಎಂದು ಬಲ್ಲವಳಾಗಿದ್ದಳು ಎಂಬುದನ್ನು ಅನೇಕ ದೃಷ್ಟಾಂತಗಳ ಮೂಲಕ ವಿವರಿಸಿದರು.

ವಚನ ಪ್ರಾರ್ಥನೆ, ಧರ್ಮ ಗುರು ಬಸವ ಸ್ಮರಣೆಯೊಂದಿಗೆ ಪ್ರಾರಂಭವಾದ ಮಹಾಮನೆಯ ಚಿಂತನಾ ಗೋಷ್ಠಿಯು ಸಾಮೂಹಿಕ ವಚನಗಳನ್ನು ಹೇಳುವುದರ ಮೂಲಕ ಸಂಪನ್ನಗೊಂಡಿತು.

ಗೋಷ್ಠಿಯಲ್ಲಿ ಮಹಾಮನೆಯ ಒಡೆಯರಾಗಿರುವ ಶರಣ ಹೊನಕೇರಪ್ಪ ಮಲ್ಲಪ್ಪ ಕುಂಬಾರ ಅವರ ಪರಿವಾರದರು, ನೆರೆಹೊರೆಯವರು, ಗುಳೇದಗುಡ್ಡ ಬಸವಕೇಂದ್ರ ಸದಸ್ಯರಾದ ಶರಣರಾದ ರಾಚಣ್ಣ ಕೆರೂರ, ಅಶೋಕ ಸವದಿ, ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಮಹಾಲಿಂಗಪ್ಪ ಕರನಂದಿ, ಡಾ. ಗಿರೀಶ ನೀಲಕಂಠಮಠ, ಪಾಂಡಪ್ಪ ಕಳಸಾ ಮತ್ತು ಶರಣೆಯರಾದ ಅನ್ನಪೂರ್ಣ ಕೆರೂರ, ಶ್ರೀದೇವಿ ಮು. ಶೇಖಾ, ಜಯಶ್ರೀ ಬರಗುಂಡಿ, ಪ್ರೊ. ಗಾಯತ್ರಿ ಕಲ್ಯಾಣಿ ಹಾಗೂ ಕುಂಬಾರ ಓಣಿಯ ಸದಸ್ಯರು ಹಾಗೂ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಿಸಿಗೊಳಿಸಿದರು.

Share This Article
Leave a comment

Leave a Reply

Your email address will not be published. Required fields are marked *