ಮೈಸೂರು
ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತು ಮೈಸೂರು, ನಟರಾಜ ಪ್ರತಿಷ್ಠಾನ ಮೈಸೂರು ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟ ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ “ವಚನ ಹೃದಯ” ಕೃತಿ ಬಿಡುಗಡೆ ಹಾಗೂ ಪ್ರವಚನ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು.
ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಹೊಸಮಠದ ನಟರಾಜ ಸಭಾಭವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆಯಾಯಿತು.

ಎಂ ಚಂದ್ರಶೇಖರ್ ಅಧ್ಯಕ್ಷರು, ಕನ್ನಡ ಸಾಹಿತ್ಯ ಕಲಾ ಕೋಟ ಮೈಸೂರು, ತಮ್ಮ ಆಶಯ ನುಡಿಯಲ್ಲಿ ಸಾಮೂಹಿಕ ವಚನ ಪ್ರಾರ್ಥನೆಯನ್ನು ನಡೆಸಿಕೊಟ್ಟ ಪೂಜ್ಯಶ್ರೀ ಬಸವಾನಂದ ಸ್ವಾಮಿಗಳ ಹೊರಗಣ್ಣು ಕಾಣದೆ ಇರಬಹುದು ಆದರೆ ಅವರ ಒಳಗಣ್ಣಿನಿಂದ ಪ್ರತಿಯೊಂದನ್ನು ವೀಕ್ಷಿಸಬಲ್ಲ ಅರ್ಥೈಸಿಕೊಳ್ಳಬಲ್ಲ ಶಕ್ತಿ ಅವರಿಗಿದೆ. ಶರಣರ ವಚನಗಳ ಆಶಯದಂತೆ ಅದನ್ನು ಅವರು ಅಕ್ಷರ ಸಹ ಪಾಲಿಸುತ್ತಾ ಬೇರೆಯವರಿಗೂ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಪ್ರಕೃತಿ ಚಿಕಿತ್ಸೆಯ ಮೂಲಕ ಜನರ ವ್ಯಾಧಿಗಳಿಗೆ ಔಷಧಿಯನ್ನು, ಮೌಢ್ಯೆತೆಗೆ ವಚನಾಧಾರಿತ ಉಪನ್ಯಾಸಗಳನ್ನು ನೀಡುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳುತ್ತಾ ವೇದಿಕೆಯ ಮೇಲೆ ಉಪಸ್ಥಿತರಿದ್ದವರನ್ನು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು.

ಪ್ರೊಫೆಸರ್ ಎಸ್ ಶಿವರಾಜಪ್ಪ, ವಿಶೇಷ ಅಧಿಕಾರಿಗಳು ನಟರಾಜ ಶಿಕ್ಷಣ ಸಂಸ್ಥೆಗಳು, ವಚನ ಹೃದಯ ಕೃತಿಯಲ್ಲಿ ವಚನಗಳನ್ನು ಆಧಾರವಾಗಿಟ್ಟುಕೊಂಡು ಮೌಢ್ಯತೆಯ ವಿರುದ್ಧ ಮತ್ತು ವೈಚಾರಿಕತೆಯನ್ನು ಒಳಗೊಂಡು ಕೃತಿಯನ್ನು ರಚಿಸಿದ್ದಾರೆ ಎಂದು ಹೇಳಿದರು. ಇಲ್ಲಿ ಯಾವುದೇ ಕಪೋಲ ಕಲ್ಪಿತ ವಿಷಯಗಳು ಇಲ್ಲ ವಚನ ಸಾಹಿತ್ಯದ ಒಂದೊಂದು ತಿರಳನ್ನು ಎಳೆ ಎಳೆಯಾಗಿ ಬಿಡಿಸಿ ವಿಚಾರ ಮಂಡನೆಯನ್ನು ಮಾಡಿದ್ದಾರೆ. ಬರವಣಿಗೆಯ ಶೈಲಿ ವಿಭಿನ್ನವಾಗಿ ವಿಶಿಷ್ಟವಾಗಿದೆ. ವಚನ ಗ್ರಂಥದ ಮೂಲಾಧಾರವೇ ದಯವೇ ಧರ್ಮದ ಮೂಲ ಎನ್ನುವುದು. ಇದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಬೇರೆಯವರ ಮನವನ್ನು ನೋಯಿಸದೆ ಇರುವುದೇ ಪರಮ ಪಾವನವಯ್ಯ ಎನ್ನುವುದನ್ನು ನಾವು ಈ ಕೃತಿಯಲ್ಲಿ ಕಾಣಬಹುದು. ಈ ಕೃತಿ ಕೇವಲ ವಚನ ಗ್ರಂಥವಲ್ಲ ಇದೊಂದು ಧರ್ಮ ಗ್ರಂಥವಾಗಿದೆ ಎಂದು ಸಾಕಷ್ಟು ವಿಚಾರಗಳನ್ನು ಕೃತಿಯ ಬಗ್ಗೆ ತಿಳಿಸಿಕೊಟ್ಟರು.

ವಚನ ಹೃದಯ ಕೃತಿಯ ಕೃತಿಕಾರರಾದ ಪೂಜಶ್ರೀ ಬಸವಾನಂದ ಸ್ವಾಮಿಗಳು, ಗುರುಬಸವ ಮಹಾಮನೆ ಮನಗುಂಡಿ ಧಾರವಾಡ, ಮೊದಲು ಸಾಮೂಹಿಕ ವಚನ ಪ್ರಾರ್ಥನೆಯನ್ನು ಮಾಡಿಸಿದರು ನಂತರ ತಮ್ಮ ಪ್ರವಚನದಲ್ಲಿ ಈ ಕೃತಿಯಲ್ಲಿ ಒಟ್ಟು 30 ಅಧ್ಯಾಯಗಳಿವೆ ಪ್ರತಿಯೊಂದು ಅಧ್ಯಾಯವು ನಿಮ್ಮನ್ನು ಮೌಢ್ಯತೆಯಿಂದ ವೈಚಾರಿಕತೆಯಡೆಗೆ, ಜ್ಞಾನದೆಡೆಗೆ, ಬದುಕನ್ನು ಹೇಗೆ ಸರಿದಾರಿಯಲ್ಲಿ ಕಟ್ಟಿಕೊಂಡು ಹೋಗಬೇಕು ಸರಿ ತಪ್ಪುಗಳನ್ನು ಹೇಗೆ ತುಲನೆ ಮಾಡಿ ನೋಡಬೇಕು ಎಂಬುದನ್ನು, ಯಾವುದೇ ಅಧ್ಯಾಯವನ್ನು ಓದಿದರು ಅದರಿಂದ ಒಂದು ಹೊಸ ವಿಷಯ ನಿಮಗೆ ಅರ್ಥವಾಗುತ್ತೆ ಎಲ್ಲಿಯೂ ಬೇಸರ ತರಿಸದೆ ಓದಿಸಿಕೊಂಡು ಹೋಗುತ್ತೆ ಹಿಂದೆ ಅನೇಕರು ಶರಣರ ಬಗ್ಗೆ ಕಪೋಲ ಕಲ್ಪಿತ ಕಥೆಗಳನ್ನು ಬರೆದಿದ್ದಾರೆ ಅವೆಲ್ಲ ಎಷ್ಟು ತಪ್ಪಿನಿಂದ ಕೂಡಿವೆ ಎನ್ನುವುದನ್ನು ನಾವುಗಳು ಪ್ರತಿಯೊಂದನ್ನು ವೈಜ್ಞಾನಿಕವಾಗಿ ವೈಚಾರಿಕತೆಯಿಂದ ಯೋಚಿಸಿ ನೋಡಬೇಕು ಪ್ರಶ್ನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎನ್ನುವ ನುಡಿಗಳನ್ನು ಆಡಿದರು.
ಪೂಜ್ಯಶ್ರೀ ಬಸವ ಯೋಗಿ ಪ್ರಭುಸ್ವಾಮಿಗಳು, ಬಸವ ಕೇಂದ್ರ ಎನ್ಆರ್ ಪುರ, ಇವರು ತಮ್ಮ ನುಡಿಗಳಲ್ಲಿ ಈಗಾಗಲೇ ಬಸವಾನಂದ ಸ್ವಾಮೀಜಿಯವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ ಅದರಲ್ಲಿ ಪ್ರಮುಖವಾದದ್ದು ವಚನಗಳನ್ನು ಆಧಾರವಾಗಿಟ್ಟುಕೊಂಡು ಬರೆದ ಗ್ರಂಥ ಆರೋಗ್ಯ ಅಮೃತ. ಈ ಕೃತಿಗೆ ಶಿವರಾತ್ರೀಶ್ವರರ ಪ್ರಶಸ್ತಿಯು ಲಭಿಸಿದೆ, ಎಂದರು.

ಇವರ ಇನ್ನೊಂದು ಅದ್ಭುತ ಕೃತಿ ‘ಉಪವಾಸ ಏನಿದರ ರಹಸ್ಯ.’ ಕೇವಲ ಪ್ರವಚನದ ಮುಖಾಂತರ ಅಲ್ಲ ಪ್ರಯೋಗದ ಮುಖಾಂತರ ಉಪವಾಸದಿಂದ ಹೇಗೆ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂಬುದನ್ನು ಈ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ಡಾಕ್ಟರ್ ಹೇಳವರಹುಂಡಿ ಸಿದ್ದಪ್ಪ, ಅಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಸರ್ವ ಸಮಾನತೆಗಾಗಿ ಹೋರಾಡಿದ ನಮ್ಮ ಬಸವಾದಿ ಶರಣರ ಚಿಂತನೆಗಳನ್ನು ನಾವು ಎಷ್ಟರಮಟ್ಟಿಗೆ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದಿದ್ದೇವೆ ಎನ್ನುವುದನ್ನು ಇವತ್ತು ಸಹ ನಾವು ಯೋಚಿಸಬೇಕಾಗಿದೆ. ಶರಣರ ವಚನ ಚಿಂತನೆ ಗಳಂತೆ ನಾವು ನಡೆದದ್ದೇ ಆದರೆ ಒಂದು ಸ್ವಚ್ಛ ಬದುಕನ್ನು ಬದುಕಬಹುದು ಎಂದು ಮಾತನಾಡಿದರು.
ಶ್ರೀಯುತ ಪುಟ್ಟಪ್ಪ ಮಡುಗುಂಡಿ ಅವರು ನಿರೂಪಣೆಯನ್ನು, ಚೂಡಾಮಣಿ ಅಕ್ಕನವರು ವಚನ ಪ್ರಾರ್ಥನೆಯನ್ನು ನೆರವೇರಿಸಿ ಕೊಟ್ಟರು. ಶ್ರೀಯುತ ಶರಣ ದೇವರಾಜ್ ಪಿ. ಚಿಕ್ಕಹಳ್ಳಿ, ಅಧ್ಯಕ್ಷರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಮೈಸೂರು, ಇವರು ವಂದನಾರ್ಪಣೆಯನ್ನು ಮಾಡಿದರು.
ಪೂಜ್ಯಶ್ರೀ ಚಿದಾನಂದ ಮಹಾಸ್ವಾಮಿಗಳು ಅಧ್ಯಕ್ಷರು, ಶ್ರೀ ಹೊಸಮಠ ಮೈಸೂರು ಇವರು ದಿವ್ಯ ಸಾನಿಧ್ಯವನ್ನು ವಹಿಸಿ ಕೃತಿ ಬಿಡುಗಡೆ ಮಾಡಿಕೊಟ್ಟರು.
ತುಂಬಾ ಚೆನ್ನಾಗಿ ಬರೆದಿದ್ದೀರಿ ಧನ್ಯವಾದಗಳು.