ಹಿಂದಿ ಹೇರಿಕೆ ಪ್ರತಿಭಟಿಸಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೀಪ ಬೆಳಗಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಶ್ರೀ, ಗೋ.ರು.ಚನ್ನಬಸಪ್ಪ, ಸಚಿವರಾದ ಚಲುವರಾಯಸ್ವಾಮಿ, ಮಹದೇವಪ್ಪ, ಶಿವರಾಜ್ ತಂಗಡಗಿ, ಸಭಾಧ್ಯಕ್ಷ ಯು.ಟಿ.ಖಾದರ್, ಸಾಹಿತಿ ಚಂದ್ರಶೇಖರ ಕಂಬಾರ, ಶಾಸಕರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಸಮ್ಮೇಳನದ ಮಹಾದ್ವಾರಗಳು, ಪ್ರವೇಶದ್ವಾರ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳಿಗೆ ಶಾಸಕರು ಮತ್ತು ಸಚಿವರು ಚಾಲನೆ ನೀಡಿದರು. “ಹೊಂಬಾಳೆ ಅರಳಿಸಿ ಕನ್ನಡ ನುಡಿ ಅರಳಲಿ” ಎಂಬ ಆಶಯದೊಂದಿಗೆ ಈ ಬಾರಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದಲ್ಲಿ ಶಾಸಕ ನರೇಂದ್ರಸ್ವಾಮಿ ಸಂವಿಧಾನ ಪೀಠಿಕೆ ಬೋಧಿಸಿದರು.

ಸಮ್ಮೇಳನದ ಗೌರವಾಧ್ಯಕ್ಷ ಗೊರಾ ಚನ್ನಬಸಪ್ಪ ಅವರನ್ನು ಮಂಡ್ಯದ ಸರ್​ ಎಂ ವಿಶ್ವೇಶ್ವರ ಅವರ ಪ್ರತಿಮೆ ಮುಂಭಾಗದಿಂದ ಸಾಹಿತ್ಯ ಸಮ್ಮೇಳನದ ವೇದಿಕೆಯವರೆಗೂ ಬೃಹತ್ ಮೆರವಣಿಗೆ ಮುಖಾಂತರ ಕರೆದುಕೊಂಡ ಬರಲಾಯಿತು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿ ಹೇರಿಕೆಯ ಮೂಲಕ ಕನ್ನಡ ಹಾಗೂ ಇತರ ದೇಶ ಭಾಷೆಗಳನ್ನು ದಮನಿಸುವ ಪ್ರಯತ್ನಗಳಾಗುತ್ತಿದ್ದು, ಇದನ್ನು ಪ್ರತಿಭಟಿಸದೇ ಇದ್ದರೆ ನಮ ಭಾಷೆಗಳು ಗಂಡಾಂತರಕ್ಕೆ ಸಿಲುಕಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅವರು, ಕನ್ನಡಕ್ಕೆ ಒದಗಿರುವ ಕಂಟಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಶ್ರೀಮಂತರ ಕಾರ್ಪೊರೇಟ್‌ ಕಂಪನಿಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ್ದರಿಂದ ಜನರ ಕೈಯಲ್ಲಿ ಹಣ ಇಲ್ಲದೆ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಇದಕ್ಕಾಗಿ ನಮ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರಬೇಕಾಯಿತು ಎಂದು ಹೇಳಿದರು.

ಸಂವಿಧಾನದ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿದೆ. ಅದರ ವಿರುದ್ಧ ಹೋರಾಡಬೇಕಾಗಿರುವುದು ನಮೆಲ್ಲರ ಜವಾಬ್ದಾರಿ ಎಂದ ಮುಖ್ಯಮಂತ್ರಿಗಳು ಮಂಡ್ಯ ನೆಲದಲ್ಲಿ ಕೆಲವು ದ್ವೇಷವಾದಿ, ಹಿಂಸಾವಾದಿ ಶಕ್ತಿಗಳು ಜನರ ಮನಸ್ಸಿನಲ್ಲಿ ವಿಷ ಬಿತ್ತಲು ಪ್ರಯತ್ನಿಸುತ್ತಿವೆ. ಸಿಹಿ ಬೆಳೆಯುವ ಜನ ಅವರನ್ನು ಒಳಗೆ ಬಿಟ್ಟುಕೊಂಡಿಲ್ಲ. ಇದಕ್ಕಾಗಿ ಅಭಿನಂದನೆಗಳು ಎಂದು ಹೇಳಿದರು.

ಈ ಸಮೇಳನ ನಾಡಿನ ಸಮಸ್ಯೆಗಳಿಗೆ ಉತ್ತರ ಹುಡುಕಬೇಕು. ನಾಡಿನ ಬೌದ್ಧಿಕ ದಾಸ್ಯಕ್ಕೆ ಕಾರಣಗಳೇನು?, ಅದನ್ನು ಮೀರುವ ಬಗೆ ಹೇಗೆ? ಎಂಬುದನ್ನು ಕುವೆಂಪು ವಿವರಿಸಿದ್ದಾರೆ. ಸಾವಿರಾರು ವರ್ಷಗಳಿಂದ ಪುರೋಹಿತಶಾಹಿ ನಮನ್ನು ದಾಸ್ಯದಲ್ಲಿ ಹೇಗೆ ಮುಳುಗಿಸಿದೆ ಎಂಬ ಸಮಗ್ರ ಮಾಹಿತಿಯನ್ನು ಅವರು ನೀಡಿದ್ದಾರೆ ಎಂದರು.

ಸಮ್ಮೇಳನದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು, ಎಂದು ಒತ್ತಾಯಿಸಿದರು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು, ಎಂದು ಹೇಳಿದರು.

Share This Article
Leave a comment

Leave a Reply

Your email address will not be published. Required fields are marked *