ಸೊಲ್ಲಾಪುರದಲ್ಲಿ 19ನೇ ಶರಣತತ್ವ ಕಮ್ಮಟಕ್ಕೆ ಚಾಲನೆ

ಕಮ್ಮಟದಲ್ಲಿ 300ಕ್ಕಿಂತ ಹೆಚ್ಚಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

ಸೊಲ್ಲಾಪುರ

ಇಲ್ಲಿಯ ಲಿಂಗಶೆಟ್ಟಿ ಸಾಂಸ್ಕೃತಿಕ ಸಭಾಭವನದಲ್ಲಿ ಡಿ.27 ರಿಂದ ಡಿ.30 ರವರೆಗೆ ನಡೆಯುತ್ತಿರುವ 19ನೇ ಶರಣತತ್ವ ಕಮ್ಮಟಕ್ಕೆ ಷಟಸ್ಥಲ ಧ್ವಜಾರೋಹಣ ಮಾಡುವ ಮೂಲಕ ಅಕ್ಕಲಕೋಟದ ಬಸವಲಿಂಗ ಶ್ರೀಗಳು ಶುಕ್ರವಾರ ಚಾಲನೆ ನೀಡಿದರು. ಕಮ್ಮಟದಲ್ಲಿ 300ಕ್ಕಿಂತ ಹೆಚ್ಚಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

ರಾಮದುರ್ಗದ ಅನುಭಾವಿ ಸಿದ್ದಣ್ಣ ಲಂಗೋಟಿಯವರು ಅನುಭಾವ ನೀಡುತ್ತ, ಇಂದು ಎಲ್ಲೆಡೆ ತಲ್ಲಣಗಳು ನಿರ್ಮಾಣವಾಗುತ್ತಿವೆ, ವಚನಗಳನ್ನು ತಿಳಿದುಕೊಂಡು ಜೀವನ ನಡೆಸಿದರೆ ಪ್ರತಿಯೊಬ್ಬರ ಜೀವನ ಪಾವನವಾಗುತ್ತದೆ ಎಂದರು.

ಇನ್ನೋರ್ವ ಅನುಭಾವಿ ಲಾತೂರದ ಪ್ರೊ. ಭೀಮರಾವ ಪಾಟೀಲ, ತತ್ವಶೀಲ ಸಮಾಜಕ್ಕಾಗಿ ವಚನ ಸಾಹಿತ್ಯ ಎನ್ನುವ ವಿಷಯದ ಕುರಿತು ಮಾತನಾಡುತ್ತ, ಮನುಷ್ಯ ತನ್ನ ಕಾಯ ಅಳಿದರೂ ಕೀರ್ತಿ ಉಳಿಯಬೇಕು ಎನ್ನುವಂತ ಕಾರ್ಯ ಮಾಡಬೇಕು ಎಂದರು. ಅಜ್ಜಂಪುರ ಸೇವಾ ಟ್ರಸ್ಟ್ ನಿಂದ ಶ್ಲಾಘನೀಯವಾದ ಕಾರ್ಯ ನಡೆಯುತ್ತಿದೆ. ಅವರು ಮಾಡುತ್ತಿರುವುದು ಜ್ಞಾನದ ದಾಸೋಹ. ಮಹಾರಾಷ್ಟ್ರದಲ್ಲಿ ಇನ್ನೂ ಕೆಲವು ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಲಿಂಗೈಕ್ಯ ಶರಣೆ ಪುಟ್ಟಮ್ಮ ಮತ್ತು ಲಿಂಗೈಕ್ಯ ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾಟ್ರಸ್ಟ್, ಬಸವಬಳಗ ದಾವಣಗೆರೆ, ಸೊಲ್ಲಾಪುರದ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಎಲ್ಲ ಲಿಂಗಾಯತ ಮತ್ತು ಬಸವಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

ಹುಚ್ಚಪ್ಪ ಮಾಸ್ತರ್ ಬಸವ ಬಳಗ ದಾವಣಗೆರೆ ಅಧ್ಯಕ್ಷತೆ ವಹಿಸಿದ್ದರು. ಶಿವಶಂಕರ್ ಕಾಡಾದಿ, ರಾಜಶ್ರೀ ತಳಂಗೆ, ಜಯಶ್ರೀ ಚರ್ಚಂಕ, ಪರಮಾನಂದ ಅಲಗೊಂಡ, ಷಡಕ್ಷರಿ ಅಜ್ಜಂಪುರ ಶೆಟ್ರು, ಪಿ ರುದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *