ಜನವರಿ 18 ಮತ್ತು 19 ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪ್ರತಿ ದಿನ 25,000 ಜನ ಸೇರುವ ನಿರೀಕ್ಷೆಯಿದೆ
ಚಿತ್ರದುರ್ಗ
ಜನವರಿ 18 ಮತ್ತು 19 ರಂದು ನಗರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್ ಹೇಳಿದರು.
ಮುರುಘಾ ಮಠದ ಶಿರಸಿಂಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಮ್ಮ ಬದುಕನ್ನೇ ಶರಣ ಸಾಹಿತ್ಯಕ್ಕೆ ಅರ್ಪಿಸಿಕೊಂಡಿರುವ ಬಸವಕಲ್ಯಾಣ, ಬಸವ ಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರ ಅಧ್ಯಕ್ಷತೆಯಲ್ಲಿ ಗೋಷ್ಠಿ, ಚರ್ಚೆ, ಸಂವಾದಗಳು ನಡೆಯಲಿವೆ ಎಂದರು.
ಸಾಂಸ್ಜೃತಿಕ ನಾಯಕ ಬಸವಣ್ಣ, ಮಹಿಳಾ ಸಂವೇದನೆ, ಶರಣ ಸಾಹಿತ್ಯ ಮತ್ತು ಯುವ ಜನಾಂಗ, ನಮ್ಮ ಪ್ರಾತಃ ಸ್ಮರಣೀಯರು, ಜಯದೇವ ಶ್ರೀ, ಸಿದ್ದೇಶ್ವರ ಸ್ವಾಮೀಜಿ, ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ಕುರಿತ ಗೋಷ್ಠಿ ನಡೆಯಲಿವೆ.
ಶರಣರ ವೈಚಾರಿಕ ಚಿಂತನೆಗಳು, ಶರಣರ ನಾಟಕಗಳ ಕುರಿತ ಚಿಂತನೆ ಹಾಗೂ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ನಡೆಯಲಿದೆ.
ಸಿದ್ದರಾಮಯ್ಯ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪರಿಷತ್ ಗೌರವಾಧ್ಯಕ್ಷರಾದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಸಚಿವರಾದ ಎಂ.ಬಿ. ಪಾಟೀಲ್, ಡಿ. ಸುಧಾಕರ್, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಸಂಸದ ಗೋವಿಂದ ಕಾರಜೋಳ ಸೇರಿ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪಕ್ಕೆ ಕೇಂದ್ರ ಸಚಿವರಾದ ವಿ.ಸೋಮಣ್ಣ, ಬಾಲ್ಕಿ ಶ್ರೀಗಳು, ನಿಡುಸೋಸಿ ಶ್ರೀಗಳು, ಡಾ.ಪ್ರಭಾಕರ ಕೋರೆ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಸೋಮಶೇಖರ್ ಮಾಹಿತಿ ನೀಡಿದರು.
10 ವರ್ಷದ ನಂತರ ಸಮ್ಮೇಳನ
‘2014ರ ನಂತರ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ನಡೆದಿಲ್ಲ. 10 ವರ್ಷ ಸಮ್ಮೇಳನ ನಡೆಯದಿದ್ದರೂ ಪರಿಷತ್ ಹಳ್ಳಿಹಳ್ಳಿಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿ ಶರಣ ಸಾಹಿತ್ಯವನ್ನು ಪಸರಿಸುವ ಕೆಲಸ ಮಾಡಿದೆ. ಈ ಬಾರಿ ಕೋಟೆ ನಗರಿಯಲ್ಲಿ ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲಾಗುತ್ತಿದ್ದು ಮುರುಘಾ ಮಠದ ಸಹಕಾರ ಇರಲಿದೆ’ ಎಂದರು.
25 ಸಾವಿರ ಜನ ಭಾಗವಹಿಸುವ ನಿರೀಕ್ಷೆ
ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಮಾತನಾಡಿ, ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ಅತ್ಯಂತ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅನೇಕ ಮಠಾಧೀಶರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಸುಮಾರು 25 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಮುರುಘಾರಾಜೇಂದ್ರ ಬೃಹನ್ಮಠದ ಸದಸ್ಯರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಡಾ.ಬಸವಕುಮಾರ ಶ್ರೀಗಳು, ಗುರುಮಠಕಲ್ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ಎಂ.ವೀರೇಶ್, ಡಾ.ಹೊನ್ನಲಿಂಗಯ್ಯ, ಖಜಾoಚಿ ಎಸ್.ಷಣ್ಮುಖಪ್ಪ, ಹಂಪಯ್ಯ ಸಾರಂಗಮಠ, ಅಪ್ಪರಾವ್ ಅಕ್ಕೂಣಿ ಷಡಾಕ್ಷರಯ್ಯ, ರುದ್ರಮುನಿ, ಗಣೇಶಯ್ಯ ಹಾಜರಿದ್ದರು.
ಮಾಧ್ಯಮದೋರೆ 10 ವರ್ಷ ಎಲ್ಲಿ ಮಕ್ಕೊಂಡಿದ್ರಿ ಮಹಾಪ್ರಭುಗಳೇ ಅಂತ ಕೇಳ್ರಿ
ಶರಣ ಸಾಹಿತ್ಯ ಪರಿಷತ್ ಸರಕಾರಿ ಸಂಸ್ಥೆಯಲ್ಲ. ಮಠಾಧೀಶರ ಸಹಕಾರದಿಂದ ನಡೆಯುವ ಸಂಘಟನೆಯಾಗಿದೆ ಆದ್ದರಿಂದ ಒಮ್ಮತಕ್ಕೆ ಬರಲು ಆಗಿರಲಿಕ್ಕಿಲ್ಲ. ಆದಾಗ್ಯೂ ಸಂಸ್ಥೆ ಕ್ರಿಯಾಶೀಲವಾಗಿದೆ. ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. CP ಪಾಟೀಲರೇ ನಿಮಗೆ ಅಭಿಮಾನವಿದ್ದರೆ ಸಹಕರಿಸಿ ಅದು ಬಿಟ್ಟು ಟೀಕೆ ಬೇಡ. ಆ ಪ್ರಶ್ನೆ ನಿಮಗೂ ಹಾಕ್ಕೊಳ್ಳಿ.
ಶರಣರೇ, ಒಂದು ಸಮಾವೇಶ ಮಾಡ್ಲಿಕ್ಕೆ ಮಠಾಧೀಶರ ಹತ್ರ ಯಾವ ರೀತಿ ಒಮ್ಮತ ಬೇಕು ಬಿಡಿಸಿ ಹೇಳ್ರಿ