ನರಗುಂದ
ಗಡಿನಾಡಿನಲ್ಲಿ ಕನ್ನಡದ ನಂದಾದೀಪ ಪ್ರಜ್ವಲಿಸಿದ ಭಾಲ್ಕಿ ಹಾಗೂ ನಾಗನೂರು ಮಠದ ಶ್ರೀಗಳು ಕನ್ನಡ ಕಟ್ಟಿದ ಶ್ರೇಷ್ಠ ಸಂತರು. ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಫಜಲ್ ಅಲಿ ಆಯೋಗಕ್ಕೆ ಹಾಗೂ ಮಹಾಜನ ಆಯೋಗಕ್ಕೆ ನೇರ ವರದಿಯನ್ನ ನೀಡಿ ಬೆಳಗಾವಿ ನಮ್ಮದೆ ಎಂದು ಪ್ರತಿಪಾದಿಸಿದ ನಾಗನೂರು ಶ್ರೀಗಳ ಕನ್ನಡ ಪ್ರೇಮ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಮಹಾಂತೇಶ ಹಿರೇಮಠ ಅವರು ಉಪನ್ಯಾಸ ನೀಡಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ- ೪೧ ಕಾರ್ಯಕ್ರಮ ಹಾಗೂ ಬಾಲ್ಕಿ ಚನ್ನಬಸವ ಪಟ್ಟದ್ದೇವರ ಹಾಗೂ ನಾಗನೂರು ಶಿವಬಸವ ಶ್ರೀಗಳ ಜಯಂತ್ಯುತ್ಸವ ಸಮಾರಂಭದಲ್ಲಿ ಬಾಲ್ಕಿ ಹಾಗೂ ನಾಗನೂರು ಶ್ರೀಗಳ ಬದುಕು ಮತ್ತು ಹೋರಾಟ ವಿಷಯದ ಕುರಿತು ಮಾತನಾಡಿದರು.
ಕರ್ನಾಟಕ ಏಕೀಕರಣ ಹೋರಾಟದ ಇತಿಹಾಸದಲ್ಲಿ ಮಠಾದೀಶರೆಂಬ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಜನಸಾಮಾನ್ಯರಾಗಿ ಕನ್ನಡವನ್ನು ಕಟ್ಟುವಲ್ಲಿ ಅವಿರತವಾಗಿ ಶ್ರಮಿಸಿದ ಪೂಜ್ಯದ್ವಯರು ಖಂಡ ಕರ್ನಾಟವನ್ನು ಅಖಂಡ ಕರ್ನಾಟಕವನ್ನಾಗಿಸುವ ಕನಸನ್ನು ಕಂಡವರು.
ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕೆ ನಮ್ಮ ನಾಡಿನ ಮಠಗಳಲ್ಲಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಮತ್ತು ಬೀದರನ ಭಾಲ್ಕಿ ಮಠಗಳ ಕೊಡುಗೆ ಅಪಾರವಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಅನ್ನ, ಅಕ್ಷರ ಅರಿವು ಕೊಟ್ಟು ತ್ರಿವಿದ ದಾಸೋಹ ಮಾಡುವ ಮೂಲಕ ಲಕ್ಷಾಂತರ ಮಕ್ಕಳ ಬಾಳಿಗೆ ದಾರಿದೀಪವಾಗಿ ಕೈಂಕರ್ಯ ಮಾಡುತ್ತಿವೆ ಎಂದು ಅವರು ಹೇಳಿದರು.
ಸಾನಿದ್ಯವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ ಈ ನಾಡಿನ ಇತಿಹಾಸದಲ್ಲಿ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಠಗಳಲ್ಲಿ ಬಾಲ್ಕಿ ಹಾಗೂ ನಾಗನೂರು ಮಠಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತವೆ ಎಂದು ಹೇಳಿದರು.
ಅವರು ಮುಂದೆ ಮಾತನಾಡುತ್ತ ಹುಟ್ಟುಹಬ್ಬಗಳು ಇತರರಿಗೆ ಮಾದರಿಯಾಗುವಂತಿರಬೇಕು. ಆ ನಿಟ್ಟಿನಲ್ಲಿ ಗುರುಪಾದಪ್ಪ ಹಸಬಿಯವರು ತಮ್ಮ ಸುಪುತ್ರನ ಹುಟ್ಟು ಹಬ್ಬವನ್ನು ಶ್ರೀಮಠದಲ್ಲಿ ಸರಳವಾಗಿ ಆಚರಣೆ ಮಾಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶರಣೆ ತೇಜಸ್ವಿನಿ ಸಿಂದೂರ ಅವರು ತಮ್ಮ ಸಹೋದರನಾದ ಕಲ್ಯಾಣಪ್ಪ ಹಸಬಿಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀಮಠದ ವಿದ್ಯಾರ್ಥಿಗಳಿಗೆ ದಾಸೋಹ ವ್ಯವಸ್ಥೆಯನ್ನು ಮಾಡಿಸಿ ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗುವಂತೆ ವೈಶಿಷ್ಠ್ಯಪೂರ್ಣವಾಗಿ ಆಚರಿಸಿದರು.
ವೇದಿಕೆ ಮೇಲೆ ಗುರುಪಾದಪ್ಪ ಹಸಬಿ, ರೇಖಾ ಹಸಬಿ, ಸಹನಾ ತಟ್ಟಿ, ಮಲ್ಲಪ್ಪ ಶೆಟ್ಟರ, ಶಿವಣ್ಣ ಮೊರಬದ, ಬಸವರಾಜ ಐನಾಪೂರ, ಗ್ರಾ. ಪಂ ಅಧ್ಯಕ್ಷ ಜ್ಞಾನದೇವ ಮನೇನಕೊಪ್ಪ ಪ್ರಮುಖರು ಉಪಸ್ಥಿತರಿದ್ದರು.