ಹರಿಹರ
12ನೇ ಶತಮಾನದ ಶರಣರ ಚಳುವಳಿ ನರನನ್ನು ಹರನನ್ನಾಗಿಸಿದೆ ಎಂದು ವಿಜಯಪುರದ ಶರಣ ಚಿಂತಕ ಡಾ. ಜೆ. ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಅವರು ಹರಿಹರದ ಬೈಪಾಸ್ ರಸ್ತೆಯ ಪ್ರೊ. ಕೃಷ್ಣಪ್ಪ ಮೈತ್ರಿ ವನದಲ್ಲಿ ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮಾನವ ಬಂಧುತ್ವ ವೇದಿಕೆ ಏರ್ಪಡಿಸಿದ್ದ ಲಿಂಗಾಯತ ಧರ್ಮದ ಸಿದ್ಧಾಂತ, ಸಂಘಟನೆ ಕುರಿತ ಅಧ್ಯಯನ ಶಿಬಿರದಲ್ಲಿ ಉಪನ್ಯಾಸ ನೀಡುತ್ತಾ, ಕ್ರಾಂತಿಕಾರಿ ಬಸವಣ್ಣನವರು ವಚನ ಚಳುವಳಿಯ ಮೂಲಕ ಮಹಿಳೆಯರಿಗೆ ಸಮಾನತೆ, ಆರ್ಥಿಕ ಶಕ್ತಿ, ಧಾರ್ಮಿಕ ಸಮಾನತೆಯನ್ನು ನೀಡಿ ರಾಷ್ಟ್ರೀಯವಾದಿ ಚಳುವಳಿಗೆ ಮುನ್ನುಡಿ ಬರೆದರು ಎಂದು ಹೇಳಿದರು.

ಭಾರತದ ಮೂಲ ಸಂಸ್ಕೃತಿ ಶಿವ ಸಂಸ್ಕೃತಿಯಾಗಿದ್ದು 4500 ವರ್ಷಗಳ ಹಿಂದೆ ದನ ಮೇಯಿಸಲು ಭಾರತಕ್ಕೆ ಆಗಮಿಸಿದ ಆರ್ಯ ದ್ರಾವಿಡರು ಶಿವ ಸಂಸ್ಕೃತಿಯನ್ನು ಹಾಳು ಮಾಡಿದರು, ಅಲ್ಲಿಂದಲೇ ಶುರುವಾಗಿದೆ ಮೊದಲ ಸಂಘರ್ಷ ಎಂದು ಪಾಟೀಲ ಆರೋಪಿಸಿದರು.
ಗಣೇಶನನ್ನು ಪೂಜೆ ಮಾಡಲಿಕ್ಕೆ ವೇದಗಳೇ ಹೇಳುತ್ತಿದ್ದು, ಪ್ರಸ್ತುತ ಮಂದಿರಗಳು ಸಂಸ್ಕೃತಿಯ ಸುಲಿಗೆಯ ಕೇಂದ್ರಗಳಾಗಿವೆ ಎಂದರು.

ದಾವಣಗೆರೆ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾಧ್ಯಕ್ಷ ಆವರಗೆರೆ ರುದ್ರಮನಿ ಮಾತನಾಡಿ, ಎರಡು ದಿನಗಳ ಅಧ್ಯಯನ ಶಿಬಿರವು ಅರ್ಥಪೂರ್ಣವಾಗಿದೆ, ಶರಣ-ಶರಣೆಯರು ಆಗಮಿಸಿ ಲಿಂಗಾಯತ ಮಹಾಸಭಾಕ್ಕೆ ಶಕ್ತಿ ನೀಡಿದ್ದೀರಿ, ಮನೆ ಮನೆಗೆ ಬಸವ ತತ್ವವನ್ನು ತೆಗೆದುಕೊಂಡು ಹೋಗೋಣ ಎಂದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ ಲೋಕೇಶ ಮಾತನಾಡಿ, ಬಸವಣ್ಣನವರು ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿದ್ದಕ್ಕಾಗಿ ನಮಗೆಲ್ಲ ವೇದಿಕೆಯಲ್ಲಿ ಕೂತು ಮಾತನಾಡುವ ಶಕ್ತಿ ಬಂದಿದೆ ಎಂದರು.
ಡಾ. ಓಬಳಪ್ಪನವರ ಸಂಪಾದಕತ್ವದ ಅರಿವು-ಅಸ್ಮಿತೆ ಎಂಬ ಪುಸ್ತಕವನ್ನು ಡಾ.ಜೆ.ಎಸ್. ಪಾಟೀಲ ಬಿಡುಗಡೆ ಮಾಡಿದರು.

83 ಶರಣ, ಶರಣೆಯರು ಶಿಬಿರದಲ್ಲಿ ಭಾಗವಹಿಸಿದ್ದರು. ದಾವಣಗೆರೆ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತು ಮತ್ತು ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಹಾಜರಿದ್ದರು, ಶಿಬಿರದ ಎರಡನೆ ದಿನ ಸಂವಾದ ಜರುಗಿತು.

ಇಂತಹ ಶಿಬಿರಗಳು ಹೆಚ್ಚು ನಡೆಯುವಂತೆ ಶರಣ ಸಮೂಹ ಪ್ರಯತ್ನ ಪದಲಿ. ನಿಮಗೆಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ಡಾ. ಜೆ. ಎಸ್. ಪಾಟೀಲರ ವಿಶೇಷ ಪ್ರಯತ್ನಕ್ಕೆ ಅಭಿನಂದನೆಗಳು 🌹🙏