ಲಿಂಗಾಯತ ಮಠಾಧೀಶರ ಒಕ್ಕೂಟದ ಧಾರವಾಡದ ಸಭೆಯ ಅಜೆಂಡಾವನ್ನು ಗಂಭೀರವಾಗಿ ಓದಿ. ಲಿಂಗಾಯತ ಮಠಾಧೀಶರಿಗೆ ಬಸವಣ್ಣ ಮೈಮೇಲೆ ಬಂದಿದ್ದಾರೋ ಎಂಬಂತೆ ಭಾಸವಾಗುತ್ತದೆ.
(ಜನವರಿ 17ರ ಸಭೆಗೆ ನಿಮ್ಮ ಪ್ರತಿಕ್ರಿಯೆ ಕಳಿಸಿ. ಉತ್ತಮ ಆಲೋಚನೆಗಳನ್ನು ಪ್ರಕಟಿಸುತ್ತೇವೆ, ಪೂಜ್ಯರಿಗೆ ತಲುಪಿಸುತ್ತೇವೆ. basavamedia1@gmail.com)
ಬೆಂಗಳೂರು
ಲಿಂಗಾಯತ ಧರ್ಮ ಸಂಘಟನೆಗೆ ಇಂದು ಕಾಲ ಪಕ್ವವಾಗಿದೆ ಎಂದು ಅನೇಕರು ನಾವು ಮಾತನಾಡುತ್ತಿದ್ದೆವು. ಎಂಬತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಗೊರುಚ ಅವರು ನಮ್ಮ ಬಳಿಯಲ್ಲಿ ಅನೇಕ ಸಾರಿ ಈ ಮಾತನ್ನು ಹೇಳಿದ್ದಾರೆ. ಶ್ರೀ ಅರವಿಂದ ಜತ್ತಿ ಬಸವ ಭವನದಲ್ಲಿ ಸೇರಿದಾಗ ಈ ಮಾತನ್ನು ಮತ್ತೆ ಮತ್ತೆ ಹೇಳಿದ್ದಾರೆ.
ಶರಣ ಅಶೋಕ ಬರಗುಂಡಿ ಅವರು ಕೂಡ ಹೀಗೆ ಚರ್ಚೆ ಮಾಡುತ್ತಿದ್ದಾರೆ. ಲಿಂಗಾಯತದ ಸಬಲೀಕರಣಕ್ಕೆ ಅವರು ಅವಿರತ ದುಡಿಯುತ್ತಿದ್ದಾರೆ. ರಾಜ್ಯದಾದ್ಯಂತ ವಚನ ಮಾಂಗಲ್ಯ ಮದುವೆಗಳು ಅವರ ನೇತೃತ್ವದಲ್ಲಿ ನಡೆಯುತ್ತಿವೆ. ಲಿಂಗಾಯತದ ಆಚರಣೆಗಳು ಬಸವ ಪ್ರಣೀತ ತತ್ವದಲ್ಲಿ ನಡೆಯಬೇಕು ಎಂಬ ಅಭಿಯಾನವನ್ನು ಏಕವ್ಯಕ್ತಿ ಡಣಾಯಕರಂತೆ ಅವರು ಹೋರಾಟ ನಡೆಸಿದ್ದಾರೆ. ಒಂದು ದಿನವೂ ಬಿಡುವಿಲ್ಲದಂತೆ ಅವರು ಊರಿಂದ ಊರಿಗೆ ಪ್ರವಾಸ ಮಾಡುತ್ತಾ ಲಿಂಗಾಯತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಡಾ. ಜೆ. ಎಸ್. ಪಟೀಲರು ಮತ್ತೊಬ್ಬ ಡಣಾಯಕರು. ಈ ಬಗ್ಗೆ ಡಾ. ಎಸ್. ಎಂ. ಜಾಮದಾರ್ ಅವರು ಕಾರ್ಯಪ್ರವೃತ್ತರಾಗಿದ್ದಾರೆ.
ಕ್ರಾಂತಿಕಾರಕ ಅಜೆಂಡ

ಇದಕ್ಕೆ (ಲಿಂಗಾಯತ ಧರ್ಮ ಸಂಘಟನೆಗೆ) ಸಾಕ್ಷಿಯೆಂಬಂತೆ ಲಿಂಗಾಯತ ಮಠಾಧೀಶರ ಒಕ್ಕೂಟವು ಇದೇ ೧೭ ರಂದು ಧಾರವಾಡದಲ್ಲಿ ಸಭೆ ಸೇರುತ್ತಿದೆ. ಸಭೆ ಸೇರುತ್ತಿರುವುದು ವಿಶೇಷವೇನಲ್ಲ. ಆದರೆ ಈ ಸಭೆಯಲ್ಲಿ ಚರ್ಚೆಗೆ ಇಡಲಾಗಿರುವ ಅಜೆಂಡ ನಿಜಕ್ಕೂ ಕ್ರಾಂತಿಕಾರಕವಾಗಿವೆ. ಈ ಅಜೆಂಡಾದ ಕಾರ್ಯಸೂಚಿಯನ್ನು ಗಂಭೀರವಾಗಿ ಪದಪದವನ್ನು ಓದಿದರೆ ಲಿಂಗಾಯತ ಮಠಾಧೀಶರಿಗೆ ಬಸವಣ್ಣ ಮೈಮೇಲೆ ಬಂದಿದ್ದಾರೋ ಎಂಬಂತೆ ಭಾಸವಾಗುತ್ತದೆ.
ನಮ್ಮೆಲರಿಗೂ ಪೂಜ್ಯರೂ ಗೌರವಾನ್ವಿತರೂ ಆದ ಶ್ರೀ ಜಗದ್ಗುರು ತೋಂಟದ ಸಿದ್ಧರಾಮ ಶ್ರೀಗಳ ನೇತೃತದಲ್ಲಿ ಇಂತಹ ಕಾಂತ್ರಿಕಾರಕ ಸಭೆ ನಡೆಯುತ್ತಿದೆ ಎಂಬುದು ಬಹಳ ಮುಖ್ಯವಾದ ಬೆಳವಣಿಗೆಯಾಗಿದೆ. ಲಿಂಗಾಯತ ಸಂಘಟನೆಗಳಲ್ಲಿ ಅನೇಕ ಬಾರಿ ‘ಸ್ವಾಮೀಜಿಗಳನ್ನು ನೆಚ್ಚಿಕೊಂಡರೆ ಲಿಂಗಾಯತ ಧರ್ಮದ ಜಾಗೃತಿ ಸಾಧ್ಯವಿಲ್ಲ’ ಎಂಬ ಅನುಮಾನದ ಅಭಿಪ್ರಾಯಗಳ ವ್ಯಕ್ತವಾಗುತ್ತಿದ್ದವು. ಇದಕ್ಕೆಲ್ಲಾ ಧಾರವಾಡದಲ್ಲಿನ ಜನವರಿ ೧೭ರ ಲಿಂಗಾಯತ ಮಠಾಧೀಶರ ಸಭೆಯ ಅಜೆಂಡ ಕೊನೆ ಹಾಡುತ್ತಿರುವಂತೆ ಕಾಣುತ್ತಿದೆ.
ಮತ್ತೊಂದು ವಿಶೇಷ ಎಂದರೆ ಜನವರಿ ೧೭ ರಂದು ನಡೆಯುವ ಲಿಂಗಾಯತ ಮಠಾಧೀಶರ ಸಭೆಯ ಹಿಂದಿನ ದಿನ, ಅಂದರೆ ಜನವರಿ ೧೬ ರಂದು ಜಾಗತಿಕ ಲಿಂಗಾಯತ ಮಹಾಸಭೆಯ ಆಡಳಿಯ ಮಂಡಳಿಯ ಸಭೆಯೂ ಧಾರವಾಡದಲ್ಲಿ ನಡೆಯುತ್ತಿದೆ. ಇವೆಲ್ಲಾ ಶ್ಲಾಘನೀಯ, ಸ್ವಾಗತಾರ್ಹ ಬೆಳವಣಿಗೆಗಳು.
ಹಿಂದುತ್ವದ ಕಪಿಮುಷ್ಟಿ

ಲಿಂಗಾಯತ ಮಠಾಧೀಶರ ಒಕ್ಕೂಟ ಸಭೆಯಲ್ಲಿನ ಅಜೆಂಡಗಳಲ್ಲಿ ನನಗೆ ವೈಯುಕ್ತಿಕವಾಗಿ ಎರಡನೆಯದು ಬಹಳ ಮುಖ್ಯ. ಅದು ಹಿಂದುತ್ವದ ಕಪಿಮುಷ್ಟಿಯಿಂದ ಲಿಂಗಾಯತ ಯುವಕರನ್ನು ಮುಕ್ತಿಗೊಳಿಸುವ ಮಾರ್ಗವನ್ನು ಕುರಿತಂತೆ ಸಭೆಯಲ್ಲಿ ನಡೆಯುವ ಚರ್ಚೆ. ಇದು ಕೇವಲ ಲಿಂಗಾಯತ ಯುವಕರ ರಕ್ಷಣೆ ಮಾತ್ರವಲ್ಲದೆ ಭಾರತದ ಜನತಂತ್ರವನ್ನು ಉಳಿಸುವ ಮಹಾಮಾರ್ಗವಾಗಿದೆ.
ಇದು ಕ್ರಾಂತಿಕಾರಕ ಬೆಳವಣಿಗೆ. ಏಕೆಂದರೆ ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ರಾಜ್ಯದಾದ್ಯಂತ “ಅಭಿಯಾನ” ನಡೆಸುವ ಬಗ್ಗೆಯೂ ಸಭೆಯಲ್ಲಿ ನಿರ್ಣಯವಾಗಲಿದೆ.
ಲಿಂಗಾಯತ ಯುವಕರನ್ನು ಸಂಘ ಪರಿವಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆ ಮೂಲಕ ತನ್ನ ಹಿತಾಸಕ್ತಿಗಳನ್ನು, ತನ್ನ ಅಜೆಂಡಾವನ್ನು ಅದು ಸಾಧಿಸಿಕೊಳ್ಳುತ್ತಿದೆ. ಸಮಾನತೆಯ ಬಸವ ಸಿದ್ಧಾಂತದ ವಿರುದ್ಧ ೧೨ನೆಯ ಶತಮಾನದಲ್ಲಿ ಬ್ರಾಹ್ಮಣ್ಯವು ಹೇಗೆ ಹತ್ಯಾಕಾಂಡ ನಡೆಸಿತ್ತೋ ಅದೇ ರೀತಿಯಲ್ಲಿ ೨೧ ನೆಯ ಶತಮಾನದಲ್ಲಿ ಬಸವಣ್ಣನವರನ್ನು, ವಚನ ಸಾಹಿತ್ಯವನ್ನು, ಸಮಾನತೆ ಪ್ರಣಾಳಿಕೆಯನ್ನು ಕೊನೆಗೊಳಿಸುವ, ಅದನ್ನು ವೇದಾಗಮ ಶಾಸ್ತ್ರ ಪುರಾಣದಲ್ಲಿ ಲೀನ-ವಿಲೀನಗೊಳಿಸುವ ಪ್ರಯತ್ನಕ್ಕೆ ಅದು ಮುಂದಾಗಿದೆ.
ಕುಂಕುಮಧಾರಿ ನಾಯಕರು

ನಮ್ಮ ಯುವಕರು-ಯುವತಿಯರು ಹಿಂದುತ್ವಕ್ಕೆ ಬಲಿಯಾಗಿರುವುದರಿಂದಲೇ ಬಸವ-ವಿರೋದಿ-ವಚನ ಸಂಸ್ಕೃತಿ ವಿರೋಧಿ ರಾಜಕೀಯ ಕರ್ನಾಟಕದಲ್ಲಿ ನೆಲೆಯೂರಿದೆ ಮತ್ತು ಬೆಳೆಯುತ್ತಿದೆ. ನಮ್ಮ ಯುವ ಸಮುದಾಯವನ್ನು ಹಿಂದುತ್ವದ ಸಂಕೋಲೆಯಿಂದ ಬಿಡುಗಡೆ ಎಷ್ಟು ಮುಖ್ಯವೋ ಅಷ್ಟೇ ಮತ್ತು ಅದಕ್ಕಿಂತ ಹೆಚ್ಚು ಮುಖ್ಯವಾದುದು ಬಸವಣ್ಣನವರ ಹೆಸರು ಹೇಳಿಕೊಂಡು ಲಿಂಗಾಯತರ ನಾಯಕರೆಂದು ಬಡಬಡಿಸುತ್ತಿರುವ ಕುಂಕುಮಧಾರಿಗಳಿಗೆ – ತೋರಿಕೆಗೆ ದಟ್ಟವಾಗಿ ವಿಭೂತಿ ಬಳಿದುಕೊಂಡು ಮೆರೆಯುತ್ತಿರುವ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕಾಗಿದೆ.
ಸತ್ಯನಾರಾಯಣ ಪೂಜೆ, ಗುರವಾರ-ಗುರವಾರ ಬೃಂದಾವನ ಸುತ್ತುವುದು, ಶಿರಡಿ-ತಿರುಪತಿಗೆ, ಧರ್ಮಸ್ಥಳಕ್ಕೆ ಹೋಗುವುದು ಇವೆಲ್ಲ ಶರಣ ಧರ್ಮದಲ್ಲಿಲ್ಲ. ಪ್ರವಾಸಕ್ಕೆಂದು, ಪ್ರಕೃತಿಯನ್ನು ಸವಿಯಲು ಇಂತಹ ಪ್ರವಾಸಗಳು ನಡೆಯಬಹುದು. ಆದರೆ ಗುಡಿ ಸುತ್ತಲು, ಹರಕೆ ಸಲ್ಲಿಸಲು, ಮಂಡೆ ನೀಡಲು ಧಾರ್ಮಿಕ ನೆಲೆಯಲ್ಲಿ ಆಚರಿಸುವುದು ಸಲ್ಲ.
ಈ ಬಗೆಯ ಮೌಢ್ಯದಿಂದ, ಅರ್ಥರಹಿತ ಆಚರಣೆಗಳಿಂದ ನಮ್ಮ ಮುಗ್ದ ಜನರು ಹಗಲು-ರಾತ್ರಿ ಗಳಿಸಿದ ಹಣವನ್ನು ದಾನ-ದಕ್ಷಿಣೆಯಲ್ಲಿ, ಮುಡುಪು ನೀಡುವುದರಲ್ಲಿ, ಹರಕೆ ಹೊತ್ತುಕೊಳ್ಳುವದರಲ್ಲಿ ಕಳೆದುಕೊಳ್ಳುತ್ತಿದ್ದಾರೆ.
ಮಾಲೆಗಳ ಸರಮಾಲೆ
ಮಾಲೆ ಧರಿಸುವ (ಹನುಮ ಮಾಲೆ, ದತ್ತ ಮಾಲೆ, ಅಯ್ಯಪ್ಪ ಮಾಲೆ, ಅನುಸೂಯ ಮಾಲೆ ಮುಂತಾದ) ಅರ್ಥರಹಿತ ಮೌಢ್ಯದ ಆಚರಣೆಗಳಿಗೆ ನಮ್ಮ ಯುವಕರು ಬಲಿಯಾಗಿದ್ದಾರೆ. ಮಾಲೆ ಧರಿಸುವುದು ಬಸವ ಸಂಸ್ಕೃತಿಯಲ್ಲ. ಯಾರಾದರೂ ಇಂತಹ ಮಾಲೆ ಹಾಕಿಕೊಳ್ಳುವ ಆಚರಣೆಯನ್ನು ಬಾಹ್ಮಣ್ಯದವರು ಆಚರಿಸುವುದನ್ನು ನೋಡಿದ್ದೀರಾ? ಇವುಗಳಿಗೆ ಬಸವ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಲಿಂಗಾಯತರಲ್ಲಿ ಸಾರಬೇಕಾಗಿದೆ.

ಲಿಂಗಾಯತರ ಮೇಲೆ ನಡೆಯುತ್ತಿರುವ ನಿರಂತರ ಸಾಂಸ್ಕೃತಿಕ, ಆರ್ಥಿಕ. ಸಾಮಾಜಿಕ ಆಕ್ರಮಣ-ದಾಳಿಯನ್ನು ಎದುರಿಸಲು ಲಿಂಗಾಯತರಲ್ಲಿ ಜಾಗೃತಿ ಮೂಡಿಸುವದಕ್ಕೆ ಸಂಬಂಧಿಸಿದ ಮಹಾಸಭೆಯನ್ನು ಜನವರು ೧೭ ರಂದು ಧಾರವಾಡದಲ್ಲಿ ನಡೆಯುತ್ತಿದೆ. ಈ ನಿರಂತರ ದಾಳಿ ಯಾವುವು?
•ವಚನ ದರ್ಶನ ಎಂಬ ಕುಕೃತಿಯ ಮೂಲಕ ಬಸವ ಸಿದ್ಧಾಂತವನ್ನು, ವಚನ ಸಂವಿಧಾನವನ್ನು ವಿಕೃತಿಗೊಳಿಸುವ ಆರ್ ಎಸ್ ಎಸ್ ಪ್ರಯತ್ನ
- ಶರಣರನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸಿದ ಶರಣರ ಶಕ್ತಿ ಚಿತ್ರ
•ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ. ಬಿ. ಆರ್. ಅಂಬೆಡ್ಕರ್ ಅವರ ಹೆಸರನ್ನು ಜಪಿಸಿವುದಕ್ಕೆ ಬದಲಾಗಿ “ದೇವರ” ಹೇಸರನ್ನು ಜಪಿಸಿದ್ದರೆ “ಸ್ವರ್ಗ’ ದೊರಕುತ್ತಿತ್ತು ಎಂಬ ಗೃಹ ಮಂತ್ರಿ ಅಮಿತ್ ಶಾ ಅವರ ಮಾತುಗಳು ಸಂವಿಧಾನ ವಿರೋಧಿ ಮಾತ್ರವಲ್ಲ, ಅವು ಬಸವ ಸಂವಿಧಾನ ವಿರೋಧಿಯೂ ಹೌದು.
ಏಕೆಂದರೆ ಲಿಂಗಾಯತರಿಗೆ ಬಸವ ಸಂವಿಧಾನದಲ್ಲಿ ಸ್ವರ್ಗವೂ ಇಲ್ಲ, ನರಕವೂ ಇಲ್ಲ. ನಮಗಿರುವುದೊಂದೇ ಭೂಮಿ. ಇಂತಹ ಗಣತಂತ್ರ ವಿರೋಧಿ ಕ್ರಮ-ನಡೆಗಳನ್ನು ನಾವು ವಿರೋಧಿಸಬೇಕು.
- ಬಸವನಗೌಡ ಯತ್ನಾಳ ಮೂಲಕ ಬಸವಣ್ಣನವರ ಬಗ್ಗೆ ಹೀಯಾಳಿಕೆಯ-ಕೀಳು ಭಾಷೆಯ ಪ್ರಯೋಗ. ಇಡೀ ದೇಶದ ಶ್ರದ್ಧಾಬಿಂದು, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಕೀಳುತನದ, ಹೀಯಾಳಿಕೆಯ ಧೂರ್ತತನದ ಮಾತನಾಡಿದ ಯತ್ನಾಳ್‌ಗೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕ್ರಮ ತೆಗೆದುಕೊಂಡಿಲ್ಲ. ಅಂದ ಮೇಲೆ ಯತ್ನಾಳ್ ಬಸವಣ್ಣನವರ ಬಗ್ಗೆ ಹೇಳಿರುವ ಕೀಳು ಮಾತು ಆರ್‌ಎಸ್‌ಎಸ್‌ಗೆ ಒಪ್ಪಿಗೆಯಿದೆ ಎಂದೇ ಅರ್ಥ.
- ಶೀಟಿ ರವಿ ಎನ್ನುವ ಶಾಸನಕರ್ತ ವಿಧಾನ ಪರಿಷತ್ತಿನಲ್ಲಿ ಶ್ರೀಮತಿ ಲಕ್ಷ್ಮಿ ಹೆಬಾಳ್ಕರ್ ಬಗ್ಗೆ ಬಳಸಿರುವ ಹೀನ ಮಾತು ಲಿಂಗಾಯತಕ್ಕೆ ಬಗೆದ ದ್ರೋಹ, ಮುಖ್ಯಮಂತ್ರಿಯವರಿಗೆ “ನಿತ್ಯಸುಮಂಗಲಿ” ಪದದ ಬಳಕೆಯು ಮಹಿಳೆಯರನ್ನು ಹೀಯಾಳಿರುವ ಮಾತು. ಇದಕ್ಕೆ ಲಿಂಗಾಯತದಲ್ಲಿ ಅವಕಾಶವಿಲ್ಲ.
- ಸಾಣೆಹಳ್ಳಿ ಶ್ತೀಗಳ ಬಗ್ಗೆ ಅತ್ಯಂತ ಅವಮಾನಕರ ಮಾತುಗಳನ್ನು ಆಡುತ್ತಿರುವ ವಿರೋಧಿಗಳು. (ಸಾಣೆಹಳ್ಳಿ ಶ್ರೀಗಳ ಮಾತುಗಳನ್ನು ಈ ವಿಷಭಟ್ “ಗೊಡ್ಡು ಪುರಾಣ” ಎನ್ನುತ್ತಾನೆ. ತನ್ನ ಪತ್ರಿಕೆಯಲ್ಲಿ ಬಸವ ತತ್ವದ ಬಗ್ಗೆ ಅವಹೇಳನಕಾರಿ ಲೇಖನಗಳಿಗೆ ಪ್ರೋತ್ಸಾಹ ನೀಡುತ್ತಾನೆ.)
- ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ‘ಕುಂಭಮೇಳ’ ಎನ್ನುವ ಹಿಂದುತ್ವದ ಮೌಢ್ಯಚರಣೆಗೆ ಲಿಂಗಾಯತರನ್ನು ಕರೆದುಕೊಂಡು ಹೋಗುತ್ತಿರುವ ಆರ್ ಎಸ್ ಎಸ್ ಮತ್ತು ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ರಾಜ್ಯದ ಎರಡು ದೊಡ್ಡ ಮಠಗಳು.
•ಸೇಡಂ ನಗರದಲ್ಲಿ ನಡೆಯುತ್ತಿರುವ ಭಾರತ ಸಂಸ್ಕೃತಿ ಉತ್ಸವವು ಕೂಡ ಬಸವಣ್ಣನವರ ನಾಡಾದ ಕಲ್ಯಾಣ ಕರ್ನಾಟಕವನ್ನು ಆರ್ ಎಸ್ ಎಸ್ ಮಯಮಾಡುವ ಹುನ್ನಾರವಾಗಿದೆ. ಸುಮಾರು ೨೫೦ ಎಕರೆ ಪ್ರದೇಶದಲ್ಲಿ ೯ ದಿನಗಳ ಕಾಲ ಹತ್ತಾರು ಲಕ್ಷ ಜನರನ್ನು ಸೇರಿಸಿ ಆರ್ ಎಸ್ ಎಸ್, ಬಿಜೆಪಿ, ವಿಶ್ವ ಹಿಂದು ಪರಿಷತ್, ಭಜರಂಗ ದಳ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮುಂತಾದ ಸಂಘಪರಿವಾರದ ಮೂಲಕ ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸುತ್ತಿರುವ ಭಾರತ ಸಂಸ್ಕೃತಿ ಉತ್ಸವವು ಲಿಂಗಾಯತ ಯುವಕರಿಗೆ, ಒಬಿಸಿ ಯುವಕರಿಗೆ ಮಂಕು ಭೂದಿ ಎರಚುವ ಕುಕೃತ್ಯವಾಗಿದೆ. ಅಲ್ಲಿ ಬಸವಣ್ಣನವರಿಗೆ ಸ್ಥಾನ ನೀಡುವುದಿಲ್ಲ. ನೀಡಿದರೂ ಮುಲಾಜಿಗೆ ಅಷ್ಟೇ.
- ಹೀಗೆ ಲಿಂಗಾಯತದ ಮೇಲೆ, ಬಸವಣ್ಣನವರ ಮೇಲೆ ವಚನ ಸಾಹಿತ್ಯದ ಮೇಲೆ, ಸಂವಿಧಾನದ ಮೇಲೆ, ಜನತಂತ್ರದ ಮೇಲೆ ನಡೆಯುತ್ತಿರುವ ದಾಳಿಯನ್ನು ಹಿಮ್ಮೆಟ್ಟಿಸಬೇಕಾಗಿದೆ.
ನಮ್ಮ ಒತ್ತಾಸೆ ಮತ್ತು ಹಕ್ಕೊತ್ತಾಯ
(೧). ಲಿಂಗಾಯತ ಮಠಗಳು ಮೂಢ ನಂಬಿಕೆಗಳನ್ನು ಹರಡಬಾರದು, ಪಾಲಿಸಬಾರದು ಎಂದು ನಿರ್ಣಯ ತೆಗೆದುಕೊಳ್ಳಬೇಕು.
(೨). ಮುತೈದೆಯರಿಗೆ ಮುಡಿ ತುಂಬುವಂತಹ ಲಿಂಗ ಅಸಮಾನತೆಯ ಕಾರ್ಯಕ್ರಮಗಳನ್ನು ಮೊದಲು ಮಠಗಳು-ಮಠಾಧೀಶರು ನಿಲ್ಲಿಸಬೇಕು. ಏಕೆಂದರೆ ಲಿಂಗಾಯತದಲ್ಲಿ ವಿಧವೆಯರನ್ನೂ ಸೇರಿಕೊಂಡು, ಎಲ್ಲಾ ಜಾತಿ-ಪಂಗಡ ಮಹಿಳೆಯರೂ ಮುತೈದೆಯರೇ. ಈ ಬಗ್ಗೆ ಮಠಾಧೀಶರ ಸಭೆಯಲ್ಲಿ ನಿರ್ಣಯವಾಗಬೇಕು. ಲಿಂಗಾಯತದಲ್ಲಿ ಯಾವ ಮಹಿಳೆಯೂ “ಮುಂಡೆ”ಯಾಗುವುದಿಲ್ಲ.
(೩). ಲಿಂಗಾಯತ ಮಠಗಳಲ್ಲಿ ಯಾವುದೋ ಚಾರಿತ್ರಿಕ ಕಾರಣಕ್ಕೆ ಸಂಸ್ಕೃತದ ಪಾಠಶಾಲೆಗಳಿವೆ. ಅವುಗಳನ್ನು ಮಠಗಳು ಹಂತ ಹಂತವಾಗಿ ಮುಚ್ಚಬೇಕು.
(೪). ಆರ್ ಎಸ್ ಎಸ್ ಸ್ವಯಂಸೇವಕರಾಗಿರುವ ಶಾಸಕರು-ಮಂತ್ರಿಗಳನ್ನು ಮಠಗಳ ಕಾರ್ಯಕ್ರಮಗಳಿಗೆ ಕರೆಸುವುದನ್ನು ಹೇಗೆ ನಿಲ್ಲಿಸಬೇಕು ಎಂಬ ಬಗ್ಗೆ ಮಠಾಧೀಶರ ಸಭೆಯಲ್ಲಿ ಚರ್ಚೆಯಾಗಬೇಕು.
(೫). ಆರ್ ಎಸ್ ಎಸ್ ಪೋಷಿತ-ಪ್ರಾಯೋಜಿತ-ಪ್ರೋತ್ಸಾಹಿತ ಕಾರ್ಯಗಳಿಗೆ — ಸೇಡಂನಲ್ಲಿ ನಡೆಯುವ ಭಾರತ ಸಂಸ್ಕೃತಿ ಉತ್ಸವ, ಪ್ರಯಾಗ್ ರಾಜ್ ನಲ್ಲಿ ನಡೆಯುವ ಕುಂಭಮೇಳ, ಸೂಲಿಬೆಲಿ ಆಯೋಜಿಸುತ್ತಿರುವ ಕಾವೇರಿ ಆರತಿ-ತುಂಗಭದ್ರಾ ಆರತಿ ಮುಂತಾದ ಗಂಗಾ ಆರತಿ ಅನುಕರಣೆಯ ಕಾರ್ಯಕ್ರಮಗಳಿಗೆ ಅವಕಾಶ-ಪ್ರೋತ್ಸಾಹ, ಅನುದಾನ ನೀಡಕೂಡದು.
(೬). ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಹಿಂದುತ್ವವಾದಿಗಳನ್ನು ಮಠಕ್ಕೆ ಕರೆಸುವ, ಅವರಿಂದ ಶಿವಾನುಭವ ಗೋಷ್ಟಿ ನಡೆಸುವ ಭಾಷಣ ಮಾಡಿಸುವ, ಪ್ರಶಸ್ತಿ ನೀಡುವ ಕೆಲಸವನ್ನು ಲಿಂಗಾಯತದ ಯಾವ ಮಠಗಳು ಇನ್ನು ಮುಂದೆ ಮಾಡಕೂಡದು ಎಂಬ ನಿರ್ಣಯವನ್ನು ತೆಗೆದುಕೊಳ್ಳಬೇಕು.
ಇವು ನಮ್ಮ ಒತ್ತಾಯ.
ಇವುಗಳು ಅಗತ್ಯವಾಗಿ ಆಗಲೇಬೇಕಾದ ಕೆಲಸಗಳು.
super
ಜೈ ಲಿಂಗಾಯತ
ಸುಭದ್ರ ನಿರ್ಣಯ
ಕ್ರಾಂತಿಕಾರಕ ಹೆಜ್ಜೆ ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿವೆ
ಆ ನಿಟ್ಟಿನಲ್ಲಿ ಮಠಾಧೀಶರು ಅಣಿಯಾಗುತ್ತಿದ್ದಾರೆ ಎಂಬುವುದು ಉತ್ತಮ ಬೆಳವಣಿಗೆ.
ಬಸವ ಚಿಂತಕರು ಸೂಚಿಸಿದ ಬೇಡಿಕೆಗಳು
ಆಗಲೆ ಬೇಕಾದ ಕೆಲಸಗಳು
ಪ್ರೂ. ಟಿ. ಆರ್.ಚಂದ್ರಶೇಖರ್ ಅವರ ಅಭಿಪ್ರಾಯ ಲಿಂಗಾಯತ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಪೂರಕವಾಗಿದೆ. ಅವರಿಗೆ ಶರಣು ಶರಣಾರ್ಥಿ.
ಇದು ಒಂದು ಉತ್ತಮವಾದ ನಡೆ,ತಮ್ಮ ಎಲ್ಲ ಮಠಗಳಲ್ಲಿ ಈ ನಿರ್ಣಯಗಳನ್ನು ಚಾಚು ತಪ್ಪದೆ ಪಾಲಿಸಬೇಕು,
ಈ ಕಾರ್ಯ ಮೊದಲೇ ಆಗಬೇಕಿತ್ತು ಆಗಿದ ಡ್ಯಾಮೇಜಾದರೂ ಕಡಿಮೆಯಾಗುತಿತ್ತು.ಈಗಲಾದರೂ ದೃಢನಿರ್ದಾರ ಮಾಡಿದರಲ್ಲ ಅದೇ ಸಂತೋಷ. ಇಂತಹ ಕಾರ್ಯಗಳನ್ನು ಆಗಾಗ ಬೇರೆಬೇರೆ ಸ್ಥಳಗಳಲ್ಲಿ ಹಮ್ಮಿಕೊಳ್ಳ ಬೇಕು. ಶರಣುಶರಣಾರ್ಥಿಗಳು
ಇದು ಸದ್ಯದ ಅವಶ್ಯಕತೆಯಾಗಿದೆ.ಲಿಂಗಾಯತ ಧರ್ಮದ ಜಾಗೃತಿಗಾಗಿ ಮಠಾಧೀಶರ ನಿರ್ಣಯ ಶ್ಲಾಘನೀಯವಾದುದು.
ಎಲ್ಲವೂ ಉತ್ತಮವಾದ ವಿಚಾರಗಳಿದ್ದು ಅನುಷ್ಠಾನಕ್ಕೆ ತರಬೇಕು.
ಬುಡಕ್ಕೆ ಬೆಂಕಿ ಬಿದ್ದವರಂತೆ ನಟಿಸಿ , act busy take it easy ಅನ್ನೋ ಧೋರಣೆಯಲ್ಲಿ ಕಣ್ಣೋರೆಸುವ ತಂತ್ರ ಬಿಟ್ಟು, ಕೆಲಸಕ್ಕೆ ಬಾರದ ಕೆಲ ತಲೆಹಿಡುಕ ಹಿರಿಯರು jlm ನಿಂದ ಹೊರಗೆ ಬರಲಿ. ಎಲ್ಲಿ jlm ನಿಂದ ನಮ್ಮನ್ನು ಹೊರ ಹಾಕುತ್ತಾರೋ ಅನ್ನೋ ಆತಂಕದಲ್ಲಿ ಇಂತಹ ಪ್ರಕಟಣೆಗಳು ಬಾರದಿರಲಿ.
!!ಗುರ ಬಸವಲಿಂಗ ಶರಣ!!
[ಅ.ಸ.ಷ.]
👆👆👆👆👆👆👆
🙏🙏🙏🙏🙏🙏🙏
ಪೂಜ್ಯರೇ
ತಡವಾಗಿಯಾದರೂ ಪೂಜ್ಯ ಮಠಾಧೀಶರುಗಳು ಮುಂದುವರೆದು ಲಿಂಗ ಧರ್ಮದ ಲಿಂಗವಂತರಲ್ಲಿ ಸ್ವಾಭಿಮಾನ ಬರುವಂತೆ ಮಾಡುವಲ್ಲಿ ನಾವು ಕೈಜೋಡಿಸುತ್ತೆವೆ, ಶರಣಾರ್ಥಿ.
ಯಿಂದ
ಪೀಠಾಧಿಪತಿ
ಅಲ್ಲಮಪ್ರಭು ಅನುಭಾವ ಪೀಠ
ಪಶ್ಚಿಮ ಕರಾವಳಿ ಭಾರತ ದೇಶ
😀😀😀
ಈ ಜನಜಾಗ್ರತಿ ರಾಜ್ಯಾದ್ಯಂತ ನಡೆಯಲೇಬೇಕು
ಇದೆಲ್ಲಕ್ಕಿಂತ ಮುಖ್ಯವಾಗಿ ಮುಂದಿನ ದಿನಗಳಲ್ಲಿ ಮಠಗಳು ಮತ್ತು ಅದರ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ಆಗ ಬೇಕಾಗಿದೆ, ಮುಂದೆ ಮಠಗಳು ಮುನ್ನಡೆಯುವ ಮಾರ್ಗ ಧರ್ಮಾದಾರಿತ ಹಾಗು ಭಕ್ತರ ಅಭಿವೃದಿಗೆ ಪೂರಕವಾಗ ಬೇಕು. ಮಠಾಧೀಶರು ಸರಳ ಸಮಾನರಾಗ ಬೇಕು, ರಕ್ತ ಸಂಬಂದ ತ್ಯಜಿಸಿ ವಿರಕ್ತರಾದ ಮೇಲೆ ಸಂಬಂದ ಹತ್ತಿರ ಸುಳಿಯಲು ಅವಕಾಶ ನೀಡಬಾರದು. ಮಠಾಧೀಶರ ಹಾಗು ಭಕ್ತರ ಆದ್ಯತೆ ಲಿಂಗಾಯತ ಧರ್ಮ ಹಾಗು ಧರ್ಮಾಚರಣೆಗೆ ಮಿಗಿಲಾಗಿರ ಬೇಕು. ಒಕ್ಕೂಟದ ಹಾಗು ಸಮುದಾಯದ ತೀರ್ಮಾನಗಳಿಗೆ ಬದ್ದರಾಗಿರ ಬೇಕು. ಧರ್ಮ ವಿರೋದಿ ಆಚರಣೆ ನಡೆಸುವ ಮಠಗಳ ಸಖ್ಯ ಬಿಟ್ಟು ದೂರ ಇರಬೇಕು. ದಾರಿತಪ್ಪಿರುವ ಸಮುದಾಯವನ್ನು ಮನವೊಲಿಸಿ ಹಂತ ಹಂತವಾಗೆ ಸರಿದಾರಿಗೆ ತರಬೇಕು.
ಒಳ್ಳೆಯ ಬೆಳವಣಿಗೆ, ಬೇಗನೆ ಅನುಷ್ಟಾನ ಗೊಳ್ಳಲಿ ಎಂದು ಪ್ರಾರ್ಥಿಸುವೆ 🙏
ಉತ್ತಮ ಬೆಳವಣಿಗೆ. ಪ್ರಸ್ತುತ ಆಗಬೇಕಾಗಿರುವ ಮಹತ್ ಕಾರ್ಯಗಳು ಇವುಗಳೇ. ಆದ್ದರಿಂದ ಲಿಂಗಾಯತ ಬಸವ ಪ್ರಣೀತರ ಜನವರಿ 17 ರ ಕಾರ್ಯಕ್ರಮ ಸ್ವಾಗತಾರ್ಹ.
ಎಲ್ಲಕ್ಕಿಂತ ಮುಖ್ಯವಾಗಿ ಬಸವ ತತ್ವದ ಬಗ್ಗೆ, ಆಚರಣೆಗಳ ಬಗ್ಗೆ ಲಿಂಗಾಯತ ಮಠಾಧೀಶರಲ್ಲಿ ಆತ್ಮಾವಲೋಕನದ ಕೊರತೆಯಿದೆ. ಭಕ್ತಾದಿಗಳಿಗೆ ಹೆದರಿಕೊಂಡು ಮನಸ್ಸಿಗೆ ವಿರುದ್ಧವಾಗಿ ಭಕ್ತಾಧಿಗಳ ಇಚ್ಛಾನುಸಾರ ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ವೈದಿಕಾಚರಣೆಗಳ ಅಮಲಿನಿಂದ ಮಠಾಧೀಶರು ಮೊದಲು ಹೊರಬರಬೇಕಿದೆ. ತಮ್ಮ ಸಂಬಂಧಿಕರನ್ನು ಹತ್ತಿರ ಸೇರಿಸದ ಧೈರ್ಯದ ನಡೆ ರೂಢಿಸಿಕೊಳ್ಳಬೇಕಿದೆ. ಮಠದ ಆಸ್ತಿಯ ಮೇಲಿನ ಹಕ್ಕು ಲಿಂಗಾಯತ ಸಮಾಜದ್ದೇ ಹೊರತು ಕೇವಲ ಮಠಾಧೀಶರದ್ದಲ್ಲ. ದಯವಿಟ್ಟು ಯಾವುದೇ ಮಠದ ಯಾವುದೇ ಮಠಾಧೀಶರು 5-10 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಒಂದೇ ಕಡೆ ಸ್ಥಾವರಗೊಳ್ಳುವ ಬದಲು ನಿರಂತರ ಚರ ಜಂಗಮರಾಗುವ ಕಾಲ ನಿರೀಕ್ಷಿಸಬಹುದೇ?
ಮಠಾಧೀಶರು; ಬಸವಾದಿ ಶರಣರಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಬೇಕು. ಅದು ಬಿಟ್ಟು ತಮ್ಮ ಗುರುಗಳನ್ನೇ ಮೆರೆಸುವ ಸಿನಿಕ ಬುದ್ದಿಯನ್ನು ಬಿಡಬೇಕು. ಬಸವಣ್ಣನವರಾದಿ ಶರಣರು ಸಂಸಾರಿಗಳು ಅವರಿಗೆ ಕಾವಿ ಹಾಕಿ ತೋರಿಸುವುದನ್ನು ಖಂಡಿತಾ ಬಿಡಬೇಕು. ಮತ್ತು ಎಲ್ಲರನ್ನು ಶರಣ ಎಂದು ಸಂಬೋಧನೆ ಅಥವಾ ಬರೆಯಬಾರದು. ಮತ್ತು ಮುಖ್ಯವಾದದ್ದುಏನೆಂದರೆ ಸ್ವಾಮಗಳಿಗೆ ಕಾಲಿಗೆ ಬೀಳಿಸಿಕೊಳ್ಳಲೇಬಾರದು. ಇದು ಶರಣರ ಸರ್ವಸಮಾನತೆಯ ನಡೆ ನುಡಿಯನ್ನು ಅಣಗಿಸುತ್ತದೆ.
ವೈಚಾರಿಕ ಲಿಂಗಾಯತರು ಮಠಾಧೀಶರಿಂದ ಎಲ್ಲಾ ಮಹತ್ವದ ವಿಚಾರಗಳನ್ನು ಕೇಳಿಕೊಂಡು ಮನಸಿಗೆ ಖುಷಿ ಮಾಡಿಕೊಂಡು ಅವರನ್ನು ಬರಿಗೈಯಲ್ಲಿ ಕಳುಹಿಸುವ ಬದಲಾಗಿ ಅವರಿಗೇ ಯಾವುದೇ ರೀತಿಯಲ್ಲಾದರೂ ಸ್ವಲ್ಪ ದಾಸೋಹ ಮಾಡುವುದು ಅತ್ಯಗತ್ಯ. ಬಸವತತ್ವಕ್ಕೆ ದುಡಿಯುವ ಮಠಗಳಿಗೆ ಮಾತ್ರ ಲಿಂಗಾಯತರು ದಾಸೋಹ ಮಾಡುವಂತೆ ತಿಳಿಸಬೇಕಾದ ಇಂದಿನ ತುರ್ತು ಅಗತ್ಯಗಳಲ್ಲೊಂದು. ಶರಣಾರ್ಥಿ
ಬಸವ ಕ್ರಾಂತಿ, ಶರಣರ ಕ್ರಾಂತಿ, ಲಿಂಗಾಯಿತ ಧರ್ಮಚಾರಣೆ ಯ ಚಳುವಳಿ ನಡೆದ 12 ನೇ ಶತಮಾನದ ಪುನರಾವರ್ತನೆಯ ಭಾಗವೇ ಈ 21 ನೇ ಶತಮಾನ. ಈ ಶತಮಾನದಲ್ಲಿ ಬಸವ ಫಿಲಾಸಫಿ ಪ್ರಪಂಚದಾಡ್ಯಂತ ನಡೆಯುತ್ತಾ ಇದೆ. ಲಂಡನ್ ನಲ್ಲಿ ಬಸವ ಮೂರ್ತಿಯನ್ನೇ ಸ್ಥಾಪಿಸಿದರು. ಹಾಗಾಗಿ ಕರ್ನಾಟಕದ ಎಲ್ಲಾ ಲಿಂಗಾಯಿತ ಮಠಗಳು ಒಂದಾಗಿ ಹೋರಾಟ ಮಾಡಿದರೆ ನಿಜಕ್ಕೂ ಲಿಂಗಾಯಿತ ಧರ್ಮ ಸಂವಿಧಾನಿಕ ಮಹತ್ವ ವನ್ನು ಪಡೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ. RSS ತರಹ BSS ( ಬಸವ ಸ್ವಯಂ ಸೇವಕ ಸಂಘ ) ಸಂಘಟನೆಯನ್ನು ಹುಟ್ಟು ಹಾಕಿದರೆ ಬಸವಾದಿ ಶರಣರ ತತ್ವ ಪ್ರಚಾರವನ್ನು ದೇಶದಾಡ್ಯಂತ ಮಾಡಬಹುದು.