ಗದಗ
ಭಾರತದ ಮೊದಲ ಮಹಿಳಾ ಶಿಕ್ಷಕಿಯಾದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರ ಸಾಮಾಜಿಕ ಚಿಂತನೆ ಅನುಪಮವಾದುದು, ಎಂದು ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ಭೈರನಟ್ಟಿ ಶಿರೋಳ ಲಿಂಗಾಯತ ಪ್ರಗತಿಶೀಲ ಸಂಘದ ೨೭೨೭ ಶಿವಾನುಭವದ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.
ತ್ರಿವಿಧ ದಾಸೋಹಿ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಆಗಾಗ ದುಡ್ಡೆ ದೊಡ್ಡಪ್ಪ ವಿದ್ಯೆ ಅದರಪ್ಪ ಎಂದು ಹೇಳುತ್ತಿದ್ದರು. ದುಡ್ಡು ಬಂದು ಹೋಗುವುದು, ವಿದ್ಯೆ ಬಂದು ಹೋಗುವುದಕ್ಕಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ತಿಳಿಸಿ ಮೊದಲು ಬಯಲಿನಲ್ಲೆ ಶಾಲೆಯನ್ನು ತೆರೆದು ಬೋಧನೆ ಮಾಡುತ್ತಾರೆ. ನಂತರ ಫಾತಿಮಾ ಶೇಖ್ ರವರು ತಮ್ಮ ಮನೆಯ ಕಟ್ಟಡವನ್ನು ಶಾಲೆಗಾಗಿ ಬಿಟ್ಟು ಕೊಡುತ್ತಾರೆ. ಅನೇಕ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕೊಡುವ ವ್ಯವಸ್ಥೆ ಮಾಡುವರು. ಅಂದಿನಿಂದ ಮೊದಲ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಆಗುತ್ತಾರೆ, ಎಂದು ಹೇಳಿದರು.
ಸಾವಿತ್ರಿಬಾಯಿ ಫುಲೆಯವರು ಸಾಮಾಜಿಕ ನ್ಯಾಯ ಸಿಗಬೇಕಾದರೆ ಅದಕ್ಕೆ ದಿವ್ಯೌಷಧ ಶಿಕ್ಷಣವೆಂದರಿತು ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದದ್ದು ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಯಿತು. ಧಾರ್ಮಿಕ ಆಧ್ಯಾತ್ಮಿಕ ಅಭಿರುಚಿವುಳ್ಳವರಾಗಿದ್ದ ಸಾವಿತ್ರಿಬಾಯಿ ಫುಲೆಯವರು, ಬಡವರಿಗೆ, ಕೆಳಸ್ತರದ ಜನರಿಗೆ ವಿದ್ಯೆ ಕೊಡುವುದನ್ನು ಒಂದು ವೃತವೆಂದು ಬಗೆದು ಅಚಲ ಶ್ರದ್ಧೆಯನ್ನಿಟ್ಟುಕೊಂಡು ದಣಿವರಿಯದೇ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು ಎಂದರು.
ಗದುಗಿನ ೩ ವಿಧ್ಯಾರ್ಥಿಗಳು ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ಹೆಮ್ಮೆಯ ವಿಷಯ. ಅದಕ್ಕೆ ಮಾರ್ಗದರ್ಶನ ಮಾಡಿದ ಕೆ.ಎಸ್. ಚಟ್ಟಿಯವರು ಶ್ಲಾಘನೀಯರು. ಪ್ರತಿಭೆಗೆ ಪುರಸ್ಕಾರ ಇರುತ್ತದೆ ಎನ್ನುವುದಕ್ಕೆ ಈ ವೇದಿಕೆಯೇ ಕಾರಣವೆಂದರು. ಇದೆಲ್ಲ ಅಂದು ಸಾವಿತ್ರಿಬಾಯಿ ಫುಲೆ ಅವರು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದರಿಂದ, ಇಂದು ಹೆಣ್ಣುಮಕ್ಕಳು ಶಾಲೆ ಕಲಿತು ತುಂಬಾ ಮಹತ್ವದ ಸಿ.ಎ. ಪರೀಕ್ಷೆಯನ್ನು ಪಾಸಾಗುವಂತೆ ಆಗಿದೆ ಎಂದರು. ಅಂತೆಯೇ ಸಾವಿತ್ರಿಬಾಯಿ ಫುಲೆಯವರು ಸದಾ ಜನಮಾನಸದಲ್ಲಿ ಉಳಿದ ಶ್ರೇಷ್ಠ ಶಿಕ್ಷಕಿಯರು ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಶೇಷ ಅಗತ್ಯವುಳ್ಳ ಮಕ್ಕಳ ಸಂಪನ್ಮೂಲ ವ್ಯಕ್ತಿಗಳಾದ ಶ್ರಿಮತಿ ಕವಿತಾ ಬಸವರಾಜ ದಂಡಿನರವರು, ಭಾರತದ ಶ್ರೇಷ್ಠ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು ಪತಿಯ ಸಹಕಾರದಿಂದ ೨೦೦ ವರ್ಷಗಳ ಹಿಂದೆಯೇ ಹೆಣ್ಣು ಮಕ್ಕಳು ಹೊಸ್ತಿಲು ದಾಟಿ ಹೊರಗೆ ಬಾರದ ಸ್ಥಿತಿಯಲ್ಲಿದ್ದಂತ ದಿನಗಳಲ್ಲಿ ಶಾಲೆ ಕಲಿತು ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಾಲೆ ತೆರೆದಿದ್ದು ಒಂದು ಹೊಸ ಇತಿಹಾಸ ಎಂದರು.
ಹೆಣ್ಣು ಮಕ್ಕಳು ಮನೆಯಲ್ಲಿಯೇ ಇದ್ದು ಹಾಡುಪಾಡು ಹೇಳಿಕೊಂಡು ವೃತಾಚಾರಣೆ ಮಾಡಿ ಪುರಾಣ ಕಥೆಗಳನ್ನು ಕೇಳುವುದು ಬಿಟ್ಟು, ಶಾಲೆ ಕಲಿಸಿ ವಿಚಾರದ ಕಿಡಿ ಹೊತ್ತಿಸಿದರು. ಅನೇಕರು ತುಂಬಾ ಕೀಟಲೆ ಮಾಡಿದರು. ಕಲ್ಲು ಎಸೆದರು. ಸೆಗಣಿ ಎರಚಿದರು. ಅವ್ಯಾಚ್ಯವಾಗಿ ಬೈದರು. ಯಾವುದಕ್ಕೂ ಬಗ್ಗದೆ ಧೀರೆಯಾಗಿ ದಿಟ್ಟೆಯಾಗಿ, ಶಿಕ್ಷಣದ ಮೂಲಕ ಕ್ರಾಂತಿ ಮಾಡುತ್ತಾ ಹೋದರು. ಅದರ ಪ್ರತಿಫಲವೇ ಇಂದು ಎಲ್ಲಾ ರಂಗಗಳಲ್ಲಿ ಹೆಣ್ಣುಮಕ್ಕಳು ಸಾಧನೆ ಮಾಡುತ್ತಾ ಸಾಹಸದ ಕಥೆಯಾಗಿದ್ದಾರೆ ಎಂದರು.
ಸಾವಿತ್ರಿಬಾಯಿ ಫುಲೆಯವರ ಬದುಕು ಮತ್ತು ಸಾಮಾಜಿಕ ನ್ಯಾಯದ ಹೋರಾಟವನ್ನು ಮನೋಜ್ಞವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ.ಎ. ಕೆ.ಎಸ್. ಚಟ್ಟಿಯವರು ಸಿ.ಎ. ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು. ಅತಿಥಿಗಳಾಗಿ ಮುಕುಂದ ಪೊತ್ನೀಸ್ ಮತ್ತು ಸಿ.ಎ. ಆನಂದ ಪೋತ್ನಿಸ ಹಾಗೂ ದಾಸೋಹ ಸೇವೆ ವಹಿಸಿಕೊಂಡ ಶಿವಣ್ಣ ಯರಾಶಿ ನಿವೃತ್ತ ಪ್ರಾಚಾರ್ಯರು ಸಾ. ಬನ್ನಿಕೊಪ್ಪ ಇವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮರ್ಚೆಂಟ್ ಅರ್ಬನ್ ಕೊ.ಅಪ್. ಬ್ಯಾಂಕ ಗದಗ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಸ್. ಚಟ್ಟಿಯವರನ್ನು ಹಾಗೂ ಉಪಾಧ್ಯಕ್ಷರಾದ ಚಂದ್ರು ಬಾಳಿಹಳ್ಳಿಮಠ ಅವರನ್ನು ಸನ್ಮಾನಿಸಲಾಯಿತು. ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಶ್ರೀರಂಜಿನಿ ಕುಲಕರ್ಣಿ, ವಿಜೇತಾ ಹುಣಶೀಮರದ, ಈರಣ್ಣ ಸೂಡಿ ಇವರನ್ನು ಸನ್ಮಾನಿಸಲಾಯಿತು.
ಶ್ರೀ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಇವರು ಸಂಗೀತ ಸೇವೆ ನೇರವೇರಿಸಿದರು. ಧರ್ಮ ಗ್ರಂಥ ಪಠಣವನ್ನು ಅಂಜನೇಯ ಮೇಟಿ ಮಾಡಿದರೆ ವಚನ ಚಿಂತನವನ್ನು ಕಾರ್ತಿಕ ಹಿರೇಮಠ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ್ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಸಹಚೇರ್ಮನ್‌ರಾದ ಶಿವಾನಂದ ಹೊಂಬಳ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್‌ರಾದ ಐ.ಬಿ. ಬೆನಕೊಪ್ಪ ಪರಿಚಯಿಸಿದರೆ, ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.