ಬದುಕಿನ ಭವ್ಯತೆ ಅರಿತವರು ಸಿದ್ಧೇಶ್ವರ ಶ್ರೀಗಳು: ಸತ್ಯಂಪೇಟೆ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ:

ಅಧಿಕಾರ, ಅಂತಸ್ತು, ಸಂಪತ್ತು ಪ್ರಧಾನವಾದ ಬದುಕಿಗಿಂತ ನೆಮ್ಮದಿ ಪ್ರಧಾನ ಬದುಕು ಅತ್ಯುತ್ತಮ ಎಂದು ಹೇಳುತ್ತ ಮಾನವರನ್ನು ಜಗದ ಜಂಜಡದಿಂದ ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದ ಸಿದ್ಧೇಶ್ವರ ಶ್ರೀಗಳು ನುಡಿದು ನಡೆದ ಬದುಕು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ ಎಂದು ಪತ್ರಕರ್ತ- ಸಾಹಿತಿ ಶಿವರಂಜನ ಸತ್ಯಂಪೇಟೆ ಹೇಳಿದರು.

ಸದ್ಗುರು ಕಲಾ ಸಂಸ್ಥೆ 14ನೇ ವಾರ್ಷಿಕೋತ್ಸವ ಹಾಗೂ ಶತಮಾನದ ಸಂತ ಸಿದ್ಧೇಶ್ವರ ಮಹಾಸ್ವಾಮಿಗಳ ದ್ವಿತೀಯ ಪುಣ್ಯ ಸ್ಮರಣೋತ್ಸವ ನಿಮಿತ್ತ ಇಲ್ಲಿನ ಶಿವಾಜಿ ನಗರದ ಶ್ರೀ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸ್ವರ ನಮನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳು ಬದುಕಿನ ದಿವ್ಯತೆ, ಭವ್ಯತೆಯನ್ನು ಅರಿತ ಶತಮಾನದ ಸಂತ ಎಂದು ಅಭಿಪ್ರಾಯಪಟ್ಟರು.

ಸಂಸಾರವನ್ನು ಅನುಭಾವದ ನೆಲೆಯಲ್ಲಿ ನೋಡಿದಾಗಲೇ ಜೀವನದ ಸೌಂದರ್ಯ ದರ್ಶನವಾಗುವುದು, ಸತ್ಯಂ, ಶಿವಂ, ಸುಂದರಂ, ಯಾವುದನ್ನು ತೆಗೆದು ಹಾಕಲು ಬರುವುದಿಲ್ಲವೋ ಅದುವೇ ಸತ್ಯ, ಮನಸ್ಸನ್ನು ತಿಕ್ಕಿ ತೊಳೆಯಬೇಕು, ಸತ್ಯ, ಸ್ಥಿರವಾಗಿರುವುದೇ ದೇವರು ಎಂಬ ಅವರ ಪ್ರವಚನದ ಮಾತುಗಳು ಜನರ ಬದುಕಿಗೆ ತಂಪು ಹಾಗೂ ಆತ್ಮಾನಂದ ನೀಡುವ ಸಾಧನಗಳಾಗಳಾಗಿವೆ ಎಂದು ವಿವರಿಸಿದರು.

ಬಸವಕಲ್ಯಾಣ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಬಸಸವಪ್ರಭು ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ನೀಲಮ್ಮನ ಬಳಗದ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಚಟ್ನಳ್ಳಿ ಉಪನ್ಯಾಸ ನೀಡಿದರು.

ಚಲನಚಿತ್ರ ಸಂಗೀತ ನಿರ್ದೇಶಕ ಅಮರ ಹಿರೇಮಠ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಉದ್ದಿಮೆದಾರ ಸುಖದೇವ ಎಚ್. ಪೂಜಾರಿ, ಮಂಜುನಾಥ ಜಮಾದಾರ ವೇದಿಕೆಯಲ್ಲಿದ್ದರು.

ಸೂರ್ಯಕಾಂತ ಡುಮ್ಮಾ, ಬಸಯ್ಯ ಗುತ್ತೇದಾರ, ಸೈದಪ್ಪ ಸಣ್ಣಪ್ಪಗೋಳ, ಸಂಗಮೇಶ ನೀಲಾ, ಭಗವಂತರಾವ ಕಣ್ಣೂರ, ಬಸವಕುಮಾರ ಕೆಂಗನಾಳ ಮುಂತಾದವರು ಸ್ವರ ನಮನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಬಂಡಯ್ಯ ಶಾಸ್ತ್ರೀ ನಿರೂಪಿಸಿದರು. ಶಿವಲಿಂಗಪ್ಪ ಕೆಂಗನಾಳ ಸ್ವಾಗತಿಸಿದರು. ವಿಜಯಲಕ್ಷ್ಮೀ ಕೆಂಗನಾಳ ವಂದಿಸಿದರು.‌ ಸುಪ್ರಿಯಾ ಸುತಾರ ವಚನ ನೃತ್ಯ ಗೈದರು.

ಇದೇವೇಳೆಯಲ್ಲಿ ಶ್ರೀಗಳ ಸ್ಮರಣೋತ್ಸವ ನಿಮಿತ್ತ ಆಯೋಜಿಸಿದ್ದ ಪ್ರಬಂಧ ಹಾಗೂ ಗಾಯನ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Share This Article
Leave a comment

Leave a Reply

Your email address will not be published. Required fields are marked *