ಸಾಣೇಹಳ್ಳಿ ಶ್ರೀಗಳಿಗೆ ‘ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ’ ಪ್ರಶಸ್ತಿ ಪ್ರದಾನ

Basava Media
Basava Media

ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶ್ರೀ ಶಿವರಾಜ ತಂಗಡಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಸಂಜೆ ಸಿದ್ದರಾಮೇಶ್ವರ ಜಯಂತಿಯಲ್ಲಿ ಭಾಗವಹಿಸಿ ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ‘ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ’ ಪ್ರಶಸ್ತಿ ಪ್ರದಾನ ಮಾಡಿದರು.

ಹಿಂದಿ‌ನ ಸರ್ಕಾರದಲ್ಲಿ ಭೋವಿ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ದೊರಕಿರಲಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಮೂರು ಬೇಡಿಕೆಗಳನ್ನು ಇಟ್ಟಿದ್ದೆವು‌. ಅದರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರು. ಅಲ್ಲದೆ, ಸಮುದಾಯದ ಒಬ್ಬರನ್ನು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಿದ್ದಾರೆ. ಮುಂದಿನ‌ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಾತಿನಿಧ್ಯ ದೊರಕಲಿದೆ ಎಂದು ಸಚಿವರು ಭರವಸೆ ನೀಡಿದರು.

ಸಿದ್ದರಾಮೇಶ್ವರರು, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಕನಕದಾಸರಂತಹ ಮಹನೀಯರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಇಡೀ ಸಮಾಜಕ್ಕೆ ಸೇರಿದವರು. ಇವರ ತತ್ವ ಸಿದ್ದಾಂತ, ಆದರ್ಶಗಳು ಇಡೀ ಸಮಾಜಕ್ಕೆ ಆದರ್ಶವಾಗಿದೆ ಎಂದರು.

ಯುವ ಸಮುದಾಯಕ್ಕೆ ಇಂತಹ ಮಹನೀಯರ ಕೊಡುಗೆಗಳನ್ನು ತಿಳಿಸುವ ಕೆಲಸ ಜಯಂತಿ ಆಚರಣೆಯಿಂದ ಆಗಲಿದೆ. ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಬಸವಣ್ಣ ಅವರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಘೋಷಿಸಲು ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಬೇಕಾಯಿತು‌. ನಮ್ಮ‌ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದರು.

ಪ್ರಶಸ್ತಿ ಗೌರವ ಹೆಚ್ಚಿದೆ:
ಸಾಣೇಹಳ್ಳಿ ಶ್ರೀಗಳಿಗೆ ಪ್ರಶಸ್ತಿ ಕೊಟ್ಟಿದ್ದಕ್ಕೆ ಪ್ರಶಸ್ತಿಗೆ ಗೌರವ ಹೆಚ್ಚಾಗಿದೆ. ಪ್ರಶಸ್ತಿ ಆಯ್ಕೆ ವಿಚಾರದಲ್ಕಿ ಯಾವುದೇ ಪ್ರಭಾವ ಇರುವುದಿಲ್ಲ. ಸಮಾಜಕ್ಕೆ ನೇರವಾಗಿ ವಿಷಯವನ್ನು ತಿಳಿಸುವ ವ್ಯಕ್ತಿತ್ವ ಸಾಣೇಹಳ್ಳಿ‌ ಶ್ರೀಗಳದ್ದು. ಶ್ರೀಗಳು ತಮ್ಮ ಮಠದ ಮೂಲಕ‌ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾಯಕಯೋಗಿ ಸಿದ್ದರಾಮೇಶ್ವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರು, ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಒಳ್ಳೆಯದು. ಬಸವಣ್ಣ ಅವರ ವಚನಗಳನ್ನು ಪ್ರಚಾರಪಡಿಸುವ ಹಿನ್ನೆಲೆಯಲ್ಲಿ ಸರ್ಕಾರ ‘ವಚನ’ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಇನ್ನೂ ಸಿದ್ದರಾಮೇಶ್ವರ ಅವರ ಒಂದೊಂದು ವಚನಗಳು ಪ್ರತಿಯೊಬ್ಬರ ಬದುಕಿಗೆ ಆದರ್ಶವಾಗಿದೆ. ಅವರ ವಚನ ಸಾಹಿತ್ಯವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಸಂಸ್ಕೃತಿ ಉಳಿಯಬೇಕಾದರೆ ರಂಗಭೂಮಿ ಬೆಳೆಯಬೇಕು. ಕಲೆಯನ್ನು ಉಳಿಸುವ ಸಂಘ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಶ್ರೀಗಳು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕರಾದ ಡಾ.ಧರಣಿದೇವಿ ಮಾಲಗತ್ತಿ, ಕೆಪಿಎಸ್ಸಿ ಸದಸ್ಯರಾದ ದೇವಪ್ಪ, ರವಿ ಮಾಕಳಿ, ಡಾ.ಚಂದ್ರಶೇಖರ್, ರವಿಪೂಜಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಹಿಂದಿ‌‌ನ‌ ಸರ್ಕಾರಕ್ಕಿಂತ ಹೆಚ್ಚಿನ ಅನುದಾನ ನೀಡಿಕೆ:
ಅಕಾಡೆಮಿ‌ ಹಾಗೂ ಪ್ರಾಧಿಕಾರಿಗಳಿಗೆ ಅನುದಾನ ನೀಡಿಕೆ ವಿಚಾರದಲ್ಲಿ ಯಾವುದೇ ತಡವಾಗುವ ಪ್ರಶ್ನೆಯೇ ಇಲ್ಲ. ಅಕಾಡೆಮಿಗಳಿಗೆ ಹಿಂದಿನ ಸರ್ಕಾರಕ್ಕಿಂತ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿಯವರು ಹೇಳಿದರು.

ಅನುದಾನ ನೀಡಿಕೆ ವಿಚಾರದಲ್ಲಿ ತಡವಾಗುತ್ತಿದೆ ಎಂಬ ಸಾಣೇಹಳ್ಳಿ‌ ಶ್ರೀಗಳ ಹೇಳಿಕೆಗೆ ಸಚಿವರು ಪ್ರತಿಕ್ರಿಯಿಸಿ, ಈ ಹಿಂದೆ ಅಕಾಡೆಮಿಗಳಿಗೆ ನೇಮಕಾತಿಯನ್ನೇ ಮಾಡುತ್ತಿರಲಿಲ್ಲ. ನಾವು ಎಲ್ಲದ್ದಕ್ಕೂ ವೇಗ ನೀಡುವ ಕೆಲಸ ಮಾಡಿದ್ದೇವೆ. ಅನುದಾನ ನೀಡಿಕೆ ವಿಚಾರದಲ್ಲಿ ತಾಂತ್ರಿಕ ಸಮಸ್ಯೆಗಳಾಗಿದ್ದರೆ ಅದನ್ನು ಬಗೆಹರಿಸಲಾಗಿವುದು ಎಂದು ತಿಳಿಸಿದರು.

Share This Article
Leave a comment

Leave a Reply

Your email address will not be published. Required fields are marked *