ಧಾರವಾಡ
ಶರಣ ಸಮಾಜದ ಮುಂದಿರುವ ಸಮಸ್ಯೆಗಳನ್ನು ಚರ್ಚಿಸಲು ಲಿಂಗಾಯತ ಮಠಾಧೀಶರ ಜನವರಿ 17ರಂದು ಧಾರವಾಡದಲ್ಲಿ ಸಭೆ ಸೇರುತ್ತಿದ್ದಾರೆ.
ಇದರ ಬಗ್ಗೆ ಬಸವ ಮೀಡಿಯಾದಲ್ಲಿ ಕೆಲವು ದಿನಗಳಿಂದ ಚರ್ಚೆ ನಡೆದಿದೆ. ಚರ್ಚೆಯಲ್ಲಿ ಮೂಡಿದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಇಂದು ಧಾರವಾಡದಲ್ಲಿ ಸೇರುತ್ತಿರುವ ಮಠಾಧೀಶರಿಗೆ ತಲುಪಿಸಲಾಗುತ್ತಿದೆ. ಪೂಜ್ಯರಿಗೆ ಬಸವ ಸಂಘಟನೆಗಳು ನೀಡುತ್ತಿರುವ ಮನವಿ ಪತ್ರ ಮತ್ತು ಒಟ್ಟು ಅಭಿಪ್ರಾಯಗಳ ಸಾರಾಂಶ ಕೆಳಗಿದೆ.
ಮನವಿ ಪತ್ರ
ಜನವರಿ 15, 2025
ಇಂದ,
ನಾಡಿನ ಬಸವ ಭಕ್ತರು
ಗೆ,
ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು
ಲಿಂಗಾಯತ ಮಠಾಧೀಶರ ಒಕ್ಕೂಟ
ವಿಷಯ: ಲಿಂಗಾಯತ ಮಠಾಧೀಶರ ಸಭೆ: ಭಕ್ತರ ಮನವಿ
ಪೂಜ್ಯ ಗುರುಗಳೇ, ಭಕ್ತಿಪೂರ್ಣ ಶರಣು ಶರಣಾರ್ಥಿಗಳು
ಶರಣ ಸಮಾಜದ ಮುಂದಿರುವ ಸವಾಲುಗಳನ್ನು, ಆತಂಕಗಳನ್ನು ಚರ್ಚಿಸಲು ಲಿಂಗಾಯತ ಮಠಾಧೀಶರ ಒಕ್ಕೂಟದ ಸದಸ್ಯರು ಜನವರಿ 17ರಂದು ಧಾರವಾಡದಲ್ಲಿ ಸಭೆ ಸೇರುತ್ತಿದ್ದಾರೆ ಎಂದು ಬಸವ ಮೀಡಿಯಾದಲ್ಲಿ ಜನವರಿ 3ರಂದು ವರದಿಯಾಯಿತು.
ವರದಿಗೆ ಬಸವ ಭಕ್ತರಿಂದ, ಬಸವ ಸಂಘಟನೆಗಳಿಂದ ಅಭೂತಪೂರ್ವ ಮತ್ತು ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿತು. ಸಮಾಜದ ಸಮಸ್ಯೆಗಳನ್ನು ಗುರುತಿಸಲು ಮಠಾಧೀಶರಿಗೆ ನೆರವು ನೀಡಬೇಕೆಂದು ಮೀಡಿಯಾ (ಪತ್ರಿಕೆ) ಕೋರಿಕೊಂಡಿತು. ಇದಕ್ಕೆ ಸ್ಪಂದಿಸಿ ಸುಮಾರು 185 ಪ್ರತಿಕ್ರಿಯೆಗಳು ಇಮೇಲ್, SMS, ವಾಟ್ಸ್ ಆಪ್, ಫೋನ್ ಕರೆ ಮೂಲಕ ಬಂದವು. ಇದರಲ್ಲಿ ಕೆಲವು ಒಂದೆರಡು ವಾಕ್ಯಗಳಷ್ಟಿನ ಅಭಿಪ್ರಾಯಗಳಾದರೆ, 20 ಲೇಖನ ಪ್ರಮಾಣದ ಪ್ರತಿಕ್ರಿಯೆಗಳೂ ಬಂದವು.
ಬಸವ ಮೀಡಿಯಾ ಮತ್ತು ಲಿಂಗಾಯತ ಅಧ್ಯಯನ ಸಂಸ್ಥೆ ಬೆಂಗಳೂರು, ಜನವರಿ 12 ನಡೆಸಿದ ಗೂಗಲ್ ಮೀಟ್ ಚರ್ಚೆಯಲ್ಲಿ 76 ಜನ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ವಿಷಯದಲ್ಲಿ ಪ್ರತಿಕ್ರಿಯೆಗಳು ಬೀದರಿನಿಂದ ಚಾಮರಾಜನಗರದವರೆಗೆ ಬಹಳಷ್ಟು ಜಿಲ್ಲೆಗಳಿಂದ ಬಂದಿವೆ. ಅಭಿಪ್ರಾಯಗಳನ್ನು ನೀಡಿದವರಲ್ಲಿ ಸಾಮಾನ್ಯ ಬಸವ ಕಾರ್ಯಕರ್ತರು, ಚಿಂತಕರು, ಸಂಘಟನೆಗಳ ಮುಖಂಡರು, ಅನುಭಾವಿಗಳು, ಧರ್ಮ ಪ್ರಚಾರಕರು, ಸಮಾಜ ಸೇವಕರು, ನಿವೃತ ಸರಕಾರಿ ನೌಕರರು, ವಿದ್ಯಾರ್ಥಿಗಳು ಇದ್ದಾರೆ.
ಈ ಎಲ್ಲಾ ಅಭಿಪ್ರಾಯಗಳನ್ನು ಸಂಗ್ರಹಿಸಿ ತಮಗೆ ಈ ಮನವಿ ಪತ್ರದ ಮೂಲಕ ನೀಡುತ್ತಿದ್ದೇವೆ. ಈ ಪ್ರಯತ್ನದ ಉದ್ದೇಶ ಸಮಾಜದ ನಾಡಿ ಮಿಡಿತವನ್ನು ನಿಮಗೆ ತಲುಪಿಸುವುದಷ್ಟೇ. ಯಾವುದೇ ರೀತಿಯ ಒತ್ತಡ ಹೇರುವುದಲ್ಲ.
ಲಿಂಗಾಯತದ ಭವಿಷ್ಯದ ಬಗ್ಗೆ ನಿಮಗೆ ಇರುವ ಆತಂಕಗಳು ಸಮಾಜದ ಬಹಳಷ್ಟು ಜನರ ನಿದ್ದೆಗೆಡಿಸುತ್ತಿದೆ. ಈ ನಿಟ್ಟಿನಲ್ಲಿ ನೀವು ಯಾವುದೇ ಕ್ರಮ ತೆಗೆದುಕೊಂಡರೂ ನಿಮ್ಮ ಹಿಂದೆ ನಾವಿದ್ದೇವೆ ಎಂಬ ಸಂದೇಶ ಈ ಎಲ್ಲಾ ಪ್ರತಿಕ್ರಿಯೆಗಳಲ್ಲಿ ಇದೆ ಎನ್ನುವುದು ನಮ್ಮ ಗ್ರಹಿಕೆ.
ಮತ್ತೆ ಶರಣು ಎನ್ನುತ್ತಾ, ಈ ಮನವಿಯನ್ನು ನೀಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಾ, ನಿಮ್ಮಿಂದ ಸೂಕ್ತ ಮಾರ್ಗದರ್ಶನ ಎದುರು ನೋಡುತ್ತಿರುವ ನಿಮ್ಮ ಶರಣ ಬಳಗ
ನಾಡಿನ ಬಸವ ಭಕ್ತರು
====================
(ಭಕ್ತರ ಅಭಿಪ್ರಾಯಗಳ ಸಾರಾಂಶ)
ಲಿಂಗಾಯತ ಮಠಾಧೀಶರ ಸಭೆ: ಭಕ್ತರ ಮನವಿ
ಸಂಘಟನೆ
ಜನ ಸಂಪರ್ಕ
ಸ್ವತಂತ್ರ ಧರ್ಮದ ಮಾನ್ಯತೆ
ಧರ್ಮ ಪ್ರಚಾರ
ಹೊಸ ಪೀಳಿಗೆ
ತಂತ್ರಜ್ಞಾನ/ಡಿಜಿಟಲ್ ಔಟ್ರೀಚ್
ಸಂಗೀತ, ಕಲಾ, ಕಥಾ ಉತ್ಸವಗಳು
ನಿಜಾಚರಣೆ
ಪ್ರಚಾರಕರಿಗೆ ರಕ್ಷಣೆ
ಸ್ವಯಂ ಸೇವಕರ ಗಣಾಚಾರಿ ಪಡೆ
ಸೈದ್ಧಾಂತಿಕ ಸ್ಪಷ್ಟತೆ
ಸಾಮಾಜಿಕ ಬದ್ಧತೆ
ಧರ್ಮ ಗ್ರಂಥ
ಮಠಗಳ ಸುಧಾರಣೆ
ಹಿಂದುತ್ವದ ಪ್ರಭಾವದಲ್ಲಿರುವ ಯುವಕರು
ಕಾಲೇಜಿನಲ್ಲಿರುವ ಯುವಕರು
ಸಂಘಟನೆ
ಸಮುದಾಯದ ಮುಂದಿರುವ ಸವಾಲುಗಳನ್ನು ಗುರುತಿಸಲು ಒಂದು ಸತ್ಯ ಶೋಧನಾ ಸಮಿತಿ ರಚಿಸಬೇಕು. ಬೇರೆ ಬೇರೆ ಜಿಲ್ಲೆಗಳಲ್ಲಿ ಬಸವಭಕ್ತರನ್ನು, ಸಂಘಟನೆಗಳನ್ನು ಮುಕ್ತವಾಗಿ ಭೇಟಿ ಮಾಡಿ ಎರಡು ತಿಂಗಳ ಒಳಗೆ ವರದಿ ನೀಡಬೇಕು.
ಒಂದು ಸಲಹಾ ಮಂಡಳಿ ಅಥವಾ think tank ಟೀಮನ್ನು ರಚಿಸಿಕೊಂಡು ಅವರ ಸಲಹೆಯಂತೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಪ್ರತಿ ತಾಲೂಕಿನಲ್ಲಿ ಕನಿಷ್ಠ 500 ಬಸವ ಭಕ್ತರನ್ನ ಗಟ್ಟಿಗೊಳಿಸಬೇಕು. ಯಾವುದೇ ಬಸವ ಭಕ್ತರಿಗೆ ತೊಂದರೆಯಾದಾಗ ಕಾನೂನಾತ್ಮಕವಾದ ಪ್ರತಿಕ್ರಿಯೆ ಬರುವಂತೆ ನೋಡಿಕೊಳ್ಳುವುದು.
ಸಾಮಾಜಿಕ ಜಾಲತಾಣದಲ್ಲಿ ಬಸವ ತತ್ವ ಬಲಿಷ್ಠವಾಗಬೇಕು. ಒಂದು ಐಟಿ ಸೆಲ್ (IT cell) ತಯಾರಾಗಬೇಕು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳ ಕೆಲಸದಲ್ಲಿ ಅನುಭವವಿರುವವರನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಬೇಕು.
ಬಸವ ತತ್ವದ ನ್ಯಾಯವಾದಿಗಳನ್ನು ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಂಘಟಿಸಬೇಕು.
ಜನ ಸಂಪರ್ಕ
ಮಠಾಧೀಶರು ಪ್ರತಿ ಸೋಮವಾರ ಮಠದಲ್ಲಿ ಜನತಾದರ್ಶನ ಏರ್ಪಡಿಸಿ ಅವರ ಸಮಸ್ಯೆಗಳಿಗೆ ಲೋಕನೀತಿ ವಚನಗಳ ಮೂಲಕ ಪರಿಹಾರ ಸೂಚಿಸಬೇಕು. (ಲಿಂಗಾಯತರು ಜೋತಿಷಿಗಳ ಹತ್ತಿರ ಹೋಗುವುದನ್ನು ತಪ್ಪಿಸಬಹುದು)
ಮಠಾಧೀಶರು ಪ್ರತಿವಾರ ಒಂದು ಓಣಿಯಲ್ಲಿ ಪಾದಯಾತ್ರೆ ಮಾಡಿ ಧರ್ಮ ಜಾಗೃತಿ ಮಾಡಬೇಕು. ಇದರಿಂದ ಯುವಕರು ದುಷ್ಚಟಕ್ಕೆ ಬೀಳುವುದು ಕಡಿಮೆಯಾಗುತ್ತದೆ.
ಪ್ರತಿ ತಿಂಗಳು ಒಂದು ಗ್ರಾಮದಲ್ಲಿ ಧರ್ಮ ಜಾಗೃತಿ ಪಾದಯಾತ್ರೆ ಮಾಡಬೇಕು, ಪಾದಪೂಜೆಯನ್ನು ಮಾಡಿಸಿಕೊಳ್ಳಬಾರದು. ಇದರಿಂದ ಮನುಸಿದ್ಧಾಂತದ ಸಂಘಟನೆಗಳ ಪ್ರಭಾವ ಕಡಿಮೆಯಾಗುತ್ತದೆ.
ಸ್ವತಂತ್ರ ಧರ್ಮದ ಮಾನ್ಯತೆ
ಮಠಾಧೀಶರುಗಳ ಒಕ್ಕೂಟ ದೊಡ್ಡ ಮಟ್ಟದ ಚಳುವಳಿಗಳನ್ನು ರೂಪಿಸಿ ಮಾನ್ಯತೆ ಸಿಗುವ ತನಕ ಲಿಂಗಾಯತ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಡೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕೈಜೋಡಿಸಲು ಮುಂದೆ ಬರುವ ಮತ್ತು ಸಹಮತ ವ್ಯಕ್ತಪಡಿಸುವ ಎಲ್ಲಾ ಸಂಘ ಸಂಸ್ಥೆಗಳೊಟ್ಟಿಗೆ ಜಂಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಚಳುವಳಿಗಳನ್ನು ರೂಪಿಸುವುದು.
ಲಿಂಗಾಯತ ಧರ್ಮ ಒಂದು ಅವೈದಿಕ ಧರ್ಮ ಮತ್ತು ಇತರೆ ಆರು ಧರ್ಮಗಳ ಹಾಗೆ ಸಂವಿಧಾನ ಮಾನ್ಯತೆ ಪಡೆಯುವ ಎಲ್ಲಾ ಅರ್ಹತೆಗಳಿವೆ ಎನ್ನುವ ಸತ್ಯವನ್ನು ಲಿಂಗಾಯತರಿಗೆ ತಲುಪಿಸಬೇಕು.
ಧರ್ಮ ಪ್ರಚಾರ
ವಚನ ಮಂಟಪಗಳು: ಪ್ರತಿ ಊರಿನಲ್ಲಿ ವಚನ ಮಂಟಪಗಳನ್ನು ಸ್ಥಾಪಿಸಿ ಅಲ್ಲಿ ವಚನಗಳ ವಾಚನ, ಅವುಗಳ ನಿರ್ವಚನ, ವಚನಗಳ ಆಶಯಗಳ ಚರ್ಚೆ, ಉಪನ್ಯಾಸ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಚರ್ಚಾಸ್ಪರ್ಧೆಗಳನ್ನು ಏರ್ಪಡಿಸುವುದು.
ಪ್ರತಿ ವಾರ್ಡನಲ್ಲಿ ಸಾಯಂಕಾಲದ ವಚನ ಪಾಠಶಾಲೆ ಮಾಡಬೇಕು. ವಚನ ಕಲಿಸುವವರಿಗೆ ತಿಂಗಳಿಗೆ ಕನಿಷ್ಠ 1000 ರು. ಸಹಾಯಧನ ಕೊಡಬೇಕು ( ಇದಕ್ಕೆ ದಾಸೋಹಿಗಳು ಸಿಗುತ್ತಾರೆ)
ಮಠದಲ್ಲಿ ಪ್ರತಿವಾರ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಿ ಅದನ್ನು ಪ್ರತಿವಾರವೂ ಒಂದೊಂದು ಓಣಿಯ ಭಕ್ತರು ನಡೆಸಿಕೊಡಬೇಕು. ಇದರಿಂದ ಅನ್ಯ ದೇವರ ಗುಡಿಗೆ ಹೋಗುವುದು ತಪ್ಪುತ್ತದೆ.
ಮಠಗಳಲ್ಲಿ ವಚನ ಸಾಹಿತ್ಯದ, ಶರಣ ಪರಂಪರೆಯ, ಮಹಾಪುರುಷರ, ಇತಿಹಾಸ ಲೇಖನಗಳ ಲೈಬ್ರರಿ ಇರಬೇಕು.
ಆಯ್ದ ವಚನಗಳ ಪ್ರಚಾರ ವಿಶೇಷವಾಗಿ ನಡೆಯಬೇಕು.
ಅನ್ಯ ಗುಡಿ ಗುಂಡಾರದ ವಿಚಾರಗಳ ಬಗ್ಗೆ ಅತಿಯಾಗಿ ಮಾತನಾಡದೆ. ನಮ್ಮ ತತ್ವಸಿದ್ದಾಂತಗಳನ್ನು ಬಿತ್ತುವ ಕೆಲಸ ಮಾಡುವುದು.
ಹೊಸ ಪೀಳಿಗೆ
ಇಶಾ ಪ್ರತಿಷ್ಠಾನ, ಶ್ರೀ ಶ್ರೀ ರವಿಶಂಕರ್ ಅಂತವರ ಬಳಿ ಹೋಗುವ ಲಿಂಗಾಯತ ಯುವಕರಿಗೆ, ಮಧ್ಯಮ ವರ್ಗದವರಿಗಾಗಿ ಸೂಕ್ತವಾದ ರೀತಿಯಲ್ಲಿ ನಮ್ಮ ಧರ್ಮ ಪ್ರಚಾರ ನಡೆಯಬೇಕು.
ಬಸವಣ್ಣ, ಅಲ್ಲಮ ಅಕ್ಕರಂತಹ ಶರಣರನ್ನು ಹೊಸ ಪೀಳಿಗೆಗೆ (New Age) ಹೊಸ ರೀತಿಯಲ್ಲಿ ಪರಿಚಯಿಸಬೇಕು.
ವ್ಯಕ್ತಿತ್ವ ವಿಕಸನ, ಮನೋವಿಜ್ಞಾನ, ಸಾಮಾಜಿಕ ಸಾಮರಸ್ಯ, ಸಾಂಸಾರಿಕ ಸಾಮರಸ್ಯ ಮುಂತಾದ ವಿಷಯಗಳ ಮೇಲೆ ವಚನಗಳ ಮೂಲಕ ಮಾರ್ಗದರ್ಶನ ನೀಡಬೇಕು.
ವ್ಯಕ್ತಿತ್ವ ವಿಕಸನದ ವಚನಗಳ ವ್ಯಾಖ್ಯಾನ ಮುಖಾಂತರ ಬಸವಣ್ಣನವರು ಮತ್ತು ಇತರೆ ಶರಣರನ್ನ ಪರಿಚಯಿಸುವ ಕೆಲಸ ಆಗಬೇಕಿದೆ.
ನವ ದಂಪತಿಗಳಿಗೆ ಉತ್ತಮ ಹೊಂದಾಣಿಕೆ ಮೂಡಿಸಿಕೊಳ್ಳಲು, ಒಬ್ಬರನ್ನೊಬ್ಬರು ಗೌರವಿಸಲು, ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಲು ಸೂಕ್ತವಾದ ವಚನಗಳ ಮೂಲಕ ಅರಿವು ಮೂಡಿಸಬೇಕು.
ಬಸವಣ್ಣನವರ, ಶರಣರ ಐತಿಹಾಸಿಕ ವಿಚಾರಗಳನ್ನು ಜನರಿಗೆ ತಿಳಿಸಬೇಕಿದೆ.
ತಂತ್ರಜ್ಞಾನ/ಡಿಜಿಟಲ್ ಔಟ್ರೀಚ್
ಸಾಮಾಜಿಕ ಮಾಧ್ಯಮ ಅಭಿಯಾನಗಳು:
ಚಿಕ್ಕ ವೀಡಿಯೊಗಳು, ಇನ್ಫೋಗ್ರಾಫಿಕ್ಸ್ ಮತ್ತು ಪಾಡ್ಕಾಸ್ಟ್ಗಳಂತಹ ತೊಡಗಿಸಿಕೊಳ್ಳುವ ವಿಷಯದ ಮೂಲಕ ಲಿಂಗಾಯತ ತತ್ವಗಳನ್ನು ಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು.
ಯುವ ವೇದಿಕೆಗಳು ಮತ್ತು ಬ್ಲಾಗ್ಗಳು:
ಆಧ್ಯಾತ್ಮಿಕತೆ, ಆಧುನಿಕ ಸವಾಲುಗಳು ಮತ್ತು ವೈಯಕ್ತಿಕ ಬೆಳವಣಿಗೆಯ ಕುರಿತು ಮುಕ್ತ ಚರ್ಚೆಗಾಗಿ ವೇದಿಕೆಗಳನ್ನು ಸೃಷ್ಟಿಸುವುದು.
ವರ್ಚುವಲ್ ಕಾರ್ಯಕ್ರಮಗಳು:
ಲಿಂಗಾಯತ ಬೋಧನೆಗಳ ಸಮಕಾಲೀನ ಪ್ರಸ್ತುತತೆಯನ್ನು ಚರ್ಚಿಸುವ ವಿದ್ವಾಂಸರು ಮತ್ತು ನಾಯಕರೊಂದಿಗೆ ವೆಬ್ನಾರ್ಗಳು, ಸೆಮಿನಾರುಗಳು, ಉಪನ್ಯಾಸಗಳನ್ನು ಏರ್ಪಡಿಸುವುದು.
ಸಂಗೀತ, ಕಲಾ, ಕಥಾ ಉತ್ಸವಗಳು
ಸಾಂಪ್ರದಾಯಿಕ ವಚನ ವಾಚನಗಳು, ಜಾನಪದ ಕಲಾ ಪ್ರದರ್ಶನಗಳು, ನಾಟಕಗಳು ಮತ್ತು ಇತರ ಸಮಕಾಲೀನ ಕಲಾ ಪ್ರಕಾರಗಳನ್ನು ಸಂಯೋಜಿಸುವುದು.
ಭಾವಗೀತೆಗಳನ್ನು ಮೈಸೂರು ಅನಂತ ಸ್ವಾಮಿಯವರು ಜನಪ್ರಿಯಗೊಳಿಸಿದಂತೆ, ವಚನಗಳಿಗೆ ಕೆಲವು ಅದ್ಬುತ ಸಂಗೀತ ನಿರ್ದೇಶಕರು ಬೇಕಾಗಿದ್ದಾರೆ.
ಸಂವಾದಾತ್ಮಕ ಕಥೆ ಹೇಳುವಿಕೆ:
ಸಾಂಸ್ಕೃತಿಕ ಪರಂಪರೆಯಲ್ಲಿ ತಮ್ಮ ಅಸ್ಮಿತೆ ಮತ್ತು ಹೆಮ್ಮೆಯನ್ನು ಪ್ರೇರೇಪಿಸಲು ಲಿಂಗಾಯತ ಸಂತರು ಮತ್ತು ಸುಧಾರಕರ ಕೊಡುಗೆಗಳನ್ನು ಹೈಲೈಟ್ ಮಾಡಿ ಉಪನ್ಯಾಸಗಳು, ಚರ್ಚೆಗಳು, ಸಂವಾದಗಳನ್ನು ಏರ್ಪಡಿಸುವುದು.
ನಿಜಾಚರಣೆ
ಶಿವಯೋಗ, ನಿಜಾಚಾರಣೆ, ಲಿಂಗಾಯತ ಸಿದ್ದಾಂತ ಮತ್ತು ಲಿಂಗಾಯತ ಧರ್ಮದ ಬಗ್ಗೆ ಪ್ರಚಾರ ಮಾಡಬೇಕು. ಅದರಿಂದ ಸಮುದಾಯ ಜಾಗೃತಗೊಂಡರೆ ಯಾವುದೇ ದಾಳಿಯನ್ನು ತಡೆಯುವುದು ಸುಲಭವಾದ ಕೆಲಸವಾಗುತ್ತದೆ.
ಮಠಗಳಲ್ಲಿ ಕಡಿಮೆ ಸಂಖ್ಯೆಯಿದ್ದರೂ ಪರವಾಗಿಲ್ಲ ಕಮ್ಮಟಗಳು ನಿರಂತರ ನಡೆಯುತ್ತಿರಬೇಕು.
ಪ್ರತಿ ಹಳ್ಳಿಗಳಲ್ಲಿ ವೈದಿಕ ಧರ್ಮಾಚರಣೆಗಳನ್ನು ಆಚರಿಸುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ತಡೆಗಟ್ಟಲು ಲಿಂಗಾಯತ ಧರ್ಮ ಪ್ರಸಾರ ಮಾಡಲು ಕ್ರಿಯಾಮೂರ್ತಿಗಳಿಗೆ ತರಬೇತಿ ನೀಡುವ ಕೇಂದ್ರ ಸ್ಥಾಪನೆ ಅತ್ಯವಶ್ಯಕವಾಗಿದೆ.
ಇಷ್ಟಲಿಂಗ ಯೋಗದ ಮಹತ್ವದ ಮುಖಾಂತರ ಮಹಿಳೆಯರನ್ನು ಸೆಳೆಯುವುದು.
ಲಿಂಗಾಯತ ಧಾರ್ಮಿಕ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಚಿಕ್ಕವರನ್ನು, ಯುವಕರನ್ನು ಕರೆದೊಯ್ಯಬೇಕು.
ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳ ಕುರಿತು ನಮ್ಮ ಮಕ್ಕಳಿಗೆ ಮತ್ತು ಮನೆಯ ಸದಸ್ಯರಿಗೆ ಸಾಧ್ಯವಾದಷ್ಟು ತಿಳಿಸಬೇಕು.
ಪ್ರಚಾರಕರಿಗೆ ರಕ್ಷಣೆ
ಲಿಂಗಾಯತ ಧರ್ಮದ ವಿಚಾರವನ್ನು ಬಿತ್ತುವ ಪ್ರಚಾರಕರನ್ನು ಅಡಚಣೆಯುಂಟು ಮಾಡುವ, ಅವರಿಗೆ ಬೆದರಿಕೆ ನೀಡುವ ಕೆಲಸ ನಡೆದರೆ ಅದಕ್ಕೆ ಸೂಕ್ತ ಪ್ರತಿಕ್ರಿಯೆ ಬರಬೇಕು.
ಲಿಂಗಾಯತ ಧರ್ಮ ಹಾಗೂ ಬಸವಾದಿ ಶರಣರ ಹೆಸರಿಗೆ ಕಳಂಕ ತರುವ ಹಾಗೂ ಅಪಪ್ರಚಾರ ಮಾಡುವ ಘಟನೆಗಳು ನಡೆದಾಗ ಎಲ್ಲಕ್ಕಿಂತ ಮುಂಚೆ ವಿರೋಧಿಸಬೇಕುˌ ಮಣಿಯದಿದ್ದರೆ ಹೋರಾಟಕ್ಕೆ ಕರೆ ಕೊಡಬೇಕು.
ಲಿಂಗಾಯತ ಶರಣರು, ಸಾಹಿತಿಗಳು, ಚಿಂತಕರಿಗೆ ಅವಮಾನ ಆದರೆ ತಕ್ಷಣ ಪ್ರತಿಕ್ರಿಯೆ ಕೊಟ್ಟು ಪ್ರತಿಭಟಿಸಬೇಕು.
ಸ್ವಯಂ ಸೇವಕರ ಗಣಾಚಾರಿ ಪಡೆ
ಈ ಎಲ್ಲ ಕಾರ್ಯಗಳನ್ನು ಮಾಡಲು ಸ್ವಯಂ ಸೇವಕರ ಒಂದು ತಂಡ ರಚನೆ ಮಾಡಬೇಕು.
ಯುವಕರಿಗೆ ತರಬೇತಿ ನೀಡಿ ಲಿಂಗಾಯತ ತತ್ವಸಿದ್ಧಾಂತಗಳನ್ನು ಸ್ವಯಂ ಪ್ರೇರಣೆಯಿಂದ ಪ್ರಚಾರ ಮತ್ತು ಪ್ರಸಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸಬೇಕು.
ಲಿಂಗಾಯತ ಧರ್ಮ ಪ್ರಚಾರದಲ್ಲಿ ತೊಂದರೆ ಬರುವುದು ಸಾಮಾನ್ಯ. ಇದನ್ನು ಮೆಟ್ಟಿ ನಿಲ್ಲಲು ” ಯುವ ಗಣಾಚರ ಪಡೆ ” ರಚಿಸುವುದು ಅನಿವಾರ್ಯ ಆಗಿದೆ.
ಸೈದ್ಧಾಂತಿಕ ಸ್ಪಷ್ಟತೆ
ಮಠಗಳು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ವಿರೋಧಿ ಸಿದ್ಧಾಂತದ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ವೇದಿಕೆಗಳಿಂದ ಅಂತರ ಕಾಯ್ದುಕೊಳ್ಳಬೇಕು.
ದೇಶದ ಸಾಮರಸ್ಯˌ ಸೌಹಾರ್ದತೆ ಕದಡುವ ಹಾಗೂ ಅನ್ಯ ಧರ್ಮದ್ವೇಷದ ವಾತಾವರಣ ಸೃಷ್ಠಿಸುವ ವ್ಯಕ್ತಿˌ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ವೇದಿಕೆಗಳನ್ನು ಬೆಂಬಲಿಸಬಾರದು, ಅವರೊಡನೆ ವೇದಿಕೆ ಹಂಚಿಕೊಳ್ಳಬಾರದು ಮತ್ತು ಅಂತವರನ್ನು ಮಠಕ್ಕೆ ಆಮಂತ್ರಿಸಬಾರದು.
ಹಲವಾರು ಮಠಗಳಲ್ಲಿ ಇನ್ನೂ ಸಂಸ್ಕೃತದಲ್ಲಿ ಗದ್ದುಗೆ ಪೂಜೆ ನಡೆಯುತ್ತಿದೆ ಅದು ನಿಲ್ಲಬೇಕು. ವಚನಗಳಿಂದ ಪೂಜೆ ನಡೆಯಬೇಕು.
ಮಠಾಧೀಶರು ಕಳಸಾರೋಹಣ, ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಹೋಗಬಾರದು. ಸೌಹಾರ್ದ ಕಾರ್ಯಕ್ರಮಕ್ಕೆ ಹೋಗಬೇಕು.
ಲಿಂಗಾಯತ ಮಠಗಳು ಮೂಢ ನಂಬಿಕೆಗಳನ್ನು ಹರಡಬಾರದು, ಪಾಲಿಸಬಾರದು ಎಂದು ನಿರ್ಣಯ ತೆಗೆದುಕೊಳ್ಳಬೇಕು.
ಲಿಂಗಾಯತ ಮಠಗಳಲ್ಲಿ ಯಾವುದೋ ಚಾರಿತ್ರಿಕ ಕಾರಣಕ್ಕೆ ಸಂಸ್ಕೃತದ ಪಾಠಶಾಲೆಗಳಿವೆ. ಅವುಗಳನ್ನು ಮಠಗಳು ಹಂತ ಹಂತವಾಗಿ ಮುಚ್ಚಬೇಕು.
ಆರ್.ಎಸ್.ಎಸ್. ಸ್ವಯಂಸೇವಕರಾಗಿರುವ ಶಾಸಕರು-ಮಂತ್ರಿಗಳನ್ನು ಮಠಗಳ ಕಾರ್ಯಕ್ರಮಗಳಿಗೆ ಕರೆಸುವುದನ್ನು ಹೇಗೆ ನಿಲ್ಲಿಸಬೇಕು ಎಂಬ ಬಗ್ಗೆ ಮಠಾಧೀಶರ ಸಭೆಯಲ್ಲಿ ಚರ್ಚೆಯಾಗಬೇಕು.
ಆರ್.ಎಸ್.ಎಸ್. ಪೋಷಿತ-ಪ್ರಾಯೋಜಿತ- ಪ್ರೋತ್ಸಾಹಿತ ಕಾರ್ಯಗಳಿಗೆ — ಸೇಡಂನಲ್ಲಿ ನಡೆಯುವ ಭಾರತ ಸಂಸ್ಕೃತಿ ಉತ್ಸವ, ಪ್ರಯಾಗ್ ರಾಜ್ ನಲ್ಲಿ ನಡೆಯುವ ಕುಂಭಮೇಳ, ಸೂಲಿಬೆಲಿ ಆಯೋಜಿಸುತ್ತಿರುವ ಕಾವೇರಿ ಆರತಿ-ತುಂಗಭದ್ರಾ ಆರತಿ ಮುಂತಾದ ಗಂಗಾ ಆರತಿ ಅನುಕರಣೆಯ ಕಾರ್ಯಕ್ರಮಗಳಿಗೆ ಅವಕಾಶ-ಪ್ರೋತ್ಸಾಹ, ಅನುದಾನ ನೀಡಕೂಡದು.
ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಹಿಂದುತ್ವವಾದಿಗಳನ್ನು ಮಠಕ್ಕೆ ಕರೆಸುವ, ಅವರಿಂದ ಶಿವಾನುಭವ ಗೋಷ್ಠಿ ನಡೆಸುವ, ಭಾಷಣ ಮಾಡಿಸುವ, ಪ್ರಶಸ್ತಿ ನೀಡುವ ಕೆಲಸವನ್ನು ಲಿಂಗಾಯತದ ಯಾವ ಮಠಗಳು ಇನ್ನು ಮುಂದೆ ಮಾಡಕೂಡದು ಎಂಬ ನಿರ್ಣಯವನ್ನು ತೆಗೆದುಕೊಳ್ಳಬೇಕು.
ಮುತೈದೆಯರಿಗೆ ಉಡಿ ತುಂಬುವಂತಹ, ಕುಂಭ ಹೊರೆಸುವಂತಹ ಲಿಂಗ ಅಸಮಾನತೆಯ ಕಾರ್ಯಕ್ರಮಗಳನ್ನು ಮೊದಲು ಮಠಗಳು-ಮಠಾಧೀಶರು ನಿಲ್ಲಿಸಬೇಕು. ಲಿಂಗಾಯತದಲ್ಲಿ ಯಾವ ಮಹಿಳೆಯೂ “ಮುಂಡೆ”ಯಾಗುವುದಿಲ್ಲ.
ಸಾಮಾಜಿಕ ಬದ್ಧತೆ
ಎಲ್ಲ ವಿರಕ್ತ ಮಠಗಳು ಜಾತ್ಯಾತೀತ, ಮೌಢ್ಯರಹಿತ, ವರ್ಣ, ವರ್ಗ, ಲಿಂಗ ಭೇದರಹಿತ, ಪಂಕ್ತಿ ಭೇದರಹಿತ ಮರ್ಯಾದೆ ಹತ್ಯೆ ತಡೆಗಟ್ಟುವ ” ಬಸವ ತತ್ವದ ಮಠಗಳಾಗ ಬೇಕು”.
ಚರ್ಚೆಗಳು ಮತ್ತು ಸಂವಾದಗಳು:
ಕೋಮು ಸೌಹಾರ್ದತೆ, ಸಾಂವಿಧಾನಿಕ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ವಿಷಯಗಳ ಮೇಲೆ ಉಪನ್ಯಾಸ ಮತ್ತು ಸಂವಾದಗಳನ್ನು ಏರ್ಪಡಿಸುವುದು.
ಸ್ವಯಂಸೇವಕ ಕಾರ್ಯಕ್ರಮಗಳು:
ಸಾಮಾಜಿಕವಾಗಿ ಅಂಚಿನಲ್ಲಿರುವ ಸಮುದಾಯಗಳಿಗೆ ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಅಭಿವೃದ್ಧಿಯಂತಹ ಮಾನವೀಯ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಅಂತರಧರ್ಮೀಯ ಯುವಕರ ಭೇಟಿ:
ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ತಿಳುವಳಿಕೆ ಮತ್ತು ಗೌರವವನ್ನು ಪ್ರೋತ್ಸಾಹಿಸುವುದು, ಉಪನ್ಯಾಸ, ಚರ್ಚಾಗೋಷ್ಠಿ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
ಜಾತ್ಯತೀತ ಮೌಲ್ಯಗಳ ಕಾರ್ಯಾಗಾರಗಳು:
ಸಾಂವಿಧಾನಿಕ ಜಾತ್ಯತೀತತೆ ಮತ್ತು ವೈವಿಧ್ಯತೆಯ ಗೌರವವನ್ನು ಉತ್ತೇಜಿಸುವುದು.
ಸಂವಿಧಾನದ ಮೌಲ್ಯಗಳ ಆಚರಣೆ:
ವಚನಗಳು ಮತ್ತು ಸಂವಿಧಾನದ ತುಲನಾತ್ಮಕ ಅಧ್ಯಯನಗಳನ್ನು ಉತ್ತೇಜಿಸುವುದು.
ಮಹಿಳೆಯರಿಗಾಗಿ ನಾಯಕತ್ವ ಶಿಬಿರಗಳು:
ನಾಯಕತ್ವ ಕೌಶಲ್ಯ ಮತ್ತು ಸಬಲೀಕರಣವನ್ನು ನಿರ್ಮಿಸುವತ್ತ ಗಮನಹರಿಸುವುದು.
ಲಿಂಗ ಸಂವೇದನೆ ಕಾರ್ಯಾಗಾರಗಳು:
ಅಂತರ್ಗತ ಆಚರಣೆಗಳನ್ನು ಉತ್ತೇಜಿಸಿ ಮತ್ತು ಲಿಂಗಾಯತ ಇತಿಹಾಸದಲ್ಲಿ ಮಹಿಳಾ ಕೊಡುಗೆಗಳನ್ನು ಎತ್ತಿ ತೋರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಜಾತಿ ನಿರ್ಮೂಲನಾ ಕಾರ್ಯಕ್ರಮಗಳು:
ಲಿಂಗಾಯತ ಧರ್ಮದಲ್ಲಿನ ಉಪಪಂಗಡಗಳನ್ನು ಒಟ್ಟುಗೂಡಿಸುವುದು. ಲಿಂಗಾಯತ ಧರ್ಮದಲ್ಲಿ ಒಂದುಗೂಡದೆ ಉಳಿದುಕೊಂಡಿರುವ ನೂರಾರು ಜಾತಿಗಳನ್ನು ಒಂದುಗೂಡಿಸಿ ಜಾತಿ ನಿರ್ಮೂಲನೆ ಸಾಧಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವುದು. ಅಂತರ್ಜಾತಿ ಮದುವೆಗಳನ್ನು ಮತ್ತು ವಿಧವಾ ವಿವಾಹಗಳನ್ನು ಏರ್ಪಡಿಸುವುದು.
ಧರ್ಮ ಗ್ರಂಥ
ಲಿಂಗಾಯತದಲ್ಲಿ ವಚನಗಳೇ ಧರ್ಮಗ್ರಂಥ ಎಂಬ ನಂಬಿಕೆಯಿದೆ. ಆದರೆ ಅಂದಾಜಿನ ಪ್ರಕಾರ, ಸುಮಾರು 24 ಸಾವಿರ ವಚನಗಳಿವೆ. ವಚನಸಂಚಯ ವೆಬ್ಸೈಟಿನಲ್ಲಿ ಒಟ್ಟು 209876 ವಚನಗಳು ಮತ್ತು ವಚನಸಂಪುಟ ವೆಬ್ಸೈಟಿನಲ್ಲಿ ಒಟ್ಟು 22 ಸಾವಿರ ವಚನಗಳು ಇವೆ. ಆದರೆ ಇವುಗಳಲ್ಲಿ ಎಷ್ಟು ಪ್ರಕ್ಷಿಪ್ತ, ಪುನರಾವರ್ತಿತ, ಗೊಂದಲಮಯ ವಚನಗಳು ಸೇರಿವೆ ಗೊತ್ತಿಲ್ಲ.
ಲಿಂಗಾಯತರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾದ ವಚನಗಳನ್ನು ಸಂಕಲಿಸಿ ಒಂದು ಸರಳ ಧರ್ಮಗ್ರಂಥ ರಚನೆಯಾಗಬೇಕು. ಅಲ್ಲದೇ ಇಂದಿನವರಿಗೆ ಅರ್ಥೈಸುವ ತಾತ್ಪರ್ಯ ಅಥವಾ ನಿರ್ವಚನದೊಂದಿಗೆ ಆ ಧರ್ಮಗ್ರಂಥ ರೂಪಗೊಳ್ಳಬೇಕು.
ಮಠಗಳ ಸುಧಾರಣೆ
ಲಿಂಗಾಯತ ಮಠದ ಸ್ವಾಮಿಗಳು, ತಮ್ಮ ಮುಂದಿನ ಉತ್ತರಾಧಿಕಾರಿಗಳನ್ನಾಗಿ ಜಾತಿ ಜಂಗಮರನ್ನೇ ಆಯ್ದುಕೊಳ್ಳುವುದನ್ನು ಬಿಡಬೇಕು.
ಭಕ್ತವರ್ಗದಿಂದ ಬಂದ ಮಠಾಧಿಪತಿಗಳು ತಮ್ಮ ಪೂರ್ವಾಶ್ರಮದ ಸಮಾಜಕ್ಕೆ (ಜಾತಿಗೆ) ಅಂಟಿಕೊಳ್ಳಬಾರದು.
ಲಿಂಗಾಯತ ಮಠಾಧೀಶರು, ಆಯಾ ಮಠಗಳ ಭಕ್ತರು, ಧರ್ಮಗುರು ಬಸವಣ್ಣನವರಿಗೆ ಮೊದಲ ಸ್ಥಾನ ನೀಡಬೇಕೇ ವಿನಃ ಜಾತಿ ಮತ್ತು ಕಾಯಕ ಮುಂದೆ ಮಾಡಿಕೊಂಡು, ಅವರ ಹೆಸರಿನಲ್ಲಿಯೇ ಕರ್ತೃ ಗದ್ದುಗೆಗಳನ್ನು ಪೂಜಿಸುತ್ತಾ, ಅರ್ಚಿಸುತ್ತಾ ಕೂಡ್ರಬಾರದು.
ಇತರ ಧರ್ಮೀಯರನ್ನು ಅವಮಾನಿಸದೆ, ಸಾದ್ಯವಾದರೆ ಅವರಿಗೆ ಬಸವ (ಲಿಂಗಾಯತ) ಧರ್ಮದ ಪರಿಚಯವನ್ನು ಮಾಡಿಕೊಡುವಂತಾಗಬೇಕು.
ಹಿಂದುತ್ವದ ಪ್ರಭಾವದಲ್ಲಿರುವ ಯುವಕರು
ಹಿಂದುತ್ವದ ಪ್ರಭಾವದಲ್ಲಿರುವ ಯುವಕರನ್ನು ಮಠಗಳ ಕಾರ್ಯಕ್ರಮದಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು.
ಇವರು ಸಾಮಾನ್ಯವಾಗಿ ಓದನ್ನು ನಿಲ್ಲಿಸಿರುತ್ತಾರೆ. ಅವರಿಗೆ ಉದ್ಯೋಗ ತರಬೇತಿ ನೀಡಲು ಕೌಶಲ್ಯ ಅಭಿವೃದ್ಧಿ ಶಿಬಿರಗಳು, ಉದ್ಯಮಶೀಲತೆ, ವೃತ್ತಿಪರ ತರಬೇತಿ ಮತ್ತು ನಾಯಕತ್ವದ ಕೋರ್ಸ್ಗಳನ್ನು ತೆರೆಯಬೇಕು.
ವೃತ್ತಿ ಮಾರ್ಗದರ್ಶನಕ್ಕಾಗಿ ಲಿಂಗಾಯತ ಸಮುದಾಯದ ಯಶಸ್ವಿ ವೃತ್ತಿಪರರೊಂದಿಗೆ ಯುವಕರ ಸಂಪರ್ಕಗಳನ್ನು ಮತ್ತು ಸಂವಾದಗಳನ್ನು ಏರ್ಪಡಿಸುವುದು.
ಜೊತೆಗೆ ಅವರ ವೈಜ್ಞಾನಿಕ ಮನೋಭಾವ ಬೆಳೆಸಲು ವೈಚಾರಿಕ ಶಿಕ್ಷಣವನ್ನೂ ನೀಡಬೇಕು.
ಕಾಲೇಜಿನಲ್ಲಿರುವ ಯುವಕರು
ವಿದ್ಯಾರ್ಥಿವೇತನ ಮತ್ತು ಇಂಟರ್ನ್ಶಿಪ್ ಅವಕಾಶಗಳು:
ಉನ್ನತ ಶಿಕ್ಷಣ ಮತ್ತು ಪ್ರಾಯೋಗಿಕ ಕೆಲಸದ ಅನುಭವಕ್ಕಾಗಿ ಲಿಂಗಾಯತ ಉದ್ಯಮಿಗಳೊಟ್ಟಿಗೆ ಮತ್ತು ಉದ್ಯಮಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಅವರ ಸಮಸ್ಯೆಗಳಿಗೆ, ಕೊರತೆಗಳಿಗೆ ಸ್ಪಂದಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯ ಮಾಡುವುದು.
ಇಂಗ್ಲಿಷ್ ಕಲಿಕೆ, ಪ್ರಪಂಚದ ಅರಿವು, ಪರಿಣಿತರಿಂದ ಸರಿಯಾದ ಶಿಕ್ಷಣ, ವೃತ್ತಿಗೆ ಸಂಬಂಧಿಸಿದ ಆಯ್ಕೆಗಳನ್ನು ಮಾಡಿಕೊಳ್ಳುವಂತೆ ಸಹಾಯ ಮಾಡುವುದು.
ಮೇಲಿನ ಈ ಎಲ್ಲ ಅಂಶಗಳನ್ನು ಒಗ್ಗಟ್ಟಿನಿಂದ ಕಾರ್ಯರೂಪಕ್ಕೆ ತರುವಲ್ಲಿ ಮಠಾಧೀಶರು ಪ್ರಯತ್ನಿಸಿದರೆ ,ಲಿಂಗಾಯತ ಅಸ್ಮಿತೆಗೆ ಆನೆ ಬಲ ಬಂದಂತಾಗುತ್ತದೆ , ಇದು ಬಹುತೇಕ ಭಕ್ತರ ಮನದಾಸೆ ಒತ್ತಾಸೆ.
ತುಂಬಾ ಒಳ್ಳೆಯ ವಿಚಾರ. ಇವುಗಳೆಲ್ಲ ಕಾರ್ಯ ರೂಪಕ್ಕೆ ಬಂದರೆ ನಾವು ಅಪ್ಪ ಬಸವಣ್ಣನವರಿಗೆ ನಿಜವಾದ ಕ್ರತಜ್ನತೆ ಸಲ್ಲಿಸಿದಂತಾಗುತ್ತದೆ.
ತುಂಬಾ ವಳೃಯವಿಚಾರವಾಗಿದೆ, ನಾವು ಇದಕ್ಕೆಬಧ್ಧರಾಗಿದ್ದೇವೆ, ಶರಣು