ಮಾನವಿ
ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ಚಾತುರ್ವರ್ಣ ವ್ಯವಸ್ಥೆಯಿಂದ ಮಹಿಳೆಯರು ಶೂದ್ರರಾಗಿ ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಕ್ಕುಗಳಿಂದ ವಂಚನೆಗೊಳಗಾಗಿ ಕತ್ತಲಿನಲ್ಲಿ ಬದುಕುತ್ತಿದ್ದ ಮಹಿಳೆಯರನ್ನು ಬೆಳಕಿನೆಡೆಗೆ ತಂದವರು ಬಾಬಾಸಾಹೇಬ್ ಅಂಬೇಡ್ಕರ್ ಎಂದು ಮಾನವಿ ಬಸವ ಕೇಂದ್ರದ ಅಧ್ಯಕ್ಷ ಜಿ.ರಂಗಪ್ಪ ಮ್ಯಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನವಿ ತಾಲೂಕಿನ ನಂದಿಹಾಳ ಗ್ರಾಮದ ಸಿ.ಶಿವಮ್ಮ – ಹುಸೇನಪ್ಪ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಶನಿವಾರ ಆಯೋಜಿಸಿದ್ದ, 106ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿ ವ್ಯವಸ್ಥೆ, ಧಾರ್ಮಿಕ ಶೋಷಣೆ, ಲಿಂಗ ತಾರತಮ್ಯ, ಅಸಮಾನತೆಯ ವಿರುದ್ಧ ಹೋರಾಡಿ ಕೆಳಜಾತಿಯ ಜನರಿಗೆ ಸಮಾನತೆಯ ಸ್ವಾಭಿಮಾನ ಬಿತ್ತಿದರು. 21ನೇ ಶತಮಾನದಲ್ಲಿ ಮನುವಾದಿಗಳ ವಿರುದ್ಧ ಹೋರಾಡಿ, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು, ಸಮಾನ ನ್ಯಾಯ ಸಿಗುವಂತೆ ಮಾಡಿದರು ಎಂದರು.

ಪ್ರೌಢ ಶಾಲೆ ಶಿಕ್ಷಕ ಹಾಗೂ ಸರಕಾರಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಮಾನವಿ ತಾಲೂಕ ಪ್ರಧಾನ ಕಾರ್ಯದರ್ಶಿ ಸಂದೀಪ್ ಹುಲುಗುಂಚಿ ಮುಖ್ಯಭಾಷಣಕಾರರಾಗಿ ಮಾತನಾಡಿ ಭಾರತ ಸಂವಿಧಾನ ಜಾರಿಯ ಪೂರ್ವದಲ್ಲಿ ಉದ್ಯೋಗಗಳು ಕುಲಕಸುಬುಗಳಾಗಿದ್ದವು. ಉದ್ಯೋಗಗಳ ಆಯ್ಕೆ ಸ್ವತಂತ್ರವಾಗಿರಲಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನಲ್ಲಿ ಪ್ರತಿಯೊಬ್ಬರೂ ತಮಗೆ ಇಷ್ಟವಾದ ಉದ್ಯೋಗವನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿರುವುದರಿಂದ ಇಂದು ದಲಿತ, ಹಿಂದುಳಿದ ವರ್ಗದವರು, ಮಹಿಳೆಯರು ಸೇರಿದಂತೆ ಸರ್ವರೂ ತಮಗಿಷ್ಟದ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗಿರುವುದರಿಂದ ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಯು ಅಂಬೇಡ್ಕರರನ್ನು ಸ್ಮರಿಸಬೇಕು ಎಂದರು.
ನಂತರ ಹಿರಿಯ ಹೋರಾಟಗಾರ, ಭಾರತೀಯ ದಲಿತ ಪ್ಯಾಂಥರ್ ರಾಯಚೂರು ಜಿಲ್ಲಾಧ್ಯಕ್ಷ ಲಕ್ಷ್ಮಣ ಜಾನೇಕಲ್, ಛಲವಾದಿ ಮಹಾಸಭಾ ಮಾನವಿ ತಾಲೂಕಾಧ್ಯಕ್ಷ ಶಿವರಾಜ ಉಮಳಿಹೋಸೂರು ಮಾತನಾಡಿದರು.
ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ. ಶರಣಪ್ಪ ಬಲ್ಲಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶಾನ್ಯ ಫೋಕಸ್ ಪತ್ರಿಕೆ ಮಾನವಿ ತಾಲೂಕ ವರದಿಗಾರ ಹುಸೇನಪ್ಪ ನಂದಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬಹುಜನ ಸಂಘರ್ಷ ಸಮಿತಿ ಮಾನವಿ ತಾಲೂಕಾಧ್ಯಕ್ಷ ಯಮುನಪ್ಪ ಜಾಗೀರ ಪನ್ನೂರು, ಮಾನವಿ ಬಸವ ಕೇಂದ್ರ ಸಂ. ಕಾರ್ಯದರ್ಶಿ ಅಮರೇಶ ಗವಿಗಟ್ಟ, ಛಲವಾದಿ ಮಹಾಸಭಾ ಮುಖಂಡ ಅಮರೇಶ ನಂದಿಹಾಳ, ಹುಚ್ಚಪ್ಪ ನಂದಿಹಾಳ, ತಾಯಮ್ಮ ನಂದಿಹಾಳ, ತಿಪ್ಪಮ್ಮ, ಈರಮ್ಮ, ಲಕ್ಷ್ಮಿ, ಸುನಿತಾ, ಮಂಜುಳಾ, ನಾಗರತ್ನ, ನಂದಿನಿ, ಅಂಕಿತ, ಶ್ರೀ ವೇದ, ಹುಸೇನಮ್ಮ, ವೀರೇಶ್, ಚನ್ನಬಸವ, ಈರಣ್ಣ, ನರಸಪ್ಪ, ತಾಯಪ್ಪ, ಮೌನೇಶ, ಪವನ್ ಕುಮಾರ್, ಕಿರಣಕುಮಾರ್, ರಾಮಚಂದ್ರಪ್ಪ, ದುರ್ಗೇಶ್, ಶಾಂತಕುಮಾರ್, ವಿನೋದ್ ಕುಮಾರ್, ಸಿದ್ದಪ್ಪ, ಸೇರಿದಂತೆ ವಿದ್ಯಾರ್ಥಿಗಳು, ಕುಟುಂಬದವರು, ಭಾಗವಹಿಸಿದ್ದರು.