ಅಜ್ಜಂಪುರ
ನಮ್ಮ ಸಾವಯವ ಸಿರಿಯನ್ನು ಬೆಂಕಿಗೆ ಹಾಕಿ ಸುಡುತ್ತಿದ್ದೇವೆ. ಸಾವಯವ ಕೃಷಿ ಕಣ್ಮರೆಯಾಗಿ ವಾಣಿಜ್ಯ ಬೆಳೆಗಳನ್ನು ದಾರಿಯುದ್ದಕ್ಕೂ ಕಾಣ್ತಾ ಬಂದಿದ್ದೇವೆ. ಕೆಮಿಕಲ್ ಗೊಬ್ಬರವನ್ನು ಹಾಕಿದ ವಾತಾವರಣದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ರೈತರು ತಮ್ಮ ಹೊಟ್ಟೆ ತುಂಬಿಸಿಕೊಳ್ಳದೇ ದೊಡ್ಡ ದೊಡ್ಡ ಬಂಡವಾಳಶಾಹಿಗಳ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ. ಹಾಗಾಗಿ ನಮ್ಮ ಎಲ್ಲ ಉದ್ದೇಶಿತ ಯೋಚನೆಗಳು ಕಾರ್ಯಗತಗೊಳ್ಳುತ್ತಿಲ್ಲ. ಎಲ್ಲ ಕ್ಷೇತ್ರದ ಪರಿಸರ ಕಲುಷಿತಗೊಳ್ಳುತ್ತಿದೆ. ನೀರು, ಗಾಳಿ, ಆಹಾರ ವಿಷವಾಗ್ತಾ ಇದೆ. ನಮ್ಮೂರಿನ ಪರಂಪರೆಯನ್ನು, ಸಂಸ್ಕೃತಿಯನ್ನು ದಿಕ್ಕರಿಸಿ ಎತ್ತರದಲ್ಲಿರುವಂಥವರನ್ನು ಸ್ವಾಗತಿಸಿ ಬೆಳೆಸುತ್ತಿದ್ದೇವೆ ಎಂದು ಪರಿಸರ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ ಹೇಳಿದರು.
ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುದಿ ಗ್ರಾಮದಲ್ಲಿ ನಡೆದ ೨ನೆಯ ದಿನದ “ನಮ್ಮ ನಡಿಗೆ ಸರ್ವೋದಯದೆಡೆಗೆ” ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಇಡೀ ವಾತಾವರಣವನ್ನು ಪ್ಲಾಸ್ಟಿಕ್‌ಮಯ ಮಾಡಿಕೊಂಡು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.
ನಮ್ಮ ನೆಲ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿಕೊಳ್ಳಬೇಕು. ಬುದ್ಧ, ಬಸವ, ಗಾಂಧೀ, ಅಂಬೇಡ್ಕರರ ಚಿಂತನೆಗಳು ಜಾರಿಗೆ ಬರಲಿ ಎಂದು ಹೆಗಡೆ ಹೇಳಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು; ಪ್ಲಾಸ್ಟಿಕ್ ನಿಷೇಧ ಮಾಡಿ ಮರುಬಳಕೆ ಮಾಡುವಂಥ ವಸ್ತುಗಳನ್ನು ಬಳಸಬೇಕು. ಇವತ್ತು ಎಲ್ಲರೂ ಸರಕಾರಿ ರಸಾಯನಿಕ ಗೊಬ್ಬರ ಬಳಸುವರು. ಕೊಟ್ಟಿಗೆಗೊಬ್ಬರವನ್ನು ಬಳಸುವ ಸಂಕಲ್ಪ ಮಾಡಬೇಕು. ಏಕಬೆಳೆಯನ್ನು ಬಿಟ್ಟು ಬಹುಬೆಳೆಯನ್ನು ಬೆಳೆಯುವ ಸಂಕಲ್ಪ ಮಾಡಬೇಕು. ಈ ಪಾದಯಾತ್ರೆಯನ್ನು ನೋಡಿದಾಗ ಜನರಿಗೆ ಏನಾದರೂ ಒಂದು ಬದಲಾಗಬೇಕೆಂಬ ಹಂಬಲ ಹೆಚ್ಚಿದೆ. ಅದಕ್ಕೊಂದು ಮೇಟಿ ಇರಬೇಕು. ಆ ಮೇಟಿ ಈ ಪಾದಯಾತ್ರೆ. ಇತ್ತೀಚಿಗೆ ಸರಳತೆಯನ್ನು ಬಿಟ್ಟು ವೈಭವದ ಜೀವನಕ್ಕೆ ಮಾರು ಹೋಗಿದ್ದೇವೆ.
ಪ್ರಜೆಗೆ ಪ್ರಜ್ಞಾವಂತಿಕೆ ಇರಬೇಕು. ಪ್ರಜ್ಞಾವಂತ ಪ್ರಜೆಯಿಂದ ದೇಶ ಅಭಿವೃದ್ಧಿ ಸಾಧ್ಯ. ಅಂತಹ ಪ್ರಜ್ಞಾವಂತಿಕೆ ನಿಮ್ಮೆಲ್ಲರಿಗೂ ಬಂದಾಗ ನಮ್ಮ ಯಾತ್ರೆ ಸಾರ್ಥಕವಾಗುವುದು.

ಈ ಪಾದಯಾತ್ರೆ ಮಾತಿನ ಮಂಟಪವಾಗದೇ ಸರ್ವೋದಯದ ಸಂಘನೆಯಾಗಿ ಕಾರ್ಯಪ್ರವೃತ್ತವಾಗಬೇಕು. ಪ್ರತಿ ಭಾಗಗಳಲ್ಲೂ ಸರ್ವೋದಯದ ಸಂಘಗಳು ಉದಯವಾಗಬೇಕು. ಆ ಸಂಘದ ಮೂಲಕ ಏನಾದರೂ ಬದಲಾವಣೆ ಮಾಡಲು ಸಾಧ್ಯ. ಮನುಷ್ಯ ಮನಸ್ಸು ಮಾಡಿದರೆ ಅಸಾಧ್ಯ ಎನ್ನುವಂಥದ್ದು ಯಾವುದೂ ಇಲ್ಲ. ಮನಸ್ಸಿದ್ದರೆ ಮಾರ್ಗ. ಜನರ ಜೊತೆಗೆ ಬೆರೆತಾಗ ಎಲ್ಲ ಸಮಸ್ಯೆಗಳು ದೂರವಾಗುವವು ಎಂದರು.
ಇನ್ನೋರ್ವ ಉಪನ್ಯಾಸಕಿ ಕವಿಯತ್ರಿ ಕವಿತಾ ನಾಗಭೂಷಣ ಮಾತನಾಡಿ; ಇದೊಂದು ಪ್ರವಾಹದ ರೀತಿಯಲ್ಲಿ ಹರಿಯುವಂಥ ಯಾತ್ರೆ. ಎಲ್ಲ ಮಹನೀಯರ ಬಗ್ಗೆ ಓದಿ, ಬರೆಯುವುದು ಮುಖ್ಯವಲ್ಲ. ಅದನ್ನು ಆಚರಣೆಗೆ ತಂದಾಗ ಮಾತ್ರ ವ್ಯಕ್ತಿಗತ ಬದಲಾವಣೆ ಸಾಧ್ಯ. ನಮ್ಮ ಮನೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಇಟ್ಟುಕೊಂಡಿದ್ದೇವೆ. ನದಿ, ಗುಡ್ಡ, ಬೆಟ್ಟಗಳನ್ನು ಕಾಗದವನ್ನಾಗಿ ಮಾಡಿ ಬ್ಯಾಂಕ್‌ಗಳಲ್ಲಿಟ್ಟಿದ್ದೇವೆ. ಹಿಂದೆಲ್ಲಾ ಮನೆಗಳಲ್ಲಿ ಮನುಷ್ಯರು ಹೆಚ್ಚಿದ್ದರು. ಈಗ ಮನುಷ್ಯರಿಗಿಂತ ವಸ್ತುಗಳು ಹೆಚ್ಚಿವೆ. ವಸ್ತುಗಳಿಗಿದ್ದ ಬೆಲೆ ಮನುಷ್ಯರಿಗೆ ಇಲ್ಲದಂತಾಗಿದೆ ಎಂದರು.
ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ೭೪ರ ವಯಸ್ಸಿನಲ್ಲಿ ಪಾದಯಾತ್ರೆ ಮಾಡುತ್ತಿರುವುದು ನನ್ನ ಬದುಕಿನಲ್ಲಿ ದಿಗ್ಭ್ರೆಮೆಯನ್ನುಂಟು ಮಾಡಿದೆ. ಎಲ್ಲದನ್ನು ತ್ಯಜಿಸಿ ಕಾವಿತೊಟ್ಟು ಸಮಾಜ ಹೀಗೇ ಇರಬೇಕೆಂದು ಫಣತೊಟ್ಟಿರುವ ಪಂಡಿತಾರಾಧ್ಯ ಶ್ರೀಗಳ ಕಾರ್ಯ ಶ್ಲಾಘನೀಯವೆಂದರು.

ಇವತ್ತಿನ ರಾಜಕಾರಣ ಅಪರಾಧಿಯೊಬ್ಬ ಜೈಲಿಗೆ ಹೋಗಿ ಹೊರಗೆ ಬಂದಾಗ ಅವನನ್ನು ಹಾರ ತುರಾಯಿ ಹಿಡಿದುಕೊಂಡು ಸ್ವಾಗತಿಸಿ ವೈಭವೀಕರಿಸುವಂಥ ರಾಜಕಾರಣವಾಗಿದೆ.
ವಯಸ್ಸಿಗೆ ಅನುಗುಣವಾದ ಶಿಕ್ಷಣ ಕೊಡಬೇಕು. ಧರ್ಮ, ಜಾತಿ, ಧರ್ಮಕ್ಕಿಂತ ನನ್ನ ದೇಶ ಮುಖ್ಯ ಎನ್ನುವ ದೇಶಪ್ರೇಮದ ಶಿಕ್ಷಣ ಅವರಿಗೆ ತಿಳಿಸಿಕೊಡಬೇಕು. ಸತ್ಯಕ್ಕೆ ಅಪಚಾರವಾಗುವಂಥ ರೀತಿಯಲ್ಲಿ ಕೆಲಸಗಳನ್ನು ಮಾಡಬಾರದು. ಸಂವಿಧಾನದ ಎಲ್ಲ ಆಶಯಗಳನ್ನು ಈಡೇರಿಸುವಂಥ ವಿಚಾರಗಳು ಈ ಯಾತ್ರೆಯುದ್ದಕ್ಕೂ ನಡೆಯುತ್ತಿರುವುದು ತುಂಬಾ ಸಂತೋಷ. ನಿಮ್ಮ ಯಾತ್ರೆಯುದ್ದಕ್ಕೂ ನಮ್ಮ ಬೆಂಬಲ ಇದೆ ಎಂದರು.
ಈ ಸಂದರ್ಭದಲ್ಲಿ ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು, ಸ್ವಾಮಿಗಳು, ಮಂಡ್ಯದ ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರ ಸ್ವಾಮಿಗಳು, ತರೀಕೆರೆಯ ಮಾಜಿ ಶಾಸಕ ಡಿ. ಎಸ್. ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದಪ್ಪ ಕೆ. ಆರ್, ಧೃವಕುಮಾರ್ ಮತ್ತಿತರರಿದ್ದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಸಾಣೇಹಳ್ಳಿ ರಂಗಪ್ರಯೋಗಶಾಲೆಯ ವಿದ್ಯಾರ್ಥಿಗಳು ‘ಒಕ್ಕಲಿಗ ಒಕ್ಕದಿರೆ ನಾಡೆಲ್ಲ ಬಿಕ್ಕುವುದು’ ಎನ್ನುವ ಬೀದಿ ನಾಟಕ ಪ್ರದರ್ಶಿಸಿದರು. ಸಾದು ಲಿಂಗಾಯತ ಸಮಾಜದ ಅಧ್ಯಕ್ಷ ಶಂಕರಲಿಂಗಪ್ಪ ಸ್ವಾಗತಿಸಿದರೆ ರಾಜಪ್ಪ ನಿರೂಪಿಸಿದರು. ಸರ್ವೋದಯ ಸಂಘಟಕ ಶಿವನಕೆರೆ ಬಸವಲಿಂಗಪ್ಪ ಪ್ರತಿಜ್ಞಾವಿಧಿ ಬೋಧಿಸಿದರು.