ಬಸವಕಲ್ಯಾಣ
ತಿಂಗಳ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಮತ್ತು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಗಳನ್ನು ಆಚರಿಸಲಾಯಿತು.
ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಶರಣರು ನಮಗೆ ಬದುಕಿನ ಉತ್ತಮ ವಿಧಾನವನ್ನು ಕಲಿಸಿದ್ದಾರೆ. ಮನುಷ್ಯನ ಬದುಕು ಸುಂದರಗೊಳಿಸುವ ಮತ್ತು ಸುಖಿಯಾಗಿಸುವ ಮೌಲ್ಯಗಳನ್ನು ಶರಣರು ತಮ್ಮ ವಚನಗಳ ಮೂಲಕ ನಮಗೆ ನೀಡಿದ್ದಾರೆ, ಎಂದು ಹೇಳಿದರು.
ದಯೆ, ಕರುಣೆ, ಪ್ರೀತಿ, ಕಾಯಕ, ಭಕ್ತಿ, ದಾಸೋಹ, ಸಮಾನತೆ ಈ ಮೌಲ್ಯಗಳನ್ನು ನಾವು ಅಳವಡಿಸಿಕೊಂಡರೆ ನಮ್ಮ ಬದುಕು ಸುಂದರವಾಗುತ್ತದೆ. ಶಿವಯೋಗಿ ಸಿದ್ಧರಾಮೇಶ್ವರರು, ಅಂಬಿಗರ ಚೌಡಯ್ಯನವರು ನಮಗೆ ಮೌಲ್ಯಯುತ ಜೀವನದ ಮಾರ್ಗವನ್ನು ತೋರಿಸಿದ್ದಾರೆ.
ಸಿದ್ಧರಾಮೇಶ್ವರರು ಕಾಯಕ ಮತ್ತು ಯೋಗದಲ್ಲಿ ಪ್ರವೀಣಕರಾಗಿದ್ದರು. ಅವರು ಹೃದಯ ತುಂಬ ಬಸವಭಕ್ತಿ ತುಂಬಿಕೊಂಡಿದ್ದರು. ಅಂಬಿಗರ ಚೌಡಯ್ಯನವರು ತಮ್ಮ ಗಣಾಚಾರದ ಮೂಲಕ ಸಮಸಮಾಜದ ನಿರ್ಮಾಣಕ್ಕಾಗಿ ದುಡಿದ ಶರಣ. ಅವರ ಬದುಕಿನ ಮೌಲ್ಯಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಎಂದು ಆಶೀರ್ವಚನ ನೀಡಿದರು.
ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೂಜ್ಯ ಶ್ರೀ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಸಿ, ಚೌಡಯ್ಯನವರ ಜೀವನ ದರ್ಶನವನ್ನು ಮಾಡಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಅನುಭವಮಂಟಪದಲ್ಲಿ ಪ್ರತಿ ತಿಂಗಳು ನಡೆಯುವ ಅನುಭವಮಂಟಪ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ ಆಶಯ ನುಡಿ ನುಡಿದರು.
ಅಧ್ಯಕ್ಷತೆ ವಹಿಸಿದ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು ಶರಣರ ವಚನಗಳನ್ನು ಹೇಳಿ ವಚನದ ಮಹತ್ವ ತಿಳಿಸಿದರು.
ಡಾ.ಸೋಮನಾಥ ಯಾಳವಾರ ಅವರು ಸಿದ್ಧರಮೇಶ್ವರ ಕಂಡ ಬಸವಣ್ಣನವರ ಎಂಬ ವಿಷಯದ ಕುರಿತು ಅನುಭಾವ ನೀಡಿದರು. ಸಿದ್ದರಾಮೇಶ್ವರರು ಬಸವಣ್ಣನವರನ್ನು ಮನಸ್ಸು ಮತ್ತು ಭಾವದಲ್ಲಿ ತುಂಬಿಕೊಂಡು ಅನೇಕ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ.
ಸಿದ್ಧರಾಮೇಶ್ವರರು ತಮ್ಮ ವಚನಗಳಲ್ಲಿ ಬಸವಣ್ಣನವರ ಮಹಾದರ್ಶನವೆ ಮಾಡಿಸುತ್ತಾರೆ. ಅವರ ಹಾಗೆ ಬಸವಣ್ಣನವರ ವ್ಯಕ್ತಿತ್ವ ಕಟ್ಟಲು ಬೇರೆಯವರಿಗೆ ಸಾಧ್ಯವಾಗಲಿಲ್ಲ. ಅಷ್ಟೊಂದು ಪರಿಪೂರ್ಣವಾಗಿ ಸಿದ್ಧರಾಮೇಶ್ವರರು ಬಸವಣ್ಣನವರ ಸಮಗ್ರ ಘನವ್ಯಕ್ತಿತ್ವವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಎಂದು ಅನುಭಾವ ನೀಡಿದರು.
ಶರಣ ಮಾಣಿಕರಾವ ವಾಡೇಕರ್, ಶಾಂತಾರಾಮ ರಾಜೋಳೆ ಅತಿಥಿಗಳಾಗಿ ಉಪಸ್ಥಿತಿರಿದ್ದರು. ಬಸವಕಲ್ಯಾಣ ನಗರಸಭೆ ಅಧ್ಯಕ್ಷರಾದ ಎಂ.ಡಿ.ಶಬೀರೋದ್ದಿನ್ ಮತ್ತು ಉಪಾಧ್ಯಕ್ಷರಾದ ಲಕ್ಷಿö್ಮÃಬಾಯಿ ಫುಲೆ ಇವರಿಗೆ ಸನ್ಮಾನಿಸಲಾಯಿತು. ಆಸ್ಟ್ರೇಲಿಯಾದಿಂದ ಆಗಮಿಸಿದ ವೀರೇಶ ಹಿರೇಮಠ ವಚನ ಗಾಯನ ಮಾಡಿ ತಮ್ಮ ಅನುಭವ ಹಂಚಿಕೊಂಡರು. ವೀರಣ್ಣ ಕುಂಬಾರ ನಿರೂಪಿಸಿದರು. ರಾಜು ಜುಬರೆ ಸ್ವಾಗತಿಸಿದರು. ಶರಣೆ ವಿದ್ಯಾವತಿ ವಿಶ್ವನಾಥ ಸಜ್ಜನಶಟ್ಟಿ ಪ್ರಸಾದ ದಾಸೋಹ ಮಾಡಿದರು.