ಭಾಲ್ಕಿ
ಸಿದ್ಧಗಂಗಾ ಮಠದ ಶತಾಯಷಿ ಡಾ. ಶಿವಕುಮಾರ ಸ್ವಾಮೀಜಿ ಅವರ ದಾಸೋಹ ತತ್ವ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಮತ್ತು ಹಿತೈಷಿಗಳ ಸಂಘ ಭಾಲ್ಕಿ ವತಿಯಿಂದ ಶತಾಯಷಿ ಡಾ. ಶಿವಕುಮಾರ ಸ್ವಾಮೀಜಿ ಅವರ ೬ನೆಯ ಪುಣ್ಯಸ್ಮರಣೆ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ದಾಸೋಹ ದಿನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶತಾಯಷಿ ಡಾ. ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ವಿಧಾಯಕ ಕಾರ್ಯಗಳ ಮೂಲಕ ನಾಡು ಬೆಳಗಿಸುವ ಕೆಲಸ ಮಾಡಿದ್ದಾರೆ.
ಮಠದಲ್ಲಿ ಏನು ಇಲ್ಲದ ಸಂದರ್ಭದಲ್ಲಿ ಭಕ್ತರಿಂದ ದಾಸೋಹವನ್ನು ಸಂಗ್ರಹಿಸಿ ರಾಜ್ಯದ ಬಡಮಕ್ಕಳು, ನಿರ್ಗತಿಕರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿರುವುದು ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತದೆ. ಒಂದು ಸರಕಾರ ಮಾಡಬಹುದಾದ ಕೆಲಸ ಕಾರ್ಯಗಳನ್ನು ಸಿದ್ಧಗಂಗಾ ಮಠದ ಮೂಲಕ ಪೂಜ್ಯರು ಮಾಡಿ ತೋರಿಸಿರುವುದು ಹೆಮ್ಮೆಯ ಸಂಗತಿ. ಅಂತಹ ಪೂಜ್ಯರ ಆದರ್ಶ, ದಾಸೋಹ ಗುಣವನ್ನು ಇಂದಿನ ಯುವ ಸಮುದಾಯ ನಿಜ ಜೀವನದಲ್ಲಿ ಆಚರಣೆಗೆ ತಂದಾಗ ಜೀವನ ಸಾರ್ಥಕ ಆಗುತ್ತದೆ ಎಂದು ತಿಳಿಸಿದರು.
ಮೇಹಕರ್-ತಡೋಳಾ ಶ್ರೀಮಠದ ರಾಜೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್ ಮಾತನಾಡಿ, ಸಿದ್ಧಗಂಗಾ ಮಠದ ಶತಾಯಷಿ ಡಾ. ಶಿವಕುಮಾರ ಸ್ವಾಮೀಜಿ ಜೀವನ ಮತ್ತು ಸಾಧನೆಯನ್ನು ಎಲ್ಲರೂ ತಿಳಿದುಕೊಂಡು ಅವರು ನೀಡಿರುವ ಸಂದೇಶ ಎಲ್ಲರೂ ಆಚರಣೆಗೆ ತರುವ ಪ್ರಯತ್ನ ಮಾಡಬೇಕು ಎಂದರು.
ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ಮಾತನಾಡಿ, ಸಿದ್ಧಗಂಗಾ ಮಠದಲ್ಲಿ ಪ್ರತಿದಿನ ಹತ್ತಾರೂ ಸಾವಿರ ಮಕ್ಕಳಿಗೆ ಉಚಿತ ಅನ್ನದಾಸೋಹ ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ. ಪೂಜ್ಯರ ಕಾಯಕ ಮತ್ತು ದಾಸೋಹ ತತ್ವ ಸದಾಕಾಲಕ್ಕೂ ಪ್ರೇರಣೆಯಾಗಿ ನಿಲ್ಲುತ್ತವೆ ಎಂದು ತಿಳಿಸಿದರು.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಮತ್ತು ಹಿತೈಷಿಗಳ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೂಜ್ಯರ ತ್ರಿವಿಧ ದಾಸೋಹದ ತತ್ವ ಇಡೀ ರಾಷ್ಟ್ರವೇ ಕೊಂಡಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಸಂಘದ ಸೋಮನಾಥ ತುಗಶೆಟ್ಟೆ, ಪ್ರಮುಖರಾದ ಈಶ್ವರ ರುಮ್ಮಾ, ಚಂದ್ರಕಾಂತ ಫುಲೆ, ಬ್ರಿಜಪಾಲಸಿಂಗ ಠಾಕೂರ್, ಅಮರ ಹರಪಳ್ಳೆ, ಅರವಿಂದ ಕುಲಕರ್ಣಿ, ಓಂಕಾರ ವಗ್ಗೆ, ವಿಜಯ ವಾಲೆ, ಸಿದ್ದು ಉಮ್ಮರಗೆ, ವೀರೇಶ ಚೀಲಶೆಟ್ಟಿ, ಲೋಕೇಶ ಭೂರೆ, ಆಕಾಶ ರೆಡ್ಡಿ, ಡಿಗಂಬರ ಘಾರ್ಗೆ ಸೇರಿದಂತೆ ಹಲವರು ಇದ್ದರು. ದೀಪಕ ಠಮಕೆ ನಿರೂಪಿಸಿ ವಂದಿಸಿದರು.