ಜಾಗತಿಕ ಲಿಂಗಾಯತ ಮಹಾಸಭಾ ಮುಂಡರಗಿ ತಾಲೂಕು ಘಟಕ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

‘ವೀರಶೈವರು ಶೈವದ ಹಂಗು ತೊರೆದು ಲಿಂಗಾಯತರು ಎಂದು ಹೆಮ್ಮೆಯಿಂದ ಹೇಳಲಿ’

ಮುಂಡರಗಿ

ಶೈವ ಹೆಸರಿನೊಂದಿಗೆ ಅಂಟಿಕೊಂಡಿರುವ ವೀರಶೈವರು ಇನ್ನಾದರೂ ಶೈವದ ಹಂಗು ತೊರೆದು ನಾವು ಲಿಂಗಾಯತರು ಎಂಬ ಅಭಿಮಾನ ಹೊಂದಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಮಹಾದೇವಪ್ಪ ಮನವಿ ಮಾಡಿದರು.

ಅವರು ಮಂಗಳವಾರ ಸಂಜೆ ಪಟ್ಟಣದ ವಿ.ಜಿ. ಲಿಂಬಿಕಾಯಿ ಶಾಲೆಯ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮುಂಡರಗಿ ತಾಲೂಕು ಘಟಕದ ಉದ್ಘಾಟನೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗದಿರುವ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹುಟ್ಟಿಕೊಂಡಿದೆ. ವಿಶ್ವದ ಯಾವುದೇ ಧರ್ಮಕ್ಕಿಂತ ಭಿನ್ನವಾದ ವೈಚಾರಿಕ ಧರ್ಮವೆಂದರೆ ಅದು ಲಿಂಗಾಯತ ಧರ್ಮ. ಇದು ಯಾವುದೇ ಕಟ್ಟುಪಾಡಿಗೆ ಒಳಗಾಗದೆ ಕೇವಲ ಮಾನವ ಘನತೆ ಮತ್ತು ಸಮಾನತೆ ಸೂತ್ರಗಳನ್ನು ಹೊಂದಿ ಸಾರ್ವಕಾಲಿಕ ಮನ್ನಣೆಗೆ ಅರ್ಹವಾದುದು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಸವರಾಜ ರೊಟ್ಟಿ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ ಎಂದು ಹೇಳಿದರು.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಹಿಂದೂ ಧರ್ಮದ ಭಾಗವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ದೊರಕಬೇಕು, ಅದಕ್ಕಾಗಿ ನಾವು ಹೆಚ್ಚು ಸಂಘಟಿತರಾಗಿ ಹೋರಾಡಿ ಸರ್ಕಾರದ ಗಮನ ಸೆಳೆಯುವುದು ಅವಶ್ಯವಾಗಿದೆ.

ಬಸವಣ್ಣನೇ ನಮ್ಮ ಧರ್ಮಗುರು, ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ. 900 ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಆಶಯ ಪ್ರತಿಪಾದಿಸಿ ಅನುಷ್ಠಾನಗೊಳಿಸಿದ ಮತ್ತು ಪ್ರಜಾಸತ್ತಾತ್ಮಕ ಸ್ವರೂಪ ಹೊಂದಿರುವ ಧರ್ಮ ಲಿಂಗಾಯತ ಧರ್ಮ ಎಂಬ ಹೆಗ್ಗಳಿಕೆ ನಮಗಿರಬೇಕೆಂದು ರೊಟ್ಟಿ ಹೇಳಿದರು.

ಗೌರಕ್ಕ ಬಡಿಗಣ್ಣವರ ಮತ್ತು ಪಾಲಾಕ್ಷಿ ಗಣದಿನ್ನಿ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಮಾತನಾಡಿ, 12ನೇ ಶತಮಾನದ ಔಚಿತ್ಯವನ್ನು ತಿಳಿದುಕೊಳ್ಳಬೇಕು. ಬಸವಣ್ಣನವರು ಶರಣರನ್ನು ಅವರ ಕಾಯಕದ ಮೂಲಕ ಗುರುತಿಸಿ, ಕಾಯಕದ ಗೌರವವನ್ನು ಹೆಚ್ಚಿಸಿದರು. ಅಂಬಿಗರ ಚೌಡಯ್ಯನವರು ಒಬ್ಬ ನಿಷ್ಠುರವಾದಿ ವಚನಕಾರರಾಗಿದ್ದರು. ಅವರು ಸಾವಿರಾರು ವಚನಗಳನ್ನು ರಚಿಸಿದ್ದು, ಅದರಲ್ಲಿ 279 ವಚನಗಳು ದೊರೆತಿವೆ ಎಂದರು. ಚನ್ನಬಸಪ್ಪ ಕಂಠಿ, ಶೇಖಣ್ಣ ಕವಳಿಕಾಯಿ, ಮುಂಡರಗಿ ತಾಲೂಕಾ ಅಧ್ಯಕ್ಷ ಎ.ವೈ. ನವಲಗುಂದ ಸಹ ಮಾತನಾಡಿದರು.

ಜೆ.ಎಲ್.ಎಂ. ಗದಗ ಜಿಲ್ಲಾ ಅಧ್ಯಕ್ಷ ಕೆ.ಎಸ್‌. ಚಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹೇಶ ಗುಂಡ್ಲನೂರ, ಶ್ರೀದೇವಿ ಶೆಟ್ಟರ, ಅಕ್ಕಮಹಾದೇವಿ ಚಟ್ಟಿ, ಕೊಟ್ರೇಶ ಅಂಗಡಿ, ಆ‌ರ್. ಎಲ್. ಪೋಲೀಸಪಾಟೀಲ, ಕಾಶೀನಾಥ ಶಿರಬಡಗಿ, ಶಿವಯೋಗಿ ಕೊಪ್ಪಳ, ಬಸಯ್ಯ ಗಿಂಡಿಮಠ, ವೀರಣ್ಣ ಕರ್ಜಗಿ, ಡಾ. ಅನ್ನದಾನಿ ಮೇಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತಾಲೂಕಾ ಘಟಕದ ಎಲ್ಲ ಪದಾಧಿಕಾರಿಗಳಿಗೆ ಸೇವಾದೀಕ್ಷೆ ನೆರವೇರಿಸಲಾಯಿತು. ವಚನ ವಿಶ್ಲೇಷಣೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ನಾಗರಾಜ ಕೊರ್ಲಹಳ್ಳಿ ಬಹುಮಾನ ವಿತರಿಸಿದರು. ಕೊಟ್ರೇಶ ಅಂಗಡಿ ಸ್ವಾಗತಿಸಿದರು. ಶಿವಯೋಗಿ ಗಡ್ಡದ ನಿರೂಪಿಸಿದರು. ಬಸವರಾಜ ರಾಮೇನಹಳ್ಳಿ ವಂದಿಸಿದರು.

Share This Article
3 Comments
  • ಶುಭವಾಗಲಿ..ಬೆಳಗಲಿ ಬೆಳಗಲಿ ಬಸವ ಬೆಳಗು ಬೆಳಗಲಿ. JLM ಪ್ರಣತಿಯಾಗಿ ಬಸವ ಭಕ್ತರು ತೈಲವಾಗಿ ಬಸವ ಜ್ಯೋತಿಯ ಬೆಳಗ ಪ್ರಸರಿಸಲಿ. ಎಲ್ಲರಿಗೂ ಅಬಿನಂಧನೆಗಳು

Leave a Reply

Your email address will not be published. Required fields are marked *