ಶರಣ ಸಾಹಿತ್ಯದಲ್ಲಿ ದೇಶವನ್ನು ಪ್ರಗತಿಪರಗೊಳಿಸುವ ಶಕ್ತಿಯಿದೆ: ರಾಜೂರ

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ

ಅಮೂಲ್ಯವಾದ ಶರಣರ ಸಾಹಿತ್ಯದ ಅಧ್ಯಯನದಿಂದ ದೇಶವನ್ನು ಶುದ್ಧ ಮತ್ತು ಪ್ರಗತಿಪರಗೊಳಿಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವೀರಣ್ಣ ರಾಜೂರ ಅವರು ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಅಲ್ಲಮಪ್ರಭು ಬಸವ ಅಧ್ಯಯನ ಪೀಠದಲ್ಲಿ ಲಿಂ. ಶಂಕ್ರಪ್ಪ ಎಸ್. ತೇಲಿ ಮತ್ತು ಲಿಂ. ಪರುತಗೌಡರ ದೋ. ಚನ್ನಪ್ಪಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು.

ಶರಣರು ಹನ್ನೆರಡನೆಯ ಶತಮಾನದಲ್ಲಿ ಸಮಾಜೋಧಾರ್ಮಿಕ ವೈಚಾರಿಕ ಕ್ರಾಂತಿಯನ್ನು ಮಾಡಿದರು. ವ್ಯಕ್ತಿ ತಾರತಮ್ಯ ಶ್ರೇಣೀಕೃತ ಜಾತಿ ತಾರತಮ್ಯ ದೇವರಲ್ಲಿನ ಬೇಧಭಾವ ಹೋಗಲಾಡಿಸಲು ಶ್ರಮಿಸಿದರು. ನುಡಿದಂತೆ ನಡೆದರು ಅಂತೆಯೇ ವಚನಗಳನ್ನು ನಾವೆಲ್ಲರೂ ನಿತ್ಯ ಜೀವನದಲ್ಲಿ ಪಚನಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಕೆ.ಎಲ್.ಈ. ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥರಾದ ವೀಣಾ ಹೂಗಾರ್ ಮಾತನಾಡಿ, ಶರಣರು ಯಾವುದೇ ಜಾತಿಗೆ ಸೀಮಿತವಾಗಿಲ್ಲ, ಹುಟ್ಟಿನಿಂದ ಬಂದ ಶ್ರೇಷ್ಠ ಕನಿಷ್ಠ ಪರಿಕಲ್ಪನೆಯನ್ನು ಅವರು ವಿರೋಧಿಸಿದರು, ಹೆಣ್ಣುಮಕ್ಕಳ ಸಮಾನತೆಗೆ ಧ್ವನಿ ಎತ್ತಿದರು. ತಳಸಮುದಾಯವನ್ನು ಅಪ್ಪಿಕೊಂಡರು. ತಾವು ಅಳಿದರು ವಚನ ಉಳಿಯಬೇಕೆಂದು ಅವರ ನಿಲುವಾಗಿತ್ತು. ವಚನ ಸಾಹಿತ್ಯದಲ್ಲಿ ಶರಣೆಯರ ಕೊಡುಗೆ ಅಪಾರವಾದದ್ದು, ಶರಣರ ಆಶಯವನ್ನು ಅರ್ಥೈಸಿಕೊಂಡು ಓದುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಕ.ವಿ.ವಿ. ಸಂಗೀತ ವಿಭಾಗದ ಮುಖ್ಯಸ್ಥ ಡಾ. ಮೃತ್ಯುಂಜಯ ಅಗಡಿ, ಸಮಾಜವನ್ನು ತಿದ್ದಲು ವಚನ ಸಾಹಿತ್ಯ ಅವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಸವ ಅಧ್ಯಯನ ವಿಭಾಗ ಸಂಯೋಜಕ ಡಾ. ಸಿ.ಎಂ. ಕುಂದಗೋಳ , ಅತಿಥಿ ಉಪನ್ಯಾಸಕ ಡಾ. ಈರಣ್ಣ ಇಂಜಗನೇರಿ ಉಪಸ್ಥಿತರಿದ್ದರು. ಕುಮಾರ ಮಂಗಳಗಟ್ಟಿ ಮತ್ತು ನಂದಾ ಹೆಗ್ಗೆರಿ ನಿರೂಪಿಸಿದರು. ಭಾರ್ಗವಿ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *