ಉಡುಪಿ
12ನೇ ಶತಮಾನದಲ್ಲಿದ್ದ ಅಸಮಾನತೆ, ಮೂಢನಂಬಿಕೆ ಮತ್ತು ಶೋಷಣೆಯನ್ನು ವಿರೋಧಿಸುವಲ್ಲಿ ಮಡಿವಾಳ ಮಾಚೀದೇವರ ವಚನಗಳು ಹೆಚ್ಚು ಪ್ರಭಾವ ಬೀರಿದ್ದವು ಎಂದು ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಡಿವಾಳ ಮಾಚಿ ದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಜಕ ಯಾನೆ ಮಡಿವಾಳ ಸಂಘದ ಜಿಲ್ಲಾ ಅಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ಮಾತನಾಡಿ, ಮಡಿವಾಳ ಮಾಚೀದೇವರು ರಚಿಸಿದ ವಚನಗಳು ಸಮಾಜದಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಸಹಕಾರಿಯಾಗಿವೆ ಎಂದರು.
ಹಿರಿಯಡ್ಕದ ನಿವೃತ್ತ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ಮಾಚಿದೇವರ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ಸಮಾಜಕ್ಕೆ ಸಾರಿದ ಮಡಿವಾಳ ಮಾಚೀದೇವ, ವಚನ ಸಾಹಿತ್ಯಗಳನ್ನು ನಾಶ ಪಡಿಸುವ ಸಂದರ್ಭದಲ್ಲಿ ಅವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ಮಡಿವಾಳ ಸಮುದಾಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆಗೈದ ತನಿಷ್ ವಿ.ಗುಜರನ್ ಹಿರಿಯಡ್ಕ, ಉಮೇಶ್ ಸಾಲಿಯಾನ್ ಹಿರಿಯಡ್ಕ, ಸಿರಿ ಎಸ್ ಮಡಿವಾಳ ಹೇರಾಡಿ, ಗಣೇಶ್ ಎಸ್ ಸಾಲಿ ಯಾನ್ ಹಾಗೂ ಪ್ರಜ್ವಲ್ ಮಡಿವಾಳ ಕೋಟ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಡಿಡಿಪಿಯು ಮಾರುತಿ ಹಾಗೂ ಇತರರು ಉಪಸ್ಥಿತರಿದ್ದರು.