ಶಿರಸಂಗಿ ಲಿಂಗರಾಜರ ಆದರ್ಶಗಳು ಅನುಕರಣೀಯ: ಡಾ. ತೋಂಟದ ಸಿದ್ದರಾಮ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಪೂಜ್ಯ ಬಸವಾನಂದ ಸ್ವಾಮಿಗಳು ವಚನ ಹೃದಯ ಪುಸ್ತಕ ಪರಿಚಯ ಮಾಡಿದರು

ಗದಗ

ಲಿಂಗಾಯತ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶಿರಸಂಗಿ ಲಿಂಗರಾಜರ ಕೊಡುಗೆ ಅಗಾಧವಾದುದು. ಅವರು ಲಿಂಗಾಯತ ಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮ ಸಂಪೂರ್ಣ ಆಸ್ತಿಯನ್ನೇ ಧಾರೆಯೆರೆದಿದ್ದಾರೆ. ಶಿರಸಂಗಿ ಲಿಂಗರಾಜರ ತ್ಯಾಗಗುಣ, ಸಮಾಜಮುಖಿ ಬದುಕು, ನಡೆ-ನುಡಿ, ಆದರ್ಶಗಳು ಅನುಕರಣೀಯ ಎಂದು ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೩೦ನೇ ಶಿವಾನುಭವದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶಿರಸಂಗಿ ಲಿಂಗರಾಜರು ಮಾಡಿದ ಲಿಂಗಾಯತ ಸಮ್ಮೇಳನದ ಅಂದಿನ ಭಾಷಣ ಮಹತ್ವಪೂರ್ಣವಾಗಿತ್ತು. ಮೀಸಲಾತಿ ಹಾವಳಿ ಅಂದು ಇರಲಿಲ್ಲ. ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳು ಒಂದಾಗಿದ್ದವು. ಲಿಂಗಾಯತ ಸಮಾಜದ ಹಿರಿಯರಾದ ಫ.ಗು. ಹಳಕಟ್ಟಿಯವರು, ಅರಟಾಳ ರುದ್ರಗೌಡರು, ಡೆಪ್ಯುಟಿ ಚನ್ನಬಸಪ್ಪನವರು ಮುಂತಾದ ಹಿರಿಯರ ಕೊಡುಗೆ ಅಪಾರ. ಲಿಂಗರಾಜರ ತ್ಯಾಗವನ್ನು ಜನ ತಿಳಿಯಬೇಕು, ನಿರಂತರ ನೆನೆಯಬೇಕು. ಅವರ ಬದುಕು, ಸಾಧನೆ, ನಡೆ-ನುಡಿಗಳು ತುಂಬಾ ವೈಶಿಷ್ಟ್ಯವಾಗಿದೆ. ಲಿಂಗರಾಜರು ಕಷ್ಟಗಳನ್ನು ಸಹಿಸಿಕೊಂಡು ಕಲ್ಲಾಗು, ಕಷ್ಟಗಳು ಮಳೆ ಸುರಿಯೆ ಎಂಬಂತೆ ಗಟ್ಟಿಯಾಗಿ ವೀರರಾಗಿ, ಧೀರರಾಗಿ ಬದುಕಿದವರು ಎಂದು ಮಾತನಾಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು ಬಸವಾನಂದ ಸ್ವಾಮಿಗಳು ಬರೆದ ‘ವಚನ ಹೃದಯ’ ಪುಸ್ತಕ ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ. ಲಿಂಗಾಯತ ಧರ್ಮಕ್ಕಾಗಿ ದುಡಿದ, ಲಿಂಗರಾಜ ಜಯಂತಿಯ ಆಚರಣೆ ಸಂದರ್ಭದಲ್ಲಿ ವಚನ ಹೃದಯ ಪುಸ್ತಕ ಲೋಕಾರ್ಪಣೆಗೊಂಡಿದ್ದು ವಿಶೇಷ ಎಂದು ಹೇಳಿದರು.

ವಚನ ಹೃದಯ ಪುಸ್ತಕ ಪರಿಚಯ ಮಾಡಿದ ಗುರುಬಸವ ಮಹಾಮನೆ ಚೆನ್ನಯ್ಯನಗಿರಿ ಮನಗುಂಡಿಯ ಪೂಜ್ಯ ಬಸವಾನಂದ ಸ್ವಾಮಿಗಳು, ವಚನ ಹೃದಯದಲ್ಲಿ ೩೦ ಅಧ್ಯಾಯಗಳಿವೆ. ಮೊದಲ ಭಾಗದಲ್ಲಿ ಸುಮಾರು ೩೫ ಹೆಚ್ಚು ಶರಣರ ವಚನಗಳ ಅಂತರಂಗದ ಬಾಗಿಲು ತೆರೆದು ತೋರಿಸಿದೆ. ಎರಡನೇ ಭಾಗ ಶರಣರ ವಚನಾಂಕಿತಗಳಿಗೆ ಸಂಬಂಧಿಸಿದೆ ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜು ಪ್ರಾಧ್ಯಾಪಕರಾದ ಎಂ.ಜಿ. ಗಚ್ಚಣ್ಣವರ ಮಾತನಾಡಿ, ಲಿಂಗರಾಜರ ನವಲಗುಂದ ವಾಡೆ ಅಭಿವೃದ್ದಿಗೊಳ್ಳಬೇಕಿದೆ. ಭಾರತದ ಹಲವಾರು ಸಂಸ್ಥಾನಗಳಲ್ಲಿ ಲಿಂಗರಾಜ ದೇಸಾಯಿ ಅವರ ಸಂಸ್ಥಾನ ಗಟ್ಟಿಯಾಗಿ ನಿಂತು ಲಿಂಗಾಯತ ಸಮಾಜದ ಮಕ್ಕಳ ಶಿಕ್ಷಣಕ್ಕೆ ಅವಿರತವಾಗಿ ಪರಿಶ್ರಮಿಸುತ್ತ ಬಂದಿದೆ. ಸಮಾಜ ಸಂಘಟನೆಗಳಿಗೆ ಹಲವು ದತ್ತಿ ದಾನಗಳನ್ನು ಮಾಡಿದ್ದಲ್ಲದೆ ಇಡೀ ಸರ್ವಸ್ವವನ್ನು ಸಮಾಜಕ್ಕಾಗಿ ಧಾರೆಯೆರೆದ ಧೀರೋದಾತ್ತರು ಎಂದರು. ಶಿರಸಂಗಿ ಲಿಂಗರಾಜರ ವಾಡೆಗಳ ಅಭಿವೃದ್ಧಿ, ಪುಸ್ತಕ ಪ್ರಕಟನೆ ಆಗಬೇಕಾಗಿದೆ. ಲಿಂಗಾಯತ ಸಮಾಜಕ್ಕಾಗಿ ಎಲ್ಲಾ ಸಂಪತ್ತು ದಾನ ನೀಡಿದ ದಾನವೀರ ಶಿರಸಂಗಿ ಲಿಂಗರಾಜರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಅವರಷ್ಟು ತ್ಯಾಗ ಮನೋಭಾವನೆ ಯಾವ ಸಂಸ್ಥಾನಿಕರಲ್ಲಿಯೂ ಕಾಣಲಿಕ್ಕೆ ಸಾಧ್ಯವಿಲ್ಲ ಎಂದು ತುಂಬಾ ಅರ್ಥಪೂರ್ಣವಾಗಿ ವಿಷಯವನ್ನು ಮಂಡಿಸಿದರು.

ಅತಿಥಿಗಳಾಗಿ ಶಿದ್ರಾಮಪ್ಪ ಗೊಜನೂರ, ಈಶಣ್ಣ ಮುನವಳ್ಳಿ, ಅನಿಲ ಪಾಟೀಲ, ಬಸವರಾಜ ಬಿಂಗಿ, ಮಹೇಶ್‌ಗೌಡ ಪಾಟೀಲ ಹಾಗೂ ಡಾ. ಹನುಮಾಕ್ಷಿ ಗೋಗಿ ಉಪಸ್ಥಿತರಿದ್ದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ನೇರವೇರಿಸಿದರು. ಧರ್ಮಗ್ರಂಥ ಪಠಣವನ್ನು ಶ್ರೇಯಾ ಜಾಲಿಹಾಳ, ವಚನ ಚಿಂತನವನ್ನು ರಕ್ಷಿತಾ ಬಳಿಗೇರ ನಡೆಸಿದರು. ದಾಸೋಹ ಸೇವೆಯನ್ನು ಶಿವಯೋಗಿ ಹುಬ್ಬಳ್ಳಿ ಹಾಗೂ ಸಹೋದರರು, ಸಾ. ಅಣ್ಣಿಗೇರಿ ಹಾಗೂ ಶಿವಕುಮಾರಗೌಡ ಪಾಟೀಲ ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಮಾಜ ಅವರು ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ ಐ.ಬಿ. ಬೆನಕೊಪ್ಪ ಸ್ವಾಗತ ಮಾಡಿದರು. ಸಹಚೆರ್ಮನ ಶಿವಾನಂದ ಹೊಂಬಳ ಪರಿಚಯಿಸಿದರು. ಉಪಾಧ್ಯಕ್ಷ ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಆರಂಭದಲ್ಲಿ ಗುರುಬಸವ ಮಹಾಮನೆ ಚೆನ್ನಯ್ಯನಗಿರಿ ಮನಗುಂಡಿಯ ಪೂಜ್ಯ ಬಸವಾನಂದ ಸ್ವಾಮಿಗಳು ರಚಿಸಿದ ‘ವಚನ ಹೃದಯ’ ಪುಸ್ತಕ ಲೋಕಾರ್ಪಣೆಗೊಂಡಿತು.

Share This Article
Leave a comment

Leave a Reply

Your email address will not be published. Required fields are marked *